ಇಲ್ಲಿ ಹುಟ್ಟೋ ಪ್ರಾಣಿಗಳಿಗೆ ಸಮಯ, ಜಗತ್ತು, ವಾತಾವರಣ, ಹಸಿವು ಜೀವನವನ್ನ - ಬದುಕುವುದನ್ನ, ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಲಿಸುತ್ತವೆ. ಪ್ರತಿಯೊಂದು ಪ್ರಾಣಿಯೂ ಅವುಗಳ ಶಕ್ತಿಗೆ ಅನುಸಾರವಾಗಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ. ಪ್ರಕೃತಿಯ ಬದಲಾವಣೆಗೆ ಹೊಂದಿಕೊಳ್ಳದೆ, ಇತರೆ ಪ್ರಾಣಿಗಳೊಂದಿಗಿನ ಪೈಪೋಟಿಯಲ್ಲಿ ಸೋತರೆ, ಕೊನೆಗೆ ಸೊರಗಿ ಸಾಯಲೇಬೇಕು. ಇದು ಸಹಜ ಧರ್ಮ.

ಈಗ ಹತ್ತು ತಿಂಗಳ ಹಿಂದೆ ನಮ್ಮ ಮನೆಗೆ ಒಂದು ಬೆಕ್ಕಿನ ಮರಿಯನ್ನು ತಂದೆ. ಆಗ ಅದಕ್ಕೆ ಎರಡು ತಿಂಗಳಷ್ಟು ವಯಸ್ಸಾಗಿತ್ತು. ಅಲ್ಲಿಯವರೆಗೆ ಅದರ ಅಮ್ಮನ ಹಾಲು ಕುಡಿದು ಬೆಳೆದಿದ್ದ ಅದು, ಈಗ ಒಮ್ಮೆಗೆ ಅದರ ಅಮ್ಮನಿಂದ ದೂರ ಬಂದು ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಒಂಟಿಯಾಗಿರಬೇಕಿತ್ತು. ತಂದ ಕ್ಷಣದಿಂದ ಒಂದೆರೆಡು ದಿನ ಬಹಳ ಹೆದರಿಕೊಂಡಿತ್ತು. ಆದರೆ ನಿಧಾನಕ್ಕೆ ನಮ್ಮ ಮನೆಯ ವಾತಾವರಣಕ್ಕೆ ಹೊಂದಿಕೊಂಡು, ಯಾವಾಗಲೂ ಹೆದರಿ ಮೂಲೆ ಸೇರಿಕೊಳ್ಳುತ್ತಿದ್ದ ಮರಿ ಈಗ ಎಲ್ಲ ಕಡೆ ಜಿಗಿದಾಡಲಾರಂಭಿಸಿತು. ಜಿಗಿದಾಡಲು ಶಕ್ತಿ ಬೇಕಲ್ವ! ಅದಕ್ಕಾಗಿ ಹಸಿವಾದಾಗಲೆಲ್ಲ ನಮ್ಮ ಕಾಲುಗಳ ಹತ್ತಿರ ಬಂದು ಸುಳಿದಾಡುತ್ತಾ ನಮ್ಮನ್ನು ಸವರುತ್ತಿತ್ತು. ಆಗ ಅದಕ್ಕೆ ಹಾಲು ಕೊಡುತ್ತಿದ್ದೆವು. ಬರುಬರುತ್ತಾ ಅದಕ್ಕೆ ಹಾಲಿನ ಜೊತೆ ಅನ್ನವನ್ನ ಕಲಸಿ ಕೊಡುತ್ತಿದ್ದೆವು. ಅದೂ ಸಹ ಸರಾಗವಾಗೇ ತಿನ್ನುತ್ತಿತ್ತು. ಜೊತೆಗೆ ಅದು ಸ್ವಾಭಾವಿಕವಾಗಿ ಹುಳ-ಹುಪ್ಪಡೆಗಳ ಹಿಡಿದು ತಿನ್ನುತ್ತಿತ್ತು. ಮನೆಗೆ ಬಂದು ತಿಂಗಳಾಗಿತ್ತು. ಬಂದಾಗಿನಿಂದ ಅದು ತನ್ನ ಒಂದು-ಎರಡನ್ನು ತಾನಾಗಿಯೇ ಬಚ್ಚಲಿನಲ್ಲಿ ಮಾಡುತ್ತಿತ್ತು, ಆದ್ರೆ ಬರು-ಬರುತ್ತಾ ಗುರಿ ತಪ್ಪಿ ಎಲ್ಲೆಲ್ಲೋ ಮಾಡುತ್ತಿತ್ತು. ಅದಕ್ಕೆ ಬುದ್ಧಿ ಕಲಿಸುವ ಸಲುವಾಗಿ ಅದನ್ನ ಮನೆಯ ಹೊರಗೆ ಇರಿಸಲು ಶುರುಮಾಡಿದೆ. ಮಾತು ಕೇಳದಿದ್ದರೆ ಏಟು ಸಹ ಕೊಡುತ್ತಿದ್ದೆ. ಇದೇ ಅಭ್ಯಾಸವಾಗಿ ಅದು ಹೊರಗೆಲ್ಲೋ ಒಂದು-ಎರಡಕ್ಕೆ ಹೋಗುತ್ತಿತ್ತು. ಅದರ ಜೊತೆಗೆ ನನ್ನ ಕಂಡರೆ ಹೆದರಿ, ನಾ ಹತ್ತಿರ ಹೋದರೆ ತಲೆ ತಗ್ಗಿಸಿ, ನೆಲದ ಮೇಲೆ ಮಲಗಿಬಿಡುತ್ತಿತ್ತು.

ಅನ್ನ ತಿನ್ನುತ್ತಿದ್ದ ಮರಿಯು ಒಂದು ದಿನ ಒಮ್ಮೆಗೆ ಮಂಕಾಗಿ ತಿನ್ನುವುದನ್ನೇ ಬಿಟ್ಟಿತು. ಹಾಲು ಹಾಕಿ ಹತ್ತಿರ ಇಟ್ಟರೂ ಕುಡಿಯುತ್ತಿರಲಿಲ್ಲ. ಅದನ್ನು ಎಳೆದು, ಅದರ ಮೂತಿಯನ್ನು ಹಾಲಿನೊಳಗೆ ಇಟ್ಟರೂ ಕುಡಿಯಲಿಲ್ಲ. ಸಿಟ್ಟಿನಲ್ಲಿ “ಹಸಿವಾದಾಗ ಬುದ್ಧಿ ಬಂದು ತಿನ್ನುತ್ತೆ” ಎಂದು ಸುಮ್ಮನಿದ್ದೆ. ಆದರೆ ಒಂದು ದಿನ ಆದರೂ ಸರಿಯಾಗಿ ತಿನ್ನದಿದ್ದಾಗ ನನಗೆ ಚೂರು ಬೇಸರವಾಗಿ ಹೆದರಿಕೆಯಾಯಿತು. ಮೂತಿಯನ್ನು ಹಾಲಿನ ಬಟ್ಟಲಿನಲ್ಲಿ ಇಟ್ಟರೂ ಕುಡಿಯದೆ ಮೂಲೆ ಸೇರಿದಾಗ ಇನ್ನೂ ಹೆದರಿಕೆಯಾಯಿತು. ಯಾರಿಗಾದರು ತೋರಿಸುವ ಎಂದರೆ ಡಾಕ್ಟರ ಸಿಗಲಿಲ್ಲ, ನಂತರ ಅಂಗಡಿಗೆ ಹೋಗಿ ಬೆಕ್ಕಿಗೆ ಅಂತ ಇದ್ದ ಊಟ ತಂದು ಕೊಟ್ಟ ತಕ್ಷಣ ನೆಗೆದು-ಜಿಗಿದು ಕಿರುಚುತ್ತಾ ತಿನ್ನಲಾರಂಭಿಸಿತು. ಆ ಬೆಕ್ಕಿನ ಊಟ ಒಣ ಮೀನಿನ ಪರಿಮಳವ ಬೀರುತ್ತಿತ್ತು. ಸಸ್ಯಾಹಾರ ಊಟ ಮಾಡುವ ನಮಗೆ ಅದರ ವಾಸನೆ ಆಗುತ್ತಿರಲಿಲ್ಲ. ಆದರೆ ನಮ್ಮ ಬೆಕ್ಕಿಗೆ ಅದು ಹಬ್ಬದೂಟವಾಗಿತ್ತು. ನಮ್ಮಂತ ಸಸ್ಯಹಾರಿಗಳ ಮನೆಯಲ್ಲಿ ಬೆಳೆಯುತ್ತಿರುವ ಮಾತ್ರಕ್ಕೆ ಬೆಕ್ಕು ತನ್ನ ನಾಲಿಗೆಯ ರುಚಿಯನ್ನು ಬದಲಾಯಿಸಿಕೊಳ್ಳುತ್ತಾ? ನಾಲಿಗೆಯ ಗುಣವನ್ನು ತಡೆದರೂ, ಅದು ಎಷ್ಟು ದಿನ ತಡೆಯಲು ಸಾಧ್ಯ? ನಮ್ಮ ಬೆಕ್ಕಿನ ಮರಿಯು ನೋಡುವಷ್ಟು ದಿನ ನೋಡಿ ಒಂದು ದಿನ ‘ಮುಷ್ಕರ’ ಎಂದು ಆಮರಣಾಂತ ಉಪವಾಸ ಹೂಡಿತು. ಕೊನೆಗೆ ಅದರ ಬೇಡಿಕೆಗೆ ಮಣಿದು, ಅದಕ್ಕೆ ಅಂತ ಇದ್ದ ಊಟ ಕೊಟ್ಟ ಮೇಲೆ ಉಪವಾಸ ಕೈ ಬಿಟ್ಟಿತು. ಈಗಲೂ ನಂಗೆ ಅನುಮಾನ ಇದೆ, “ನಮ್ಮ ಬೆಕ್ಕಿನ ಮರಿ, ಅದರ ಊಟ ತಯಾರಿಸುವ ಕಂಪನಿಯೊಂದಿಗೆ ಡೀಲ್ ಮಾಡಿಕೊಂಡು, ಅದನ್ನೇ ತಿನ್ನಬೇಕೆಂದು ಉಪವಾಸ ಕೂತಿತ್ತು” ಅಂತ.

ಬೆಕ್ಕಿಗೆ ಹಸಿವಿನ ಕಷ್ಟ, ಊಟದ ಬೆಲೆ ಕಲಿಸುವ ಅಂತ ಒಂದು ಬಾರಿ ಯೋಚಿಸಿದ್ದವ ನಾನು. ಆದರೆ ಬದುಕಿಗೆ ತಕ್ಕಂತೆ ಬದಲಾಗಿದ್ದು ನಮ್ಮ ಮನೆಯ ಬೆಕ್ಕಲ್ಲ, ನಾವುಗಳು! ಬುದ್ಧಿ ಕಲಿತು ಬೆಕ್ಕಿನ ವಾತಾವರಣಕ್ಕೆ ನಾವು ಹೊಂದಿಕೊಂಡೆವು. ಇದನ್ನ ಕಂಡು ನನ್ನ ಅರಿವಿಗೆ ಬಂದದ್ದು ಇದು: “ಈ ಪ್ರಕೃತಿ, ನಮ್ಮ ಸುತ್ತಲಿನ ವಾತಾವರಣವನ್ನು ಬದಲಿಸಿ ನಮ್ಮ ಹಿಡಿತದಲ್ಲಿಟ್ಟುಕೊಳ್ಳುವ ನಮ್ಮ ಪ್ರಯತ್ನ ಎಷ್ಟೇ ಆವೇಗದಿಂದ ಕೂಡಿರಲಿ, ಕೊನೆಗೆ ಗೆಲುವು ವಾತವರಣದ್ದೇ ಆಗಿರುತ್ತದೆ, ನಮ್ಮದಲ್ಲ. ನಾವುಗಳು ಕೇವಲ ಬದಲಾದ ವಾತಾವರಣಕ್ಕೆ ಹೊಂದಿಕೊಂಡು ಪ್ರಕೃತಿಯ ಅನುಗುಣವಾಗಿ ಸಾಗಬೇಕೆ ಹೊರತು ಅದರ ವಿರುದ್ಧವಲ್ಲ. ಇಲ್ಲಿ ನಾನು, ನನ್ನ ಧಿಮಾಕು, ಎಲ್ಲವೂ ನೆಲಕಚ್ಚಿ ಬಿದ್ದಿವೆ. ಅದಕ್ಕೆ ಸುಮ್ಮನೆ ಯುಗಪುರುಷನ ಅವತಾರ ತಾಳುವ ಕೆಲಸವನ್ನು ದೇವರಿಗೆ ಬಿಟ್ಟು, ಈಗ ನನ್ನ ಪಾಡಿಗೆ ನಾನಿದ್ದೇನೆ.

- ಆದರ್ಶ