ಹಾವೇರಿ ಅನುಭವ
by Archana Bavimane
ಲಕ್ಷ್ಮೀನ ದ್ವಿತೀಯ ಪಿ.ಯು.ಸಿ ಗೆ ಸೇರಿಸಿಬರುವ ಕೆಲಸ ಇದ್ದುದರಿಂದ ನಾನು ಶುಕ್ರವಾರ ರಾತ್ರಿ 11 ಗಂಟೆಗೆ ಮೆಜೆಸ್ಟಿಕ್ ನಿಂದ ಹಾವೇರಿಗೆ ಹೋಗುವ ಬಸ್ ಹತ್ತಿದೆ. ಬಸ್ ಕಂಡಕ್ಟರ್ 5:30 ಕ್ಕೆ ಹಾವೇರಿ ತಲುಪುತ್ತೆ ಅಂದಿದ್ರು, ಆದರೆ ಕೆ.ಎಸ್.ಆರ್.ಟಿ.ಸಿ ಡ್ರೈವರ್ 4:30ಕ್ಕೆ ಹಾವೇರಿ ಬಸ್ಸ್ಟಾಂಡ್ಗೆ ತಂದು ನಿಲ್ಲಿಸಿಬಿಟ್ರು. ಈಗ ಲಕ್ಷ್ಮಿಗೆ ಕರೆ ಮಾಡಿ ತೊಂದರೆ ಕೊಡಬಾರದು ಎಂದುಕೊಂಡರೂ, ಹೊಸ ಊರು ಆದ್ದರಿಂದ ಬೇರೆ ದಾರಿ ಇರಲಿಲ್ಲ. ಕರೆ ಮಾಡಿದ ಸ್ವಲ್ಪ ಸಮಯದಲ್ಲೇ ಲಕ್ಷ್ಮಿ ತನ್ನ ಅಣ್ಣನ ಜೊತೆ ಬಂದು ಅವಳ ಮನೆಗೆ ಕರೆದುಕೊಂಡು ಹೋದಳು
ಕಪ್ಪು ಹೆಂಚು, ಮಣ್ಣಿನ ಗೋಡೆ, ಜೇಡಿ ಮಣ್ಣಿನ ಉಪ್ಪರಿಗೆ, ಮನೆಯೊಳಗಿರುವ ತೆಂಗಿನಮರ, ವಿಶಾಲವಾದ ಮನೆ, ಆ ಮನೆ ಅಂದಾಜು 10 ದಶಕ ಹಿಂದಿನದ್ದಿರಬಹುದು. ಅವರದ್ದು ಅವಿಭಕ್ತ ಕುಟುಂಬ. ಅವಳ ಚಿಕ್ಕ ಮಾವ ಒಬ್ಬರೇ ದುಡಿದು 12 ಜನರನ್ನು ನೋಡಿಕೊಳ್ಳಬೇಕು. ಹಳೆಯ ಮಣ್ಣಿನ ಗೋಡೆಯ ಮನೆ ಆಗಿದ್ದರಿಂದ ಜೋರಾಗಿ ಮಳೆ ಬಂದರೆ ಗೋಡೆ ಕುಸಿದುಹೋಗುವ ಹಾಗಿತ್ತು. ಅವರಿಗೆ ಆ ಮನೆ ಬಿಟ್ಟರೆ ಬೇರೆ ಯಾವ ಆಸ್ತಿನೂ ಇಲ್ಲ. ಆದರೆ ಮನೆಗೆ ಬಂದವರನ್ನು ನೋಡಿಕೊಳ್ಳುವ ರೀತಿ, ಆತಿಥ್ಯ ಮಾಡುವುದನ್ನ ನೋಡಿದ್ರೆ ಯಾರಿಗಿಂತನೂ ಕಡಿಮೆ ಇಲ್ಲ. ಅದಕ್ಕೆ 'ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ಆಡಂಬರ ಚೆಂದ' ಅಂತ ಗಾದೆ ಮಾತ ಹೇಳೋದು. ಲಕ್ಷ್ಮೀಗೆ ಯಾಕೆ ನೀವು ಸರ್ಕಾರದ ಸೌಲಭ್ಯಗಳ ಬಗ್ಗೆ ವಿಚಾರಿಸಬಾರ್ದು ಅಂದಿದ್ದಕ್ಕೆ, ನಾವು ಎಲ್ಲಾ ರೀತಿಯಿಂದನು ಪ್ರಯತ್ನ ಮಾಡಿದ್ವಿ ಆದ್ರೆ ಏನು ಉಪಯೋಗ ಆಗಿಲ್ಲ, ಯಾಕಂದ್ರೆ ನಾವು ಸಾಮಾನ್ಯ ವರ್ಗಕ್ಕೆ ಸೇರ್ತೀವಿ ಹಾಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಿಗುವಂತಹ ಯಾವುದೇ ಸೌಲಭ್ಯ ಸಿಗುವುದಿಲ್ಲ. ಅವಳ ಮಾವ ತನ್ನ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಜೊತೆಗೆ ಎಲ್ಲರಿಗೂ 3 ಹೊತ್ತು ಊಟ ಹೊಂದಿಸುವುದಕ್ಕೆ ಕಷ್ಟ ಪಡುವಾಗ, ಇನ್ನು ಇವಳ ವಿದ್ಯಾಭ್ಯಾಸಕ್ಕೆ ಹೇಗೆ ದುಡ್ಡು ಹೊಂದಿಸುವುದಕ್ಕೆ ಆಗತ್ತೆ? ನಮ್ಮ ಸಹಾಯಸೌಧ ತಂಡಕ್ಕೆ ಹೇಗೋ ಇವಳ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ವಿದ್ಯಾಭ್ಯಾಸದ ಖರ್ಚನ್ನು ನಮ್ಮ ತಂಡ ವಹಿಸಿಕೊಂಡಿತು.
ಲಕ್ಷ್ಮೀ ಸೇರಬೇಕಾಗಿರೋ ಸರ್ಕಾರಿ ಪದವಿ ಪೂರ್ವ ಕಾಲೇಜು ಇರುವುದು ಜಿಲ್ಲೆಯಿಂದ 4ಕಿ.ಮೀ. ದೂರವಿರುವ ಲಕಮಾಪುರದಲ್ಲಿ. ಜಿಲ್ಲೆಗೆ ಇರುವುದು ಒಂದೇ ಸರ್ಕಾರಿ ಕಾಲೇಜಾದ್ರು, ವಿಧ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಆ ಕಾಲೇಜಿನಲ್ಲಿ ಇರುವುದು 4 ಕೋಣೆಗಳು, ಅದರಲ್ಲೇ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಭಾಗಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಬೆಳಿಗ್ಗೆ 7 ರಿಂದ 11:30 ತನಕ ಕಲಾ ವಿಭಾಗದ ತರಗತಿಗಳು, ನಂತರ ಸಂಜೆ 5 ಗಂಟೆ ತನಕ ವಿಜ್ಞಾನ ತರಗತಿಗಳು, ಬೇರೊಂದು ಕೋಣೆಯಲ್ಲಿ ವಾಣಿಜ್ಯ ವಿಭಾಗದ ತರಗತಿಗಳು ನಡೆಯುತ್ತವೆ. ಕುಳಿತುಕೊಳ್ಳುವುದಕ್ಕೆ ಸರಿಯಾದ ಆಸನಗಳ ವ್ಯವಸ್ಥೆಯಿಲ್ಲ, ಇನ್ನೂ ಪ್ರಯೋಗಾಲಯಗಳ ಕಥೆಯನ್ನಂತೂ ಕೇಳೋದೇ ಬೇಡ. ಹೊಸ ಕಟ್ಟಡಗಳ ನಿರ್ಮಾಣದ ಕೆಲಸ ಇನ್ನೂ ನಿಧಾನವಾಗಿ ನಡೀತಾ ಇದೆ. ಅದರ ಕೆಲಸ ಯಾವಾಗ ಪೂರ್ತಿ ಆಗಿ ವಿದ್ಯಾರ್ಥಿಗಳಿಗೆ ಲಭ್ಯ ಆಗತ್ತೋ ನೋಡ್ಬೇಕು.
ನಗರದಲ್ಲಿ ಮೆಟ್ರೋದಂಥ ಸಾರಿಗೆ ಸೌಲಭ್ಯ ಕಲ್ಪಿಸಿರೋ ಸರ್ಕಾರ, ಹಳ್ಳಿಗಳಲ್ಲಿ ಸಾಧಾರಣ ರಸ್ತೆ ಸಾರಿಗೆ ಸೌಲಭ್ಯವನ್ನೂ ಕಲ್ಪಿಸಲೂ ಆಗದೆ ಇರುವುದು ಅವಮಾನ. ಎಷ್ಟೋ ಕಡೆ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರೂ ಮಕ್ಕಳು ಶಾಲೆಗೆ ಬಂದು ಆಟವಾಡಿ ಹೋಗುತ್ತವೆ. ಕೆಲವು ದಿನಗಳಲ್ಲಿ ಆ ಮಕ್ಕಳು ಕೂಡ ಬರುವುದಿಲ್ಲ. ನಂತರ ಸರ್ಕಾರ ಆ ಶಾಲೆಗೆ ಮಕ್ಕಳು ಬರುವುದಿಲ್ಲ ಎಂದು ಮುಚ್ಚಿಬಿಡುತ್ತದೆ. ಇನ್ನೂ ಎಷ್ಟೋ ಕಡೆ ಹಳೆಯ ವಿದ್ಯಾರ್ಥಿಗಳೇ ಒಟ್ಟುಗೂಡಿ ತಮ್ಮ ಶಾಲೆಯನ್ನು ಬೆಳೆಸುತ್ತಿದ್ದಾರೆ. ಇವರಿಗೆ ಇರುವಷ್ಟು ಕಾಳಜಿ ಕೂಡ ಸರಕಾರಕ್ಕೆ ಇಲ್ಲ. ಶಾಲೆಯಲ್ಲಿ ಅನ್ನ ಮಾಡುವ ಅಕ್ಕಿಯ ಗುಣಮಟ್ಟದ ಚರ್ಚೆ ಆಗುತ್ತೆ ಹೊರೆತು, ಶಿಕ್ಷಣದ ಗುಣಮಟ್ಟದ ಚರ್ಚೆ ಆಗೋದೇ ಇಲ್ಲ. ಊಟ, ಹಾಲು, ಮೊಟ್ಟೆ ಎಲ್ಲಾ ಕೊಟ್ಟು ಶಿಕ್ಷಣವೇ ಕೊಡಲಿಲ್ಲ ಎಂದರೆ ಹೇಗೆ? ಅದಕ್ಕಾಗಿಯೇ ಹೇಳೋದು ಖಾಸಗಿ, ಅಥವಾ ಸರ್ಕಾರ ಮತ್ತು ಸರ್ಕಾರಿ ಸಿಬ್ಬಂದಿಗಳಿಗೆ ಮೊದಲು ಬೇಕಾಗಿರುವುದು ವೃತ್ತಿಪರತೆ. ಖಾಸಗಿ ಕಚೇರಿಯ ಸಿಬ್ಬಂದಿ ಸರಿಯಾಗಿ ಕೆಲಸಮಾಡಲಿಲ್ಲ ಅಂದರೆ ಒಂದು ಸಂಸ್ಥೆ ಹಾಳಾಗುತ್ತೆ, ಅದೇ ಸರ್ಕಾರ ಅಥವಾ ಸರ್ಕಾರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಇಡಿ ಸಮಾಜವೇ ಹಾಳಾಗುತ್ತದೆ.
ನಮ್ಮ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಎಲ್ಲಾ ಧರ್ಮದಲ್ಲೂ, ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅಂಬೇಡ್ಕರ್ ಅವರು ಆಗಿನ ಕಾಲಕ್ಕನುಗುಣವಾಗಿ ಜಾತಿ ಆಧಾರಿತ ಮೀಸಲಾತಿ ಮಾಡಿದ್ದು, ಅದನ್ನ ಈಗಿನ ಕಾಲಕ್ಕೆ ಸರಿಹೊಂದುವಂತೆ ಮಾರ್ಪಡಿಸಬೇಕು. ಎಲ್ಲಾ ವರ್ಗದ ಬಡವರಿಗೆ, ಕೃಷಿಕರಿಗೆ ಜೀವನ ನಿರ್ವಹಿಸಲು ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಅದರಿಂದನಾದ್ರೂ ಇಂತಹ ಜನರಿಗೆ ಜೀವನ ನಿರ್ವಹಿಸುವುದಕ್ಕೆ ಸಹಾಯ ಆಗಬಹುದು. ಸರ್ಕಾರಿ ಅಧಿಕಾರಿಗಳು ಬಡವರ ಕಲ್ಯಾಣ ನಿಧಿಗಾಗಿ ಇಟ್ಟ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳದೆ, ಯಾವುದೇ ಲಂಚದ ಆಸೆಗೆ ಬಲಿಯಾಗದೆ, ಬಡವರಿಗೋಸ್ಕರ ವಿನಿಯೋಗಿಸಬೇಕು. ಸರ್ಕಾರದ ಕೆಲಸ ದೇವರ ಕೆಲಸ ಅಂತ ಅಂದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಮ್ಮ ದೇಶ ಉದ್ಧಾರ ಆಗಬಹುದು.
- ಅರ್ಚನ ಬಾವಿಮನೆ