ದಿನ ನಿತ್ಯ ಅದೆಷ್ಟು ರಸ್ತೆ ಅಪಘಾತಗಳು ನಡೆಯುತ್ತಿರುತ್ತವೆ. ಕೆಲವರಿಗೆ ಮರಣದಾನ, ಇನ್ನು ಕೆಲವರಿಗೆ ಜೀವದಾನವಾಗಿರುತ್ತದೆ. ಹೀಗೆ ರಸ್ತೆ ಅಪಘಾತದಲ್ಲಿ ನೋವು ತಿಂದವರನ್ನು ನೋಡಿಕೊಳ್ಳಲು, ತಮ್ಮವರೆಂದು ಹೇಳಿಕೊಳ್ಳಲು ಯಾರಾದರು ಇದ್ದರೆ ಅಂಥವರ ಕಥೆ ಒಂದು ಕಡೆಯಾಗುತ್ತದೆ. ರಸ್ತೆಯಲ್ಲಿ ಬಿದ್ದಾಗ ತಮ್ಮವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದಾಗ ಅಥವಾ ಹೇಳಿಕೊಳ್ಳಲು ಆಗದಿದ್ದಾಗ, ಅಂತವರ ಕಥೆ ಇನ್ನೊಂದೆಡೆಯಾಗುತ್ತದೆ. ಇಂತವರ ಕಥೆಯು ದಾರಿಹೋಕರ ದಯೆ ಹಾಗು ಒಮ್ಮೊಮ್ಮೆ ಅಪಘಾತ ಮಾಡಿದವರ ಒಳ್ಳೆತನದ ಮೇಲೆ ನಿಂತಿರುತ್ತದೆ. ಇದಕ್ಕೆ ಹೋಲುವಂಥ ಘಟನೆಯೊಂದು ಒಮ್ಮೆ ನನ್ನ ಕಣ್ಣೆದುರಿಗೆ ನಡೆಯಿತು.

ನಾನು ಹಾಗು ಅಮೋಘ ಒಮ್ಮೆ ಮೈಸೂರಿಗೆ ಬೈಕಿನಲ್ಲಿ ಹೋಗುವಾಗ ಒಬ್ಬಳು ಮುದುಕಿಯು ಸರಿಯಾಗಿ ನೋಡದೆ ರಸ್ತೆ ದಾಟಲು ಮುಂದಾದಾಗ ಕಾರ್ ಒಂದು ಆಕೆಗೆ ಗುದ್ದಿತು. ಆ ಹೊಡೆತಕ್ಕೆ ಕಾರಿನ ಮುಂದಿನ ಭಾಗ ನೆಗ್ಗಿಹೋಯಿತು, ಅದರ ಮುಂದಿನ ಗಾಜು ಬಿರುಕು ಬಿಟ್ಟಿತು. ಆ ಹೊಡೆತಕ್ಕೆ ಆಕೆ ಹಾರಿ ಪ್ರಜ್ಞೆ ತಪ್ಪಿದ ಹಾಗೆ ರಸ್ತೆಯ ಮೇಲೆ ಬಿದ್ದಳು. ನಮ್ಮ ಬೈಕು ಆ ಕಾರಿನ ಹಿಂದೆಯೇ ಕೆಲವೇ ಅಡಿಗಳ ಅಂತರದಲ್ಲಿ ಇತ್ತು. ತಕ್ಷಣ ನಮ್ಮ ಗಾಡಿಯನ್ನು ರಸ್ತೆ ಬದಿಗೆ ಹಾಕಿ ಹಿಂದಿರುಗಿ ನೋಡಿದಾಗ ಕಾರಿನ ಚಾಲಕ ಆ ಮುದುಕಿಯನ್ನು ಎಳೆದು ರಸ್ತೆ ಬದಿಗೆ ತರುತ್ತಿದ್ದ. ಅದನ್ನ ನೋಡಿ ನಾವು ಆಕೆಯ ಜೀವ ಹೋಗಿದೆಯೆಂದೆ ತೀರ್ಮಾನಿಸಿದ್ದೆವು.

ತಕ್ಷಣ ನಾನು ೧೦೮ ಆಂಬುಲೆನ್ಸ್ ಗೆ ಫೋನ್ ಮಾಡಿ ವಿಷಯ ಮುಟ್ಟಿಸಿದೆ, ಆದಷ್ಟು ಬೇಗ ನಮ್ಮ ಜಾಗಕ್ಕೆ ಗಾಡಿ ಕಳಿಸುವುದಾಗಿ ಹೇಳಿದರು. ಅಮೋಘನು ಆಗಲೇ ಆ ಮುದುಕಿಯ ನಾಡಿಯನ್ನು ನೋಡಿ ಇನ್ನು ಜೀವವಿರುವುದ ಕಂಡು ಅವರನ್ನ ಮಾತನಾಡಿಸೋಕೆ ನೋಡ್ತಿದ್ದ. ಆ ಕಾರಿನ ಚಾಲಕ ನೀರನ್ನು ತಂದು ಆಕೆಗೆ ಕುಡಿಸಿದ. ಪ್ರಜ್ಞೆ ಬಂದಂತಾಗಿ ಆಕೆ ಏಳಲು ನೋಡಿದಳು. ಆದರೆ ಆಕೆಗೆ ಏಳಲು ಶಕ್ತಿ ಇಲ್ಲದೆ, ತನಗೆ ಏನೋ ಆಗಿದೆ ಎಂದು ಅರಿತು ಮಲಗಿದಳು. ಅಮೋಘನು ಮಾತನಾಡಿಸಿದಾಗ ಆಕೆಗೆ ಅಲ್ಲಿ ಹತ್ತಿರದಲ್ಲಿ ತನ್ನವರು ಯಾರು ಇಲ್ಲ, ಪರಿಚಯಸ್ಥರ ಫೋನು ನಂಬರ್ ಸಹ ನೆನಪಿಲ್ಲ ಎಂದಳು.

ಇದರ ನಡುವೆ, ಹೆದ್ದಾರಿಯ ಬದಿಯಾದ್ದರಿಂದ ಹೊಗಿಬರೋರೆಲ್ಲ ಅತೀ ಕುತೂಹಲದಿಂದ ಇದನ್ನು ನೋಡುತ್ತಾ ನಿಧಾನಕ್ಕೆ ಚಲಿಸುತ್ತಿದ್ದರು. ಬರುಬರುತ್ತಾ ಜನರ ಗುಂಪು ದೊಡ್ಡದಾಯಿತು. ಬಂದವರಲ್ಲಿ ಕೆಲವರು ಆಂಬುಲೆನ್ಸ್ ಗೆ ಕರೆಮಾಡಿದರು. ಅವರಲ್ಯಾರೋ ಒಬ್ಬರು ೧೦೮ ಕ್ಕೆ ಕರೆ ಮಾಡಿ ಹತ್ತು ನಿಮಿಷ ಆದರೂ ಗಾಡಿ ಬಂದಿಲ್ಲ ಎಂದು ೧೦೮ ಸೇವೆಯ ಜನರ ಮೇಲೆ ಫೋನಿನಲ್ಲಿ ಕೂಗಾಡುತ್ತಿದ್ದ. ಅಲ್ಲಿಗೆ ಎಲ್ಲಿಂದಲೋ ಬಂದ ದಪ್ಪೇದಾರನು ನಮಗೆ ಆಂಬುಲೆನ್ಸ್ ಗೆ ಕರೆಮಾಡಿ ಎಂದು ಹೇಳಿದ. ಹೊಸದಾಗಿ ದಪ್ಪೇದಾರನಾಗಿದ್ದ ಆತ ತನ್ನ ಮೇಲಿನ ಅಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸುವ ಹೊರತಾಗಿ ಮಾಡಬೇಕಿದ್ದ ಮುಂದಿನ ಕೆಲಸದ ಬಗ್ಗೆಯಾಗಲಿ, ಅಲ್ಲಿ ಆತ ತೆಗೆದುಕೊಳ್ಳಬೇಕಿದ್ದ ಜವಾಬ್ದಾರಿ ಬಗ್ಗೆ ತಿಳಿವು ಇರಲಿಲ್ಲ. ಆತನೊಡನೆ ಸೇರಿ ನಾನು ಹಾಗು ಇನ್ನಿತರು ಜನರು ಆಗುತ್ತಿದ್ದ ಟ್ರಾಫಿಕ್ ಜಾಮ್ ಅನ್ನು ತಡೆದು, ನಿಂತು ನೋಡಿಕೊಂಡು ಹೋಗುತ್ತಿದ್ದ ಗಾಡಿಗಳಿಗೆ ಹೇಳಿ-ಹೇಳಿ ಮುಂದಕ್ಕೆ ಕಳಿಸುತ್ತಿದ್ದೆವು.

ಅಪಘಾತವಾದ ಕಾರಿನ ಚಾಲಕ ಜನರ ಪಕ್ಕದಲ್ಲೇ ಹೆದರಿಕೊಂಡು ನಿಂತಿದ್ದ. ಆತನೊಡನೆ ನಾನು ಮಾತಾಡಿದಾಗ, “ಅದು ನಿಮ್ಮ ತಪ್ಪಿನಿಂದ ಆದದ್ದಲ್ಲ, ಆದರೂ ಹೀಗಾಯಿತು, ಹೆದರಬೇಡಿ” ಎಂದು ಹೇಳಿ ಅಲ್ಲೇ ನಿಂತೆನು. ಒಂದು ಘಳಿಗೆ ಆ ಚಾಲಕ ಆತನ ಕಾರಿನಲ್ಲಿದ್ದ ತನ್ನ ಮನೆಯವರಿಗೆ ನೀರನ ಬಾಟಲಿ ಕೊಡಲು ಹೋದಾಗ ಜನಗಳಲ್ಲಿ ಒಬ್ಬ “ಎಲ್ಲಿ ಆವ, ಹಿಡ್ಕೊಂಡು ಬನ್ನಿ” ಎಂದ, ಮತ್ತೊಬ್ಬ “ಇಲ್ಲಿ ಯಾರೋ ಸಾಯ್ತಿದ್ದಾರೆ, ಆದರೂ ಬಾಟಲಿಯನ್ನ ಕಾರಿನಲ್ಲಿ ಇಡೋಕೆ ಹೋಗಿದ್ದಾನೆ” ಎಂದು ಬೊಬ್ಬೆ ಹೊಡೆದ. ಇವರ ನಡುವೆ ಮತ್ತೆ ತಾನಾಗೆ ಬಂದು ಚಾಲಕ ನಿಂತನು. ನಾನು ಕರೆ ಮಾಡಿ ಸುಮಾರು ೨೫ ನಿಮಿಷಗಳ ನಂತರ ಆಂಬುಲೆನ್ಸ್ ಗಾಡಿ ಬಂದು ಎಲ್ಲರೂ ಸೇರಿ ಆ ಮುದುಕಿಯನ್ನು ಗಾಡಿ ಒಳಗೆ ಮಲಗಿಸಿದರು. ಮುದುಕಿಯ ಪುಣ್ಯವೋ, ಚಾಲಕನ ಪುಣ್ಯವೋ ಗೊತ್ತಿಲ್ಲ, ಆ ಮುದುಕಿಯ ಕಾಲಿನ ಮೂಳೆ ಮಾತ್ರ ಮುರಿದಿತ್ತು. ರಕ್ತ ಹೋಗುವಂಥಹ ಗಾಯವಾಗಿರಲಿಲ್ಲ. ಆದರೂ ಆ ಆಂಬುಲೆನ್ಸ್ ನ ವ್ಯಕ್ತಿಯು ಯಾವುದೇ ಅವಸರ ತೋರದೆ ನಿಧಾನವಾಗಿ ಆತನ ಆತನ ಕೆಲಸ ಮಾಡುತ್ತಿದ್ದನು. ಆತನು ಅದು ಅನುದಿನದ ಕೆಲಸವೆಂದು ಅವಸರ ಮಾಡುತ್ತಿರಲಿಲ್ಲವೋ ಅಥವಾ ಎಂತ ಸನ್ನಿವೇಶದಲ್ಲೂ ಗಾಬರಿಯಾಗದೆ ಕೆಲಸ ಮಾಡುವುದು ಕಲಿತಿದ್ದನೋ ಏನೋ ತಿಳಿಲಿಲ್ಲ.

ಮುದುಕಿಯ ಆಂಬುಲೆನ್ಸ್ ಹಾಕಿದ ನಂತರ ಜನರು ಅವನಿಗೂ ಆ ಗಾಡಿಯಲ್ಲೆಯೇ ಆಸ್ಪತ್ರೆಗೆ ಹೋಗಲು ಸೂಚಿಸುತ್ತಿದ್ದರು. ಆದರೆ ಆತನು “ನಾನು ನನ್ನ ಮನೆಯವರ ರಸ್ತೆಯಲ್ಲಿ ಹೀಗೆ ಬಿಟ್ಟು ಹೋಗೋದಕ್ಕಾಗಲ್ಲ, ಅದಕ್ಕೆ ಕಾರಿನಲ್ಲೇ ಆಂಬುಲೆನ್ಸ್ ಹಿಂಬಾಲಿಸಿ ಆಸ್ಪ್ರತ್ರೆಗೆ ಹೋಗುತ್ತೇನೆ ಎಂದನು”. ಆದರೆ ಅದಕ್ಕೆ ಅಲ್ಲಿದ್ದ ಜನರು ಒಪ್ಪಲಿಲ್ಲ, ಆತ ಓಡಿಹೊಗಬಹುದು ಎಂದು ಅವರ ಯೋಚನೆ. ಇವರ ನಡುವೆ ಇನ್ಯಾರೋ ಒಬ್ಬ ಬಂದು ಗಾಡಿ ತೆಗೆಯುವ ಹಾಗಿಲ್ಲ, ನಮ್ಮ ಸಾಹೇಬರು ಬರುತ್ತಾರೆ ಎಂದು ಹೇಳಿದನು. ಕಡೆಗೆ ಆ ಚಾಲಕ ತಾನು ಅಲ್ಲಿಯೇ ಇರುವುದಾಗಿ ಹೇಳಿ ಆಂಬುಲೆನ್ಸ್ ನವರಿಗೆ ಆತನ ಫೋನು ನಂಬರ್ ಕೊಟ್ಟು ಕಳಿಸಿ ಆತ ಅಲ್ಲಿಯೇ ಉಳಿದುಕೊಂಡನು. ಅದರೊಂದಿಗೆ ಅಲ್ಲಿ ನೆರೆದಿದ್ದ ಜನರೆಲ್ಲರೂ ಒಬ್ಬೊಬ್ಬರಾಗಿ ತಮ್ಮ ಕೆಲಸಗಳಿಗೆ, ಮನೆಗಳಿಗೆ ಹೊರಟರು. ಕೊನೆಯಲ್ಲಿ ಉಳಿದಿದ್ದು ನಾನು, ಅಮೋಘ, ಚಾಲಕ ಆತನ ಕಾರು, ಜೊತೆಯಲ್ಲಿ ಯಾರಿಗೋ ಫೋನ್ ಮಾಡುತ್ತಾ ಪೋಲಿಸಿನವರಂತೆ ಅಲ್ಲಿಯೇ ಇದ್ದ ಆಗಂತುಕ.

ಕೊನೆಗೆ ಚಾಲಕನಿಗೆ ಧೈರ್ಯ ಹೇಳಿ ನಾನು ಮತ್ತು ಅಮೋಘ ಸಹ ಹೊರಟೆವು. ಆದರೂ ಆ ಆಗಂತುಕ ಅಲ್ಲಿಂದ ಕದಲಲಿಲ್ಲ. ನಾವು ಬಹುಶಃ ಆತ ಆ ಸಂದರ್ಭದ ಉಪಯೋಗ ಪಡೆದು ಯಾರಾದರು ಪೋಲಿಸಿನವರೊಡನೆ ಸೇರಿ ಆ ಚಾಲಕನಿಂದ ಹಣ ಪಡೆಯುವ ಯೋಚನೆಯಲ್ಲಿದ್ದನೋ ಅಥವಾ ನಿಸ್ವಾರ್ಥದಿಂದ ಆ ಮುದುಕಿಯ ಚಿಕಿತ್ಸೆಗೆ ಬೇಕಾದ ಹಣವನ್ನು ಚಾಲಕನಿಂದ ಕೊಡಿಸುವ ಸಲುವಾಗಿ ಇದ್ದನೋ ಗೊತ್ತಾಗುವುದು ಕಷ್ಟ. ಇನ್ನು ಚಾಲಕ ಅಲ್ಲಿಯವರೆಗೆ ಸರಿಯಾಗಿಯೇ ನಡೆದುಕೊಂಡು, ಆ ಮುದುಕಿಯ ಚಿಕಿತ್ಸೆಗೆ ಬೇಕಾದ ವೆಚ್ಚವನ್ನು ಆತ ನೋಡಿಕೊಳ್ಳುವಂತೆ ಕಂಡ. ಆದರೆ ಮುಂದೆ ಆಸ್ಪತ್ರೆಗೆ ಹೋಗಿ ನಾವ್ಯಾರು ನೋಡಲಿಲ್ಲ.ಆ ಮುದುಕಿಗೆ ಆ ಹೊತ್ತಲ್ಲಿ ಯಾರು ಇರಲಿಲ್ಲ, ಆಕೆಗೆ ಯಾರೂ ಇಲ್ಲವೇ ಇಲ್ಲ ಎಂದಾಗ ಆ ಚಾಲಕನೆನಾದರು ಪೋಲಿಸಿನವರಿಗೆ ಹಣದ ಆಸೆ ತೋರಿಸಿ ತನ್ನ ಕೈಯನ್ನು ಆ ಕೇಸಿನಿಂದ ಬಿಡಿಸಿಕೊಳ್ಳಬೇಕೆಂಬ ಯೋಚನೆಯಲ್ಲಿದ್ದಿರಬಹುದು. ಪೋಲಿಸಿನವರೂ ಸಹ ಹಣ ತೆಗೆದುಕೊಂಡು ಆತನನ್ನು ಬಿಟ್ಟು ಬಿಡಬಹುದು. ಇವರೆಲ್ಲರ ನಡುವೆ ಆ ಆಗಂತುಕ ಸಹ ಸ್ವಲ್ಪ ಹಣ ಮಾಡಿಕೊಂಡಿರಬಹುದು. ತನ್ನ ಸಣ್ಣ ತಪ್ಪಿಗೆ ನೋವು ಅನುಭವಿಸುತ್ತಿದ್ದ ಮುದುಕಿಯ ಕಡೆಯವರು ಬಂದು ಆಕೆಯ ಆರೋಗ್ಯ ನೋಡಿಕೊಂಡರೆ ಕ್ಷೇಮ.. ಇಲ್ಲದಿದ್ದಲ್ಲಿ ಆಕೆಯಿಂದ ಕೇವಲ ಉಳಿದವರು ಲಾಭ ಮಾಡಿಕೊಳ್ಳುವರು ಅಷ್ಟೆ.

ಅಥವಾ

ಆ ಆಗಂತುಕ ನಿಯತ್ತಿನಿಂದ ಚಾಲಕನನ್ನು ಪೋಲೀಸಿನವರಿಗೆ ಒಪ್ಪಿಸಿ, ಚಾಲಕನು ನಿಯತ್ತಿನಿಂದ ಮುದುಕಿಯ ಚಿಕಿತ್ಸೆಯ ಪೂರ್ತಿ ವೆಚ್ಚ ತುಂಬಿಸಿ, ಪೋಲಿಸಿನವರು ನಿಯತ್ತಿನಿಂದ ಕೇಸ್ ಒಂದನ್ನು ಹಾಕಿ, ಎಲ್ಲ ಮುಗಿದ ನಂತರ ಅದನ್ನು ಮುಚ್ಚಿ, ಆ ಚಾಲಕನು ಮುದುಕಿಯ ಪೂರ್ತಿ ಕಾಲು ಸರಿಯಾಗದಿದ್ದರೂ ಒಂದು ಹಂತದವರೆಗೆ ಕಾಲು ಗುಣವಾಗುವವರೆಗೆ ಚಿಕಿತ್ಸೆ ನೋಡಿಕೊಂಡಿರಬಹುದು!

ಸಮಾಜ ಜಗತ್ತು ಯಾವಾಗ ಬೇಕಿದ್ದರೂ ನಮ್ಮನ್ನು ಚಕಿತಗೊಳಿಸಬಹುದು. ನಿಯತ್ತು ಯಾರೊಬ್ಬರ ಸ್ವತ್ತೂ ಅಲ್ಲ!

ಆ ಘಟನೆಯ ನಂತರ ಅದರ ಸತ್ಯಾಸತ್ಯತೆಗಳ ತಿಳಿಯಲು ನಾನಾಗಲಿ, ಅಮೋಘನಾಗಲಿ ಹೋಗಲಿಲ್ಲ!

ನಿಯತ್ತು ಎಲ್ಲರಲ್ಲೂ ಇರುತ್ತದೆ, ಎಲ್ಲರಿಗೂ ತಪ್ಪುತ್ತದೆ, ಅವರವರ ಸಮಯ ಬಂದಾಗ!

- ಆದರ್ಶ