ಕರಾವಳಿ ಭೋಜನ
by Adarsha
ನಮ್ಮ ಬ್ರಾಹ್ಮಣರ ಊಟದ ಪದ್ಧತಿಯೇ ಸ್ವಲ್ಪ ವಿಶಿಷ್ಠ. ಸಾಮಾನ್ಯವಾಗಿ ಜನರು ಮದುವೆ ಹಾಗು ಇತರೆ ಸಮಾರಂಭಗಳಲ್ಲಿ ಊಟ ಬಡಿಸುವಾಗ ಮೊದಲು ಸಿಹಿ ತಿಂಡಿಗಳ ಬಡಿಸಿ ನಂತರ ಖಾರದ ಅಡಿಗೆಗಳ ಬಡಿಸುತ್ತಾರೆ. ಕೊನೆಯಲ್ಲಿ ಅನ್ನ-ಮಜ್ಜಿಗೆ ಹಾಕಿ ಜೈ ಅನ್ನುತ್ತಾರೆ. ಆದರೆ ನಮ್ಮ ಬ್ರಾಹ್ಮಣರಲ್ಲಿ ಅಡಿಗೆ ಬಡಿಸುವ ಕ್ರಮವೇ ಬೇರೆ. ಮೊದಲು ಕೋಸಂಬರಿ, ಪಲ್ಯಗಳು, ನಂತರ ಅನ್ನ-ಸಾರು, ಅನ್ನ-ಹುಳಿ, ಅನ್ನದಿಂದ ಮಾಡಿದ ಯಾವುದಾದರೂ ಒಂದು ಅಡಿಗೆ (ತುಪ್ಪದ ಅನ್ನ{ಘೀ ರೈಸ್}, ಇತರೆ) ಇವುಗಳಾದ ನಂತರ ಸಿಹಿ ತಿಂಡಿಗಳು, ಅವುಗಳ ನಂತರ ಅನ್ನ-ಮೊಸರು, ಮಜ್ಜಿಗೆಗಳು ಬಂದು ನಮ್ಮ ದಂಡಯಾತ್ರೆಗೆ ಒಂದು ಕೊನೆಯ ಜಯಕಾರ ಬೀಳುತ್ತದೆ. ಬ್ರಾಹ್ಮಣರ ಈ ಕ್ರಮದ ಅರಿವಿಲ್ಲದ ಜನರು ಊಟಕ್ಕೆ ಕೂತಾಗ ಮೊದಲು ಅನ್ನ-ಸಾರು ಬಿದ್ದ ತಕ್ಷಣವೇ ಗಾಬರಿಯಲ್ಲಿ ಸೋತು ಬಿದ್ದಿರುತ್ತಾರೆ.
೨೦೧೨ ರಲ್ಲಿ ಕಾಲೇಜಿನಲ್ಲಿ ಓದುವಾಗ ಒಮ್ಮೆ ಗೆಳೆಯನ ಜೊತೆಗೆ ಸಮಾರಂಭವೊಂದಕ್ಕೆ ಹೋದಾಗ ಅಲ್ಲಿ ಈ ರೀತಿ ಊಟ ಬಡಿಸುವುದರ ಹಿಂದಿನ ಅರ್ಥದ ಅರಿವಾಯಿತು. ಮೊದಲೇ ಸಿಹಿ ತಿಂಡಿ ತಿಂದರೆ ನಮ್ಮ ಹೊಟ್ಟೆ ಕಟ್ಟಿದಂತಾಗಿ ಮುಂದೆ ಬರುವ ತಿಂಡಿಗಳ ಹೆಚ್ಚಾಗಿ ತಿನ್ನಲು ಆಗುವುದಿಲ್ಲ. ಜೊತೆಗೆ ಸಿಹಿ ತಿಂದು ನಂತರ ಖಾರ ತಿಂದರೆ, ಈ ಅಡಿಗೆಗಳ ಖಾರ ಇನ್ನೂ ಹೆಚ್ಚಾಗುತ್ತದೆ. ಮೊದಲು ಖಾರದ ಅಡಿಗೆಗಳ ತಿಂದರೆ ಹೆಚ್ಚು ಊಟ ಸೇರುತ್ತದೆ. ನಂತರ ಸಿಹಿ ತಿಂದು ಕೊನೆಯಲ್ಲಿ ಮಜ್ಜಿಗೆ ಜೊತೆಗೆ ಊಟಕ್ಕೆ ಮುಕ್ತಾಯ ಬರೆಯಬಹುದು.
೨೦೧೫ ರಲ್ಲಿ ಮತ್ತೊಮ್ಮೆ ಕರಾವಳಿಯ ಬ್ರಾಹ್ಮಣರ ಮದುವೆ ಊಟದ ಅವಕಾಶ ಸಿಕ್ಕಿತ್ತು. ಅಂದೂ ಸಹ ಕರಾವಳಿಯ ವಿವಿಧ ಅಡಿಗೆಗಳನ್ನು ಸವಿದಿದ್ದೆ. ಕಡಿಮೆ ಎಂದರೂ ಹತ್ತು ರೀತಿಯ ಅಡಿಗೆ ಮಾಡಿದ್ದರು.
ಈಗ ಮತ್ತೆ ೨೦೧೭ ರಲ್ಲಿ ಉಡುಪಿಯ ಕೃಷ್ಣ ಮಠದ ಸಭಾ ಭವನದಲ್ಲಿ ಮದುವೆಗೆಂದು ಹೋಗಿದ್ದೆ. ಜೊತೆಗೆ ನನ್ನ ಗೆಳೆಯರಾದ ಕೀರ್ತಿ, ಸ್ವಾತಿ, ರೇವಣ್ಣ ರು ಸಹ ಬಂದಿದ್ದರು. ಊಟ ಬಡಿಸುವ ಕ್ರಮದ ಅರಿವಿದ್ದ ನನಗೆ ಮೊದಲೇ ನಮ್ಮವರಿಗೆ ಬಿಡಿಸಿ ಹೇಳಿದೆ. ಅದಕ್ಕೆ ತಕ್ಕಂತೆ ಅವರೂ ತಯಾರಾದರು. ನಾವುಗಳು ಕುಳಿತುಕೊಂಡ ತಕ್ಷಣ ಶುದ್ಧವಾದ ಹಸಿರು ಬಾಳೆಲೆಗಳು ನಮ್ಮ ಮುಂದೆ ಬಂದವು. ಇದರ ಜೊತೆಯಲ್ಲಿಯೇ ಉಪ್ಪು, ಉಪ್ಪಿನಕಾಯಿ, ಕೋಸಂಬರಿ, ಮೆಕ್ಕೆಜೋಳದ ಪಲ್ಯ, ಇನ್ನೆರೆಡು ರೀತಿಯ ಪಲ್ಯ (ಹೆಸರು ಗೊತ್ತಿಲ್ಲ), ಚಟ್ನಿ, ಹಪ್ಪಳ, ಪುಳಿಯೋಗ್ಗರೆ, ಅನ್ನ ಇಷ್ಟು ಕ್ರಮವಾಗಿ ಬಂದವು. ಎಲ್ಲ ಅಡಿಗೆಯ ಬಡಿಸುವವರೆಗೆ ತಿನ್ನುವುದು ಬೇಡ ಎಂದು ನಮ್ಮ ಹುಡುಗರಿಗೆ ನಾ ಹೇಳಿದೆ. ಅಷ್ಟರಲ್ಲಿ ‘ಗೋವಿಂದ’ ಎಂಬ ಕೂಗು ಬಂದಿತು. ಎಲ್ಲರು ಉಣ್ಣೋಕೆ ಶುರು ಮಾಡಿದರು. ಆದರೆ ನಮ್ಮ ಸಾಲಿನಲ್ಲಿ ಇದ್ದವರಿಗೆ ಅನ್ನಕ್ಕೆ ಸಾರು ಬರಲಿಲ್ಲ, ೫ ನಿಮಿಷ ಕಾದರೂ ಬರಲಿಲ್ಲ, ಗೊಂದಲದಲ್ಲಿ ಅನ್ನವ ಹೇಗೆ ತಿನ್ನೋದು ಎಂದು ನೋಡಿದಾಗ ಪಕ್ಕದ ಜನ ಅನ್ನವನ್ನು ಪಲ್ಯದ ಜೊತೆ ತಿನ್ನುತ್ತಾ ಕೂತಿದ್ದರು. “ಏನೋ ಮಿಸ್ ಹೊಡಿತೈತಲ್ಲ” ಅಂತ ಅನ್ಕೊಂಡು, ಕೊನೆಗೆ ಹೀಗೇ ತಿನ್ನಬೇಕು ಅನ್ಸುತ್ತೆ ಅಂತ ನಾವು ಅವರ ಅನುಕರಿಸಲು ಶುರು ಮಾಡಿದೆವು. ಬ್ರಾಹ್ಮಣರ ಊಟದ ರೀತಿ ಗೊತ್ತು ಅಂತ ಜಂಭ ತೋಡಿಕೊಂಡಿದ್ದ ನನಗೂ ದಿಗಿಲಾಯಿತು, ಹಾಗೆ ತಿನ್ನಲು ಶುರು ಮಾಡಿ ೨ ನಿಮಿಷ ಕಳೆದ ಕೂಡಲೇ ಭಟ್ಟರು “ಈ ಸಾಲಿಗೆ ಸಾರು ಬಂದಿಲ್ಲ, ಸಾರು ತಂದು ಹಾಕಿ” ಎಂದು ಹೇಳಿದರು. ಇದನ್ನು ಕೇಳಿ ನಾವೆಲ್ಲರೂ ದಂಗಾದೆವು. “ಥೋ ಇವರೆಲ್ಲ ಸೇರಿ ನನ್ನ ಮಂಗನನ್ನಾಗಿ ಮಾಡಿದರು” ಅಂದುಕೊಂಡು ಅನ್ನ-ಸಾರು ಕಲಸಿಕೊಳ್ಳಲು ಶುರು ಮಾಡಿದೆ. ಅನ್ನ-ಸಾರಿನ ಜೊತೆಗೆ ಉಳಿದವುಗಳ ತಿನ್ನುವಷ್ಟರಲ್ಲಿ ಮತ್ತೊಮ್ಮೆ ಸಾರಿಗೆ ಅನ್ನ ಎಂದು ಕೇಳಿಕೊಂಡು ಬಂದರು, ನಾನು ಮೊದಲು ಹಾಕಿಸಿಕೊಂಡದ್ದನ್ನೇ ತಿಂದು ಮುಗಿಸಿರಲಿಲ್ಲ. ಆದರೆ ಕೀರ್ತಿ ಅದನ್ನ ಮುಗಿಸಿ ಎರಡನೇ ದಂಡಯಾತ್ರೆಗೆ ಅಣಿಯಾಗಿದ್ದ. ಸ್ವಾತಿ ನನ್ನ ಹಾಗೆ ನಿಧಾನಕ್ಕೆ ತಿನ್ನುತ್ತಿದ್ದಳು. ಉತ್ತರ ಕರ್ನಾಟಕದ ಗಜ ರೇವಣ್ಣನಿಗೆ ಒಂದು ಸೌಟು ಅನ್ನವೇ ಭಾರಿಯಾಗಿತ್ತು. ಅವನಿಗೆ ಏನಿದ್ದರೂ ರೊಟ್ಟಿ ಊಟವೇ ಸರಿ.
ನನ್ನ ಎಲೆಯಲ್ಲಿ ಇದ್ದ ಅರ್ಧ ಅನ್ನ ಮುಗಿಸುವುದರೊಳಗಾಗಿ “ಹುಳಿಗೆ ಅನ್ನ” ಎಂದು ಕೇಳಿಕೊಂಡು ಮತ್ತೆ ಬಂದರು. ಸಿಹಿ ಕುಂಬಳಕಾಯಿ, ಬದನೇಕಾಯಿ ಜೊತೆ ಇನ್ನೊಂದ ಸೇರಿಸಿ ಒಟ್ಟು ಮೂರು ರೀತಿಯ ಹುಳಿಯನ್ನು ತಂದರು. ಇಷ್ಟನ್ನು ತಿನ್ನುವಷ್ಟರಲ್ಲೇ ನಾನು, ಕೀರ್ತಿ ಬಿದ್ದಿದ್ವಿ. ರೇವಣ್ಣ ಮಲಗಿ ಗಂಟೆಯಾಗಿತ್ತು. ಸ್ವಾತಿ ಮೊದಲ ಬಾರಿಯ ಅನ್ನದಲ್ಲೇ ಮುಳುಗಿದ್ದಳು. ಈಗ ಸಿಹಿ ತಿಂಡಿಗಳ ಕಾರುಬಾರು ಆರಂಭವಾಗುವ ಸೂಚನೆ ಬಂದಿತು. ನಾವೂ ಸಹ ನೋಡಿಯೇ ಬಿಡುವ ಎಂದು ಆಗಲೇ ತುಂಬಿದ್ದ ಹೊಟ್ಟೆಯಲ್ಲಿ ಸಿದ್ಧರಾಗಿ ಕುಳಿತೆವು. ಊಟ ಬಡಿಸುವ ಭಟ್ಟರು ಒಂದಾದ ಮೇಲೊಂದು ಸಿಹಿ ತಿಂಡಿಗಳ ತಂದು ದಾಳಿ ಆರಂಭಿಸಿದರು. ಡ್ರೈ ಜಾಮೂನು, ಬಾದುಷ, ಬಾದಾಮ್ ಪುರಿ ಗಳ ಒಂದರ ಹಿಂದೆ ಒಂದು ಹಾಕಿ ಹೋದರು. ನಿಧಾನಕ್ಕೆ ಸಾವರಿಸಿಕೊಂಡು ಡ್ರೈ ಜಾಮೂನು ತಿನ್ನಲು ಶುರು ಮಾಡಿದೆ, ತಿರುಗಿ ನೋಡಿದಾಗ ಪಕ್ಕದಲ್ಲಿ ಕೀರ್ತಿಯೂ ಸಹ ಇಷ್ಟೊಂದು ಅಡಿಗೆಯ ದಾಳಿಗೆ ತತ್ತರಿಸಿದ್ದ. ಹೇಗೋ ಎಲ್ಲ ಮುಗಿಯಿತು ಇನ್ನು ಅನ್ನ-ಮಜ್ಜಿಗೆಯಷ್ಟೇ ಎಂದು ಖುಷಿಯಾಗಿ ತಿನ್ನುವಾಗ ಮತ್ತೇನೋ ತಂದರು. ಬಾಳೆಹಣ್ಣಿನ ರಸಯಾನ, ನಂತರ ಹೋಳಿಗೆ-ಹಾಲು ಸಹ ಬಂದವು. ತಲೆ ಕೆಟ್ಟು ನಾನು ಕೀರ್ತಿಗೆ “ಮಗ, ಈ ನನ್ ಮಕ್ಳು ಇನ್ನೊಂದು ಐಟಂ ತಂದ್ರೂ ನಾನು ಇವರ ಕೊಲೆ ಮಾಡ್ತೀನಿ” ಎಂದೆ. ನನ್ನ ಪುಣ್ಯಕ್ಕೆ ಇನ್ನೇನೂ ತರಲಿಲ್ಲ. ವಾಡಿಕೆ ಎಂಬಂತೆ ಕೊನೆಗೆ ಅನ್ನ, ಮೊಸರು, ಮಜ್ಜಿಗೆಗಳು ಬಂದು ಊಟಕ್ಕೆ ಮುಕ್ತಾಯ ಹಾಡಿದವು.
ಬ್ರಾಹ್ಮಣರ ಭೋಜನಗಳ ದಾಳಿಯಲ್ಲಿ ನಾವುಗಳು ಸೋತಿದ್ದೆವು. ಆದರೆ ಒಂದೊಂದು ಅಡಿಗೆಯ ರುಚಿಯಿಂದ ಅಪಾರವಾಗಿ ತೃಪ್ತರಾಗಿದ್ದೆವು. ಸಂಪ್ರದಾಯದಂತೆ ಎಲೆಯಲ್ಲಿ ಉಳಿದಿದ್ದ ಲಾಡೊಂದನ್ನು ನನ್ನ ಚೀಲವೊಂದರಲ್ಲಿ ಹಾಕಿಕೊಂಡು ಹೊರ ನಡೆದು ಮದುವೆಗೆ ಬಾರದ ನನ್ನ ಇತರ ಗೆಳೆಯರಿಗೆ ಕೊಟ್ಟೆನು. ಕರ್ನಾಟಕದ ಉದ್ದಗಲ ಅಲೆದು ಬಹಳ ಕಡೆ ಊಟ ಮಾಡಿದ ಮೇಲೂ ಕರಾವಳಿ ಬ್ರಾಹ್ಮಣರ ಭೋಜನವನ್ನು ವಿವಿಧತೆಯಲ್ಲಿ, ವಿಶೇಷತೆಯಲ್ಲಿ ಸಮವಾಗಿ ಎದುರಿಸುವ ಮತ್ತೊಂದು ಭೋಜನ ಕೂಟ ಏರ್ಪಡಿಸುವ ಜನರ ಇದುವರೆಗೆ ನಾ ಕಂಡಿಲ್ಲ. ಬ್ರಾಹ್ಮಣರು ಬಹುಜನ ಪ್ರಿಯರೋ ಅಥವಾ ಭೋಜನ ಪ್ರಿಯರೋ ಗೊತ್ತಿಲ್ಲ. ಆದರೆ ಹೀಗೆ ಸಮಾರಂಭಗಳಿಗೆ ಬರುವ ಜನರಿಗೆ ಬಂದು ಹೋಗುವ ವೆಚ್ಚ ಕಡಿಮೆಯಾಗಲಿ ಎಂದು ಊಟ ಮಾಡುವಾಗ ಬಂದವರ ಕೈಗೆ ತಮ್ಮ ಕೈಲಾದಷ್ಟು ಹಣವನ್ನು ಕಾಣಿಕೆಯಾಗಿ ಕೊಡುತ್ತಾರೆ, ನಮಗೂ ಒಂದಿಪ್ಪತ್ತು ರೂ. ಗಳು ಸಿಕ್ಕವು. ಈ ಮದುವೆಯ ಊಟ ಅರಗಿಸಿಕೊಳ್ಳಲು ನನಗೆ ಬರೋಬ್ಬರಿ ಒಂದು ದಿನ ಹಿಡಿಯಿತು. ಇದಾಗಿ ಎರಡು ದಿನಗಳ ನಂತರವೂ ಅದೇ ಗುಂಗಿನಲ್ಲಿ ಅದರ ಅನುಭವವನ್ನು ನೆನೆಯುತ್ತಾ ಕುಳಿತಿದ್ದೇನೆ!
- ಆದರ್ಶ