ಐದು ನಿಮಿಷ
by Adarsha
ಹಸಿದ ಹೊಟ್ಟೆಗೆ ಅನ್ನವೇ ದೇವರು. ಪ್ರಪಂಚದ ಪ್ರತಿಯೊಂದು ಅಣುವೂ ಸಹ ತನ್ನ ಹಸಿವನ್ನು ನೀಗಿಸುವ ಸಲುವಾಗಿಯೇ ಎಲ್ಲ ಚಲನವಲನಗಳ ನಡೆಸುತ್ತಿವೆ. ದಾಸರು ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ಹೇಳಿದ್ದಾರೆ, ಅವರ ಮಾತಂತೆ ನಡೆಯುವ ನಮ್ಮ ಗೆಳೆಯರ ಸಣ್ಣ ಬಳಗದ ಹುಡುಗರು ಆಗಾಗ ದೇವಸ್ಥಾನಗಳಿಗೆ ಹೋದರೆ, ಮೊದಲು ಪ್ರಸಾದದ ಸುಳಿವನ್ನು ಹುಡುಕುತ್ತೇವೆ. ಕರ್ನಾಟಕದಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ದೇವರ ನೋಡಲು ಬಂದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ವಿಶೇಷ. ಧರ್ಮಸ್ಥಳ, ಶೃಂಗೇರಿ, ಹೊರನಾಡು, ಉಡುಪಿ, ಬಾದಾಮಿ ಇನ್ನು ಅನೇಕ ಊರುಗಳಲ್ಲಿ ಜನರಿಗೆ ಊಟದ ವ್ಯವಸ್ಥೆ ಇರುವುದ ಕಾಣಬಹುದು.
ಸಾಮಾನ್ಯ ಜನರಿಗೆ ಇಂಥ ಜಾಗಗಳು ಕೇವಲ ದೇವರಿರುವ ಸ್ಥಳವಾಗಿರುತ್ತವೆ. ಆದರೆ ನಮ್ಮ ಹುಡುಗರಿಗೆ ದೇವರಿಂದಾಚೆ ಪ್ರವಾಸ, ಶಾಂತಿ, ಪ್ರಕೃತಿ ಹಾಗು ಪ್ರಸಾದ ಸಿಗುವ ವಿಶೇಷ ಊರುಗಳಾಗಿವೆ. ಬೇರೆ ಊರುಗಳಿಗಿಂತ ಧರ್ಮಸ್ಥಳಕ್ಕೆ ಹೆಚ್ಚಾಗಿ ಹೋಗುವ ಅವಕಾಶ ನನಗೆ ಆಗಾಗ ಸಿಕ್ಕುತ್ತಿತ್ತು, ಈ ಕಾರಣದಿಂದ, ಜೊತೆಗೆ ಅಲ್ಲಿರುವ ಪರಿಸರದಿಂದ, ವ್ಯವಸ್ಥೆಯಿಂದ ಆ ಊರಿನ ಮೇಲೆ ಕೊಂಚ ಹೆಚ್ಚಾದ ಆದರವಿದೆ. ಪ್ರತಿ ಬಾರಿ ಧರ್ಮಸ್ಥಳಕ್ಕೆ ಹೋದಾಗ ಏನು ನೋಡದೆ ಇದ್ದರೂ , ಎಲ್ಲಿ ಹೋಗದಿದ್ದರೂ ಅನ್ನಪೂರ್ಣೆಯ ದರ್ಶನ ಪಡೆದೇ ಬರುವುದು ಈಗ ನಮ್ಮ ಅಭ್ಯಾಸವಾಗಿ ಹೋಗಿದೆ.
ಸಾವಿರಾರು ಜನರು ಬಂದು ಹೋಗುವ ಧರ್ಮಸ್ಥಳದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಬೇಕು ಎಂದಾಗ ದೇವಸ್ಥಾನದವರಿಗೂ ಪ್ರತಿದಿನದ ಸಾಹಸದ ಕೆಲಸ ಅದು. ಅಂಥ ಸ್ಥಳದಲ್ಲಿ ಎಲ್ಲರಿಗೂ ಊಟ ಸಿಗಬೇಕು ಎಂದರೆ ಪ್ರತಿಯೊಬ್ಬರೂ ಬೇಗನೇ ಊಟ ಮಾಡಿ ಮುಂದಿನವರಿಗೆ ದಾರಿ ಮಾಡಿ ಕೊಡಲೇಬೇಕು. ಹೀಗೆ ಒಮ್ಮೆ ನಾನು, ಚೇತನ್, ಅಮೃತ್, ಪ್ರಶಾಂತ ಧರ್ಮಸ್ಥಳಕ್ಕೆ ಹೋಗಿ ಊಟಕ್ಕೆ ಸಾಲಿನಲ್ಲಿ ಕುಳಿತಾಗ ನಮ್ಮ ಬಳಿ ಇದ್ದದ್ದು ಕೇವಲ ಐದೋ ಆರೋ ನಿಮಿಷ. ಅಷ್ಟರಲ್ಲಿ ನಮ್ಮ ಹೊಟ್ಟೆ ತುಂಬಿಸಿಕೊಂಡು ಹೊರಡಬೇಕಿತ್ತು. ಪ್ರತಿಯೊಂದು ಪಂಕ್ತಿಯಲ್ಲಿ ೫ ರಿಂದ ೬ ನಿಮಿಷದಲ್ಲಿ ನೂರಾರು ಜನರ ಹಸಿವು ಇಂಗಿರುತ್ತದೆ. ಆ ಐದು ನಿಮಿಷದಲ್ಲಿ ಎರಡು ಬಾರಿ ಅನ್ನ, ಸಾರು, ಕಡೆಯಲ್ಲಿ ಮಜ್ಜಿಗೆ ಇಷ್ಟನ್ನು ಹಾಕಿಸಿಕೊಂಡರೆ ತಿಂದು ಮುಗಿಸಲೇಬೇಕು.
ಹೊಟ್ಟೆಯ ತುಂಬಾ ಊಟವನ್ನು ಯಾರಾದರೂ ಬೇಡವೆನ್ನುತ್ತಾರೆಯೇ? ಆದರೆ ಸಿಕ್ಕ ಊಟವ ಮುಗಿಸೋಕೆ ತಕ್ಕ ಸಮಯ ಬೇಕಲ್ಲವೇ? ಧರ್ಮಸ್ಥಳದಲ್ಲಿ ಆ ಉದಾರವಾದ ಸಮಯಾವಕಾಶವಿಲ್ಲ. ಊಟಕ್ಕೆ ಬರುವ ಸಾವಿರಾರು ಜನರಿಗೆ ಸ್ಥಳಾವಕಾಶ ಬೇಕು. ಆ ದಿನ ರಜೆಯ ಸಮಯವಾದ್ದರಿಂದ ಜನರು ಹೆಚ್ಚು, ಅದಕ್ಕೆ ನಮಗೆ ಊಟಕ್ಕೆ ಸಿಕ್ಕಿದ್ದು ಐದು ನಿಮಿಷ ಮಾತ್ರ. ಎಲೆಯ ಮೇಲೆ ಬಿಸಿಯಾದ ಅನ್ನ-ಸಾರು ಬಿದ್ದ ತಕ್ಷಣ ಎಲ್ಲರ ಕೈಗಳು ಅನ್ನ-ಸಾರನ್ನ ಕಲಸಲು ಮುಂದಾದವು. ಬಹಳ ಬಿಸಿ ಊಟ ಮುಟ್ಟಿ ಅಭ್ಯಾಸವಿಲ್ಲದ ನನಗೆ ಅಷ್ಟು ಬಿಸಿಯಾದ ಅನ್ನವನ್ನು ಮುಟ್ಟಲಾಗಲಿಲ್ಲ, ಅನ್ನವನ್ನು ಗಾಳಿಯಿಂದ ಆರಿಸಿ ಮುಟ್ಟುವುದಕ್ಕೆ ೨೦ ಸೆಕೆಂಡುಗಳಾದವು. ಅಲ್ಲಿಗೆ ಎಲ್ಲರ ಮುಂದೆ ನನಗೆ ಮೊದಲ ಹಿನ್ನೆಡೆಯಾಯಿತು. ನಿಧಾನವಾಗಿ ಸಾವರಿಸಿಕೊಂಡು ಅಂತು ಇಂತೂ ಎರಡು ನಿಮಿಷದಲ್ಲಿ ಇದ್ದ ಬಿಸಿಯಾದ ಅನ್ನವನ್ನು ಉಂಡು ಮುಗಿಸಿದೆ. ಅಷ್ಟರಲ್ಲಿ ಮತ್ತೊಮ್ಮೆ ‘ಅನ್ನ ಬೇಕೇ?’ ಎಂದು ಕೇಳಿಕೊಂಡು ಬರುತ್ತಿದ್ದರು. ಆ ದಿನ ಬಹಳ ನಡೆದಿದ್ದ ನನಗೆ ಅಪಾರವಾಗಿ ಹಸಿವಾಗುತ್ತಿತ್ತು. ಆ ಹಸಿವಿಗೆ, ಎಲ್ಲರೂ ಎರಡನೇ ಬಾರಿ ಅನ್ನ ಹಾಕಿಸಿಕೊಂಡದ್ದಕ್ಕೆ ನಂಗೂ ಆಸೆಯಾಗಿ ಮತ್ತೆ ಅನ್ನವನ್ನು ಹಾಕಿಸಿಕೊಂಡೆನು. ನಾನು ಆ ಅನ್ನವನ್ನ ಅರ್ಧ ತಿಂದು ಮುಗಿಸುವುದೊರಳಗಾಗಿ ನಮ್ಮ ಸಾಲಿನಲ್ಲಿ ಕುಳಿತ ಎಲ್ಲರ ಊಟ ಮುಗಿಯುತ್ತಾ ಬಂದಿತ್ತು. ನಾನು ತಿನ್ನಲೆಂದು ನನ್ನ ಗೆಳೆಯರು ತಮ್ಮ ಊಟ ಮುಗಿಸಿ ನನಗಾಗಿ ಕಾಯುತ್ತಾ ಜೋತೆಯಲ್ಲೇ ಕುಳಿತಿದ್ದರು. ಗಡಿಯಾರದ ಐದು ನಿಮಿಷ ಮುಗಿದು ಆರಕ್ಕೆ ಕಾಲಿಡುತ್ತಿತ್ತು. ಆದರೆ ನನ್ನ ಎಲೆಯಲ್ಲಿ ಇನ್ನೂ ೪ ತುತ್ತು ಅನ್ನವಿತ್ತು. ಆ ಹೊತ್ತಿಗೆ ನನ್ನ ಬೆನ್ನ ಹಿಂದಿನ ಸಾಲಿನಲ್ಲಿ ವೇಗವಾಗಿ ಗಾಳಿ ಬೀಸಿದಂತಾಯಿತು. ಏನೆಂದು ತಿರುಗಿ ನೋಡಿದರೆ ಹುಡುಗನೊಬ್ಬ ಎಲೆಗಳ ಎತ್ತುವ ಕೆಲಸವ ಆಟವನ್ನಾಗಿಸಿಕೊಂಡು, ನೆಲದ ಮೇಲೆ ಜಾರಿ ಎಲಗಳ ಎತ್ತುತ್ತಿದ್ದನು. ಅವನ ಕೆಲಸ ನೋಡಿ ನನಗೆ ಒಂದು ಕ್ಷಣ ಫೆರ್ರಾರಿ ಕಾರಿನ ವೇಗ ನೆನಪಾಯಿತು. ಹಿಂದೊಮ್ಮೆ ಗೆಳೆಯನೊಬ್ಬ ಎಲೆಯಲ್ಲಿ ಹಾಕಿಸಿಕೊಂಡಿದ್ದ ಊಟವನ್ನ ಮುಗಿಸುವವರೆಗೆ ಅವನನ್ನ ಏಳಲು ಬಿಟ್ಟಿರಲಿಲ್ಲ. ಹಾಗಾಗಿ ನಂಗೂ ಊಟ ಮುಗಿಸುವವರೆಗೆ ಇನ್ನೊಂದು ನಿಮಿಷ ಸಿಕ್ಕಬಹುದು ಅಂತ ನೋಡುತ್ತಿದ್ದೆ. ಆದರೆ ಅಷ್ಟರಲ್ಲಿ ಮತ್ತೊಬ್ಬ ಹುಡುಗ ನಾ ಕುಂತ ಸಾಲಿನ ಕೊನೆಯಲ್ಲಿ ನೆಲದ ಮೇಲೆ ಜಾರಿಕೊಂಡು ಎಲೆ ಎತ್ತಲು ಅಣಿಯಾಗಿ ನಿಂತಿದ್ದ. ಅವನ ನೋಡಿ ಗಬಗಬ ಎಂದು ಎರಡು ತುತ್ತು ಬಾಯಿಗೆ ಹಾಕಿಕೊಂಡು ಆ ಹುಡುಗನ ಕಡೆಗೆ ನೋಡಿದೆ, ಅಷ್ಟರಲ್ಲಿ ಆ ಹುಡುಗ ಜಾರಿಕೊಂಡು ಬರಲು ಶುರುಮಾಡಿದ.
ನಮ್ಮ ಹುಡುಗರೆಲ್ಲ “ಬೇಗ ತಿನ್ನೋ, ಅವ ಬಂದ” ಎಂದು ಕೂಗಲು ಶುರು ಮಾಡಿದರು. ನಾನು ಇನ್ನೇನು ಮೂರನೇ ತುತ್ತಿಗೆ ಕೈ ಹಾಕಬೇಕು ಅನ್ನುವಷ್ಟರಲ್ಲಿ ಆ ಹುಡುಗ ನನ್ನ ಪಕ್ಕದಲ್ಲಿ ಬಂದು ನಿಂತಿದ್ದ, ಅವನ ಕೈಯ್ಯಲ್ಲಿ ಉಳಿದೆಲ್ಲರ ಎಲೆಗಳು ಒಂದರ ಮೇಲೊಂದಂತೆ ಇದ್ದವು. ಕೇವಲ ಹತ್ತು ಸೆಕೆಂಡಿನಲ್ಲಿ ಸುಮಾರು ೫೦-೮೦ ಅಡಿ ದೂರವನ್ನು ಜಾರಿಕೊಂಡು ಬಂದಿದ್ದ ಅವನ ನೋಡಿ ಎಲೆಯಿಂದ ಕೈ ತೆಗೆದೆ. ಮುಂದುವರಿಸುತ್ತಾ ಆತ ಜಾರಿಕೊಂಡು ಎಲೆಯನ್ನು ಎತ್ತಿಕೊಂಡು ಮುಂದೆ ಹೋದ. ತಿನ್ನೋಕೆ ಆಗದಿದ್ದರೂ ಹೆಚ್ಚಿಗೆ ಅನ್ನ ಹಾಕಿಸಿಕೊಂಡು ದಂಡ ಮಾಡಿದಕ್ಕಾಗಿ ನನ್ನ ಗೆಳೆಯರಿಂದ ಬೈಸಿಕೊಂಡೆ. ಆದರೆ ಧರ್ಮಸ್ಥಳದಲ್ಲಿ ಪ್ರತಿ ಬಾರಿಯೂ ಊಟ ಮಾಡುವ ಆ ಸಮಯವು ಗಡಿಯಾರದ ಮುಳ್ಳು, ಬಿಸಿಯಾದ ಅನ್ನ-ಸಾರು, ಹಸಿವು, ಸಂತೃಪ್ತಿ ಇವೆಲ್ಲದರೊಂದಿಗೆ ಮಾಡುವ ಸಣ್ಣ ಕಾಳಗದಂತಿರುತ್ತದೆ.
ಆದರೂ ನಮ್ಮ ಪಾಲಿಗೆ ಧರ್ಮಸ್ಥಳವು ಒಂದು ರೀತಿಯ ತಲ್ಲೀನತೆಯ ಅನುಭವ ಕೊಡುವ ಊರಾಗಿದೆ. ಎಂದಾದರು ಬೇಸರವಾದಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಹಾಗು ಶಾಂತಿಯ ತಂದುಕೊಳ್ಳಲು ನಮಗೆ ಸಿಕ್ಕಿರುವ ಊರು
- ಆದರ್ಶ