ನೆನಪಿನಂಗಳದಿಂದ
by Archana Bavimane
ನಮ್ಮ ಚಿಣ್ಣರ ಕನಸು ತಂಡ ನಮಗೆ ಒಂದು ವಿಳಾಸ ಕೊಟ್ಟು ಈ ಭಾನುವಾರ ಕುಂದಲಹಳ್ಳಿಯ ಹತ್ರ ‘ಬಾರ್ನ್ ಟು ಹೆಲ್ಪ್’ ತಂಡ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಸೂಚಿಸಿತು. ನಾನು ಹಾಗು ಪೂಜಾ ನಮಗೆ ಹತ್ರ ಇದೆ ಅಂತ ಹೋಗೋ ಮನಸ್ಸು ಮಾಡಿ ವಿಳಾಸ ಹುಡುಕಿ ಹೊರಟೆವು. ಕುಂದಲಹಳ್ಳಿ ಗೇಟಿನಿಂದ ವಿಬ್ಗಾಯಾರ್ ಶಾಲೆಯ ಮಾರ್ಗವಾಗಿ ಹೋಗಿ ಆ ತಂಡದ ಸದಸ್ಯರಿಗೆ ಫೋನ್ ಮಾಡಿ ನಮಗೆ ಬೇಕಿರೋ ಜಾಗ ಹುಡುಕೋಕೆ ಒಂದು ಘಂಟೆಗಿಂತ ಜಾಸ್ತಿ ಸಮಯ ಆಯ್ತು.
ವಿಳಾಸ ಹುಡ್ಕೊದಕ್ಕೆ ಅಷ್ಟು ಕಷ್ಟ ಆಗಿರಬೇಕಾದ್ರೆ ಅಂಥಹ ಜಾಗದಲ್ಲಿ ವಾಸ ಮಾಡೋ ಸ್ಲಮ್ ಜನರ ಕಥೆ ಹೇಗಿರಬೇಡ. ಅಲ್ಲಿ ಇರೋ ಮಕ್ಕಳಿಗೆ ಪುಸ್ತಕ ಕೊಟ್ಟು ಪ್ರತಿವಾರ ಪಾಠ ಹೇಳಿಕೊಟ್ಟು ಅವರ ಜೀವನಕ್ಕೆ ಒಂದು ದಾರಿ ತೋರಿಸುವ ಆ ತಂಡದ ಉದ್ದೇಶ ತುಂಬಾ ಇಷ್ಟವಾಯ್ತು. ಈ ವಾರ ಅವ್ರಿಗೆ ನಮ್ಮ ಕಡೆಯಿಂದ ಟೂಥ್ಪೇಸ್ಟ್, ಟೂಥ್ಬ್ರಷ್, ಚಾಕ್ಲೆಟ್, ಕೇಕ್ ಕೊಡೋಕೆ ಹೋದ್ವಿ. ಅಲ್ಲಿರುವ ಮಕ್ಕಳ ಜೊತೆ ಆಟವಾಡಿ, ಪ್ರಾಣಿ ಪಕ್ಷಿ ಹೆಸರನ್ನು ಇಂಗ್ಲಿಷಿನಲ್ಲಿ ಹೇಳಿಸಿ, ಜಾಸ್ತಿ ಹೇಳಿದವರಿಗೆ ಜಾಸ್ತಿ ಚಾಕ್ಲೆಟ್ ಕೊಟ್ಟು ಖುಷಿಪಟ್ವಿ. ಅಲ್ಲಿರುವ ಮಕ್ಕಳಲ್ಲಿ ಸೋನಿಯ ಅನ್ನೋ ಹುಡುಗಿ ಬಗ್ಗೆ ಹೇಳಿಲ್ಲ ಅಂದರೆ ನನಗೆ ಸಮಾಧಾನ ಆಗೋದಿಲ್ಲ. ಅವರೆಲ್ಲ ಪಶ್ಚಿಮ ಬಂಗಾಳದಿಂದ ಬಂದವರು. ಅವಳ ಅಮ್ಮ ಅಪಾರ್ಟ್ಮೆಂಟ್, ಗಾರೆ ಕೆಲ್ಸ ಮಾಡ್ತಾರೆ, ಅವಳ ಅಪ್ಪ ಪೌರ ಕಾರ್ಮಿಕ (ಸ್ವಚ್ಛ ಮಾಡುವ ಕೆಲ್ಸ ಮಾಡ್ತಾರೆ). ನಲ್ಲೂರಹಳ್ಳಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದೋ ಹುಡುಗಿ ಕನ್ನಡ ಇಂಗ್ಲಿಷ್ ಎರಡರಲ್ಲೂ ಬರಿತಾಳೆ ಒದ್ತಾಳೆ. ಇಷ್ಟು ಸಾಕಲ್ವ ನಮ್ಮ ಸರ್ಕಾರಿ ಶಾಲೆ ಗುಣಮಟ್ಟ ಹದಗೆಟ್ಟಿಲ್ಲ ಅನ್ನೋದಕ್ಕೆ ಸಾಕ್ಷಿ. ಕನ್ನಡ ವರ್ಣಮಾಲೆ ಬರೀ ಅಂದಾಗ ಅ ಇಂದ ಳ ತನಕ ಬರೆದು ತೋರಿಸಿದಳು. ಕನ್ನಡ ಬಂದ್ರೂ ಕನ್ನಡದವರ ಜೊತೆ ಇಂಗ್ಲಿಷ್ ಅಲ್ಲಿ ಮಾತಾಡೋ ಜನಕ್ಕಿಂತ ಸೋನಿಯಾನೆ ಎಷ್ಟೋ ವಾಸಿ. ಅವಳಿಗೆ ಅವಳ ಅಮ್ಮ ಹೇಳಿದ ಹಾಗೆ ಕಂಪ್ಯೂಟರ್ ಕಲಿತು ಅವರಂತೆ ಇರೋ ಮಕ್ಕಳಿಗೆ ಕಲಿಸೋ ಆಸೆ. ಬೆಂಗಳೂರಲ್ಲಿ ಅಪಾರ್ಟ್ಮೆಂಟ್ ಕೆಲ್ಸ ಮಾಡೋಕೆ ಬಂದಿರೋ ಎಷ್ಟೋ ಕುಟುಂಬದ ಸಮಸ್ಯೆ ಇದು. ಇಷ್ಟೊಂದು ಜನ ಕೆಲ್ಸಕ್ಕೋಸ್ಕರ ಬಿಸಿಲನ್ನು ಲೆಕ್ಕಿಸದೆ ಶೀಟ್ ಮನೆಯಲ್ಲಿ ಕೊಳಚೆ ಜಾಗದಲ್ಲಿ ಇದ್ದು ಕೆಲ್ಸ ಮದೋದನ್ನ ನೋಡಿದ್ರೆ ಈ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡೋವ್ರಿಗೆ ಸ್ವಲ್ಪನೂ ಕನಿಕರ ಇಲ್ಲ. ಅಲ್ಲಿರುವ ಮಕ್ಕಳಿಗೆ ಶಾಲೆ ಅಕ್ಷರ ಅಭ್ಯಾಸ ಮಾಡಿಸಿದ್ರೆ ಒಂದು ರೀತಿ ತೃಪ್ತಿಯಾದ್ರೂ ಸಿಕ್ಕಿತೇನು?
ಈ ಜಾಗದಲ್ಲಿ ಶಾಲೆ ಆರಂಭಿಸುವ ವಿಚಾರ ಮಾಡಿರುವ ಬಾರ್ನ್ ಟು ಹೆಲ್ಪ್ ತಂಡದ ಕಾರ್ಯವೈಖರಿ ನೋಡಿ ತುಂಬಾ ಖುಷಿಯಾಯಿತು. ವಾರಾಂತ್ಯಗಳ ಹೇಗಪ್ಪಾ ಎಂಜಾಯ್ ಮಾಡಬೇಕು ಅನ್ನೋ ಐಟಿ ಜನಕ್ಕೆ ಈ ಥರ ಕೆಲ್ಸ ಮಾಡಿದ್ರೆ ಮನಸಿಗೂ ಸಮಾಧಾನ. ಬರೀ ಕುಟುಂಬ ಕಲಹಗಳ ಕಥೆಯನ್ನು ಧಾರಾವಾಹಿ ಮಾಡೋ, ಬೇಡದೆ ಇರೋ ವಿಷಯಗಳ ಬಗ್ಗೆ ಗಮನ ಕೊಡೋ ದೃಶ್ಯಮಾಧ್ಯಮಗಳು ಈ ಥರ ಜನರ ಮಕ್ಕಳ ಜೀವನ ಆಟ ಪಾಠದ ಬಗ್ಗೆ ಜನಸಾಮಾನ್ಯರ ಮನಸ್ಸಿಗೆ ತಾಕುವಂಥಹ ಮಾಹಿತಿ ಕೊಟ್ರೆ ದೇಶಕ್ಕೆ, ದೇಶದ ಜನಕ್ಕೆ ಉಪಕಾರ ಮಾಡಿದಂತೆ.
-ಅರ್ಚನ ಬಾವಿಮನೆ