ನಮ್ಮ ಹಳ್ಳಿಗಳ ಕಡೆ ಹೆಚ್ಚಾಗಿ ಸಾಹುಕಾರಿ ಬಸ್ಗಳು ಓಡಾಡುವುದರಿಂದ ಅವುಗಳ ನಡುವೆ ಸದಾ ಉತ್ತಮ ಸ್ಪರ್ಧೆ ಇರುತ್ತದೆ. ಡ್ರೈವರ್, ಕಂಡಕ್ಟರ್ ಎಲ್ಲರಲ್ಲೂ ಸದಾ ಪೈಪೋಟಿ ನಡೆದೇ ಇರುತ್ತದೆ. ಇದರಿಂದ ಜನರಿಗೂ ಒಂದು ಬಗೆಯ ಲಾಭವೇ ಆಗುತ್ತದೆ. ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರಬೇಕಾದ ಊರಿಗೆ ಬರುತ್ತವೆ. ಜೊತೆಗೆ ಬಸ್ಸುಗಳಲ್ಲಿ ಜನರನ್ನು ಓಲೈಸಲು ಒಳ್ಳೊಳ್ಳೆ ಹಾಡುಗಳು, ಚಿತ್ರಗಳನ್ನು ಸಹ ಹಾಕಿರುತ್ತಾರೆ. ಇವರ ಪೈಪೋಟಿಯದ್ದೇ ಒಂದು ಸಣ್ಣ ಚರ್ಚೆ ನಮ್ಮ ಹಳ್ಳಿ ಹುಡುಗರಲ್ಲಿ ಆಗಾಗ ನಡೆದಿರುತ್ತದೆ.

ಈ ನಡುವೆ ಅಪ್ಪಿ-ತಪ್ಪಿಯಾದರು ಒಂದೇ ಊರಿಗೆ ಹೋಗುವ ಇಂಥ ಎರಡು ಬಸ್ಸುಗಳು ಹಿಂದೆ-ಮುಂದೆ ಬಿದ್ದರೆ ಮುಗಿಯಿತು. ಆ ಹೊತ್ತಿಗೆ ಎರಡೂ ಬಸ್ಸಿನ ಡ್ರೈವರ್, ಕಂಡಕ್ಟರ್ ಹಾಗು ಜನರಿಗೆ ಹಬ್ಬವೇ ಆಗುತ್ತದೆ. ಯಾವುದೇ ಗುಂಡಿ, ಎಂಥಾದ್ದೇ ತಿರುವು, ಅಥವಾ ದಿಬ್ಬವೇ ಬರಲಿ, ಚಾಲಕ ಬಸ್ಸನ್ನು ಹಿಗ್ಗಾಮುಗ್ಗ ಚಚ್ಚಿಯಾದರೂ ಸರಿ ಇನೊಂದು ಬಸ್ಸನ್ನು ಹಿಂದ್ಹಾಕಿ ಮುಂದಿನ ಊರಿಗೆ ಹೋಗಿ ಅಲ್ಲಿನ ಜನರನ್ನು ಹತ್ತಿಸಿಕೊಂಡು ಮುನ್ನಡೆದರೆ ಅದಕ್ಕಿಂತ ಜಯ ಅವತ್ತಿನ ದಿನಕ್ಕೆ ಇನ್ನೊಂದಿರುವುದಿಲ್ಲ. ಆ ಘಳಿಗೆಗೆ ಚಾಲಕನ ವೇಗಕ್ಕೆ ಹೆಂಗಸರು ಹೆದರಿ, ಮುದುಕರು ಸೊರಗಿ, ಗಂಡಸರು ಬೈದರೂ ಕೇಳದ ಚಾಲಕರು, ಕಂಡಕ್ಟರ್’ರಿಗೆ ಗೆಲ್ಲುವುದಷ್ಟೇ ಮುಖ್ಯವಾಗಿರುತ್ತದೆ.

ಹೀಗೊಂದು ದಿನ ನಾನು ಶಿವಮೊಗ್ಗದಿಂದ ಹೊಳೆಹೊನ್ನೂರಿಗೆ ಹೋಗುತ್ತಿದ್ದೆ. ನಾನು ಹತ್ತಿದ ಬಸ್ಸು ನಿಧಾನವಾಗಿ ಶಿವಮೊಗ್ಗವನ್ನು ಬಿಟ್ಟು ಚಿತ್ರದುರ್ಗದ ದಾರಿ ಹಿಡಿಯಿತು. ಶಿವಮೊಗ್ಗ ಬಿಡುತ್ತಿದ್ದಂತೆ ನಾನು ಇದ್ದ ಬಸ್ಸಿನ ಡ್ರೈವರ್, ಕಂಡಕ್ಟರ್ ಎಲ್ಲರೂ ಒಮ್ಮೆಗೆ ಚುರುಕುಗೊಂಡರು. ಬಸ್ಸಿನಲ್ಲಿ ಟಿಕೆಟ್ ಕೊಡುವ ಒಬ್ಬನ ಹೊರತಾಗಿ ಊರುಗಳಲ್ಲಿ ಗಾಡಿಯನ್ನು ನಿಲ್ಲಿಸಲು, ಜನರನ್ನು ಹತ್ತಿಸಿಕೊಳ್ಳಲು, ಬಸ್ಸು ಹೋಗುವ ಊರುಗಳ ಹೆಸರನ್ನು ಕೂಗಲು ಸಾಮಾನ್ಯ ಒಬ್ಬನನ್ನು ನೇಮಿಸಿಕೊಂಡಿರುತ್ತಾರೆ. ನಾನು ಇದ್ದ ಬಸ್ಸಿನಲ್ಲಿ ಆ ಕೆಲಸಕ್ಕೆ ಒಬ್ಬ ಹುಡುಗನಿದ್ದನು. ಅವನ ವಯಸ್ಸು ಸುಮಾರು ೧೫ ಇದ್ದಿರಬಹುದು, ಸರಿಯಾಗಿ ತಿಳಿಯಲಿಲ್ಲ. ಆದರೆ, ಅವನ ಹುಮ್ಮಸ್ಸು ಎಂಥವರಿಗೂ ಉತ್ಸಾಹ ನೀಡುವಂಥಾದ್ದು. ಮುಂದಿನ ಬಾಗಿಲಿನಲ್ಲಿ ನಿಂತು ಒಂದು ಕೈಯ್ಯಲ್ಲಿ ಬಸ್ಸಿನ ಬಾಗಿಲ ಹಿಡಿದುಕೊಂಡು ಅರ್ಧ ಮೈಯ್ಯ ಹೊರಗ್ಹಾಕಿ ನೇತಾಡುತ್ತಾ ‘ಹೊಯ್’ ಎಂದು ಆಗಾಗ ಕೇಕೆ ಹಾಕುತ್ತಿದ್ದನು. ಇವನ ಕೇಕೆಗೆ ತಕ್ಕಂತೆ ಗಾಡಿಯ ಚಾಲಕ ಗಾಡಿಯನ್ನು ಇನ್ನು ಜೋರಾಗಿ ಓಡಿಸುತ್ತಿದ್ದ.

ತುಂಬಾ ಅಗಲವಲ್ಲದ ರಸ್ತೆಯಲ್ಲಿ ಹಳ್ಳಿ ಜನರು, ದನ-ಕರುಗಳು, ಎತ್ತಿನ ಗಾಡಿಗಳು, ಟ್ರ್ಯಾಕ್ಟರ್ಗಳು ಓಡಾಡುವುದು ಸಾಮಾನ್ಯ. ಇಂಥ ಸಣ್ಣ-ಪುಟ್ಟ ಅಡಚಣೆಗಳನ್ನು ದಾಟಿ ಹೋಗುತ್ತಿದ್ದ ಹಾಗೆ ನಿಧಾನ ಮಾಡುವಾಗ ಈ ಹುಡುಗನು ಎದುರು ಬಂದ ಜನರಿಗೆ, ಗಾಡಿಗಳಿಗೆ, ದನ-ಕರುಗಳಿಗೆ ತನ್ನ ಕೇಕೆಯಿಂದ ನಮ್ಮ ಬಸ್ಸಿಗೆ ದಾರಿ ಮಾಡಿಕೊಡುತ್ತಿದ್ದ. ಇವುಗಳಿಂದ ನಿಧಾನವಾದ ಬಸ್ಸನ್ನು ಮತ್ತೆ ಜೋರಾಗಿ ಓಡಿಸುವುದು ಚಾಲಕನ ಕೆಲಸವಾದರೂ ಅದು ತನ್ನದೇ ಕೇಕೆಯಿಂದ ಜೋರಾಗುವುದು ಎಂಬಂತೆ ಮತ್ತೆ ‘ಹೋಯ್’ ಎಂದು ಕೇಕೆ ಹಾಕುತ್ತಿದ್ದ. ಇವನ ಕೇಕೆಯು ಕಿವಿಗೆ ಬೀಳುತ್ತಿದ್ದಂತೆ ಚಾಲಕನು ಸಹ ತನಗೆ ಹೊಸದಾಗಿ ಶಕ್ತಿ ಬಂದಂತೆ ಗಾಡಿಯನ್ನು ಮತ್ತೆ ಚಚ್ಚಲಾರಂಭಿಸುತ್ತಿದ್ದ. ಬಾಗಿಲಲ್ಲಿದ್ದ ಆ ಹುಡುಗನು ಅಭ್ಯಾಸದಿಂದವೋ ಅಥವಾ ಶಕ್ತಿಯಿಂದಲೋ, ತಿರುವುಗಳಿಂದಲೋ, ವೇಗವಾಗಿ ಚಲಿಸುವ ಗಾಡಿಯಲ್ಲಿ ಒಂದೇ ಕೈಯ್ಯಲ್ಲಿ ಗಾಡಿಯ ಬಾಗಿಲ ಹಿಡಿದು ಅರ್ಧ ದೇಹವನ್ನು ಹೊರಗ್ಹಾಕಿ ದಾರಿಯುದ್ದಕ್ಕೂ ಬೇಕಾದಾಗ ಕೂಗುತ್ತಾ ನಿಲ್ಲುತ್ತಿದ್ದನು.

ಪ್ರತಿ ಬಾರಿ ತನ್ನ ಕೇಕೆಯಿಂದ ಗಾಡಿಯು ಜೋರಾಗಿ ಹೋಗಲು ಆರಂಭಿಸಿದಾಗ ಅವನ ಮುಖದಲ್ಲಿ ಯುದ್ಧವನ್ನು ಗೆದ್ದ ಭಾವನೆ, ಏನನ್ನೋ ಸಾಧಿಸಿದ ಖುಷಿಯು ಕಾಣುತ್ತಿತ್ತು. ಗಾಡಿಯು ವೇಗವಾಗಿ ಹೋಗುವ ಒಂದು ಹಂತಕ್ಕೆ ಬಂದಾಗ ಆವ ಬಾಗಿಲಿಂದ ಮೇಲೆ ಬಂದು ಸುಮ್ಮನ್ನೇ ನಿಲ್ಲುತ್ತಿದ್ದ. ಮತ್ತೆ ಗಾಡಿಯ ವೇಗ ಕಡಿಮೆಯಾದಾಗ ಬಾಗಿಲ ಬಳಿ ಹೊಗುತ್ತಿದ. ಒಮ್ಮೆ ನನಗೆ ಅನುಮಾನ ಬಂದಿತು, ಇದೇನು ಚಾಲಕ ಓಡಿಸುವ ಮೋಟಾರ್ ಗಾಡಿಯೋ ಅಥವಾ ಈ ಹುಡುಗ ಓಡಿಸುತ್ತಿರುವ ಒಂದು ಬಗೆಯ ಹೊಸ ಎತ್ತಿನ ಗಾಡಿಯೋ ಎಂದು.

ಈ ಎಲ್ಲವನ್ನು ನೋಡುತ್ತಾ ಯೋಚನೆಯಲ್ಲಿ ಮುಳುಗಿದ್ದ ನನಗೆ ಹೊಳೆಹೊನ್ನೂರಿನ ಭದ್ರ ನದಿ ಸೇತುವೆ ದೂರದಲ್ಲಿ ಕಂಡಿತು. ಶರವೇಗದಲ್ಲಿ ಬಸ್ಸು ಸೇತುವೆ ದಾಟಿ ನನ್ನನ್ನು ಊರಲ್ಲಿಳಿಸಿ ಮಿಂಚಂತೆ ಹೊರಟು ಹೋಯಿತು. ಮತ್ತೆ ಕೊನೆಯಲ್ಲಿ ನನಗೆ ಕೇಳಿಸಿದ ಧ್ವನಿ ಆ ಹುಡುಗನ ‘ಹೋಯ್’ ಎಂಬ ಕೇಕೆ!

-ಆದರ್ಶ