ಕಾಲೇಜಿನಲ್ಲಿ ಇರುವಾಗ ಜೇಬಿನಲ್ಲಿ ಒಂದು ಮೊಬೈಲು, ಕಿವಿಯಲ್ಲೊಂದು ಇಯರ್ ಫೋನು ಇದ್ದರೆ ಅದೊಂದು ರೀತಿ ‘ಸ್ಟೈಲ್’ ಆಗಿತ್ತು. ತುಸು ಹೆಚ್ಚೇ ಹಾಡುಗಳ ಕೇಳುವ ಮನಸಿದ್ದರಿಂದ ಸದಾಕಾಲ ನನ್ನ ಕಿವಿಯಲ್ಲಿ ಇಯರ್ ಫೋನು ಇರುತ್ತಿತ್ತು. ಆಗೆಲ್ಲ ನನಗೆ ಮನೆಯಿಂದ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ಹಾಡುಗಳ ಕೇಳುವ ಅಭ್ಯಾಸವಿತ್ತು. ನನ್ನೊಡನೆ ನನ್ನ ಗೆಳೆಯ ಸಹ ಮನೆಯಿಂದ – ಕಾಲೇಜು, ಕಾಲೇಜಿನಿಂದ – ಮನೆಗೆ ಒಟ್ಟಿಗೆ ಓಡಾಡುವ ಪರಿಪಾಟವಿತ್ತು. ನನ್ನ ಗೆಳೆಯನ ಬಳಿಯೂ ಒಂದು ಮೊಬೈಲ್ ಇತ್ತು, ಆದರೆ ಅದರಲ್ಲಿ ಹಾಡುಗಳ ಕೇಳುವ ಸೌಕರ್ಯ ಇರಲಿಲ್ಲ. ಆದ್ದರಿಂದ ಸಂಜೆ ಹೊತ್ತು ಮನೆಗೆ ಹಿಂದಿರುಗುವಾಗ ನಾವಿಬ್ಬರೂ ನನ್ನ ಮೊಬೈಲ್ ಹಾಗು ಇಯರ್ ಫೋನಿನಲ್ಲೇ ಹಾಡುಗಳ ಕೇಳುತ್ತಿದ್ದೆವು. ಈ ಹಾಡುಗಳ ಕೇಳುವ ಸಮಯದಲ್ಲಿ ನನ್ನ ಮೊಬೈಲ್ ಹಾಗು ಇಯರ್ ಫೋನುಗಳ ಹಂಚಿಕೊಳ್ಳಲು ನಾನು ಹೆಚ್ಚಾಗಿಯೇ ಸ್ವಾರ್ಥಿಯಾಗಿದ್ದೆ.ನನ್ನ ಗೆಳೆಯ ನನಗೆ ಬಹಳ ಬೈದು, ಬೇಡಿ ಕೇಳಿದ ನಂತರವೇ ನಾನು ‘ಅರ್ಧ ದಾರಿ ನಿನಗೆ, ಅರ್ಧ ದಾರಿ ನನಗೆ’ ಎಂದು ಹೇಳಿ ಕೊಡಿತ್ತಿದ್ದೆ. ಅವನೂ ಇದಕ್ಕೆ ಒಪ್ಪುತ್ತಿದ್ದ. ಆದರೆ ನಾನು ಹೇಳಿದ, ನಿರ್ಧಾರ ಮಾಡಿದ ‘ಅರ್ಧ ದಾರಿಯನ್ನು’ ಬಸ್ ತಲುಪುವ ಮೊದಲೇ ಮೊಬೈಲ್ ಅನ್ನು ಹಿಂಪಡೆಯುತ್ತಿದ್ದೆ. ಬರುಬರುತ್ತಾ ನನ್ನ ಮನವೂ ಸ್ವಲ್ಪ ಉದಾರವಾಗಿ, ತಡವಾಗಿ ಮೊಬೈಲ್ ಅನ್ನು ಹಿಂಪಡೆಯುತ್ತಿದ್ದೆ. ಆದರೂ ನನ್ನ ಹಾಡಿನ ಚಟ ಕಡಿಮೆ ಆಗಿರಲಿಲ್ಲ. ಈಗ ಕಾಲೇಜು ಮುಗಿದು ಎರಡು ವರುಷಗಳಾಗಿವೆ.

ಬಹಳ ದಿನಗಳ ನಂತರ ಮತ್ತದೇ ಗೆಳೆಯ ಹಾಗು ನಾನು ಹಿಂದಿನಂತೆ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬಂದೆವು. ಆದರೆ ಈ ಬಾರಿ ನಾವು ಮೊಬೈಲ್ ಹಾಗು ಇಯರ್ ಫೋನಿಗಾಗಿ ಕಾದಾಡಲಿಲ್ಲ, ಅವನು ನನಗೆ ಬೈಯ್ಯಲಿಲ್ಲ. ಈಗ ಇಬ್ಬರೂ ಕೆಲಸದಲ್ಲಿದ್ದೆವು. ಕೈಯ್ಯಲ್ಲಿ ಹಣ ಸುಳಿದಾಡುತ್ತಿತ್ತು. ಸಂಜೆ ಮನೆಗೆ ಹಿಂದಿರುಗುವಾಗ ಅವನ ಕೈಯ್ಯಲ್ಲಿ ಅವನ ಮೊಬೈಲ್ ಹಾಗು ಕಿವಿಯಲ್ಲಿ ಅವನದ್ದೇ ಇಯರ್ ಫೋನ್ ಇತ್ತು, ನನ್ನ ಬಳಿ ನನ್ನವು ಇದ್ದವು. ಹಿಂದಿನಂತೆ ಮಾತಿಲ್ಲ, ಬೈಗುಳವಿಲ್ಲ, ಕಿತ್ತಾಟವಿಲ್ಲ, ಹಂಚಿಕೊಳ್ಳುವ ಅವಶ್ಯಕತೆಯಿರಲಿಲ್ಲ. ಈಗ ಅವನೂ ಬೆಳೆದಿದ್ದ, ‘ತಗೋ’ ಎಂದು ಕೊಟ್ಟರೂ ನನ್ನ ವಸ್ತುವಿಗೆ ಈಗ ಬೆಲೆ ಇರಲಿಲ್ಲ. ಆಗ ನನ್ನ ಮನಸ್ಸು ಯೋಚಿಸುತ್ತಿತ್ತು, ‘ಇಲ್ಲದಾಗ ಇದ್ದ ಖುಷಿ, ಇರುವಾಗ ಇಲ್ಲವೆಂದು‘.

ಸೂರ್ಯ ಮತ್ತೆ ಮೊದಲಿನಂತೆ ಮುಳುಗಿದ್ದ. ಆದರೆ ಸಮಯ ಮೊದಲಿನಂತೆ ಇರಲಿಲ್ಲ!

- ಆದರ್ಶ