ಮಧ್ಯಾಹ್ನ ಊಟ ಮಾಡಿ ತೀರ್ಥಹಳ್ಳಿಯಿಂದ ಹೊರಟಾಗ ಸುಮಾರು ಒಂದು ಘಂಟೆ ಆಗಿತ್ತು. ಜನರನ್ನು ದಾರಿ ಕೇಳಿ ಒಂದಷ್ಟು ದೂರ ನಡೆದು ದಾರಿಯಲ್ಲಿ ಬಂದ ಲಾರಿಯನ್ನು ಹತ್ತಿ ಮತ್ತಷ್ಟು ದೂರ ಬಂದು, ಇಳಿದು, ಮತ್ತೆ ನಡೆಯುತ್ತಾ ಹೋಗುವಾಗ ಸಿಕ್ಕ ಆಟೋ ಹತ್ತಿ ಆಗುಂಬೆ ತಲುಪಿದಾಗ ಮಧ್ಯಾಹ್ನ ಸುಮಾರು ಎರೆಡೂವರೆ ಆಗಿತ್ತು.

ಆಗುಂಬೆಯಲ್ಲಿ ನನ್ನ ಮೊದಲ ಅನುಭವ ಶಾಂತಿ ಹಾಗು ಮೌನ ಆಗೊಮ್ಮೆ ಈಗೊಮ್ಮೆ ಎಂಬಂತೆ ಆ ಊರಿನ ಜನರ ಒಡನಾಟ ಕಾಣುತ್ತಿತ್ತು. ನಾನು ಹಾಗು ಚೇತನ್ ಅಲ್ಲಿಂದ ಸೂರ್ಯಾಸ್ತಮಾನ ಜಾಗಕ್ಕೆ ಹೋಗುವ ದಾರಿಯನ್ನು ಕೇಳಿದೆವು. ಆ ಊರಿನ ಬಸ್ ಸ್ಟಾಂಡ್ ಇಂದ ಎರಡು-ಮೂರು ಕಿ.ಮೀ. ದೂರದಲ್ಲಿದೆ ಎಂದು ತಿಳಿದಮೇಲೆ ಸೂರ್ಯ ಮುಳುಗುವ ಸಮಯಕ್ಕಿನ್ನು ಅಮೋಘ ಮೂರು ಘಂಟೆಗಳು ಇದ್ದುದರಿಂದ ನಾವು ಅಲ್ಲೇ ಹತ್ತಿರದಲ್ಲಿ ಇನ್ನಾವುದಾದರೂ ಜಾಗ ನೋಡುವ ಯೋಚನೆಯಲ್ಲಿ ಜನರ ವಿಚಾರಿಸಿದಾಗ ಜೋಗಿ ಗುಂಡಿ ಜಲಪಾತವು ಐದು ಕಿ.ಮಿ. ದೂರದಲ್ಲಿದೆ ಎಂದು ಕೇಳಿದಾಗ ಮೊದಲೇ ಬಹಳ ನಡೆದು ದಣಿದಿದ್ದ ಕಾಲುಗಳು

ಅತ್ತ ಕಡೆ ಹೋಗುವುದೇ ಬೇಡ

ಎಂದು ಹೇಳಿದವು.

ಅಲ್ಲೇ ಬದಿಯಲ್ಲಿ ಬೆಟ್ಟಗಳ ನಡುವಿಂದ ಹರಿದು ಬರುತ್ತಿದ್ದ ನೀರಿನ ಶಬ್ಧ ಕೇಳಿ ಆ ಝರಿಯ ಬದಿಯಲ್ಲಿ ಕುಳಿತೆವು. ಅರ್ಧ ಘಂಟೆ ಅಲ್ಲೇ ಕಳೆದ ನಂತರ, ಬಸ್ ಸ್ಟಾಪಿನೆಡೆಗೆ ಹೊರಟಾಗ ಝರಿಯ ಬದಿಯಲ್ಲಿ ಯಾವುದೋ ದೊಡ್ಡ ಹಾವಿನ ಪೊರೆ ಕಂಡು ಇಬ್ಬರಿಗೂ ಒಂದು ಕ್ಷಣ ಮೈ ಝುಮ್ ಎಂದಿತು. ಆಗುಂಬೆಯ ಕಾಡು ಕಾಳಿಂಗ ಸರ್ಪಗಳ ತವರು ಎಂದು ಯಾವಾಗಲೋ ಕೇಳಿದ್ದು ನೆನಪಾಯಿತು.

ಅಲ್ಲಿಂದ ಬಸ್ ಸ್ಟಾಪಿಗೆ ಬಂದು ಕುಳಿತು ಸುಮ್ಮನೆ ಹೋಗಿ ಬರುವವರನ್ನು ನೋಡುತ್ತಿದ್ದೆವು. ಅಲ್ಲಿಗೆ ಹೆಚ್ಹಾಗಿ ಶಿವಮೊಗ್ಗದಿಂದ ಉಡುಪಿಗೆ ಹೋಗುವ ಗಾಡಿಗಳೇ ಬರುತ್ತಿದ್ದವು. ನಿಧಾನವಾಗಿ ಗಮನಿಸಿದಾಗ ಆ ಊರಿನ ಜನರು ಕಂಡಿದ್ದೇ ಬಹಳ ವಿರಳವಾಗಿತ್ತು.

ಈ ಊರಲ್ಲಿ ಯಾರೂ ಇಲ್ವಾ’ ಎಂಬ ಪ್ರಶ್ನೆ ಬರುವಂಥಾಯಿತು.

ಒಂದೆರೆಡು ಅಂಗಡಿ ಬಿಟ್ಟರೆ ಇನ್ನೇನೂ ಕಾಣಲಿಲ್ಲ.

ಸರಿ! ಹೊರಡುವ ಅಂತ ಬಸ್ ಸ್ಟಾಪಿನಿಂದ ಆಗುಂಬೆಯ ‘ಸೂರ್ಯಾಸ್ತಮಾನ’ಕ್ಕೆ ನಾವು ನಿಧಾನಕ್ಕೆ ನಡೆದುಕೊಂಡು ಹೊರಟೆವು. ದಾರಿಯ ಇಕ್ಕೆಲಗಳಲ್ಲಿ ಬಹಳ ವರ್ಷಗಳ ಹಿಂದೆ ಕಟ್ಟಿದ ಮನೆಗಳು ಕಂಡವು, ಆದರೆ ಅವುಗಳಲ್ಲಿ ಜನರಿರುವ ಸೂಚನೆ ಕಾಣುತ್ತಿರಲಿಲ್ಲ. ಅನೇಕ ಮನೆಗಳು ಬೀಳುವ ಅವಸ್ಥೆಯಲ್ಲಿ ಕಂಡವು. ಒಂದೆರೆಡು ಮನೆಗಳ ಮುಂದೆ ನಿಂತ ಗಾಡಿಗಳು, ಬಿಟ್ಟ ಚಪ್ಪಲಿಗಳು ಜನರ ಸುಳಿವನ್ನು ನೀಡಿ ನನ್ನ ಪ್ರಶ್ನೆಗೆ ಉತ್ತರ ಕೊಟ್ಟವು. ಆದರೂ ಅನೇಕ ಬಾರಿ ಚೇತನ್ ಗೆ ನಾನು ಕೇಳಿದ ಪ್ರಶ್ನೆ ಒಂದೇ ಆಗಿತ್ತು

ಏನೋ, ಈ ಊರಲ್ಲಿ ಜನರೇ ಕಾಣ್ತಿಲ್ಲ?

ಅಂತ.

ಮೊದಲೇ ಆಗುಂಬೆ ಬಹಳ ಸಣ್ಣ ಹಳ್ಳಿ, ಅಲ್ಲಿ ಇರುವ ಜನರ ಸಂಖ್ಯೆಯೇ ಕಡಿಮೆಯೋ ಅಥವಾ ಅಲ್ಲಿ ಬೀಳುತ್ತಿದ್ದ ಅತೀ ಹೆಚ್ಚು ಮಳೆಯ ಪ್ರಭಾವದಿಂದಾಗಿಯೋ, ನಗರಗಳ ಒಲವಿಗೋ, ಇನ್ಯಾವುದೋ ಜೀವನದ ಹುಡುಕಾಟಕ್ಕೋ ಜನರೆಲ್ಲ ಆಗುಂಬೆಯಿಂದ ಕೊಚ್ಚಿ ಹೋದರೇ? ಎಂಬಂತೆ ನನ್ನ ಮನಸ್ಸಿಗೆ ಭಾಸವಾಗುತ್ತಿತ್ತು. ಇದು ನನ್ನನ್ನು ಬಹಳವಾಗಿಯೇ ಕಾಡುತಿತ್ತು. ಹಾಗೆ ನಡೆದು ಸಾಗಿದಾಗ ಒಂದು ಮನೆ, ಹಳೆಯ ಮನೆ ಪಾಳು ಬಿದ್ದಿತ್ತು. ಸುತ್ತ-ಮುತ್ತ ಜನರಿಲ್ಲ, ಆ ಊರಿನ ಕೊನೆಯ ದಿನಗಳನ್ನ ಏನಾದರು ಬಿಂಬಿಸುತ್ತಿದೆಯ ಎಂಬಂತೆ ಗೋಚರವಾಗುತ್ತಿತ್ತು. ಬೇಸರದಲ್ಲಿ ಮುನ್ನಡೆದಾಗ ದಾರಿಯ ಎಡಬದಿಯಲ್ಲಿ ಶಾಲೆಯ ಆವರಣದಲ್ಲಿ ಮಕ್ಕಳು ವಾಲಿಬಾಲ್ ಆಡುತ್ತಿರುವುದ ಕಂಡು ಖುಷಿಯಾಯಿತು. ಸುಮಾರು ಇಪ್ಪತ್ತು ಹುಡುಗರ ಗುಂಪು ತಮ್ಮ ಗುರುಗಳೊಡನೆ ವಾಲಿಬಾಲ್ ಅಭ್ಯಾಸ ಮಾಡುತ್ತಿದ್ದರು. ಇದನ್ನು ನೋಡಿದ ಸಂತಸದ ಮರುಘಳಿಗೆಯೇ ಮತ್ತೊಂದು ಯೋಚನೆ ಬಂದಿತು, ಚೆನ್ನಾಗಿ ಓದಿ ಮುಂದೆ ಆ ಮಕ್ಕಳು ಸಹ ಆಧುನಿಕತೆಯ ಹಾದಿ ಹಿಡಿದು, ಹೆಚ್ಚು ದುಡಿಯುವ ಹಂಬಲದಿಂದ ತಮ್ಮ ನೆಚ್ಚಿನ ಆಗುಂಬೆಯನ್ನು ಬಿಟ್ಟು ಘಟ್ಟಗಳ ದಾಟಿ ಮಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರು ಎಂಬಂತೆ ಪಟ್ಟಣಗಳ ಸೇರುತ್ತಾರೆ, ಮತ್ತೆ ಆಗುಂಬೆ ಬರಿದಾಗುವುದಾ? ಎಂಬ ಪ್ರಶ್ನೆಯಲ್ಲಿಯೇ ನಾನು ಹೆಜ್ಜೆ ಹಾಕುತ್ತ ಸೂರ್ಯಾಸ್ತಮಾನದ ಕಡೆಗೆ ಸಾಗಿದೆನು.

ಆಗುಂಬೆಯ ದಾಟಿ ‘ಸೂರ್ಯಾಸ್ತಮಾನ’ ಕ್ಕೆ ಬಂದಾಗ ಸಂಜೆ ಮೂರುವರೆ ಘಂಟೆ ಆಗಿತ್ತು, ಸೂರ್ಯ ಮುಳುಗಲು ಇನ್ನೂ ಎರಡು ಘಂಟೆ ಬೇಕಾಗಿತ್ತು, ಆದರೆ ಆಗುಂಬೆಯ ಸೂರ್ಯ ಆಗಲೇ ಮುಳುಗುತ್ತಿದ್ದಾನೆ? ಎಂಬಂತೆ ನನ್ನ ಭಾವನೆ. ಎಷ್ಟು ನಿಜವೋ, ಎಷ್ಟು ಸುಳ್ಳೋ ತಿಳಿಯದು. ಅಂದು ಭಾನುವಾರದ ದಿನವಾಗಿತ್ತು, ಮಧ್ಯಾಹ್ನದ ಸಮಯ ಬೇರೆ, ಜನರೆಲ್ಲ ಉಂಡು ಮನೆಗಳಲ್ಲಿ ಹಾಯಾಗಿದ್ದಿರಬಹುದು ನಾ ಕಾಣೆ.

ಮಂದವಾದ ಬಿಸಿಲಲ್ಲಿ ನಾನು ಹಾಗು ಚೇತನ್ ಆಗುಂಬೆಯ ಘಟ್ಟಗಳನ್ನೇ ನೋಡುತ್ತಾ ಕುಳಿತಿದ್ದೆವು. ದೂರದಲ್ಲಿ ಕಂಡ ಯಾವುದೊ ಜಲಪಾತ ನೋಡಿ, ಮುಂದಿನ ಬಾರಿ ಅಲ್ಲಿಗೆ ಹೋಗುವ ಎಂದು ನಮ್ಮ ಮಾತುಗಳು. ಆಗುಂಬೆಯ ಬೆಟ್ಟದ ದಾರಿ ಮುಗಿದ ನಂತರ ಕೆಳಗೆ ಕಾಣುತ್ತಿದ್ದ ಸೋಮೇಶ್ವರ ಊರು, ಎಲ್ಲೋ ಕಾಡಿನ ನಡುವೆ ಯಾರೋ ಮಾಡಿದ ಹೊಲ, ಗದ್ದೆ, ತೋಟಗಳು, ಇವೆಲ್ಲವನ್ನೂ ನೋಡುತ್ತ ರಸ್ತೆಯ ಬದಿಯಲ್ಲಿ ಕುಳಿತಿದ್ದ ನಾವು ಬಂದು ಹೋಗುತ್ತಿದ್ದ ಜನರು ಹಾಗು ಅಲ್ಲೇ ಇದ್ದ ಮಂಗಗಳ ನೋಡುತ್ತ ಮಾತನಾಡುತ್ತಿದ್ದ ಕಿಡಿಗೇಡಿಗಳು. ‘ಸೂರ್ಯಾಸ್ತಮಾನ’ಕ್ಕೆ ಇನ್ನೂ ಒಂದುವರೆ ಘಂಟೆ ಇತ್ತು. ನಮಗೂ ಕಣ್ಣಲ್ಲಿ ನಿದ್ದೆ ಎಳೆಯುತ್ತಿತ್ತು. ಅಲ್ಲೇ ಬದಿಯಲ್ಲಿ ಇದ್ದ ಬೆಂಚುಗಳ ಮೇಲೆ ನಾನು, ಚೇತನ್ ಹೋಗಿ ಸುಮಾರು ಒಂದು ಘಂಟೆಯ ಕಾಲ ಮಲಗಿದೆವು. ಎದ್ದಾಗ ಸೂರ್ಯ ದಿನವನು ಮುಗಿಸಲು ಅಣಿಯಾಗುತ್ತಿದ್ದ. ಬೆಟ್ಟದ ಗಾಳಿ ನಿಧಾನವಾಗಿ ತಣ್ಣಗಾಗುತ್ತಿತ್ತು. ತುದಿಯಲ್ಲಿ ನಿಂತು ದೂರಕ್ಕೆ ದುರುಗುಟ್ಟಿ ನೋಡಿದಾಗ ಸಣ್ಣ ಬೆಳ್ಳಿ ಗೀರಿನಂತೆ ಅರಬ್ಬೀ ಸಮುದ್ರವೂ ಕಾಣುತಿತ್ತು.

ಆದರೆ ಸೂರ್ಯ ಮುಳುಗುವ ಘಳಿಗೆ ಬಂದಾಗ ಸೂರ್ಯ ಕಾಣಲಿಲ್ಲ. ಆಗಸವನ್ನು ಮೋಡಗಳು ಮುತ್ತಿಗೆ ಹಾಕಿದ್ದವು, ಅದರ ಫಲವಾಗಿ ಸೂರ್ಯಾಸ್ತಮಾನ ನೋಡುವ ನಮ್ಮ ಆಸೆಯ ಪತನವಾಗಿತ್ತು. ಮೊದಲ ಬಾರಿಗೆ ಆಗುಂಬೆಯನ್ನು ನೋಡಲು ಹೋದಾಗ ನಮ್ಮ ಮುಂದೆ ಸೂರ್ಯನು ಮುಳುಗಲಿಲ್ಲ, ಆಗುಂಬೆಯ ಊರಿನಲ್ಲಿ ಜನರೂ ಕಾಣಲಿಲ್ಲ. ಸೂರ್ಯನು ಮೋಡಗಳ ಮರೆಯಲ್ಲಿ ಮುಳುಗಿದ್ದ, ಆದರೆ ನನಗೆ ‘ಆಗುಂಬೆಯ ಜನರು ಯಾವುದೋ ಗುಂಗಿನಲ್ಲಿ ಮುಳುಗಿದ್ದರು’. ಕೊನೆಗೂ ನನಗೆ ನಿಜದ ಅರಿವಾಗಲಿಲ್ಲ.

ಈಗ ನಾನು ಇನ್ನೊಮ್ಮೆ ಸೂರ್ಯಾಸ್ತಮಾನಕ್ಕೆ ಹೋಗಬೇಕಿದೆ, ಇನ್ನೊಮ್ಮೆ ಆಗುಂಬೆಯ ನೋಡಬೇಕು ಎಂಬ ಆಸೆ ಇದೆ. ಇದು ಸೆಪ್ಟೆಂಬರ್ ನಲ್ಲಿ ಸಂಪತ್ ಸಿರಿಮನೆಯವರ ಆಗುಂಬೆಯ ರಸ್ತೆ ಕಂಡೆಯಾ ಪಾಡ್ಕ್ಯಾಸ್ಟ್ ಅನ್ನು ಕೇಳಿ ನಾನು ಆಗುಂಬೆ ನೋಡ್ಬೇಕು ಎಂಬ ಮನಸ್ಸಾಗಿ ಹೋಗಿ ಬಂದ ನನ್ನ ಅನುಭವ. ಅಲ್ಲಿಂದ ಮುಂದಕ್ಕೆ ಆಗುಂಬೆ ಘಾಟಿ ಇಳಿದು ನಾನು ಕುಂದಾಪುರಕ್ಕೆ ಹೋದೆ. ಆ ಆಗುಂಬೆ ಘಾಟಿಯ ಪಯಣದ ಅನುಭವ ಸಂಪತ್ ಅವರ ದನಿಯಲ್ಲೇ ಕೇಳಬೇಕು. ಒಂದು ಪ್ರೇರಣೆ ನೀಡಿದ್ದಕ್ಕೆ ನಲ್ಲಿಕಾಯಿ ಹಾಗು ಸಂಪತ್ ಅವರಿಗೆ ನನ್ನ ಅಭಿನಂದನೆಗಳು.

- ಆದರ್ಶ.