ನಾ ಸಣ್ಣೋನಾಗಿದ್ದಗಿಂದಲೂ 'ನಮ್ಮ ಕರ್ಮ', 'ನಮ್ಮ ಹಣೆಬರಹ' ಅನ್ನೋದ ಕೇಳ್ತಾ ಬಂದಿದ್ದೀನಿ. ಇತ್ತೀಚಿಗೆ ಕರ್ಮ, ಹಣೆಬರಹ ಅಂದ್ರೆ ಏನು ಅಂತ ಸ್ವಲ್ಪ ತಿಳುವಳಿಕೆಗೆ ಬಂದಾಗಿಂದ ಇವುಗಳ ಬಗ್ಗೆ ಯೋಚನೆ ಮಾಡ್ತಾ ಒಂದಷ್ಟು ಕಾಲನೂ ಕಳೆದಾಗಿದೆ. ಈ ಸಾಲುಗಳೆಲ್ಲ ಆ ಯೋಚನೆಗಳಿಂದ ಬಂದಿರೋದು.

ಹಣೆಬರಹ ಅನ್ನೋದು ನಾವು ಹುಟ್ಟೋ ಮೊದಲೇ ನಿರ್ಧಾರವಾಗಿರೋದು, ನಮ್ಮ ಹಣೆಬರಹ ಎಂಬೋದು ದೇವರು ನಮಗಾಗೆ ಬರೆದು ಕಳಿಸಿರೋದು. ಹಣೆಬರಹವನ್ನು ನಾವು ಮೊದಲೇ ಪೂರ್ತಿಯಾಗಿ ಓದಿ ತಿಳಿಯೋದಕ್ಕಾಗಲ್ಲ, ಕಾಲಕಾಲಕ್ಕೆ ಬಾಳಲ್ಲಿ ನಡೆವ ಪ್ರತಿ ಒಳ್ಳೇದು, ಕೆಟ್ಟದಾದ ಆಗುಹುಗಳೆಲ್ಲ ಹಣೆಬರಹದಿಂದಲೇ ನಡೆಯೋದು. "ನಾಳೆ ಬೆಳಗ್ಗೆ ನಾನು ಏಳುವ ಹೊತ್ತು, ತಿನ್ನುವ ಹೊತ್ತು, ಎಡವಿ ಬೀಳುವ ಹೊತ್ತು. ಹೊರಗೋಗುವಾಗ ಬೈಕಿನ ಗಾಲಿ ಪಂಚರ್ ಆಗುವುದು, ಯಾರನ್ನೋ ಭೇಟಿಯಾಗೋದು, ಹಣ ಗಳಿಸುವುದು, ಕಳೆದುಕೊಳ್ಳುವುದು" ಇಂತ ಬಾಳಿನ ಎಲ್ಲ ಸಣ್ಣ-ದೊಡ್ಡ ವಿಚಾರ, ಎಲ್ಲವೂ ಹಣೆಬರಹದಂತೆ ನಡೆಯೋದು. ಇದರ ಯಾವ ವಿಚಾರದಲ್ಲೂ ನನ್ನ ಸಣ್ಣ ಪ್ರಯತ್ನವೂ ಲೆಕ್ಕಕ್ಕಿಲ್ಲ, ನಾ ಏನು ಮಾಡಿದರೂ ಕೊನೆಗೆ ತಾನು ಆಗಬೇಕಾದ್ದೇ ಆಗೋದು, ಸಿಗಬೇಕಾದ ಫಲವೇ ಸಿಗೋದು. ನಾನು ಸಿರಿವಂತನಾಗಬೇಕು ಅಂತ ಹಣೆಬರಹದಲ್ಲಿದ್ದರೆ, ನಾ ಕೆಲಸ ಮಾಡದೇ ಇದ್ದರೂ, ಸುಮ್ಮನಿದ್ದರೂ ಹಣೆಬರಹವೇ ನನಗೆ ಮನಸ್ಸನ್ನು ಕೊಟ್ಟು, ನನಗೆ ಸಿಗಬೇಕಾದ್ದನ್ನು ಕೊಡಿಸೋಕೆ ಎಲ್ಲ ಕೆಲಸವನ್ನ ಮಾಡಿಸಿ, ಗಾಳಿ, ನೀರು, ನೆಲ, ಆಗಸ, ಬೆಳಕು, ಎಲ್ಲವನ್ನೂ, ಎಲ್ಲ ಜನರನ್ನು ನನ್ನ ಅನುಕೂಲಕ್ಕೆ ನಡೆಯುವಂತೆ ಮಾಡಿ, ನನಗೆ ಸಿಗಬೇಕಾದ್ದನ್ನು ಕೊಡಿಸುತ್ತದೆ. ಇಲ್ಲಿ ನನ್ನದು ಅನ್ನೋದು ಏನೂ ಇಲ್ಲ. ಕೆಲಸವಾಗಲಿ, ಮನಸ್ಸಾಗಲಿ, ಯೋಚನೆ, ಫಲ, ಎಲ್ಲವೂ ದೇವರ ನಿಶ್ಚಿತ. ಆದರೆ ಇದನ್ನ ನಂಬಿದ ಎಲ್ಲರಿಗೂ ತಮಗೆ ಆಗೋ ಎಲ್ಲದು ದೇವರಿಂದ ಅನ್ನೋ ಗಟ್ಟಿ ನಂಬಿಕೆ ಇದೆಯಾ?

ಕರ್ಮ ಎಂಬುದು ಹಂಗಲ್ಲ, "ಕರ್ಮದಲ್ಲಿ 'ಕೆಲಸ' ನನ್ನದು, ಅದಕ್ಕೆ ಮೂಲ ಯಾರೂ ಅಲ್ಲ. ನನ್ನ ಸ್ವಂತವಾದ, ಮನದಾಳದಿಂದ ಸ್ವಂತವಾಗಿ ಬಂದ ಯೋಚನೆಯಿಂದ, ನನ್ನ ಸ್ವಂತವಾದ ನಿರ್ಧಾರದಿಂದ ಎಲ್ಲ ರೀತಿಯ ಕೆಲಸಗಳನ್ನು ನಾನು ಮಾಡೋದು. ತಿಳಿದವನಾಗಬೇಕೆಂದರೆ, ನನ್ನದೇ ನಿರ್ಧಾರದಿಂದ, ಪ್ರಯತ್ನದಿಂದ ಆಗಬೇಕು. ಸಿರಿವಂತನಾಗಬೇಕು ಎಂದರೂ ಹಾಗೆಯೇ. ನಿರ್ಧಾರ ನನ್ನದು. ಆದರೆ ಅದರಿಂದ ಸಿಗುವ ಫಲ ನನ್ನದಲ್ಲ, ದೇವರು ಕೊಡುವಂತದ್ದು. ನನ್ನ ಕೆಲಸ ಏನೇ ಇರಬಹುದು, ಎಂತದ್ದೇ ಇರಬಹುದು, ಎಷ್ಟೇ ನಿಷ್ಠೆಯಿಂದ ಮಾಡಿರಬಹುದು, ಎಷ್ಟೇ ಆಸೆಯಿಂದ, ಮನಸ್ಸಿಂದ ನಾನು ಮಾಡಿದ್ರೂ ಅದರ ಫಲ ಅಷ್ಟೇ ತೂಕದ್ದಾಗಿರುತ್ತೆ ಅಂತ ಹೇಳೋಕಾಗಲ್ಲ, ಆ ನಿರ್ಧಾರ ದೈವದ್ದು".

ಆದರೆ ಪ್ರತಿಯೊಬ್ಬರಿಗೂ ತಮ್ಮ ಕೆಲಸಕ್ಕೆ ತಕ್ಕ ಫಲ ಸರಿಯಾದ ಹೊತ್ತಿಗೆ ಸಿಕ್ಕಿದೆ ಅನ್ನೋ ಅನಿಸಿಕೆ ಇದೆಯಾ?

ಕರ್ಮದ ಫಲ ಬರೀ ನಮ್ಮ ಇಂದಿನ ಕೆಲಸದ ಮೇಲೆ ನಿಂತಿರೊಲ್ಲ, ನಮ್ಮ ಹಿಂದಿನ ಕೆಲಸ, ನಮ್ಮ ಹಳೆಯ ಜನ್ಮದ ಕೆಲಸ, ನಮ್ಮ ಹೆತ್ತವರ ಕೆಲಸ, ಹೀಗೆ ಬಹಳ ಜನರ ಕರ್ಮಗಳ ತುಂಬು ಫಲವಾಗಿ ನಮ್ಮ ಎಲ್ಲ ಅನುಭವಗಳು ಆಗುತ್ತಾ ಹೋಗುತ್ತವೆ. ಹಂಗಿದ್ದಾಗ ನಾನು ನನ್ನ ಎಲ್ಲ ಕೆಲಸವನ್ನೂ ನಿಷ್ಠೆ, ನಿಯತ್ತು, ಮನಸಾರೆ ಮಾಡಿದಮೇಲೂ ನನಗೆ ಕಾಣದ, ತಿಳಿಯದ ಮನೆಯ ಹಿರಿಯರ ಕೆಲಸದ ಪರಿಣಾಮವು ನನ್ನ ವಿರುದ್ಧ ಕೆಲಸ ಮಾಡಬಲ್ಲದು ಎಂದರೆ ಕರ್ಮದ ಫಲವು ಬರೆ ನನ್ನ ಕೆಲಸದ ಮೇಲೆ ನಿಂತಿಲ್ಲ ಅಂತಾಗುತ್ತದೆ. ಕರ್ಮ is not equal and opposite reaction. ನನ್ನ ಇಂತ ಒಂದು ಕೆಲಸಕ್ಕೆ, ಇಂತ ಹೊತ್ತಿಗೆ, ಇಂತ ಫಲ ಸಿಗುತ್ತೆ ಅಂತಾನೂ ಹೇಳೋಕಾಗದ 'ಕರ್ಮ' ಎಂಬ ಚೌಕಟ್ಟಿನಲ್ಲಿ ಬಾಳ್ವೆ ನಡೆಸಬೇಕೆ? ನನ್ನ ಕೆಲಸದಿಂದ ಆಗಬೇಕಾದ ಲಾಭ ಪೂರ್ತಿಯಾಗಿ ನನ್ನ ಕಯ್ಯಲ್ಲಿಲ್ಲ ಎಂದಾಗ, ನಮ್ಮ ಹಿಡಿತಕ್ಕೆ ಎಂದಿಗೂ ಬಾರದ ಯೋಚನೆಗಳಿಗೆ ಹೊತ್ತು ಕೊಡಬೇಕೇ? ನಮ್ಮ ಕೆಲಸವನ್ನ ನಾವು ಪ್ರತಿಸಲ ತಪ್ಪಿಲ್ಲದೆ ಮಾಡ್ತೀವಿ ಅಂತ ಹೇಳೋಕಾಗಲ್ಲ, ಅದರ ಫಲ ಇದೇ ಅಂತ ಹೇಳೋ ಮಗ ಈ ನೆಲದ ಮೇಲೆ ಹುಟ್ಟೆ ಇಲ್ಲ. ಹಂಗಿದ್ದಾಗ 'ಕರ್ಮ' ಅನ್ನೋದರ ಬಗ್ಗೆ ನಿಗಾ ವಹಿಸಬೇಕೆ? ಅಥವಾ ಕರ್ಮವನ್ನು ಮತ್ತದರ ಫಲವನ್ನು ಪ್ರತಿ ಸರಿ ಒಂದಕ್ಕೊಂದು ಹೊಂದಿಸಿ, ಈ ಕೆಲಸಕ್ಕೆ - ಈ ಹೊತ್ತಿಗೆ - ಇದೇ ಫಲ ಸಿಗುತ್ತೆ ಅಂತ ಗಟ್ಟಿಯಾಗಿ ಹೇಳುವ ಒಂದು ವ್ಯವಸ್ಥೆ ಇದೆಯಾ? ಅಂತ ವ್ಯವಸ್ಥೆ ಇದ್ದರೆ, ನಾವು ಅದಕ್ಕನುಗುಣವಾಗಿ ನಮ್ಮ ಕೆಲಸಗಳ ಮಾಡಬಹುದು. ಇಲ್ಲದಿದ್ದರೆ 'ಕರ್ಮ' ಅನ್ನುವುದು ಕೇವಲ ಒಂದು ನಂಬಿಕೆಯಾಗಿ ಉಳಿಯುತ್ತೇ. ಆ ನಂಬಿಕೆ ನಿಜ ಅಂತ ತೋರಿಸುವ ವ್ಯವಸ್ಥೆ ಯಾವುದು?

ಮೇಲಿಂದ ಕರ್ಮದ ಫಲ ಕೇವಲ ಇವತ್ತಿನ ನನ್ನ ಕೆಲಸದ ಮೇಲೆ ನಿಲ್ಲಿಸದೆ, ಅದಕ್ಕೆ ಹಳೆ ಜನುಮಗಳಿಂದ ನಮ್ಮ ಹಿರಿಯರ ಪಾಪ, ಪುಣ್ಯಗಳ ಆಯಾಮವನ್ನೂ ಸೇರಿಸಿ ಕರ್ಮ ಎಂಬ ಚೌಕಟ್ಟನ್ನೂ ಇನ್ನೂ ಗೊಂದಲದಿಂದ ತುಂಬಿಸಲಾಗಿದೆ. ಮೇಲಿಂದ ಮತ್ತೆ ನಮ್ಮ ಈ ಜನುಮದಾಗಲಿ, ನಮ್ಮದೇ ಹಿಂದಿನ ಜನ್ಮದ್ದಾಗಲಿ, ಪಾಪ-ಪುಣ್ಯಗಳ ಅಳತೆಯನ್ನು ಮಾಡೋಕೆ ನಮಗೆ ಯಾವುದೇ Tools ಗಳಿಲ್ಲ. ಅದಕ್ಕೆ ಇನ್ನೊಬ್ಬರ ಮಾತನ್ನು ನಂಬಬೇಕಷ್ಟೆ. ಹಂಗೆ ಹೇಳುವವರು, ಬರಿ ಊಹೆಯಲ್ಲಿ ಏನೋ ಒಂದನ್ನ ಹೇಳಿದರೆ ಏನು ಮಾಡೋದು, ಅವರು ಹೇಳೋದು ನಿಜ ಅಂತ ತಿಳ್ಕೊಳ್ಳೋದು ಹೇಗೆ? ನಮ್ಮ ಹಿರಿಯರು, ಅವರ ಜನುಮ, ಅವರ ಹಿಂದಿನ ಜನುಮ, ಅವರ ಹಿಂದಿನ ತಲೆಮಾರಿನವರ ಜನುಮಗಳ ಪಾಪ-ಪುಣ್ಯಗಳ ಕರ್ಮಗಳು, ನಮ್ಮ ಈ ಜನುಮದ ಕರ್ಮದ ಫಲಗಳ ನಿರ್ಧರಿಸುವ ಅಂಶಗಳು ಎಂದರೆ ಕರ್ಮ-ಫಲವನ್ನು, ಫಲ ಸಿಗುವ ಹೊತ್ತನ್ನು ಎಂದಿಗೂ ಹೊಂದಿಸಿ ಹೇಳಲಾಗುವುದಿಲ್ಲ. ಹಿಂಗಾದಾಗ 'ಕರ್ಮ' ಎಂಬ ವಿಚಾರವನ್ನು ನಮ್ಮ ಮಟ್ಟಿಗೆ serious ಆಗಿ ತಗೊಳ್ಳೋದು ಒಳ್ಳೆದಾ?

ನಾನು ಹತ್ತು ವರುಷದ ಹಿಂದೆ ಮಾಡಿದ ಎಲ್ಲ ಕೆಲಸಗಳು ನೆನಪಿರೋದಿಲ್ಲ. ಹಂಗಿದ್ದಾಗ ಕಾಣದ, ತಿಳಿಯದ ಹಿಂದಿನ ಜನುಮದ ನೆನಪೆಲ್ಲಿರುತ್ತೆ? ಮೇಲಿಂದ ನಮ್ಮ ಹಿರಿಯರು ಮಾಡಿದ ಪಾಪದ ಕೆಲಸಗಳ ಲೆಕ್ಕ ಎಲ್ಲಿದೆ, ಅದನ್ನ ಹುಡುಕೋದು ಹೇಗೆ? ಹಿಂಗೆ ಒಂದು ವ್ಯವಸ್ತಿತ ದಾರಿ ಅನುಸರಿಸಿ ನನ್ನ ಕೆಲಸ-ಫಲಗಳ ಜೋಡಿಸೋಕೆ ಆಗೋದೇ ಇಲ್ಲ ಅನ್ನುವ ಸ್ಥಿತಿಯ ತಲುಪಿದಮೇಲೆ, ಅಂತ ವಿಚಾರದ ಮೇಲೆ ಬರಿಯ ನಂಬಿಕೆಯ ಮೇಲೆ ಇಡೀ ಜೀವನದ ಚೌಕಟ್ಟನ್ನು ಹಾಕಿಕೊಂಡು ಇರುವುದು ಎಷ್ಟರಮಟ್ಟಿಗೆ ಒಳ್ಳೇದು?

ಈ ಎಲ್ಲ ಕಾರಣಕ್ಕೆ ಕರ್ಮ ನಿಜಾನಾ? ಅದನ್ನ ತಲೆಲಿಟ್ಟುಕೊಂಡು ಬಾಳ್ವೆ ಮಾಡಬೇಕಾ?

- ಆದರ್ಶ