ನಾನು ಸಣ್ಣವನಾಗಿದ್ದಾಗ ಬೇಸಿಗೆ ರಜೆಗೆ ನನ್ನಜ್ಜನ ಊರಿಗೆ ಹೋಗಿ ಬರುತ್ತಿದ್ದೆ. ಹೀಗೊಂದು ರಜೆಯ ದಿನ ಊರಲ್ಲಿ, ಮನೆಯ ಹಿತ್ತಲಲ್ಲಿ ನನ್ನಜ್ಜಿಯ ಜೊತೆ ಕೂತಿದ್ದಾಗ "ಅಜ್ಜಿ, ನಿಂಗೆ ಓದೋದು, ಬರೆಯೋದ ಹೇಳಿಕೊಡ್ತೀನಿ ಬಾ" ಅಂತ ಅಂದೆ . ಅಜ್ಜಿ ಇದ್ದೋರು, "ಹೋಗ, ಅದೆಲ್ಲ ನಂಗ್ಯಾತಕ್ಕೆ ಬೇಕು " ಅಂತಂದ್ರು . ನಾನು ಇನ್ನೊಂದೆರಡು ಸರಿ ಕೇಳಿ ‘ಬ್ಯಾಡ’ ಅಂತಂದಾಗ ಸುಮ್ಮನಾಗಿದ್ದೆ .

ನಾನು ಪಿಯುಸಿ ಮುಗಿಸಿ ಎಂಜಿನೀಯರಿಂಗ್ ಸೇರುವಾಗ ಕೆಟಗರಿ ಮೀಸಲಾತಿ ಮೇಲೆ ಒಂದು ಸೀಟು ಸಿಕ್ಕಿತ್ತು . ಕಾಲೇಜಿನಲ್ಲಿ ನನ್ನಂಗೆ ಸೇರಿದವರು ಬಹಳ ಮಂದಿ ಇದ್ದರು. ಕಾಲೇಜಿನಲ್ಲಿ ಒಂದಷ್ಟು ವರುಷ ಕಳೆದಮೇಲೆ ಹುಡುಗರ ಜೊತೆ ಮಾತಾಡುವಾಗ, ಮೀಸಲಾತಿ ಜಾತಿಯ ಮೇಲೆ ಇರಬಾರದು, ಜಾತಿಯ ಬಿಟ್ಟು ಹಣದ ಆಧಾರದ ಮೇಲೆ ಕೊಡಬೇಕು ಅಂತೆಲ್ಲ ಮಾತುಕತೆ ನಡೀತಿತ್ತು. ಹೌದಲ್ವಾ, ಕೆಳ ಜಾತಿ ಆದ್ರೂ ದುಡ್ಡಿದ್ದವರಾದ್ರೆ ಅಂತವರಿಗೆ ಮೀಸಲಾತಿ ಯಾಕೆ ಕೊಡಬೇಕು ಅಂತ ಅನ್ನಿಸೋದು. ಆಗಾಗ ಇಂಥ ಮಾತುಕತೆ ನಡೆಯೋದು.

ಒಂದಷ್ಟು ವರುಷಗಳ ನಂತರ ಸುತ್ತ ಜಗತ್ತು ಕಂಡಾಗ ಯಾವ್ಯಾವ ಜನರು ದುಡ್ಡಿನ ವಿಚಾರದಲ್ಲಿ, ತಿಳುವಳಿಕೆಯಲ್ಲಿ, ಓದು ಬರಹದಲ್ಲಿ ಹೇಗಿದ್ದಾರೆ ಅಂತ ಕಾಣಲಾರಂಭಿಸಿತು. ಅವರ ಮನೆ ವಾತಾವರಣ ಹೇಗಿತ್ತು ಅಂತಾನೂ ತಿಳಿಯೋದು.

೧೯೦೦ ರಿಂದ ಈಚೆಗೆ ಭಾರತದಲ್ಲಿ ನಿಧಾನವಾಗಿ ಒಂದೊಂದೇ ಕಂಪನಿಗಳು ತೆರೆಯಲಾರಂಭಿಸಿದವು. ಹಂಗೆ ನೆಲೆ ನಿಂತ ಕಂಪನಿಗಳಲ್ಲಿ ಮೊದಮೊದಲು ಕೆಲಸಕ್ಕೆ ಸೇರಿದವರು ಯಾರು ಅಂತ ನೋಡಿದರೆ, ಎಲ್ಲ ಓದು, ಬರಹ, ಲೆಕ್ಕ ಕಲಿತವರೇ ಆಗಿದ್ದರು . ದೇಶಕ್ಕೆ ಬಿಡುಗಡೆ ಬಂದ ನಂತರ ಪೋಸ್ಟ್ ಆಫೀಸು, ಬ್ಯಾಂಕು, ದೂರಸಂಪರ್ಕ, ಶಾಲೆ, ಕಾಲೇಜು, ಗಣಿಗಳು, ಸರಕಾರೀ ಕಚೇರಿಗಳು ಅಂತೆಲ್ಲ ಯಾವ ತಾವು ನೋಡಿದರೂ ಅಲ್ಲೆಲ್ಲ ದೊಡ್ಡ ಹುದ್ದೆಯಲ್ಲಿದ್ದವರು ಓದು, ಬರಹ, ಲೆಕ್ಕ ಕಲಿತವರೇ ಆಗಿದ್ದರು. ಅಂತ ಕೆಲಸಗಳಿಗೆ ಕಲಿತವರೇ ಬೇಕಿತ್ತು, ಅಲ್ಲೇ ಕೆಳವರ್ಗದ ಕೆಲಸಗಳು ಓದು ಬರಹ ಕಲಿಯದವರಿಗೆ ಹೋಗಿದ್ವು. ಅದು ಸಹಜ.

ನನ್ನ ಪರಿಚಯದವರಲ್ಲಿ ಕೆಲವರ ಅಜ್ಜ - ಅಜ್ಜಿಯಂದಿರೇ ಬ್ಯಾಂಕು, ಪೋಸ್ಟ್ ಆಫಿಸುಗಳಲ್ಲಿ ಕೆಲಸಕ್ಕೆ ಸೇರಿದ್ದವರಿದ್ದರು. ಒಬ್ಬನ ಅಜ್ಜ ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೆಲೆ ನಿಲ್ಲಿಸಿದ ಗುಂಪಿನಲ್ಲಿದ್ದರು . ಅಂತವರೆಲ್ಲ ಈ ದೇಶಕ್ಕೆ ಬಿಡುಗಡೆ ಸಿಗುವ ಹೊತ್ತಿಗೆ ಓದು ಬರಹ ಕಲಿತಿದ್ದರು . ಅಂತವರ ಹಿಂದಿನ ತಲೆಮಾರುಗಳೂ ಓದು ಕಲಿತು ಬ್ರಿಟಿಷರ, ಮುಘಲರ, ಮೈಸೂರು, ಮರಾಠ , ನಿಜಾಮ ಇನ್ನಿತರ ರಾಜರ ಆಡಳಿತದಲ್ಲಿ, ಹಳ್ಳಿ ಆಡಳಿತದಲ್ಲಿ, ಲೆಕ್ಕ ಪತ್ರ ಬರೆಯುವ ಕೆಲಸಗಳಲ್ಲಿದ್ದಿರಬಹುದು. ಅಂತವರೆಲ್ಲರೂ ತಲೆಮಾರಿನಿಂದ ಕಲಿತ ಕಮ್ಮಾರಿಕೆ, ಕುಂಬಾರ, ನೇಕಾರ, ಬಡಗಿ, ಒಕ್ಕಲುತನ, ಹೊಲದ ಆಳು, ಇನ್ನಿತರ ಮೈ ಬಗ್ಗಿಸಿ ಡುಗಿಯುವ ಕೆಲಸಕ್ಕಿಂತ ಹೆಚ್ಚಿನ ವರಮಾನ, ಹೆಸರು ಗಳಿಸುತ್ತಿದ್ದರು . ಇವತ್ತಿಗೂ ಬುದ್ಧಿ ಇಂದ ಮಾಡುವ ಕೆಲಸಗಳಿಗೆ ಬೆಲೆ ಹೆಚ್ಚು . ಅಂತ ಮನೆಗಳಲ್ಲಿ ದೇಶದ ಬಿಡುಗಡೆಯಿಂದ ಈಚೆಗೆ ಲೆಕ್ಕ ಹಾಕಿದ್ರೆ ಮೂರು ತಲೆಮಾರಿನ ಹಿಂದಿನವರಿಗೂ ಓದೋಕೆ ಬರೆಯೋಕೆ ಕಲಿತಿದ್ದಾರು. ಅದಕ್ಕೆ ತಕ್ಕದ್ದೇ ಕೆಲಸ ಮಾಡಿಕೊಂಡು ಬಂದಿದ್ದಾರೆ .

ಅದೇ ಕಾಲದಲ್ಲಿ ಓದು, ಬರಹ, ದುಡ್ಡಿಲ್ಲದ ಕಾರಣಕ್ಕೆ ಕಲಿಯಲಾಗಲಿಲ್ಲ ಅನ್ನೋದಕ್ಕಿಂತ ಸಮಾಜದ ವ್ಯವಸ್ಥೆಯಲ್ಲಿ ಎಲ್ಲರಿಗೂ ಓದು ಕಲಿಯುವ ಅವಕಾಶ ಇರಲಿಲ್ಲ ಅನ್ನೋದು ನಿಜ. ಇವರು ಓದು ಕಲಿತಿದ್ದರೆ , ಮೈ ಬಗ್ಗಿಸಿ ದುಡಿದಷ್ಟು ತಲೆಗೆ ಕೆಲಸ ಕೊಟ್ಟು, ಕೆಲಸ ಮಾಡಿ ಮೂರು ತಲೆಮಾರು ಕಳೆದಿದ್ದರೆ ಇವತ್ತಿನ ಸಮಾಜದ ಚಿತ್ರಣ ಬೇರೆ ಆಗಿರುತ್ತಿತ್ತು. ಅಂತ ಮನೆಗಳಲ್ಲೂ ತಲೆಮಾರಿಂದ ದುಡ್ಡು ಕೂಡಿಕೆಯಾಗಿ ಚೆನ್ನಾಗಿರುತ್ತಿದ್ದರು .

ನನ್ನ ಇನ್ನೊಂದಷ್ಟು ಗೆಳೆಯರ ಅಜ್ಜ - ಅಜ್ಜಿಯಂದಿರು ಹೊಲದಲ್ಲಿ ಆಳಾಗಿ ಕೆಲಸ ಮಾಡುತ್ತಿದ್ದರು, ಕೆಲವರು ಕಮ್ಮಾರರು, ಕುಂಬಾರರು, ಕುರುಬರು, ಬಡಿಗೇರರು, ಗಾಣಿಗರು, ಈಡಿಗರು ಹಂಗೆ ಇತರೆ ಕೆಲಸದಲ್ಲಿದ್ದವರು . ಅವರಲ್ಲಿ ಹೆಚ್ಚಿನವರು ತಮ್ಮದೇ ಹೊಲ, ತೋಟಗಳ ಹೊಂದಿದವರಲ್ಲ, ಅವರ ಮಕ್ಕಳು ಮೊದಲನೇ ಬಾರಿ ಶಾಲೆ, ITI / ಕಾಲೇಜು ಸೇರಿ ಓದಿದವರಾದವರು . ಅವರ ಮೊಮ್ಮಕ್ಕಳು ನನ್ನ ಗೆಳೆಯರು ಕಾಲೇಜು ಮುಗಿಸಿದವರು . ಅಂದ್ರೆ ಕೇವಲ ಎರಡು ತಲೆಮಾರು ಸರಕಾರದ ವಿವಿಧ ವ್ಯವಸ್ಥೆಯಡಿ ಓದು ಬರಹ ಕಲಿತು, ಅದಕ್ಕೆ ತಕ್ಕಂಗೆ ಏನೋ ಒಂದು ಬೌದ್ಧಿಕ ಕೆಲಸ ಹಿಡಿದವರಾಗಿದ್ದರು.

ಡಿಸೇಂಬರ್ ೨೦೨೩ ರಲ್ಲಿ ಸರಕಾರದ ಕಡೆಯಿಂದ ಒಂದು ರಿಪೋರ್ಟ್ ಬಂತು. ಐಐಟಿ , ಐಐಎಂ , NIT ಗಳಿಂದ sc /st ಗೆ ಸೇರಿದ ಸುಮಾರು ೮೦೦೦ ಹುಡುಗರು ಕಾಲೇಜಿಂದ ಅರ್ಧಕ್ಕೆ ಹೊರಬಂದಿದ್ದರು . ೨೦೧೯ - ೨೦೨೩ ಐದು ವರುಷಗಳ ಲೆಕ್ಕ ಇದಾಗಿತ್ತು. ಕೆಳವರ್ಗದ ಅರ್ಧದಷ್ಟು ಹುಡುಗರು ತಮ್ಮ ಕಾಲೇಜಿನ ಓದನ್ನು ಪೂರ್ತಿ ಮಾಡಿರಲಿಲ್ಲ. ಇದೇ ಕಾರಣಕ್ಕೆ ಕಾಲೇಜಿಂದ ಹೊರಬಂದಿದ್ದರು ಅಂತ ಹೇಳಿರಲಿಲ್ಲ. ಬೇರೆ ಕೋರ್ಸ್ ಸೇರಿರಬಹುದು ಎಂಬ ಒಂದು ಕಾರಣ ಇತ್ತು ಅಷ್ಟೇ . ಈ ಸುದ್ದಿ ಬಂದಮೇಲೆ ಇದರ ಬಗ್ಗೆ ಒಂದಷ್ಟು ಮಾತುಕತೆ ನಡೆದಿತ್ತು. ಆನ್ಲೈನ್ ನಲ್ಲಿ ಬಹಳ ಜನ "ಬರಿ ಮೀಸಲಾತಿ ಮೇಲೆ ಸೀಟು ತಗೊಂಡ ಮಾತ್ರಕ್ಕೆ ಐಐಟಿ ಗಳಲ್ಲಿ ಪಾಸ್ ಆಗೋಕಾಗಲ್ಲ, ಜೊತೆಗೆ ಕಷ್ಟ ಪಟ್ಟು ಓದಬೇಕು, ಯೋಗ್ಯತೆ ಇರಬೇಕು" ಅಂತೆಲ್ಲ ಹೇಳುತ್ತಿದ್ದರು . ಅದನ್ನ ಕೇಳಿ "ಯಾಕೆ ಹಿಂಗಾಗಿರಬಹುದು" ಎಂಬ ಯೋಚನೆ ಬಂದಿತು.

ಸುಮಾರು ದಿನಗಳ ಯೋಚನೆಯ ನಂತರ, ಸುತ್ತಲಿನ ಜನರ, ಬೇರೆ ಬೇರೆ ಮನೆಗಳ, ಆ ಮನೆಗಳಲ್ಲಿನ ವಾತಾವರಣ, ಆ ವಾತಾವರಣದಲ್ಲಿ ಬೆಳೆದ ಮಕ್ಕಳು, ಆ ಮಕ್ಕಳ ಕಲಿಕೆ, ತಿಳುವಳಿಕೆ, ನಡೆವಳಿಕೆ, ಆ ಮಕ್ಕಳಿಗೆ ಮನೆಯಲ್ಲಿ ಸಿಗುತ್ತಿದ್ದ ಸಪೋರ್ಟ್, encouragement ಮತ್ತು ಹಳೆ ಕಾಲದಿಂದ ಕೆಳವರ್ಗದ ಜನರ ಮನೆ, ಅಲ್ಲಿನ ವಾತಾವರಣ, ಆ ಮನೆಯಲಿ ಮಕ್ಕಳ ಓದಿಗೆ ಸಿಗುತ್ತಿದ್ದ, ಸಪೋರ್ಟ್, ಪುಶ್, encouragement ಇವುಗಳಲ್ಲಿ ದೊಡ್ಡ ವ್ಯತ್ಯಾಸ ಕಾಣುತ್ತಿತ್ತು . ತಲೆಮಾರುಗಳಿಂದ ಓದು ಕಲಿತವರ ಮನೆಯಲ್ಲಿ ಮಕ್ಕಳಿಗಿದ್ದ environment ಬೇರೆ , ಒಂದೆರಡು ತಲೆಮಾರುಗಳಿಂದ ಓದು ಕಲಿತ ಮನೆಗಳಲ್ಲಿದ್ದ environment ಬೇರೆಯದಾಗಿತ್ತು . ಇತ್ತೀಚಿಗೆ ಓದು ಕಲಿತ ಮನೆಗಳಲ್ಲಿ ತಂದೆ-ತಾಯಂದಿರು ಮಕ್ಕಳಿಗೆ ಕೂತು ಓದಿಸಲಾಗುತ್ತಿರಲಿಲ್ಲ , ಹೆಚ್ಚಿನ ತಿಳುವಳಿಕೆ, ಓದಿನ ಪ್ರಾಮುಖ್ಯತೆ ತಿಳಿಸುವುದು ಹೆಚ್ಚಾಗಿರುವುದಿಲ್ಲ . "ಸುಮ್ಮನೆ ಓದಿಕೋ " ಎಂದು ಹೇಳುವುದು ಬೇರೆ, ಓದುವ ವಿಷಯವನ್ನು ಬಿಡಿಸಿ ಮೆಲ್ಲಗೆ ತಿಳಿ ಹೇಳುವುದು ಬೇರೆ . ತಂದೆ ತಾಯಂದಿರು, ನೆಂಟರು ಚೆನ್ನಾಗಿ ಓದಿಕೊಂಡಿರುವ ಮನೆಗಳಲ್ಲಿ, ಮಕ್ಕಳಿಗೆ ಓದಿನ ಬಗ್ಗೆ ತಾತ್ಸಾರ ಕಡಿಮೆ . ಅದೇ ದೊಡ್ಡವರು ಕಡಿಮೆ ಓದಿದ ಮನೆಗಳಲ್ಲಿ ಮಕ್ಕಳಿಗೆ ಓದಿನ ಬಗ್ಗೆ ತುಸು ಹೆಚ್ಚಿನ ತಾತ್ಸಾರ. ತಂದೆ ತಾಯಂದಿರು ಒಂದಷ್ಟು ಓದು ಎಂದು ಹೇಳಿ ಬಿಡುತ್ತಾರೆ. ಅಂತ ಮಕ್ಕಳು ಬಹಳ ಪೋಟಿ ಇರೋ ಕಡೆ ಹೋಗಿ ಓದಿಗೆ ಒಳ್ಳೆಯ ಒತ್ತು , ವಾತಾವರಣ ಇರೋ ಮನೆಯಿಂದ ಬಂದವರೊಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲೊದಾದರೂ ಹೇಗೆ, ಅಥವಾ ಗೆಲ್ಲೊದಾದರೂ ಹೇಗೆ.

ಇಂತ ಕಾರಣಗಳಿಗೆ ಬರಿ ದುಡ್ಡಲ್ಲ, ಮನೆಗಳಲ್ಲಿ ಒಂದಷ್ಟು ತಲೆಮಾರುಗಳಿಗೆ ಓದು, ತಿಳುವಳಿಕೆ ಬರುವತನಕವಾದರೂ ನಮಗೆ ಈ ನಾಡಿನಲ್ಲಿ [ದೇಶದಲ್ಲಿ ] ಮೀಸಲಾತಿ ಇರಬೇಕು.

"ಎಂಥದ್ದೇ ಇರುಳನ್ನು ದಾಟಬಹುದು ಹಚ್ಚಿಟ್ಟ ಕಂದೀಲು ಕೈಲಿದ್ದರೆ,
ಹಣೆಬರಹ ಕಯ್ಯಾರೆ ಬರೆಯಬಹುದು ಎದೆಯೊಳಗೆ ಅಕ್ಷರವ ಬಿತ್ತಿದ್ದರೆ" - ಜಯಂತ ಕಾಯ್ಕಿಣಿ

- ಆದರ್ಶ