ಧ್ಯಾನ-ವ್ಯಾಯಾಮ
by Adarsha
ಬೇರೆ ಯಾವ ಪ್ರಾಣಿನೂ ವ್ಯಾಯಾಮ, ಯೋಗ, ಧ್ಯಾನ ಅಂತ ಏನೂ ಮಾಡಲ್ಲ. ಮಂದಿಯಾದ (ಮನುಷ್ಯನಾದ) ನಾವುಗಳು ಮಾತ್ರ ಇವುಗಳಲ್ಲಿ ತೊಡಗಿಸಿಕೊಂಡಿರೋದು.
ಬೇರೆಲ್ಲ ಪ್ರಾಣಿ, ಹಕ್ಕಿಗಳು ಇವುಗಳಿಲ್ಲದೆ ಆರೋಗ್ಯ, ನೆಮ್ಮದಿ ಇಂದಿದ್ದಾವೆ ಅಂತ ಅನ್ಕೋಬೋದು. ನಮ್ಮ ಜೀವನದ ಬಗೆ ಹೆಂಗೆಂಗೋ ಇರೋದಕ್ಕೆ, ಅದಕ್ಕೆ ತಕ್ಕಂಗೆ ಬದುಕನ್ನ ಸರಿ ಮಾಡಿಕೊಂಡು ಗಟ್ಟಿಯಾಗಿರೋಕೆ ಈ ಹೆಚ್ಚುವರಿ ಕೆಲಸಗಳ ಮಾಡಬೇಕಾ?
ಈಗ ಹೊಸ ಕಾಲ, ಬಹಳ ಹೊತ್ತು ಕೂತು ಮಾಡೋ ಕೆಲಸ, ಬಾಳಲ್ಲಿ ಯೋಚನೆಗಳೆ ಹೆಚ್ಚು, 'ಟೆನ್ಷನ್ ' ಹೆಚ್ಚು, ಹಾಂಗಾಗಿ ಯೋಗ, ಧ್ಯಾನ, ವ್ಯಾಯಾಮ ಎಲ್ಲ ಬೇಕು ಅಂತ ಅನ್ಕೋಳ್ಳೋಣ. ಆದ್ರೆ ಇದು ಮೈಯ್ಯನ್ನ ಬಗ್ಗಿಸಿ ದುಡಿಮೆ ಮಾಡೋರಿಗೂ ಬೇಕಾಗುತ್ತಾ? ಮೈ ಬಗ್ಸಿ ದುಡಿಯೋರಿಗೆ ವ್ಯಾಯಾಮ ಬ್ಯಾಡ ಅಂತಂದ್ರೂ, ಅವ್ರಿಗೂ ಧ್ಯಾನದ ಅವಶ್ಯಕತೆ ಇದೆಯಾ?
ಆದ್ರೆ ಯೋಗ, ವ್ಯಾಯಾಮ ಹಾಗು ಇತರೆ ಕಲೆಗಳೆಲ್ಲವೂ ಈಗಿನವಲ್ಲ, ಸಾವಿರಾರು ವರುಶಗಳ ಹಿಂದಿನವು. ಅಂದ್ರೆ ಈಗಿನಂಗೆ, ಆಗ್ಲೂ ಮಂದಿ ಬಾಳು ಎಡವಟ್ಟುಗಳಿಂದ (ಕಾಂಪ್ಲಿಕೇಟೆಡ್) ತುಂಬಿತ್ತಾ? ಆಗ್ಲೂ ಮನುಷ್ಯ ಬಹಳ ಕೂತೆ ಕೆಲಸ ಮಾಡ್ತಿದ್ನಾ? ಬಾಳು ಯಾಂತ್ರಿಕವಾಗಿತ್ತಾ? "ಈಗಿನ ಹೋಲಿಕೇಲಿ ಆಗ ಬಾಳು ಯಾಂತ್ರಿಕವಾಗಿರಲಿಲ್ಲ, ಜನ ಹೊಲ, ಮನೆ, ಊರುಗಳಲ್ಲಿ, ಎಲ್ಲ ಕಡೆ ಮೈ ಬಗ್ಸಿ ದೈನಂದಿನ ಚಟುವಟಿಕೆಗಳ ನಡೆಸುತ್ತಿದ್ದರು" ಅಂತ ಈ ವ್ಯಾಯಾಮ ಕಲೆಗಳ ಕಲಿಸುಗರು, ಪ್ರಚಾರಕರ ಸೇರಿಸಿ ಎಲ್ಲ ತಲೆಮಾರುಗಳ ಮಾತುಗಳು ಇವೇ.
ಯಾಂತ್ರಿಕವಲ್ಲದ ಬಾಳಿನಲ್ಲಿ ಕುಂತು ಧ್ಯಾನ ಮಾಡಿ, ನಿಂತು ವ್ಯಾಯಾಮ ಮಾಡಿ, ಮಕ್ಕೊಂಡು ಯೋಗ ಮಾಡಿ, ಮಯ್ಯನ್ನು-ಮನಸ್ಸನ್ನು ಕಟ್ಟುಮಸ್ತು ಮಾಡೊ ಅವಶ್ಯಕತೆ ಎಲ್ಲರಿಗೂ ಇರಲಿಲ್ಲ, ಅಥವಾ ಬೇಕಿರಲಿಲ್ಲ ಅಂತ ಹೇಳಬೋದು.
ಆಗಿನ ಕಾಲದಲ್ಲಿ ಗರಡಿಮನೆಗಳಿಗೆ ಊರಿನ ಎಲ್ಲ ಮಂದಿ ಹೋಗುತ್ತಿದ್ದರಾ? ಹೋದ್ರೂ ಎಂತೋರು ಹೋಗೋರು? ಗರಡಿ ಮನೆಗಳಲ್ಲಿ ಪಳಗಿದ ಹೆಚ್ಚಿನೋರು ರಾಜ್ಯದ ಸೇನೆ, ಊರಿನ ಕಾವಲುಪಡೆಗಳಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಉಳಿದ ಕೆಲಸಗಳಲ್ಲಿದ್ದವರಲ್ಲಿ ಎಷ್ಟು ಮಂದಿ ಗರಡಿಮನೆಗಳಿಗೆ ಹೋಗುತ್ತಿದ್ದರು? ಬೆರಳೆಣಿಕೆ ಮಾತ್ರ. ಈಗ ತಿರುಗಿ ಮತ್ತೆ ಮೊದಲ ಪ್ರಶೆಗೆ....
- ಆಗಿನ ಕಾಲದಲ್ಲೂ ಬಹಳ ಹೊತ್ತು ಕುಂತು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೋರು ಯಾರು?
- ಬದುಕು ಎಡವಟ್ಟಾಗಿ ಧ್ಯಾನದಿಂದ ಹತೋಟಿಗೆ ತರಬೇಕು ಅನ್ನೋ ಅವಶ್ಯಕತೆ ಇದ್ದಿದ್ದು ಯಾರಿಗೆ?
- ಮಾಡೋ ಕೆಲಸದಿಂದ ಮೈಗೆ ವ್ಯಾಯಾಮ ಸಿಗದೇ, ಅದಕ್ಕಾಗಿ ಒಂದು ಪದ್ಧತಿಯಿಂದ ಹೆಚ್ಚಿಗೆ ಹೊತ್ತು ಕೂತು, ಯೋಗ, ಧ್ಯಾನ ಮಾಡಬೇಕಾಗಿ ಬಂದದ್ದು ಯಾರಿಗೆ?
ಅಂತ ಅವಶ್ಯಕತೆ ಇದ್ದ ಜನರ ಬಾಳಿನ ಬಗೆ, ಈಗ ಹೆಚ್ಚು ಕುಂತು ತಲೆಗೆ ಕೆಲಸ ಕೊಟ್ಟು ಮಾಡುವವರಶ್ಟೇ ಸರಿ ಇರಲಿಲ್ಲ ಅಂತಾನಾ? ಸಾವಿರಾರು ವರುಷದ ಹಿಂದೆನೇ ಕಂಡು ಹಿಡಿದಿದ್ದ ಇವೆಲ್ಲ, ಬರಿ ಈಗಿನ ಬಾಳಿನ ಬಗೆ ಸರಿ ಇಲ್ಲ, ಅದಕ್ಕಾಗಿ ಇವೆಲ್ಲ ಬೇಕು ಅಂತ ಹೇಳೋದು ಎಶ್ಟು ಸರಿ?
ಹಿಂಗೆ ನನ್ನ ಒಂದಶ್ಟು ಯೋಚನೆ, ಪ್ರಶ್ನೆಗಳು.
- ಆದರ್ಶ