ಹಸಿವು ಮತ್ತು ಹಣಕಾಸು
by Adarsha
ನಮ್ಮ ದೇಶದ ಸದ್ಯದ ಆರ್ಥಿಕ ವಾತಾವರಣದ ಕಡೆ ಒಮ್ಮೆ ಗಮನ ಕೊಟ್ಟು ನೋಡಿದರೆ ಹೆಚ್ಚು ಸುದ್ದಿಯಲ್ಲಿರೋದು ಆಟೋಮೊಬೈಲ್ ಉದ್ಯಮ. ಈ ವಾಹನಗಳ ಉದ್ಯಮದ ಬಗ್ಗೆ ಕಳೆದ ಏಳು ತಿಂಗಳುಗಳಿಂದಾನು ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಬಂದಿದ್ದೇವೆ. ಈ ರೀತಿಯ ಬೆಳವಣಿಗೆಗೆ ಸುಮಾರು ಕಾರಣಗಳಿವೆ.
- ಸರಕಾರದ ಸುಂಕದಲ್ಲಿ ಏರಿಕೆ.
- ಹಳೇ ನೋಟುಗಳ ರದ್ದತಿ.
- ಕಾರು, ಬೈಕುಗಳ ಬೆಲೆ ಏರಿಕೆ (ಎ.ಬಿ.ಎಸ್. ಹಾಗೂ ಇನ್ನಿತರ ತಾಂತ್ರಿಕ ಬದಲಾವಣೆಯಿಂದ).
- ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ.
- ರಸ್ತೆಗಳ ಕಳಪೆ ಗುಣಮಟ್ಟದಿಂದ ಸ್ವಂತ ಗಾಡಿಗಳಲ್ಲಿ ಓಡಾಟ ಕಡಿಮೆ.
- ಬಿ.ಎಸ್. ೪ ರಿಂದ ಬಿ. ಎಸ್. ೬ ನಿಯಮದ ಅನುಗುಣವಾಗಿ ಬರಲಿರುವ ಹೊಸ ಗಾಡಿಗಳ ಕಾತರದಲ್ಲಿ ಜನರು ಸದ್ಯದ ಗಾಡಿಗಳ ಮೇಲಿನ ವೆಚ್ಚದಲ್ಲಿ ಮುಂದೂಡಿಕೆ. ಸ್ವಲ್ಪ ಮಟ್ಟಿಗೆ ಸಾರ್ವಜನಿಕ ವಾಹನ ಪ್ರಯಾಣದ ಕಡೆ ಜನರ ಮನಸ್ಸು.
ಹೀಗೆ ಒಂದಿಷ್ಟು ಕಾರಣಗಳಿಂದ ಸದ್ಯಕ್ಕೆ ವಾಹನಗಳ ಉದ್ಯಮದ ಕ್ಷೇತ್ರವು ಕ್ಷೀಣಿಸುತ್ತಾ ಬರುತ್ತಿದೆ, ಹಾಗೂ ಅದರ ಪರಿಣಾಮ ಇತರೆ ಕ್ಷೇತ್ರಗಳ ಮೇಲೂ ಬೇರುತ್ತಿದೆ. ಸಾಮಾನ್ಯವಾಗಿ ಇಂತಹ ಆರ್ಥಿಕ ಕುಸಿತ ಹಾಗೂ ಆರ್ಥಿಕ ಹಿಂಜರಿತಗಳು ಉಂಟಾಗಲು ಅನೇಕ ಕಾರಣ ಹಾಗು ಬಹಳ ಸಮಯ ಹಿಡಿಯುತ್ತೆ. ಹಾಗೆ ಮಾರುಕಟ್ಟೆಯಲ್ಲಿ ಇಂತ ಹಿಂಜರಿತ ಉಂಟಾದಮೇಲೆ ಮತ್ತೆ ಎಲ್ಲ ಜನರ ಹಾಗು ಸಮಾಜದ ಹಣಕಾಸಿನ ಸ್ಥಿತಿ ಸುಧಾರಿಸಿಕೊಳ್ಳಲು ಸಹ ಕಾಲ ಹಾಗು ಕಾರಣಗಳು ಬೇಕೇ ಬೇಕಾಗುತ್ತದೆ. ಈ ಬರಹದಲ್ಲಿ ಹಣಕಾಸಿನ ಸ್ಥಿತಿ ಸರಿಯಾಗಲು ಸಹಾಯವಾಗುವ ಮೂಲ ಕಾರಣದ ಹುಡುಕಾಟದ ಪ್ರಯತ್ನ ನಡೆದಿದೆ.
೨೦೧೮ ಜುಲೈ ಸುಮಾರಿಗೆ ನಮ್ಮ ದೇಶದ ವಾಹನ ಉದ್ಯಮ ಹಾಗು ಇತರೆ ಉದ್ಯಮಗಳಿಗೆ ಅನ್ವಯಿಸುವಂತೆ ಬಂಡವಾಳದ ಕೊರತೆ ಹಾಗು ವೆಚ್ಚಕ್ಕೆ ಬೇಕಾದ ದುಡ್ಡು ಸರಿಯಾದ ಸಮಯಕ್ಕೆ ಸಿಗದ ಸ್ಥಿತಿ ಬಂದದ್ದರಿಂದ ನಿಧಾನವಾಗಿ ಆರಂಭವಾದ ಆರ್ಥಿಕ ಹಿಂಜರಿತ ನಿಲ್ಲದಂತೆ ಬೆಳೆದು, ಗಾಯದ ಮೇಲೆ ಬರೆ ಎಂಬಂತೆ ಜನರೂ ಸಹ ಮುಂದೆ ಬರಲಿರುವ ಬಿ. ಎಸ್. ೬ ಗಾಡಿಗಳು ಬರುವ ಮುನ್ನ ಬಿ. ಎಸ್. ೪ ತಂತ್ರಜ್ಞಾನ ಇರುವ ಗಾಡಿಗಳ ಮೇಲೆ ವಾಹನದ ಕಂಪನಿಗಳು ನೀಡಬಹುದಾದ ರೀಯಾಯಿತಿಗಳ ಅಪೇಕ್ಷೆಯ ಮೇರೆಗೆ ಜನರು ತಮ್ಮ ವಾಹನ ಕೊಳ್ಳುವಿಕೆಯನ್ನು ಸುಮಾರು ತಿಂಗಳುಗಳು ಮುಂದೂಡುತ್ತಾ ಬಂದರು. ಈ ಕಾರಣದಿಂದಾಗಿ ವಾಹನಗಳ ತಯಾರಿಕಾ ಉದ್ಯಮದ ಸ್ಥಿತಿಯು ಮತ್ತಷ್ಟು ಹದಗೆಟ್ಟಿತು. ಈಗ ನಮ್ಮ ಮುಂದಿರುವ ಮೊದಲ ಪ್ರಶ್ನೆ. ಹೀಗೆ ಬಂದ ಆರ್ಥಿಕ ಹಿಂಜರಿತ ಸರಿಯಾಗೋದು ಹೇಗೆ ಮತ್ತೆ ಯಾವಾಗ?
ಒಂದು
ಆಗಿರುವ ಹಿಂಜರಿತ ಸರಿಯಾಗಬೇಕಾದರೆ ಜನರು ಮತ್ತೆ ಗಾಡಿಗಳನ್ನು ಕೊಳ್ಳುವ ಹಾಗಾಗಬೇಕು. ಅಂದುಕೊಂಡಂತೆ ಏಪ್ರಿಲ್ ೨೦೨೦ ರ ಹೊತ್ತಿಗೆ ಹೊಸದಾಗಿ ಸಿದ್ಧವಾಗಿ ಬರುವ ಎಲ್ಲ ಗಾಡಿಗಳು ಬಿ. ಎಸ್. ೬ ನಿಯಮಾನುಸಾರ ಸಿದ್ಧವಾದ ಗಾಡಿಗಳಾಗಿ, ಅವೆಲ್ಲ ಬರುತ್ತಿದ್ದಂತೆ ಜನರು ಮತ್ತೆ ತಮ್ಮ ಅವಶ್ಯಕತೆಗೆ ತಕ್ಕಂಗೆ ಹೊಸ ಗಾಡಿಗಳನ್ನ ಕೊಳ್ಳುತ್ತಿದ್ದಂಗೆ, ನಿಧಾನಕ್ಕೆ ಈ ಉದ್ಯಮ ಚೇತರಿಸಿಕೊಂಡು ಸಾಮಾನ್ಯ ಸ್ಥಿತಿಯನ್ನು ತಲುಪುತ್ತದೆ. ಇದಕ್ಕೂ ಮೊದಲು ಬಹಳ ಜನ ಅಂದುಕೊಂಡಂಗೆ ಬಿ. ಎಸ್. ೪ ರ ಗಾಡಿಗಳನ್ನೂ ಸಹ ಕಂಪನಿಗಳು ಕಡಿಮೆ ಬೆಳೆಗೆ ಮಾರಾಟ ಮಾಡಿ ತಮ್ಮ ಹಳೆ ಸರಕನ್ನೆಲ್ಲಾ ಮಾರಿ ಮುಗಿಸಿಬಿಡುತ್ತಾರೆ.
ಎರಡು
ಹೊಸ ಎಲೆಕ್ಟ್ರಿಕ್ ವಾಹನಗಳ ಆಸೆಯಿಂದ ಜನರು ಹಳೆಯ ತಂತ್ರಜ್ಞಾನ ಇರುವ ಕಾರುಗಳನ್ನು ೨೦೨೦ ರ ನಂತರವೂ ಹೆಚ್ಚಾಗಿ ಕೊಳ್ಳದೆ, ಎಲ್ಲ ವಾಹನ ತಯಾರಿಕಾ ಕಂಪನಿಗಳ ಹಣಕಾಸಿನ ಸ್ಥಿತಿ ಇನ್ನೂ ಹದಗೆಡುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂಗೆ ಕಂಪನಿಗಳೂ ಸಹ ತಮ್ಮ ವಾಹನ ತಯಾರಿಕೆ ಕಡಿಮೆ ಮಾಡುತ್ತವೆ, ವೆಚ್ಚ ಕಡಿಮೆ ಮಾಡಲು ಕೆಲಸಗಾರರ ವೇತನ ಕಡಿಮೆ ಮಾಡಬಹುದು, ಹೆಚ್ಚು ಅನ್ನಿಸಿದ ಕೆಲಸಗಾರರನ್ನೂ ತೆಗೆಯಬಹುದು. ಇದರಿಂದ ಬಿಡಿ ಭಾಗಗಳನ್ನು ಸಿದ್ಧ ಪಡಿಸುವ ಕಂಪನಿಗಳಿಗೂ ಹೊಡೆತ ಬೀಳುತ್ತದೆ, ಅವುಗಳೂ ಸಹ ತಮ್ಮ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು, ವೆಚ್ಚಗಳನ್ನು ಕಡಿಮೆ ಮಾಡಲು, ಬೇಡಿಕೆ ಕಡಿಮೆಯಾದ ಮಾರುಕಟ್ಟೆಗೆ ಒಗ್ಗಿಕೊಳ್ಳಲು, ತಮ್ಮ ಕೆಲಸಗಾರರನ್ನು ಕಡಿಮೆ ಮಾಡಿ, ಅವರ ಸಂಬಳಗಳನ್ನೂ ಕಡಿಮೆ ಮಾಡುತ್ತವೆ. ಈ ರೀತಿ ನಿಧಾನವಾಗಿ ವಾಹನಗಳ ಕ್ಷೇತ್ರದ ಮೇಲೆ ಅವಲಂಬಿತವಾದ ಒಂದು ವರ್ಗದ ಜನರ ಜೀವನ ಕಷ್ಟಕರವಾಗುತ್ತದೆ. ಹಿಂಗೆ ಆದಾಯ ಕಡಿಮೆಯಾದ ಜನರು ತಮ್ಮ ದೈನಂದಿನ ವೆಚ್ಚವನ್ನೂ ಸಹ ಕಡಿಮೆ ಮಾಡುತ್ತಾರೆ. ಇದರ ಪರಿಣಾಮ ನೇರವಾಗಿ ವಾಹನಗಳ ಸಿದ್ಧಪಡಿಸುವ, ಮಾರಾಟ ಮಾಡುವ ಉದ್ಯಮದಲ್ಲಿರುವವರನ್ನಲ್ಲದೆ, ವಾಹನಗಳ ಉದ್ಯಮದ ಮೇಲೆ ಪರೋಕ್ಷವಾಗಿ ಅವಲಂಬಿತರಾಗಿದ್ದ ಜನರ ಮೇಲೂ ಪರಿಣಾಮವಾಗುತ್ತದೆ. ಹೀಗೆ ನಿಧಾನವಾಗಿ ಸಮಾಜದ ಒಂದು ಭಾಗದಲ್ಲಿ ಆರಂಭವಾದ ಆರ್ಥಿಕ ಹಿಂಜರಿತ ಎಲ್ಲ ಭಾಗಕ್ಕೂ ಹಬ್ಬುತ್ತದೆ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರೂ ಸಹ ತಮ್ಮ ವೆಚ್ಚಗಳನ್ನ ಕಡಿಮೆ ಮಾಡಿಕೊಳ್ಳುತ್ತಾರೆ. ಹೀಗೆ ಮುಂದುವರೆಯುತ್ತಾ
- ಜನರು ವಾಹನಗಳ ಕೊಳ್ಳುವುದಿಲ್ಲ.
- ಬಿಡಿ ಭಾಗಗಳ ತಯಾರಿಕಾ ಕಂಪನಿ ಕಬ್ಬಿಣ ಹಾಗೂ ಇತರೆ ಲೋಹಗಳ ಕೊಳ್ಳುವುದಿಲ್ಲ.
- ಲೋಹ ತಯಾರಿಸುವ ಕಂಪನಿ ಗನಿಗಳಿಂದ ಹೆಚ್ಚು ಅದಿರು ಕೊಳ್ಳುವುದಿಲ್ಲ.
- ಬ್ಯಾಂಕುಗಳು ಈ ಎಲ್ಲ ಕಂಪನಿಗಳಿಗೆ ಹೆಚ್ಚು ಸಾಲವನ್ನು ಕೊಡುವುದಿಲ್ಲ.
- ಜನರು ತಮ್ಮ ಹಣವನ್ನ ಬ್ಯಾಂಕಿಗೆ ಹಾಕೋದಿಲ್ಲ, ಬ್ಯಾಂಕಿನಲ್ಲಿ ಇರೋ ದುಡ್ಡನ್ನು ಅಲ್ಲಿಂದ ತೆಗೆದು ಮನೆಯಲ್ಲಿಟ್ಟುಕೊಳ್ಳುತ್ತಾರೆ.
- ನಿಧಾನವಾಗಿ ಬ್ಯಾಂಕುಗಳ ಆದಯಾವೂ ಇದರಿಂದ ಕಡಿಮೆಯಾಗುತ್ತದೆ.
- ಆದಾಯ ಕಡಿಮೆ ಆದ ಇಡೀ ಒಂದು ಉದ್ಯಮದಿಂದ ಸುಂಕದ ರೂಪದಲ್ಲಿ ಬರುತ್ತಿದ್ದ ಸರಕಾರದ ಆದಾಯವೂ ಕಡಿಮೆ ಆಗುತ್ತದೆ.
ಹೀಗೆ ಒಂದು ಕಡೆ ಆರಂಭವಾದ ಆರ್ಥಿಕ ಹಿಂಜರಿತ ಇನ್ನೂ ಹೆಚ್ಚಿನ ಉದ್ಯಮಗಳಿಗೆ ಹರಡುತ್ತದೆ. ಇಡೀ ಸಮಾಜದ ವ್ಯವಸ್ಥೆಯಲ್ಲಿ ದುಡ್ಡಿನ ಹರಿವು ಕಡಿಮೆಯಾಗುತ್ತದೆ. ದುಡ್ಡು ಇರುವವರು, ದುಡ್ಡು ಬರುವುದಕ್ಕಿಂತ ವೇಗವಾಗಿ ವೆಚ್ಚವಾಗುವ ಹೆದರಿಕೆಯಲ್ಲಿ ಬಹಳವೇ ಎಣಿಕೆಯಲ್ಲಿ ವೆಚ್ಚ ಮಾಡುತ್ತಿರುತ್ತಾರೆ. ಮೊದಲೇ ದುಡ್ಡನ್ನು ಕೂಡಿಡದವರು ದುಡ್ಡು ಬರದೇ ಪರದಾಡುತ್ತಾರೆ. ಹೀಗೆ ದುಡ್ಡಿನ ಹರಿವು ಇಲ್ಲದೆ ಇಡೀ ಸಮಾಜ ಒಂದು ದಿನ ನಿಂತೇ ಬಿಡಬಹುದು. ಮತ್ತೆ ದುಡ್ಡು ಸಿಗದೆಂಬ ಹೆದರಿಕೆಯಲ್ಲಿ ಯಾರು ಯಾರಿಗೂ ದುಡ್ಡು ಕೊಡದ ಸ್ಥಿತಿಗೆ ತಲುಪಬಹುದು. ಅಂತಹ ಸಂದರ್ಭದಲ್ಲಿ ಸರಕಾರವು ನಮ್ಮ ದೇಶದ ರಿಸರ್ವ್ ಬ್ಯಾಂಕಿನಲ್ಲಿ ಇರುವ ಆಪತ್ಕಾಲದ ಹಣದ ಬಳಕೆ ಮಾಡಿ, ಆ ದುಡ್ಡನ್ನ ಮತ್ತೆ ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಹರಿದಾಡಿಸುವ ಪ್ರಯ್ಯತ್ನ ನಡೆಸುತ್ತದೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ದುಡ್ಡು ನೀಡಿ, ಅವುಗಳು ಮತ್ತೆ ಕಂಪನಿ, ಜನರಿಗೆ ಸಾಲ ನೀಡುವಂತೆ ಮಾಡಿ, ಜನರ ನಡುವಿಗೆ ದುಡ್ಡನ್ನು ಕಳಿಸುತ್ತದೆ. ಇದರಿಂದ ಮತ್ತೆ ಎಲ್ಲರಿಗೂ ಬೇಕಾದ ದುಡ್ಡು ಕೈಗೆ ಸಿಕ್ಕಿ ಸಮಾಜದ ಆರ್ಥಿಕ ವ್ಯವಸ್ಥೆಯಲ್ಲಿ ದುಡ್ಡಿನ ಹರಿದಾಟ ಮತ್ತೆ ಆರಂಭವಾಗಿ ಕೆಲ ವರುಷಗಳಲ್ಲಿ ಮತ್ತೆ ನಮ್ಮ ಆರ್ಥಿಕ ಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ಅಪ್ಪಿ ತಪ್ಪಿ ಏನಾದರೂ, ಸರಕಾರದ ಈ ಪ್ರಯತ್ನದ ನಂತರವೂ ಹೆದರಿಕೆ ಹೋಗಿ, ನಂಬಿಕೆ ಬರದೇ ಹೋದರೆ ಮೊದಲಿನ ಸ್ಥಿತಿಯೇ ಮುಂದುವರಿದು, ಸರಕಾರದ ಆಪತ್ಕಾಲದ ದುಡ್ಡು ಮುಗಿದರೆ ಸರಕಾರವೂ ಕಷ್ಟದಲ್ಲಿ ಸಿಲುಕಿ ದೇಶವು ಬಡತನದತ್ತ ಸಾಗಿ, ದೇಶದ ಸ್ಥಿತಿ ಅದ್ವಾನವಾಗುತ್ತದೆ. ಆಗ ನಮ್ಮ ದೇಶವು ಹೊರದೇಶಗಳ ಬಳಿ, ಅಂತಾರಾಷ್ಟ್ರೀಯ ಹಣಕಾಸಿನ ಸಂಸ್ಥೆಯ ಬಳಿ ಸಾಲ ತೆಗೆದುಕೊಂಡು ದೇಶವನ್ನು ಸಾಮಾನ್ಯ ಸ್ಥಿತಿಗೆ ತರಿಸುವ ಪ್ರಯತ್ನ ಪದಬಹುದು. ಆದರೆ ಇಡೀ ಭೂಮಿಯ ಎಲ್ಲ ದೇಶಗಳೂ ಆದ್ವಾನವಾಗಿದ್ದರೆ, ಆ ಹೊತ್ತಿಗೆ ಯಾವ ದೇಶವೂ ಮತ್ತೊಂದು ದೇಶಕ್ಕೆ ದುಡ್ಡಿನ ಸಹಾಯ ಮಾಡಲು ಹೋಗುವುದಿಲ್ಲ.
ಇಂಥ ಒಂದು ಸ್ಥಿತಿಗೆ ತಲುಪಿದರೆ ನಮ್ಮನ್ನು ಕಾಪಾಡೋರು ಯಾರು?
ಇದಕ್ಕೆ ಒಂದು ಉತ್ತರ ಮಾನವ ಹಾಗೂ ಮಾನವ ಸಮಾಜದ ಗುಣದಲ್ಲಿ ಕಾಣಬಹುದು. ದುಡ್ಡಿಲ್ಲ ಎಂಬ ಕಾರಣಕ್ಕೆ ಊಟ ಮಾಡದೇ ಯಾರೂ ಇರುವುದಿಲ್ಲ. ಒಂದೆರೆಡು ದಿನ ಉಪವಾಸವಿರಬಹುದು, ಆದರೆ ಅದಾದ ಮೇಲೆ ಹಸಿವು ನಮ್ಮನ್ನಾವರಿಸಿ ನಮ್ಮಿಂದ ಒಂದಲ್ಲಾ ಒಂದು ಬಗೆಯ ಕೆಲಸವನ್ನು ಮಾಡಿಸಿ, ದುಡಿಸಿಕೊಂಡು ಊಟವನ್ನು ತರಿಸಿಕೊಳ್ಳುತ್ತದೆ.
- ತನ್ನ ಹಸಿವನ್ನು ನೀಗಿಸಿಕೊಳ್ಳಲು ರೈತನು ತಾನು ಬೆಳೆದ ಬೆಳೆಯನ್ನು ಇತರರಿಗೆ ಮಾರುತ್ತಾನೆ ಅಥವಾ ಬೇರೆ ವಸ್ತು, ಪದಾರ್ಥಗಳೊಡನೆ ವಿನಿಮಯ ಮಾಡಿಕೊಳ್ಳುತ್ತಾನೆ.
- ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ತಮ್ಮ ಬಳಿ ಇದ್ದ ಹಣ, ವಸ್ತುಗಳಿಂದ ಬಂದಷ್ಟು ಕಾಳು, ಹಣ್ಣು, ತರಕಾರಿಗಳನ್ನು ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
- ಈ ಊಟವನ್ನು ತಂದು ಕೊಡುವ ಪ್ರಕ್ರಿಯೆಯಲ್ಲಿ ನಿಧಾನವಾಗಿ ಇತರೆ ಕೆಲಸ ಮಾಡುವವರಿಗೂ ಬೇಡಿಕೆ ಬಂದು ಅವರಿಗೂ ದುಡ್ಡು, ಊಟ ಸಿಗುವಂತಾಗುತ್ತದೆ.
- ಊಟದ ಪದಾರ್ಥಗಳ ಜೊತೆಗೆ ಜನರಿಗೆ ಅವಶ್ಯಕವಾಗಿರುವ ಬಟ್ಟೆ, ಚಪ್ಪಲಿ, ಔಷಧಿ ಎಂಬಂತೆ ಇತರೆ ವಸ್ತುಗಳಿಗೂ ಬೇಡಿಕೆ ಬಂದು ಮತ್ತೆ ಸಮಾಜದಲ್ಲಿ ನಿಧಾನವಾಗಿ ದುಡ್ಡು ಒಬ್ಬರಿಂದ ಒಬ್ಬರಿಗೆ ಹರಿಯಲಾರಂಭಿಸುತ್ತದೆ.
- ಈ ಹಸಿವು, ಅವಶ್ಯಕತೆಗಳು ನಮ್ಮ ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಕದಲುವಂತೆ ಮಾಡಿ ನಿಧಾನವಾಗಿ ಮುನ್ನಡೆಸುತ್ತವೆ.
- ಒಂದಷ್ಟು ದಿನಗಳು ಆರ್ಥಿಕ ಕುಸಿತ, ಹಿಂಜರಿತಗಳಲ್ಲಿ ಕಳೆದರೂ ಮತ್ತೆ ಈ ಹಣಕಾಸಿನ ವ್ಯವಸ್ಥೆ ಕದಲಿ ಮೇಲೇಳುತ್ತದೆ.
ದುಡ್ಡು ಬಂದು ಹೋಗುತ್ತದೆ, ಆದರೆ ನಮ್ಮಲ್ಲಿ ಹಸಿವು ಯಾವತ್ತಿಗೂ ಇರೋದೆ. ಒಂದಲ್ಲ ಒಂದು ಹಸಿವು ನಮ್ಮನ್ನ ಮತ್ತು ನಮ್ಮ ಸಮಾಜವನ್ನ ಯಾವತ್ತಿಗೂ ಜಡತೆಗೆ ಹೋಗಲು, ಜಡತೆಯಲ್ಲಿ ಉಳಿಯಲು ಬಿಡುವುದಿಲ್ಲ.
- ಆದರ್ಶ