ಮನುಷ್ಯನ ಉಗಮವಾದಾಗಿನಿಂದ ನೀರು ಬರೀ ಬಳಕೆಯ ವಸ್ತುವಾಗಿಯೇ ಉಳಿದಿದೆ ಹೊರತು, ಉಳಿಸಬೇಕಾದ ವಸ್ತುವೆಂದು ಅರಿತವರು ತೀರಾ ಕಡಿಮೆ. ಇತ್ತೀಚಿಗಷ್ಟೇ ನೀರನ್ನು ಉಳಿಸಬೇಕು, ಮತ್ತದರ ಬಳಕೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಹೊರ ಬಂದಿದ್ದು. ಈಗ ಬಳಸುತ್ತಿರುವ ವೇಗದಲ್ಲಿ ನೀರನ್ನು ಮುಂದೂ ಬಳಸುತ್ತಿದ್ದರೆ, ಇನ್ನು ಕೆಲವೇ ಶತಮಾನಗಳಲ್ಲಿ ಇಡೀ ಭೂಮಿಯ ಜನರು ಕುಡಿಯುವ ನೀರಿಲ್ಲದೆ ಸಾಯುವ ಸ್ಥಿತಿಯ ತಲುಪಬಹುದು.

“ಜೀವನಾನ ಇವತ್ತು ಅನುಭವಿಸಬೇಕು ಅಂತ ನಮ್ಮ ಜನ ತಮ್ಮ ಮುಂದಿನ ತಲೆಮಾರಿಗೂ ಕರಗದಷ್ಟು ದುಡ್ಡು ಕೂಡಿಡುವ ಸಂಸ್ಕೃತಿ ಬೆಳೆಸಿಕೊಂಡು, ಮುಂದೆ ನಾವು ಇರ್ತೀವೋ ಇಲ್ಲವೋ ಅಂತ ಎಲ್ಲ ನೀರನ್ನು ಇಂದು ತಾವೇ ಅನುಭವಿಸುವ ಅಭ್ಯಾಸ ಮಾಡಿಕೊಂಡು ಬದುಕುತ್ತಿದ್ದಾರೆ”.

ಇಂಥಹ ಸಮಯದಲ್ಲಿ ಸಾವಿರಾರು ವರುಷಗಳ ಅಭ್ಯಾಸವನ್ನು ಒಮ್ಮೆ ಬೆಟ್ಟು ಕಟು ಶಿಸ್ತಿನ ಜೀವನವ ಹೇಗೆ ತಾನೇ ನಡೆಸೋದು! ಭೂಮಿಯ ಮುಕ್ಕಾಲು ಭಾಗ ನೀರಿನಿಂದ ತುಂಬಿದ್ದರೂ ಕುಡಿಯಲು ಬರುವ ನೀರಿನ ಪ್ರಮಾಣ ಕೇವಲ ೨.೫-೨.೭೫% ಮಾತ್ರ. ಅದರಲ್ಲಿ ಹಿಮಪರ್ವಗತಳಲ್ಲಿ ೧.೨೫-೨% ರಷ್ಟು ಇದೆ. ಕೇವಲ ೦.೫-೦.೭೫% ಅಂತರ್ಜಲದ ರೂಪದಲ್ಲಿದೆ ಹಾಗು ೦.೦೧% ರಷ್ಟು ಮಾತ್ರ ಕೆರೆ, ತೊರೆ, ನದಿಗಳಲ್ಲಿ ಇದೆ. ಈ ಸಂಖ್ಯೆಗಳ ತಿಳಿಯಲು ನಮಗೆ ೨೦ನೇ ಶತಮಾನದ ವರೆಗೆ ಕಾಯಬೇಕಾಯಿತು. ತಿಳಿದ ನಂತರವಾದರೂ ಆ ಸಣ್ಣ ಪ್ರಮಾಣದ ನೀರಿನ ಉಳಿತಾಯಕ್ಕೆ ಪೂರ್ಣ ರೀತಿಯಲ್ಲಿ ತೊಡಗಿಕೊಳ್ಳದೆ, ಅಂತರ್ಜಲದ ಸಂರಕ್ಷಣೆಗೆ ಕೈ ಹಾಕದೆ, ಅಂತರಿಕ್ಷೆಯಲ್ಲಿ ಇರುವ ಕಾಯಗಳಲ್ಲಿ ನೀರಿನ ಕುರುಹುಗಳ ಹುಡುಕುತ್ತಿದ್ದೇವೆ. ಜಗತ್ತಿನ ಜನಸಂಖ್ಯೆಯ ೧೭% ರಷ್ಟು ಜನರು ಭಾರತದಲ್ಲೇ ಇದ್ದಾರೆ. ಇಡೀ ವರ್ಷಕ್ಕೆ ಬೇಕಾಗುವಷ್ಟು ನೀರಿನ ಅರ್ಧದಷ್ಟು ನೀರನ್ನು ಮಳೆಯೂ ಕೇವಲ ೧೫ ದಿನಗಳಲ್ಲಿ ಸುರಿಸಿ ಹೋಗುತ್ತದೆ. ಈ ರೀತಿ ಸಿಗುವ ಎಲ್ಲ ನೀರಿನ ೩೬% ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನಮ್ಮಲ್ಲಿರೋದು. ಅದಲ್ಲೂ ಸೋರಿಕೆ ಹಾಗು ಸರಿಯಾದ ವ್ಯವಸ್ಥೆ ಇರದೇ ೫೦% ನೀರನ್ನು ಪೋಲು ಮಾಡುತಿದ್ದೇವೆ. ನಿಜವಾಗಿ ನೀರಿನ ಲಭ್ಯತೆ ಮೇಲೆ ಒತ್ತಡ ಹೇರುತ್ತಿರುವುದು ನೀರನ್ನು ಪೋಲು ಮಾಡುತ್ತಿರುವುದರಿಂದ ಹಾಗು ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ, ನೀರಿನ ಅಭಾವದಿಂದಲ್ಲ. ಬೇಸಾಯದಿಂದ ಹಿಡಿದು ನಮ್ಮ ಮನೆಯ ಅಂಗಳದವರೆಗೆ, ಪ್ರತಿಯೊಂದು ಜಾಗದಲ್ಲಿ ನೀರಿನ ಸರಿಯಾದ ಬಳಕೆಯಿಂದ, ಒಳ್ಳೆಯ ನಿರ್ವಹಣೆಯ ಅಭ್ಯಾಸದಿಂದ ನಾವು ನೀರನ್ನು ಹೆಚ್ಚು ಕಾಲ ಉಳಿಸಿಕೊಳ್ಳಬಹುದು.

ನಾವು ಊಟವಾದ ನಂತರ ಕೈಯ್ಯನ್ನು ತೊಳೆದುಕೊಳ್ಳುವ ವಿಷಯವನ್ನೇ ತೆಗೆದುಕೊಳ್ಳೋಣ. ಕೈ ತೊಳೆಯೋಕೆಂದು ನಲ್ಲಿಯನ್ನು ಪೂರ್ತಿಯಾಗಿ ತೆಗೆದು, ನೀರನ್ನು ರಭಸವಾಗಿ ಹೊರಬಿಟ್ಟು ಅಂಗೈಯ್ಯನ್ನು ತೊಳೆಯುತ್ತೇವೆ. ಆದರೆ ಇಷ್ಟಗಲ ಅಂಗೈ ತೊಳೆಯಲು ಅಷ್ಟು ನೀರಿನ ಅವಶ್ಯಕತೆ ಇರುವುದಿಲ್ಲ. ಪೂರ್ತಿಯಾಗಿ ನಲ್ಲಿ ತೆಗೆದು, ಸುಮಾರು ೫-೧೦ ಸೆಕೆಂಡುಗಳಲ್ಲಿ ವ್ಯಯವಾಗುವಷ್ಟು ನೀರು ನಿಜವಾಗಿ ನಮ್ಮ ಅಂಗೈ ತೊಳೆಯಲು ಬೇಕಿಲ್ಲ. ಬದಲಿಗೆ ತುಸುವಾಗಿ ನಲ್ಲಿ ತೆಗೆದು ೧೦-೨೦ ಸೆಕೆಂಡುಗಳನ್ನೇ ತಗೊಂಡು ಕಡಿಮೆ ನೀರಲ್ಲಿ ಅಂಗೈಯ್ಯನ್ನು ಚೆನ್ನಾಗೇ ತೊಳೆದುಕೊಳ್ಳಬಹುದು. ನೀರು ಎಲ್ಲಿಗೂ ಓಡುವುದಿಲ್ಲ. ಆದರೆ ರಭಸವಾಗಿ ಬಿಟ್ಟುಕೊಂಡು ಕೈ ತೊಳೆಯಲು ಹೋದರೆ ಆ ನೀರು ನಮ್ಮ ಕೈಯ್ಯಲ್ಲಿ ಉಳಿಯದೆ ಓಡುತ್ತದೆ. ಮನೆಯಲ್ಲಿ ಪಾತ್ರೆ ಬೆಳಗುವಲ್ಲಿ, ಬಟ್ಟೆ ತೊಳೆದ ನೀರಿನ ಮರುಬಳಕೆ ಮಾಡುವಲ್ಲಿ, ಗಾಡಿಗಳ ತೊಳೆಯಲು ಹಂಡೆಯಷ್ಟು ನೀರನ್ನು ಬಳಸದಿರುವುದರಲ್ಲಿ, ಜೀವನ ಶೈಲಿಯ ಪ್ರತಿಯೊಂದು ಅಂಶದಲ್ಲಿನ ಸಣ್ಣ ಶಿಸ್ತಿನಿಂದ ಜಗತ್ತಿನಲ್ಲಿ ನೀರಿನ ದೊಡ್ಡ ಉಳಿತಾಯ ಸಾಧ್ಯವಿದೆ. ಅದಕ್ಕೆ ನಮಗೆ ಅಭ್ಯಾಸ ಮತ್ತು ಅರಿವಿನ ಅಗತ್ಯವಿದೆ. ಆದರೆ ನಾವೆಲ್ಲಾ ನಮ್ಮ ನಿರ್ಲಕ್ಷ್ಯದಿಂದ, ಬಿಡುವಿಲ್ಲದ ಜೀವನದಲ್ಲಿ ಅತೀ ಮುಖ್ಯವಾದ ನೀರಿನ ನಿರ್ವಹಣೆಯನ್ನೇ ಮರೆತಿದ್ದೇವೆ. ಮತ್ತೆ ಎಚ್ಚೆತ್ತು ಬದುಕುವ ಕಾಲ ಈಗ ಬಂದಿದೆ. ಕೇವಲ “ಕನ್ನಡ ನಾಡಿನ ಜೀವನದಿ, ಈ ಕಾವೇರಿ” ಎಂದು ಹಾಡಿದರೆ ಅವಳು ಉಳಿಯಳು.

- ಆದರ್ಶ