ಮೊನ್ನೆ ಮೊನ್ನೆ ಮಗಳ ಸಣ್ಣ ಕೈ ಹಿಡಿದು ಹುಷಾರಾಗಿ ರಸ್ತೆ ದಾಟಿಸಿ ಸ್ಕೂಲ್ ಗೆ ಬಿಟ್ಟು ಬಂದಿದ್ದು, ಈಗಾಗಲೇ ದೊಡ್ಡವಳಾಗಿ ಅಮ್ಮನ ಕೈ ಹಿಡಿದು ಟ್ರಾಫಿಕ್ ನಲ್ಲಿ ಯಾವ ಸಿಗ್ನಲ್ ಬಿಡುತ್ತೆ ಅಂತ ನೋಡಿ ಜೋಪಾನವಾಗಿ ರಸ್ತೆ ದಾಟಿಸುವ ಹಾಗೆ ಬೆಳೆದು ನಿಂತಿದ್ದಾಳೆ. ಅಪ್ಪನ ಬೈಕಿನ ಮುಂದೆ ಕೂತು ತಾನೇ ಬೈಕ್ ಬಿಡುತ್ತಿದ್ದೇನೆ ಅನ್ನೋ ಹಾಗೆ ಬೀಗುತ್ತಿದ್ದ ಅವಳು ಈಗ, ತನ್ನ ಸ್ಚೂಟಿಯಲ್ಲಿ ಅಪ್ಪನನ್ನು ಹಿಂದೆ ಕೂರಿಸಿಕೊಂಡು “ಈ ರೋಡು ನನ್ನ ಅಪ್ಪಂದೆ" ಅನ್ನೋ ರೀತಿ ಗಾಡಿ ಓಡಿಸುತ್ತಿದ್ದಾಳೆ. ಹಬ್ಬದ ಸಮಯದಲ್ಲಿ ಅಮ್ಮನಿಂದಲೇ ಶ್ರಂಗಾರಗೊಂಡವಳು ಈಗ ಅಮ್ಮನನ್ನು ಬ್ಯೂಟಿ ಪಾರ್ಲರ್ ಕರೆದುಕೊಂಡು ಹೋಗುತ್ತಾಳೆ. ಶಿಕ್ಷಕರು ಕೊಟ್ಟ ಮನೆ ಕೆಲಸ ಮಾಡಿಲ್ಲ ಅಂತ ಅಪ್ಪನ ಹತ್ತಿರ ಪೆಟ್ಟು ತಿಂದವಳು ಈಗ ಅಪ್ಪನಿಗೇ ಮೊಬೈಲ್ ಹೇಗೆ ಬಳಸಬೇಕು ಎಂದು ಹೇಳಿಕೊಡುತ್ತಾಳೆ.

ಮಗನಿಗೆ ಅಪ್ಪ ಎಂದರೆ ಭಯ. ಅಮ್ಮನ ಹತ್ತಿರವೇ ಸಲುಗೆ. “ನಿನಗೆ ಮಗನ ಮೇಲೆ ಪ್ರೀತಿ ಜಾಸ್ತಿ“ ಅಂತ ಮಗಳು ದೂರಿದರೆ, ಮಗ "ಅಪ್ಪನಿಗೇ ನನಗಿಂತ ಮಗಳ ಮೇಲೆ ಯಾಕಿಷ್ಟು ಪ್ರೀತಿ?" ಅಂತ ಯೋಚಿಸುತ್ತಾನೆ. ಮಗಳು, ಅಪ್ಪನ ಜೇಬಿಗೆ ಕೈ ಹಾಕಿ ದುಡ್ಡು ತೆಗೆದುಕೊಂಡಷ್ಟು ಸುಲಭವಾಗಿ ಮಗನಿಗೆ ಆಗೋದಿಲ್ಲ. ತನ್ನ ಎಲ್ಲಾ ಎಡವಟ್ಟುಗಳಿಗೆ ಅಪ್ಪನಿಗೇ ಹೆದರಿ ಅಮ್ಮನ ಹಿಂದೆ ನಿಲ್ಲುತ್ತಾನೆ. ದೊಡ್ಡವನಾಗಿ ಕೆಲಸಕ್ಕೆ ಹೋದ ಮೇಲೂ ಅಷ್ಟೇ, ಅಪ್ಪನ ಎದುರು ಮಗ ಗಪ್ ಚುಪ್. ಆಸ್ಪತ್ರೆಗೋ, ಇನ್ನೆಲ್ಲಿಗೋ ಅಪ್ಪನನ್ನು ಮಗ ಬೈಕಿನ ಹಿಂದೆ ಕೂರಿಸಿಕೊಂಡು ಹೋಗುವಾಗ ಒಂದು ಅಂತರ, ನಿಶ್ಯಬ್ದ. ಇತ್ತ ಮಗಳಿಗೆ ಅಮ್ಮ ಏನೇ ಬೈದರು ಅಪ್ಪನ ಬೆಂಬಲ ಮಗಳಿಗೆ. "ಕಲಿತಾಳೆ ಬಿಡು, ನೀನು ಮದುವೆ ಆಗುವಾಗ ಹಾಗೆ ಇದ್ದೆ" ಎಂದು ಹೆಂಡತಿಗೆ ಕಾಲೆಳಿಯುತ್ತಾನೆ.

ಆದರೆ ಟಿವಿ ಸೀರಿಯಲ್ ನೋಡುವಾಗ, ಚಿನ್ನಾಭರಣದ ಜಾಹೀರಾತು ಬಂದಾಗ ಅಮ್ಮನಿಗೆ ಮಗಳೇ ಬೆಸ್ಟ್ ಫ್ರೆಂಡ್. ಯಾವುದೊ ಹೊಸ ವಸ್ತ್ರದ ವಿನ್ಯಾಸ ನೋಡಿದಾಗ ಇಬ್ಬರ ನಡುವಿನ ಮಾತುಕಥೆ ತಾರಕಕ್ಕೆ ಏರುತ್ತದೆ. ಶಾಪಿಂಗ್ ಗೆ ಅಮ್ಮನಿಗೆ ಮಗಳೇ ಒಳ್ಳೆ ಜೊತೆಗಾತಿ. ಹೊಸ ವಿನ್ಯಾಸದ ಬಟ್ಟೆ, ಚಿನ್ನ, ಅದರಲ್ಲೂ ಈ ಕಾಗೆ ಬಂಗಾರದ ಒಡವೆಗಳ ಬಗ್ಗೆ ಅಮ್ಮನ ಕಿವಿ ಚುಚ್ಚಿ ಬೇಕಾದನ್ನು ತೆಗದು ಕೊಳ್ಳುತ್ತಾಳೆ. ಮಾರ್ಕೆಟ್ಟಿಗೆ ಇಬ್ಬರೂ ಹೋದಾಗ, ತಲೆಗೆ ಹಾಕುವ ಕ್ಲಿಪ್ಪನ್ನು ಬಾಯಲ್ಲಿ ಇಟ್ಕೊಂಡು, ಎರಡು ಕೈ ಎತ್ತಿ ಮಗಳು ತಲೆ ಕೂದಲು ಕಟ್ಟಿಕೊಳ್ಳುತ್ತಿದ್ದರೆ ಅದನ್ನು ನೋಡಲು ನಾಲ್ಕಾರು ಪಡ್ಡೆಗಳು. ಇದು ಮಗಳಿಗೆ ತೋರಿಸಲು ಆಗದೆ ಇರುವಂತಹ ಸಂತೋಷ ಮತ್ತು ತೋರಿಸಿಕೊಳ್ಳುವ ಸಂಕೋಚ. ಆದರೆ “ನಾಲ್ಕು ಹುಡುಗರು ನೋಡುತ್ತಿದ್ದಾರೆ ಅಂದ ಮೇಲೆ, ನಮ್ಮ ಮಗಳು ಚೆನ್ನಾಗೆ ಇದ್ದಾಳೆ ಅಂತ ಅರ್ಥ. ಯಾವನೋ ಒಬ್ಬ ಗುಲ್ಡು ಬಂದು ಮದುವೆ ಆಗ್ತಾನೆ, ತಲೆ ಬಿಸಿ ಇಲ್ಲ” ಎನ್ನೋದು ಅಮ್ಮ ಮನಸ್ಸಿನಲ್ಲೇ ಹಾಕೋ ಲೆಕ್ಕಾಚಾರ.

ಈ ಕಡೆ ಅಪ್ಪನಿಗೇ ಕ್ರಿಕೆಟ್ ಮ್ಯಾಚ್ ನೋಡುವಾಗ ಮಗನೇ ಸಾಥ್. ಪವರ್ ಪ್ಲೇ ಅಂದ್ರೇನು, ಮಳೆ ಬಂದು ಮ್ಯಾಚ್ ನಿಂತರೆ ಯಾರು ಗೆಲ್ಲಬಹುದು, ಈಗ ಬಂದ ಹೊಸ ಆಟಗಾರ ಯಾರು? ಅವನು ಎಡ ಕೈ ಯೂ ಅಥವಾ ಬಲ ಕೈ ಯೋ? ಯಾವ ರಾಜ್ಯದವನು, ಯಾವ ಸರಣಿಯಲ್ಲಿ ಎಷ್ಟು ವಿಕೆಟ್ ಕಿತ್ತು ಗುಡ್ಡೆ ಹಾಕಿದ್ದ? ಇವೆಲ್ಲ ಮಗನೆ ಆಪ್ಪನಿಗೆ ಹೇಳಬೇಕು. ಪೂರ್ತಿ ಕೇಳೋವರೆಗೂ ಸುಮ್ಮನಿದ್ದು ಆಮೇಲೆ “ಇದೆ ಇಂಟೆರೆಸ್ಟ್ ನ ಓದೋದ್ರ ಕಡೆ ಕೊಟ್ಟಿದ್ರೆ ಉದ್ಧಾರ ಆಗ್ತಿದ್ದೆ” ಅಂತ ಅಪ್ಪ ಬೈದಾಗ್ಲು ಬೈಸಿಕೊಳ್ಳೋನು ಮಗನೆ.

ಮಗ ಮದುವೆ ಆಗಿ ಒಬ್ಬಳು ಮಗಳಾದಾಗ, ಮಗಳು ಮದುವೆ ಆಗಿ ಒಬ್ಬ ಮಗ ಆದಾಗಲೇ ಅವರಿಗೆ ಗೊತ್ತಾಗೋದು, ಅಪ್ಪನಿಗೇ ಮಗನಿಗಿಂತ ಮಗಳೇ ಯಾಕಿಷ್ಟ, ಅಮ್ಮನಿಗೆ ಮಗನೇ ಯಾಕೆ ಅಚ್ಚಮೆಚ್ಚು ಅಂತ. ಈ ಇಷ್ಟಕ್ಕೆ ಕಾರಣ ಇಲ್ಲ ಅಂತ ಗೊತ್ತಾಗೋದು ಆವಾಗಲೇನೆ. ತನ್ನ ಮಗನಿಗೆ ಕಟ್ಟುಪಾಡು ಮಾಡುತ್ತ ಅವನಿಗೆ ಅವನ ಅಪ್ಪ ಹತ್ತಿರ ಆಗುತ್ತಾನೆ, ತನ್ನ ಮಗಳಿಗೆನಿರ್ಬಂದಗಳನ್ನು ಹೇರುತ್ತ ತನ್ನ ಅಮ್ಮ ಹಾಕುತ್ತಿದ್ದ ಬೇಲಿ ಇವಳಿಗೆ ಅರ್ಥ ಆಗುತ್ತಾ ಹೋಗುತ್ತದೆ. ಈ ಚಕ್ರ ತಿರುಗುತ್ತಾ ಇರುತ್ತದೆ.


- ದೀಪಕ್ ಬಸ್ರೂರು