ಸ್ನೇಹಿತನ ಕೈ ಗಡಿಯಾರ ಕೆಟ್ಟಿತ್ತು. ವಾಚ್ ರಿಪೈರಿ ಮಾಡಲು ವಾಚ್ ರಿಪೈರಿ ಅಂಗಡಿಗೆ ಹೋಗಬೇಕಾದ್ದರಿಂದ ಅಲ್ಲಿಗೆ ಇಬ್ಬರೂ ಹೋದೆವು. ಅವನು ವಾಚ್ ರೆಪೇರಿ ಮಾಡಿಸುತ್ತಿರುವಾಗ, ನಂದೊಂದು ಕೈ ಗಡಿಯಾರದ ಬೆಲ್ಟ್ ಹೋಗಿದ್ದರಿಂದ ನಾನು ಅಂಗಡಿಯಲ್ಲಿರುವ ಇನ್ನೊಬ್ಬ ಕೆಲಸಗಾರನ ಹತ್ತಿರ ಆ ಬೆಲ್ಟಿನ ಬೆಲೆ ಎಷ್ಟಾಗುತ್ತೆ ಅಂತ ಕೇಳಿದೆ. ಅದಕ್ಕಾತ ೪೫೦ ರೂ. ಆಗುತ್ತೆ ಅಂದಾಗ ಒಮ್ಮೆಲೇ ದಿಗಿಲಾರಿತು. ಹಾಗೆ ಸಾವರಿಸಿಕೊಂಡು “ಅಣ್ಣ, ಆ ವಾಚಿನ ಬೆಲೆಯೇ ೮೦೦ ರೂ.“ ಅಂದೆ. ಅದಕ್ಕವನು “ಈಗ ಎಲ್ಲದರ ಬೆಲೆ ಜಾಸ್ತಿ ಆಗಿದೆ ಸರ್” ಎಂದ. ಹಾಗೆ ಮುಂದುವರೆದು “ಬೆಲ್ಟ್ ಹಾಕಿ ಕೊಡ್ಲ?” ಎಂದು ಕೇಳಿದ . ಅದಕ್ಕೆ ನಾನು “ಬೇಡ ಬಿಡಿ, ಅಷ್ಟು ದುಡ್ಡು ಕೊಟ್ಟು ಬೆಲ್ಟ್ ಹಾಕಿಸಿ, ಕೈ ಗೆ ಕಟ್ಟಿಕೊಂಡರೆ ನನಗೆ ಟೈಮೇ ಕಾಣಲ್ಲ. ನಾನು ವಾಚ್ ಕಟ್ಟಿಕೊಂಡು ಏನಾಗಬೇಕಿದೆ? ಮೊದಲೇ ನನ್ ಟೈಮ್ ಬೇರೆ ಸರಿ ಇಲ್ಲ!!” ಎಂದೆ. ಇತ್ತ ನನ್ನ ಸ್ನೇಹಿತನ ಕೆಲಸ ಆಗಿದ್ದರಿಂದ ಇಬ್ಬರೂ ಅಲ್ಲಿಂದ ಆಚೆ ಬಿದ್ವಿ.

ಆಚೆ ಬಿದ್ದೊಡನೆ ಸ್ನೇಹಿತ ನನಗೆ ಬಯ್ಯಲು ಶುರು ಮಾಡಿದ “ನೀನು ಟೈಮ್ ಸರಿ ಇಲ್ಲ ಅಂತ ಯಾಕೋ ಅಂದ್ಕೊಳ್ತಿಯ? ಯಾಕೆ ಬರೀ ನೆಗೆಟಿವ್ ಯೋಚನೆಗಳನ್ನೇ ಮಾಡ್ತಿಯ? ಯಾವತ್ತು ಯಾವುದಕ್ಕೂ ಆಗಲ್ಲ ಅನ್ನಬಾರದು, ಆಗುತ್ತೆ ಅನ್ನಬೇಕು” ಇನ್ನೂ ಏನೇನೋ ಹೇಳೋಕೆ ಶುರು ಮಾಡಿದ. ನಾನು ‘ಇವ್ನೇನು ಗುರು, ಒಳ್ಳೆ ಪಬ್ಲಿಕ್ ಟಿವಿ ಎಚ್.ಆರ್.ರಂಗನಾಥ್ ಥರ ಮಾತಾಡ್ತವ್ನೆ’ ಅಂತ ತಲೆ ಕೆರೆದುಕೊಂಡೆ. “ಲೇ ಆಗ್ದೆ ಇರೋದನ್ನ ಆಗುತ್ತೆ ಅನ್ನೋಕ್ಕೆ, ಇಲ್ದೆ ಇರೋದನ್ನ ಇದೆ ಅಂಥ ಭಾವಿಸಿಕೊಳ್ಳೋಕೆ ನಾನೇನು ರಂಗಿತರಂಗ ಸಾಯಿಕುಮಾರ? ಅಮಿಕೊಂಡ್ ಬಾ ಪ..” ಎಂದು ಜೋರು ಮಾಡಿ ಆ ವಿಷಯವನ್ನು ಅಲ್ಲೇ ಮುಗಿಸಿದೆ.

ಇಲ್ಲಿ ನಾನು ಅಂತ ಅಲ್ಲ, ನನ್ನಂತ ಎಷ್ಟೋ ಜನರು ಈ ರೀತಿಯಲ್ಲೇ ಇರುತ್ತಾರೆ. ಸಿಕ್ಕಾಪಟ್ಟೆ ಉಡಾಫೆ ಮಾತು, ನಡವಳಿಕೆಯ ಜೀವನ. ಯಾವುದೊ ಒಂದು ಗುರಿ ಇಟ್ಟುಕೊಂಡು, ಅದರ ಕಡೆಗೆ ಸಾಗಲು ಉಸಿರು ಬಿಗಿ ಹಿಡಿದು ಕೆಲಸ ಮಾಡಿ ಅಗಣ್ಯರಾಗಿ ಬದುಕುವುದಕ್ಕಿಂತ, ನಗಣ್ಯರಾದರೂ ಸರಿ ಸಾದಾ ಸೀದ ಬದುಕಬೇಕು ಎಂದುಕೊಳ್ಳುವವರು. ನೀವು ಹೇಗೆ ಬದುಕಲ್ಲಿ ಒಂದು ಸೀರಿಯಸ್ನೇಸ್ಸ್ ಬೇಕು, ಒಂದು ಬದ್ಧತೆ ಇರಬೇಕು ಅಂದುಕೊಳ್ಳುತ್ತೀರೋ , ಹಾಗೆ ನಾವು ಕೂಡ ಜೀವನದ ಮೇಲೆ ಒಂದು ಸಣ್ಣ ನಿರ್ಲಕ್ಷ ಇರಬೇಕು ಎಂದುಕೊಳ್ಳುವವರು. ಈಗ ನಾವು ನಿಮಗೆ ‘ಈ ಲೈಫು ಇಷ್ಟೇನೆ’ ಅಂತ ಹೇಳಿದರೆ,ನೀವು ಅದಕ್ಕೆ “ಛೆ, ಇದು ನೆಗೆಟಿವ್ ಯೋಚನೆ, ನೀನಂದುಕೊಂಡಷ್ಟು ಜೀವನ ಕಷ್ಟ ಅಲ್ಲ, ಜೀವನ ಅಂದರೆ ಹಾಗೆ, ಹೀಗೆ“ ಅಂತೆಲ್ಲ ಬೊಬ್ಬೆ ಹೊಡೆಯುದಿಲ್ವ? ಅಷ್ಟಕ್ಕೂ ನಾವೇನಾದರೂ “ಈ ಜೀವನ ಕಷ್ಟ ಗುರು” ಅಂದ್ವ?. ಈಗ ಒಂದು ಗಣಿತದ ಲೆಕ್ಕವೇ ತೆಗೆದುಕೊಳ್ಳಿ. ಬಹಳ ಹೊತ್ತು ತಲೆ ಕೆರೆದುಕೊಂಡು ಬಿಡಿಸಿದ ಬಳಿಕ ಅದರ ಉತ್ತರ, ಮಾಡುವ ವಿಧಾನ ಗೊತ್ತಾಗುತ್ತದೆ. ಆಗ ನೀವು “ಇದು ಇಷ್ಟೇನಾ ಮರ್ರೆ. ಇಷ್ಟಕ್ಕೆ ಇಷ್ಟೆಲ್ಲಾ ಒದ್ದಾಡಿದ್ದ” ಅಂತ ಅಂದುಕೊಳ್ಳುದಿಲ್ವ? ನಮಗೂ ಹಾಗೇನೆ. ಜೀವನ ಅಂದ್ರೆ ಲೆಕ್ಕ ಇದ್ದಂಗೆ. ಗೊತ್ತಾಗೊವರೆಗೂ ಕಷ್ಟಾನೆ, ಆಮೇಲೆ ಲೈಫು ಇಷ್ಟೇನೆ..!!!

ಏನೇ ಹೇಳಿ, ಆಚೆ ಪ್ರಪಂಚದಲ್ಲಿ ಒಂದು ರೇಸ್ ನಡೀತಾ ಇದೆ. ನಾವು ಆ ರೇಸ್ನಲ್ಲಿ ಇಲ್ಲ. ನಮಗಂತು ನಮ್ಮ ಯೋಗ್ಯತೆ ಮೀರಿದ್ದು ಯಾವುದೂ ಸಿಗುವುದು ಬೇಡ. ನೀವು ಓಡಿ, ಬೀಳಿ, ಬಿದ್ದವರ ಮೇಲೆ ಹತ್ತಿಕೊಂಡು ಓಡಿ, ಗುರಿ ಮುಟ್ಟಿ. ನಾವ್ ಬರೋದು ಸ್ವಲ್ಪ ಲೇಟ್ ಆಗ್ಬೋದು, ಹಂಗೆ ಕಾಯ್ತಾ ಇರಿ...

- ದೀಪಕ್ ಬಸ್ರೂರು