ಬದಲಾವಣೆ
by Adarsha
ಪ್ರಕೃತಿಯಲ್ಲಿ ವಿಕಸನ ಆಗುವಾಗ ಬದಲಾವಣೆಯ ರೂಪ ಇದೇ ರೀತಿ ಇರಬೇಕು ಎಂದು ಯಾರೂ ನಿಯಮ ಬರೆದು, ಆ ವಿಕಸನದ ಪರಿಣಾಮವನ್ನು ನಿಯಂತ್ರಿಸಲು ಆಗುವುದಿಲ್ಲ. ನಾವು ಒಂದು ಬೀಜವನ್ನು ಬಿತ್ತಿ, ನೀರು-ಗೊಬ್ಬರ ಹಾಕಿ, ಯಾವುದೇ ಹಾನಿಯಾಗದಂತೆ ಗಿಡವನ್ನು ನೋಡಿಕೊಂಡು, ಬೆಳೆಸಿ ಮರವಾದ ನಂತರವೂ ಆ ಮರದ ರೆಂಬೆ, ಕೊಂಬೆಗಳು ನಾವು ಚೌಕಟ್ಟು ಹಾಕಿ, ಗೀಟೆಳೆದು, ‘ಸ್ಕೇಲ್’ ಹಿಡಿದು ಬಿಡಿಸಿದ ಮರದ ನಕ್ಷೆಯಂತೆ ಬೆಳೆಯುವುದಿಲ್ಲ.
ವಿಕಸನದ ಪರಿಣಾಮವೂ ಸಹ ಹಾಗೆಯೇ, ಯಾರ ನಕ್ಷೆಯಂತೆ ರೂಪುಗೊಳ್ಳದೆ ಸಂದರ್ಭ, ವಾತಾವರಣ, ಅನಿವಾರ್ಯತೆಗಳಿಗೆ ತಕ್ಕಂತೆ ಆಗಿರುತ್ತದೆ. ಮೂಡಿದ ಹತ್ತು ಬಂಡೆಗಳಲ್ಲಿ ಯಾವೊಂದು ಬಂಡೆಯನ್ನೂ ನಾವು ‘ಅದು ಸರಿಯಲ್ಲ’ ಎಂದು ಅಲ್ಲೆಗಳೆಯುವ ಹಾಗಿಲ್ಲ. ಎಲ್ಲವೂ ಚಿತ್ರವೇ, ಎಲ್ಲವೂ ಪವಿತ್ರವೇ. ಆದರೆ ಎಲ್ಲದರ ಅಧ್ಯಯನ ಮಾಡುವ ನಮ್ಮ ಸಮಾಜದಲ್ಲಿ ಸಮಾನತೆ ಎಂಬುದು ಸೇರಿಕೊಳ್ಳಲೇ ಇಲ್ಲ. ಶಕ್ತಿ ಯುಕ್ತಿಯನ್ನು ಮೀರಿ, ಅಹಂಕಾರ ವಿವೇಕವನ್ನು ಮೀರಿ ನಿಂತ ಸಮಾಜವನ್ನು ಕಟ್ಟಿ ನಿಲ್ಲಿಸಿದ್ದೇವೆ. ಎಲ್ಲರಂತಲ್ಲದ ಯಾರನ್ನೂ ನಾವು ನಮ್ಮ ಸಮಾನರಾಗಿ ಬದುಕಲು ಬಿಡುತ್ತಿಲ್ಲ. ಪ್ರಕೃತಿಯ ಸಂಭೋಗದ ಫಲವಾಗಿಯೇ ನಮ್ಮಂತೆಯೇ ಬಂದ ಅವರನ್ನು ನಾವು ಒಪ್ಪುತ್ತಿಲ್ಲ. ನಪುಂಸಕರೆಂದರೆ ಎಲ್ಲರಿಗೂ ಅಸಡ್ಡೆ, ಅವರು ಬಂದರೆ, ದೂರದಿಂದ ಕಂಡೊಡನೆ ನಾವು ಪ್ರಳಯಾನೆ ಬರುತ್ತಿರುವಂತೆ ಹೆದರಿ ದಿಕ್ಕಾಪಾಲಾಗಿ ಓಡುತ್ತೇವೆ. ಇನ್ನು ಕೆಲವರು ಅವರನ್ನು ಬಹಳ ಕೀಳಾಗಿ ಕಾಣುತ್ತಾರೆ. ಅಲ್ಲಿಗೆ ನಮ್ಮೆಲ್ಲ ಸಂಶೋಧನೆ, ತತ್ವಗಳ ರಚನೆ ಒಂದೇ ಬಾರಿಗೆ ಮಣ್ಣಲ್ಲಿ ಮುಚ್ಚಿದಂತಾಯಿತು. ಅವಕಾಶ ಕೊಟ್ಟರೆ ಅವರೂ ನಮ್ಮ ಹಾಗೆ ದುಡಿದು ಬದುಕುವ ಮಾರ್ಗ ಹಿಡಿಯುತ್ತಿದ್ದರೆನೋ? ಆದರೆ ನಾವು ಅವರನ್ನು ನೆರಳೇ ಬೀಳದ ಮೂಲೆಯಲ್ಲಿ ಭಿಕ್ಷೆಯನ್ನು ಬೇಡಲು ಕೂರಿಸಿದ್ದೇವೆ.
ಜನರಲ್ಲಿ ಪ್ರಿಯವಾಗಿ ಉಳಿದಿರುವ ದೃಷ್ಟಿಯನ್ನು ಬಿಟ್ಟು ಉಳಿದವರು ಕಂಡಂತೆ ಕೆಲವು ಘಟನೆಗಳು ನಮಗೆ ಕಾಣುತ್ತಲೇ ಇರುತ್ತವೆ. ಒಮ್ಮೆ ನನ್ನ ಗೆಳೆಯನಿಗೆ ಅಡ್ಡವಾಗಿ ಸಿಕ್ಕ ತೃತೀಯ ಲಿಂಗೀಯರು ಅವನ ಬಳಿ ಇದ್ದ ೩೦ರೂ ಅನ್ನು ಕಿತ್ತುಕೊಂಡು ಹೋಗಿದ್ದರು. ದುಡ್ಡಿಲ್ಲದೆ ಮನೆಗೆ ಹೋಗಲಾರದೆ ಅವನು ಅದೇ ಜಾಗದಲ್ಲಿ ಕುಳಿತಿದ್ದಾಗ ಬಂದ ಆ ಗುಂಪಿನ ಮತ್ತೊಬ್ಬ ತೃತೀಯ ಲಿಂಗದವರು ಇವನನ್ನು ಅಲ್ಲೇ ಇರುವ ಕಾರಣ ವಿಚಾರಿಸಿ ತಿಳಿದಾಗ, ಇವನನ್ನು ಕರೆದುಕೊಂಡು ಹೋಗಿ ಅವರ ಕಡೆಯವರಿಂದ ಇವನ ಹಣವನ್ನು ಹಿಂದಿರುಗಿಸಿದ್ದರು. ಮತ್ತೊಂದು ದಿನ ಜನನಿಬಿಡ ರಸ್ತೆಯಲ್ಲಿ ಕುರುಡರೊಬ್ಬರು ರಸ್ತೆ ದಾಟುವಾಗ, ತೃತೀಯ ಲಿಂಗದವರೊಬ್ಬರು ತಾವಾಗೆ ಮುಂದೆ ಹೋಗಿ ಆ ಕುರುಡನ ಕೈ ಹಿಡಿದು ನಡೆಸಿ ರಸ್ತೆಯನ್ನು ದಾಟಿಸಿದ್ದರು. ಇನ್ನೊಂದು ದಿನ ಸಂಜೆ ನಾನು ಕೆಲಸದಿಂದ ಸೈಕಲ್ ನಲ್ಲಿ ಹಿಂದಿರುಗುವಾಗ ದೂರದಲ್ಲಿ ಯಾರೋ ರಸ್ತೆ ಬದಿಯ ಪೋದೆಗೆ ಕೈ ಮುಗಿದು ನಿಂತಿರುವುದು ಕಾಣುತ್ತಿತ್ತು. “ಈ ರಸ್ತೆಯಲ್ಲಿ ಯಾರಪ್ಪ ಅದು, ನಿಂತು ಗಿಡಕ್ಕೆ ಕೈ ಮುಗಿಯುತ್ತಿರೋರು” ಎಂದು ಯೋಚಿಸುವಷ್ಟರಲ್ಲೇ ನಾನು ಅವರ ಹತ್ತಿರಕ್ಕೆ ಬಂದಿದ್ದೆ. ಆ ಪೊದೆಯ ಕಡೆ ನೋಡಿದಾಗ ಸತ್ತು ಬಿದ್ದಿದ್ದ ನಾಯಿಯು ಕಂಡಿತು. ಇವರು ಅದರ ದೇಹದ ಮೇಲೆ ಹೂವನ್ನು ಹಾಕಿ ಅದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದರು. ನಮ್ಮಲ್ಲಿ ಎಷ್ಟು ಜನಕ್ಕೆ ಈ ರೀತಿ ಮಾಡುವ ಮನಸ್ಸಿದೆ?
ನಾವು ಯಾವಾಗಲೂ ರಾವಣನ ಒಂದು ಕೆಟ್ಟ ಮುಖವನ್ನು ನೋಡಿ ಅವನನ್ನು ದೋಷಿಸುತ್ತೇವೆ, ಆದರೆ ಅವನ ಉಳಿದ ಒಂಭತ್ತು ಒಳ್ಳೆ ಮುಖಗಳನ್ನು ನೋಡಲು ಮರೆಯುತ್ತೇವೆ. ಸದಾ ಕಾಲ ಭಿಕ್ಷೆ ಬೇಡಿ ಜೀವನ ನಡೆಸಲು ಯಾರಿಗೆ ತಾನೇ ಮನಸ್ಸಿರುತ್ತೆ? ಬೇರೆ ಕೆಲಸ ಮಾಡಲು ಅವಕಾಶ ಬೇಕು ಅಷ್ಟೇ. ವಿಕಸನ, ಬದಲಾವಣೆ ಒಂದೇ ದಿನಕ್ಕೆ ಆಗುವುದಿಲ್ಲ, ಆದರೆ ಉತ್ತಮ ಬದಲಾವಣೆಗೆ ಸಮಾಜ(ನಾವು) ಮುಖ ಮಾಡಬೇಕು ಅಷ್ಟೆ. ಅಲ್ಲಿಯವರೆಗೆ ಅಳಿಲು ಸೇವೆಯಂತೆ ನಮ್ಮ ಧೋರಣೆ ಬದಲಿಸಿಕೊಳ್ಳಬೇಕು.
ನಮ್ಮ ಬಳಿ ಇರುವ ನೂರು ರುಪಾಯಿ ಕಳೆದು ಹೋದರೆ ನಾವು ಬೀದಿಗೆ ಬರುವುದಿಲ್ಲ, ಅದೇ ನಮ್ಮ ಬಳಿ ಇದ್ದ ನೂರು ರುಪಾಯಿ ಕೊಟ್ಟರೆ ಕೆಲವರು ಬೀದಿಯಲ್ಲಿ ಇರೋದಿಲ್ಲ!
- ಆದರ್ಶ