ಮೆಟ್ರೊ ಕಾರ್ಡ್ ಇದ್ದ ಪರ್ಸನ್ನು ಸೆನ್ಸಾರ್ ಮೇಲೆ "ಇದು ನಂದಲ್ಲ" ಎನ್ನೋ ರೀತಿ ಬಿಸಾಕಿ, ಅದು ಬಾಗಿಲನ್ನು ತೆಗೆದ ಕೂಡಲೇ "ಇದು ನಂದೆ" ಅಂತ ಮತ್ತೆ ತೆಗೆದುಕೊಂಡೆ. ಅದಕ್ಕೆ ಅಲ್ಲಿದ್ದ ಮೆಟ್ರೊ ಸಿಬ್ಬಂದಿಯೂಬ್ಬಳು "ಪರ್ಸನ್ನು ಸ್ವಲ್ಪ ನಿಧಾನಕ್ಕೆ ಇಡಿ ಸರ್" ಎಂದಾಗ, ನಾನು "ಅಯ್ಯೋ ಬಿಡಿ, ಲವ್ವ್ನಲಿ ನಿಧಾನಕ್ಕೆ ಇಟ್ರೆ ದುಡ್ಡೇನು ಕಟ್ ಆಗೋದು ಕಡಮೆ ಆಗುತ್ತಾ?" ಅಂಥ ಕೇಳಿದ್ಕೆ, ಅವ್ಳು ನಕ್ಕು ಸುಮ್ಮನಾದಳು. ಅವಳ ಮೂಗುತಿ ಆ ನಗುವಿನ ಚಂದವನ್ನು ಇನ್ನೂ ಜಾಸ್ತಿ ಮಾಡಿದ್ದರೆ, ಮೂಗುತಿ ಹುಡುಗಿಯನ್ನು ನಗಿಸಿದ ಪುಣ್ಯ ನನಗೆ.

ಎಷ್ಟೋ ಬಾರಿ ಹುಡುಗಿ ಮುಖಕ್ಕಿಂತ, ಅವಳ ಮೂಗುತಿ ಹೆಚ್ಚು ಆಕರ್ಷಿಸುತ್ತದೆ. ಹತ್ತಿರ ಇರುವ ಹುಡುಗಿ ಮೂಗುತಿಯನ್ನು ಧರಿಸಿದ್ದರೆ, ಅದರಲ್ಲಿ ನನ್ನ ಮುಖ ಏನಾದ್ರು ಕಾಣುತ್ತ ಅಂಥ ಹುಡುಕ್ತಿನಿ. ಮೂಗು ನೋಡಿ ಅರ್ಧ ಸೋತೆ, ಮೂಗುತಿ ನೋಡಿ ಪೂರ್ತಿ ಸತ್ತೇ ಅನ್ನೋದು ನನ್ನ ಪಾಡು. ಇನ್ನು ಈ ಮೂಗುತಿ ವಿಚಾರ ತಡಕಾಡಿದರೆ ಅದು ಒಂದು ಅಡುಗೋಲಜ್ಜಿಯ ಕಥೆ ಆಗುತ್ತದೆ. ಈಗ ಅದನ್ನು ಹಾಕುವವರು ಹಳ್ಳಿಯವರು ಅನ್ನೋ ಭಾವನೆ ಬಂದು ಬಿಟ್ಟಿದೆ. ಮೊನ್ನೆ ನಮ್ಮ ಮನೆಯ ಒಂದು ಸಮಾರಂಭದಲ್ಲಿ ಒಬ್ಬಳು ಹುಡುಗಿಗೆ ಒಂದು ಅಜ್ಜಿ ಮೂಗುತಿ ಯಾಕೆ ಹಾಕ್ಕೊಂಡಿಲ್ಲ? ಎಂದು ಕೇಳಿದಾಗ ಆಕೆ "ಜೀನ್ಸ್ ಪ್ಯಾಂಟ್ ಗೆ ಅದು ಮ್ಯಾಚ್ ಆಗೋಲ್ಲ ..." ಎಂದಿದ್ದಳು. ಅದಕ್ಕೆ ಆ ಅಜ್ಜಿ "ಅವಳ್ಯಾರೊ ಟೆನ್ನಿಸ್ ಆಡೋಳು ಚಡ್ಡಿ ಹಾಕ್ಕೊಂಡೇ ಮೂಗುತಿ ಹಾಕೂತ್ತಾಳೆ, ನಿಂಗೆ ಪ್ಯಾಂಟ್ ಹಾಕ್ಕೊಂಡು ಹಾಕೋಕೆ ಏನ್ ರೋಗ" ಎಂದಾಗ ಆ ಹುಡುಗಿ ಪೆಚ್ಚಾಗಿದ್ದಳು.

ಇನ್ನಾ ಈ ಮೂಗುತಿಗೆ ನತ್ತು, ಮೂಗು ಬೊಟ್ಟು ಇನ್ನೂ ಏನೇನೋ ಹೆಸರಿದೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ತಮ್ಮ ಮೂಗಿನ ಎಡ ಕಡೆ ಮೂಗುತಿ ಧರಿಸಿದರೆ, ಕೆಲವು ರಾಜ್ಯದಲ್ಲಿ ಮೂಗಿನ ಬಲ ಕಡೆ ಹಾಕುತ್ತಾರೆ. ಅಂದರೆ ಪ್ರದೇಶ ಬದಲಾದಂತೆ ಮೂಗುತಿ ಹಾಕುವ ಮೂಗಿನ ಪ್ರದೇಶ ಕೂಡ ಬದಲಾಗುತ್ತೆ ಅಂತ ಆಯ್ತು!! ಮುಖ್ಯವಾಗಿ ಹೆಣ್ಣು ಮಕ್ಕಳ ಚಂಚಲತೆ, ಹಠ ಕಡಿಮೆ ಆಗಲಿ ಎಂದು ಮೂಗು ಚುಚ್ಚುತ್ತಾರೆ. ಇದು ಒಂತರ ಕುದುರೆಗೆ ಲಗಾಮು ಹಾಕಿದಂತೆ ಅಂತೆ. ಹಾಗಂತ ಮೂಗು ಚುಚ್ಚಿಸಿಕೂಂಡವರೆಲ್ಲಾ ಹಠ ಬಿಟ್ಟಿದ್ದಾರೆ ಅಂತ ಏನಲ್ಲ. ನಂಬಿಕೆ ಅಷ್ಟೇ ನೋಡಿ.

ಆದ್ರೆ ಈಗ ಸ್ವಲ್ಪ ಕಾಲ ಬದಲಾಗಿದೆ. ಸಂಸ್ಕ್ರತಿ ಹೆಸರಲ್ಲಿ ನೇರವಾಗಿ ಹೇಳಿದರೆ ಕೇಳದ ಹೆಣ್ಣು ಮಕ್ಕಳು, ಫ್ಯಾಷನ್ ಅನ್ನೋ ಹೆಸರಲ್ಲಿ ಉಲ್ಟಾ ಪಲ್ಟಾ ಹೇಳಿದರೆ ಬೇಗ ಕೇಳುತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ಼ ಮೂಗುತಿ ಹಾಕೋದು ಫ್ಯಾಷನ್ ಆಗಿದೆ. ಹಾಗೇ ಮೂಗುತಿ ಕೂಡ ಬೇರೆ ಬೇರೆ ಫ್ಯಾಷನ್ನಲ್ಲಿ ಸಿಗ್ತಾ ಇದೆ ಅನ್ನಿ. ಆದರೂ ಏನೇ ಹೇಳಿ, ಅಷ್ಟು ದೊಡ್ಡ ಮೂಗಿಗೆ ಮೂಗುತಿ ಭಾರ ಆಗೋಲ್ಲ ಅಲ್ವ?

- ದೀಪಕ್ ಬಸ್ರೂರು