ಇತ್ತೀಚಿನ ದಿನಗಳಲ್ಲಿ ಕನ್ನಡ ಉಳಿಸಿ ಬೆಳೆಸಿ ಎಂಬ ಕೂಗು ಹೆಚ್ಚಾಗುತ್ತಿದೆ. ಜೊತೆಗೆ ಕರ್ನಾಟಕಕ್ಕೆ ಪ್ರತಿ ಬಾರಿ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ ಎಂಬ ವಿಷಯ ಸಹ ನಮ್ಮನ್ನು ಇನ್ನೊಂದು ರೀತಿ ಬೇಸರ ಪಡಿಸುತ್ತಿರುತ್ತದೆ. ಇದಕ್ಕೆ ಅನೇಕ ಕಾರಣಗಳು ಅಂಶಗಳು ಕನ್ನಡಿಗರ ಹಿನ್ನೆಡೆಗೆ ಕಾರಣವಾಗಿರಬಹುದು. ಇವುಗಳ ಜೋತೆಗೆ ಇತಿಹಾಸ ಸಹ ನಮ್ಮ ಇಂದಿನ ಈ ಸ್ಥಿತಿಗೆ ಬಹುಮುಖ್ಯ ಕಾರಣ ಎನ್ನುವುದ ನಾವು ಮರೆಯುತ್ತಿದ್ದೇವೆ. ಇತಿಹಾಸದಲ್ಲಿ ನಡೆದ ಘಟನೆ ಪ್ರಭಾವಗಳ ಮೀರಿ ನಿಲ್ಲಲು ಕನ್ನಡಿಗರು ಹಾಗು ಕರ್ನಾಟಕದ ರಾಜಕೀಯ ನಾಯಕರು ಹೆಚ್ಚಾಗಿ ಶ್ರಮಿಸಲಿಲ್ಲ ಎನ್ನುವುದು ನಮ್ಮ ನೋವು!

ಇದಕ್ಕೆ ಪೂರಕವಾದ ವಿಷಯಗಳನ್ನು ಬಿ. ಏನ್. ಶಂಕರ್ ರಾವ್ ರವರು ತಮ್ಮ ಪುಸ್ತಕ “TWENTHIETH CENTURY KANNADA PEOPLE” ಎಂಬ ಪುಸ್ತಕದಲ್ಲಿ ಬಹಳ ಸೊಗಸಾಗಿ ವಿವರಿಸಿ ಹೇಳಿದ್ದಾರೆ. ಇಲ್ಲಿ ಇರುವ ಸುಮಾರು ವಿಷಯಗಳು ಆ ಪುಸ್ತಕದಿಂದ ಆಯ್ದ ವಿಷಯಗಳಾಗಿವೆ.

ಕರ್ನಾಟಕವು ಅನಾದಿ ಕಾಲದಿಂದಲೂ ಎಲ್ಲ ಜನಗಳ ಪೋಷಿಸುವ ನಾಡಾಗಿತ್ತು, ಆದ ಕಾರಣ ಇಲ್ಲಿ ಕನ್ನಡ ಮಾತಾಡುವ ಜನರ ಜೊತೆ, ತೆಲುಗು, ತಮಿಳು, ಮರಾಟಿ, ಮಲೆಯಾಳ ಹಾಗು ಇತರೆ ಭಾಷೆಯ ಜನ ಎಲ್ಲಾ ಊರುಗಳಲ್ಲಿ ಸಿಗುತ್ತಾರೆ. ಬೆಂಗಳೂರಿನಲ್ಲಂತೂ ಕನ್ನಡ ಮಾತಾಡುವ ಜನಕ್ಕಿಂತ ಬೇರೆ ಭಾಷೆ ಮಾತಾಡುವ ಜನ ಹೆಚ್ಚಾಗಿ ಸಿಗುತ್ತಾರೆ. ಈಗ ಕರ್ನಾಟಕದಲ್ಲಿ ಇರುವ ಹೆಚ್ಚಿನ ದೊಡ್ಡಮಟ್ಟದ ಉದ್ಯಮಗಳ ಒಡೆಯರುಗಳು ಕನ್ನಡದವರಲ್ಲ, ಬೇರೆ ಊರಿನಿಂದ ಬಂದವರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಗಳಲ್ಲಿ ಬಂಗಾರ ಮಾರಿದ ಜನರ ಕುಲದವರು ಇಂದು ಬೇರೆ ಊರಿನಿಂದ ಬಂದ ಜನರ ಕೆಳಗೆ ಕೆಲಸ ಮಾಡುವಂತಾಗಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅಳಿವಿಗೆ ಕಾರಣವಾದ ಯುದ್ಧಗಳಲ್ಲಿ ಬಹಳ ಸಂಖ್ಯೆಯಲ್ಲಿ ಕನ್ನಡಿಗರ ಮರಣವಾಗಿತ್ತು, ಅದಾದ ನಂತರ ಉದ್ಯಮಗಳಲ್ಲಿ ಮತ್ತೆ ಮೇಲೇಳಲು ಕನ್ನಡಿಗರಿಗೆ ಪ್ರೋತ್ಸಾಹಿಸುವ ರಾಜರು ಸಿಕ್ಕಲಿಲ್ಲ. ಅದರ ಹೊಡೆತಕ್ಕೆ ಸಿಕ್ಕ ಕನ್ನಡಿಗರು ಉದ್ಯಮ, ಕಲೆ, ವಿಜ್ಞಾನಗಳಂಥ ವಿಷಯಗಳಲ್ಲಿ ಚೇತರಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಾಗಲಿಲ್ಲ. ಹಂಪೆಯಲ್ಲಿ ಉತ್ತಮ ರೀತಿಯ ಕೃಷಿ, ಕುಡಿಯುವ ನೀರಿನ ಸೌಕರ್ಯ ಒದಗಿಸಲು ಕಾಲುವೆ, ಹೊಂಡಗಳ ನಿರ್ಮಾಣ ಮಾಡಿದಂಥ ಕುಶಲಕರ್ಮಿಗಳು ಮಾಯವಾಗಿದ್ದರು. ಇದರ ಬೆನ್ನಲ್ಲೇ ಮೈಸೂರು ಹಾಗು ಕಿತ್ತೂರಿನಂಥಹ ರಾಜ್ಯಗಳ ಸೋಲುಂಟಾಯಿತು. ಇದು ಸಹ ಕರ್ನಾಟಕಕ್ಕೇ ದೊಡ್ಡ ನಷ್ಟವಾಯಿತು. ಇದರ ಮಾಸುವ ಮೊದಲೇ ಮತ್ತೆ ೧೮ನೇ ಶತಮಾನದಲ್ಲಿ ನಡೆದ ೧೦ ಯುದ್ಧಗಳು ಕನ್ನಡಿಗರ ಸಂಖ್ಯೆಯನ್ನು ಇನ್ನೂ ಇಳಿಸಿತು. ವಿಜಯನಗರದ ನಂತರ ಪರಕೀಯರ ಆಗಮನದಿಂದ ಇದ್ದ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಯಿತು. ಮೈಸೂರು ಸಂಸ್ಥಾನ ಬಿದ್ದ ನಂತರ ಬ್ರಿಟಿಷರು ಕರ್ನಾಟಕದ ಭಾಗಗಳ ಸೇರಿಸಿ ಮೈಸೂರು ಪ್ರೆಸಿಡೆನ್ಸಿ ಮಾಡುವ ಬದಲು, ಕರ್ನಾಟಕವನ್ನು ಛಿದ್ರವಾಗಿಸಿ ಎಲ್ಲ ಭಾಗಗಳನ್ನು ಬಾಂಬೆ, ಮದ್ರಾಸು, ಹೈದರಾಬಾದು ಗಳಿಗೆ ಹಂಚಿಬಿಟ್ಟರು. ಅಂದು ಮೈಸೂರು ಪ್ರೆಸಿಡೆನ್ಸಿ ಅಂತ ಏನಾದರು ಹುಟ್ಟಿದ್ದರೆ ಇಂದಿನ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಯುದ್ಧಗಳು ಹಾಗು ಪರಕೀಯರ ಜೊತೆಗೆ ಪ್ರಕೃತಿಯೂ ಸಹ ಕರ್ನಾಟಕದ ಜನರ ವಿರುದ್ಧ ನಿಂತಂತಿತ್ತು. ಇಲ್ಲಿರುವ ಇಸವಿಗಳಲ್ಲಿ ಕರ್ನಾಟಕದ ಜನಸಂಖ್ಯೆಯ ಗಮನಿಸಿ.


ಇಸವಿ ಜನಸಂಖ್ಯೆ
೧೮೫೬ ೮೦ ಲಕ್ಷ
೧೯೦೧ ೧.೩೧ ಕೋಟಿ
೧೯೧೧ ೧.೩೫ ಕೋಟಿ
೧೯೧೧ ೧.೩೩ ಕೋಟಿ


೧೯೧೧ ರಿಂದ ೧೯೨೧, ಈ ಹತ್ತು ವರ್ಷಗಲ್ಲಿ ೨೦ ಲಕ್ಷ ಜನರ ಮರಣವಾಗಿತ್ತು. ೧೮೭೬ ರಲ್ಲಿ ಪ್ಲೇಗ್ ನಿಂದ ಮೈಸೂರಿನಲ್ಲಿ ಸುಮಾರು ೧೧ ಲಕ್ಷ ಜನರು ಸತ್ತಿದ್ದರು. ೧೯ನೇ ಇಸವಿಯಲ್ಲಿ ಅತೀವ ಬರಗಾಲದಿಂದ ಸುಮಾರು ೨೦ ಲಕ್ಷ ಜನ ಸಾವನ್ನಪ್ಪಿದ್ದರು. ಕರ್ನಾಟಕದ ಜನರ ಮೇಲೆ ಇದು ಮತ್ತೊಂದು ಪ್ರಹಾರವಾಗಿತ್ತು.

ಸ್ವಾತಂತ್ರ್ಯ ಬಂದ ನಂತರವೂ ಸಹ ಕರ್ನಾಟಕದ ಸ್ಥಿತಿ ಹೆಚ್ಚಾಗಿ ಏನೂ ಬದಲಾಗಲಿಲ್ಲ. ರಾಜಕೀಯ ಧ್ರುಡತೆಯ ಕೊರತೆ ಹಾಗು ಜನರ ನಿರಾಸಕ್ತಿಯಿಂದ ಕನ್ನಡಿಗರು ಕರ್ನಾಟಕದಲ್ಲಿ ನಿಯಂತ್ರಿಸುವ ಶಕ್ತಿಯಾಗಿಯಾಗಲಿ, ದೊಡ್ಡ ಉದ್ಯಮಿಗಳಾಗಿಯಾಗಲಿ ಬೆಳೆಯಲಿಲ್ಲ. ಕಡೇ ಪಕ್ಷ ೬೦ ವರುಷಗಳ ಹಿಂದೆ ಕರ್ನಾಟಕ ರಾಜ್ಯದ ಸ್ಥಾಪನೆ ಆದಾಗ ಕನ್ನಡಿಗರು ಉದ್ದಿಮೆಗಳ ಹುಟ್ಟುಹಾಕಿ, ನಡೆಸಿ, ಬೆಳೆಸಲು ಸರಕಾರದಿಂದ ವಿಶೇಷ ವಿನಾಯಿತಿ ಹಾಗು ತಕ್ಕ ಇಲಾಖೆ ಸ್ಥಾಪನೆಯಾಗಿದ್ದಿದ್ದರೆ ಇಂದು ಒಂದು ತಲೆಮಾರು ಕಳೆದು ಎರಡನೇ ತಲೆಮಾರಿನ ಜನರು ಉದ್ದಿಮೆಗಳಲ್ಲಿ ಪಳಗಿ ಶಕ್ತಿಯುತವಾಗಿ ನಿಂತಿರುತ್ತಿದ್ದರು. ಆದರೆ ಅಂಥಹ ಕೆಲಸವೂ ಸರಕಾರದಿಂದಾಗಲೀ, ಜನರಿಂದಾಗಲೀ ಆಗಲಿಲ್ಲ. ಕೆಲವು ವರ್ಷಗಳ ನಂತರ ಕರ್ನಾಟಕದ ರಾಜಕೀಯ ಪ್ರಭಾವ ಹೆಚ್ಚಾಗಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಭಾರತದ ಕ್ರಿಕೆಟ್ ತಂಡದಲ್ಲಿ ೫ ಜನ ಆಟಗಾರರಿದ್ದರು. ಅವರೇ ಹೇಳಿ ಆ ಆಟಗಾರರನ್ನ ತಂಡಕ್ಕೆ ಸೇರಿಸಿದ್ದಲ್ಲ, ಅದೊಂದು ಕಾಕತಾಳೀಯವಷ್ಟೇ. ಅವರ ಕಾಲದಲ್ಲಿ ಬೆಂಗಳೂರು – ನೆಲಮಂಗಲ – ಹಾಸನ ರೈಲು ಮಾರ್ಗಕ್ಕೆ ಅನುಮತಿ ಕೊಡಿಸಿದ್ದರು. ಆದರೆ ವಿಧಿ ಅಲ್ಲಿಯೂ ಕರ್ನಾಟಕದ ವಿರುದ್ಧವಾಯಿತು. ದೇವೇಗೌಡರು ಆರು ತಿಂಗಳಲ್ಲಿ ಅಧಿಕಾರದಿಂದ ಇಳಿದಿದ್ದರು. ಕರ್ನಾಟಕ ಬೆಳೆಯಲು ಸಿಕ್ಕ ಒಂದು ಅವಕಾಶ ಗೌಡರ ಜೊತೆ ಆ ರೈಲು ಮಾರ್ಗದಷ್ಟೇ ನತದೃಷ್ಟವಾಗಿತ್ತು. ೨೦೦೧ ರಲ್ಲಿ ಆರಂಭವಾಗಬೇಕಿದ್ದ ರೈಲು ಸಂಚಾರ ಈಗ ೨೦೧೭ ಮಾರ್ಚಿನಲ್ಲಿ ಶುರುವಾಗಿದೆ. ಜೊತೆಗೆ ೨೦ನೇ ಶತಮಾನದಲ್ಲಿ ಕರ್ನಾಟಕದ ಜನಸಂಖ್ಯೆ ಬೆಳವಣಿಗೆ ಸೂಚಕ (HUMAN DEVELOPMENT INDEX) ಇತರೆ ರಾಜ್ಯಗಳಿಗಿಂತ ಕಡಿಮೆ ಇತ್ತು. ಇದೂ ಸಹ ಕನ್ನಡದ ಜನರನ್ನು ದೊಡ್ಡ ಮಟ್ಟದ ಕೆಲಸಗಳಿಗೆ ಕೈ ಹಾಕುವುದಕ್ಕೆ ತಡೆಯಾಗಿತ್ತು.

ಇತಿಹಾಸದ ಪ್ರಭಾವದಿಂದ ಹೊರಬರಲು ನಾವು ಇನ್ನಾದರು ಶ್ರಮ ಪಡಬೇಕಿದೆ. ಕರ್ನಾಟಕದಲ್ಲಿ ಕನ್ನಡಿಗರಲ್ಲಿ ಉದ್ದಿಮೆಗಳ ಹುಟ್ಟುಹಾಕಿಸಲು ಪ್ರೇರೇಪಿಸಬೇಕು. ಕನ್ನಡದ ಉದ್ಯಮಿಗಳು ಈಗಲೂ ೫-೧೦% ಇದ್ದಾರೆ. ಅವರನ್ನು ೩೫-೪೦% ಗೆ ತರಲು ಇನ್ನೊಂದು ದಶಕದಲ್ಲಿ ಹೆಚ್ಚಾಗಿ ಸರಕಾರ ಕೆಲಸ ಮಾಡಬೇಕು ಹಾಗು ನಾವು ಸಹ ಧೈರ್ಯ ತಾಳಬೇಕು. ಆಗ ಮಾತ್ರ ಮುಂಬರುವ ಯುಗಗಳಲ್ಲಿ ಕನ್ನಡಿಗರು, ಕನ್ನಡದ ಭಾಷೆ, ಸಂಸ್ಕೃತಿ ಈ ದೇಶದಲ್ಲಿ ಶಕ್ತಿಯುತವಾಗಿ ಉಳಿಯುತ್ತದೆ. ಇನ್ನಾದರೂ ಜನರು ಹಾಗು ಕರ್ನಾಟಕದ ಸರಕಾರ ಧೈರ್ಯ ಹಾಗು ಸ್ವಾಭಿಮಾನದಿಂದ ಜನರ ಒಳಿತಿಗಾಗಿ ಸರಿಯಾದ ದಿಕ್ಕಿನಲ್ಲಿ ದುಡಿಯಬೇಕಿದೆ!

ಸರಕಾರವನ್ನಂತು ನಂಬುವುದಕ್ಕೆ ಆಗುವುದಿಲ್ಲ,ಈಗ ಸಮಯ ಹಾಗು ಅವಕಾಶ ಇರುವುದು ನಮ್ಮಂಥವರ ಕೈಯ್ಯಲ್ಲಿ ಮಾತ್ರ!

-ಆದರ್ಶ