ನಾವು ಪ್ರಾಕ್ಟಿಕಲ್ ಆಗಬೇಕು
by Deepak basrur
ಒಂದೆರಡು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಎಸ್. ಎಲ್. ಭೈರಪ್ಪನವರು ಒಂದು ಮಾತು ಹೇಳಿದ್ದರು. “ನಾವು ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಈ ಕಾಲದಲ್ಲಿ ಸಾಧ್ಯವಿಲ್ಲ” ಎಂದು. ಅದು ನಿಜ ಕೂಡ. ನಮ್ಮ ಆದರ್ಶಗಳನ್ನು, ಒಳ್ಳೆಯತನವನ್ನು ಜನ ನಮ್ಮ ದಡ್ಡತನ ಎಂದು ತಿಳಿದುಕೊಳ್ಳುತ್ತಾರೆ. ಅದನ್ನು ಅವರು ತಮ್ಮ ವ್ಯವಹಾರಕ್ಕೆ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ನಾವು ಮಾತ್ರ ಇದ್ದಂತೆ ಇರುತ್ತೇವೆ. ಅಕ್ಷರಶಃ ಅವರು ನಮ್ಮ ವ್ಯಕ್ತಿತ್ವವನ್ನು ಕೊಂದಿರುತ್ತಾರೆ. ಮನುಷ್ಯನನ್ನು ಸಾಯಿಸುವುದಕ್ಕು, ಮನುಷ್ಯತ್ವವನ್ನು ಸಾಯಿಸುವುದಕ್ಕೂ ಏನು ವ್ಯತ್ಯಾಸ ಇರೊದಿಲ್ಲ. ವ್ಯಕ್ತಿಯನ್ನು ಕೊಂದಷ್ಟೇ ಪಾಪ ವ್ಯಕ್ತಿತ್ವವನ್ನು ಕೊಲ್ಲುವುದು ಕೂಡ ಅಂತ ಅವರಿಗೆ ಅನಿಸುವುದೇ ಇಲ್ಲ.
ಬಹುರಾಷ್ಟ್ರೀಯ ಕಂಪನಿಗಳನ್ನೇ ತೆಗೆದುಕೊಳ್ಳಿ. ಅವರು ಉದ್ಧಾರ ಆಗೋದಕ್ಕೆ ಅದೆಷ್ಟು ಜನರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿರುತ್ತಾರೆ. ಅವರಷ್ಟೇ ಅಲ್ಲ, ಒಂದು ಡಿಗ್ರಿ ಮಾಡಿಕೊಂಡೋ ಅಥವಾ ವಿದ್ಯಾಭ್ಯಾಸ ಇಲ್ಲದೆ ನಗರಕ್ಕೆ ಬರುವ ಜನರು ಇಲ್ಲಿ ಪಡುವ ಪಾಡೆಷ್ಟು? ನಿಮ್ಮ ಜೀವನವನ್ನು ಬದಲಾಯಿಸಿ ಬಿಡುತ್ತೇವೆ, ಇದೊಂದು ನಿಮಗೆ ಸುವರ್ಣ ಅವಕಾಶ , ನನ್ನನ್ನು ಬಿಟ್ಟು ಲೋಕದಲ್ಲಿ ಒಳ್ಳೆಯವರು ಯಾರೂ ಇಲ್ಲ ಅನ್ನೋ ರೀತಿ ಮಾತಾಡಿ ಒಂದು ಚಿಕ್ಕ ಕಂಪನಿಯವರೊ, ಕಾರ್ಖಾನೆಯವರೋ ಅವರಿಗೆ ಒಂದು ಉದ್ಯೋಗವೇನೋ ಕೊಡುತ್ತಾರೆ. ಅಲೆದಾಡುತಿದ್ದವನಿಗೆ ಒಂದು ಉದ್ಯೋಗ ಕೊಟ್ಟೆ ಎಂದು ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ಳುತ್ತಾ ಇರುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೂ ಕೂಡ ಕೆಲಸಕ್ಕೆ ಜನ ಸಿಗುವುದು ಕಷ್ಟವಾಗಿರುತ್ತದೆ. ಅವರೂ ಕೂಡ ಕೆಲಸಗಾರರಿಗಾಗಿ ಗೋಗರೆಯುತ್ತಿರುತ್ತಾರೆ.
ಕೆಲಸ ಕೊಟ್ಟ ಮೇಲೂ ಅಷ್ಟೇ, “ ಇದು ನಿಮ್ಮ ಕಂಪನಿ ಎಂಬಂತೆ ಕೆಲಸ ಮಾಡಿ, ನೀವು ಕಂಪನಿಯನ್ನು ನಿಮ್ಮದೆಂದು ಭಾವಿಸಿದರೆ, ಕಂಪನಿ ನಿಮ್ಮನ್ನು ನಮ್ಮವರಂತೆ ಕಾಣುತ್ತದೆ“ ಎಂಬ ಹಿತವಚನ ಬೇರೆ. ನೀವು ಕಂಪನಿಯನ್ನು ನಿಮ್ಮದೆಂದು ಕೆಲಸ ಮಾಡಿದರೂ, ಕಂಪನಿ ನಿಮ್ಮನ್ನು ಅವರಲ್ಲಿ ಒಬ್ಬರಂತೆ ಕಾಣುವುದಿಲ್ಲ. ನಿಮ್ಮಲ್ಲಿ ಆದಷ್ಟು ಮಟ್ಟಿಗೆ ಅಭದ್ರತೆ ಸೃಷ್ಟಿಸಿರುತ್ತಾರೆ. ನಿಮಗೆಲ್ಲಿ ಜೀವನ ಹಿಡಿತಕ್ಕೆ ಬಂದು ಅವರ ಎದುರು ಮಾತಾಡುತ್ತೀರಿ, ಅಥವಾ ಕೆಲಸವನ್ನು ಬಿಟ್ಟು ಬಿಡುತ್ತೀರಿ ಎನ್ನುವ ಭಯ ಅವರಿಗೆ. ಅದು ನೀವು ಎಷ್ಟೋ ವರುಷಗಳು ಕಾಲ ಅಲ್ಲಿ ಕೆಲಸ ಮಾಡಿದ ಮೇಲೂ ಇರುತ್ತದೆ. ನಿಮಗೆ ಕೊಡುವ ಒಂದೊಂದು ರೂಪಾಯಿಗೂ ಲೆಕ್ಕ ಹಾಕುತ್ತಾ ಇರುತ್ತಾರೆ. ಕೇಳಿದರೆ ಕಂಪನಿ ನಷ್ಟದಲ್ಲಿದೆ ಎಂಬ ಮೊಸಳೆ ಕಣ್ಣೀರು. ಆದರೆ ಅವರು ಮಾತ್ರ ಹೊಸ ಹೊಸ ಗಾಡಿಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ, ಅವರ ಹೆಂಡತಿ ಮಕ್ಕಳು ಆನ್ಲೈನ್ ಶಾಪಿಂಗ್ ಮಾಡುತ್ತಾ ಇರುತ್ತಾರೆ. ಆದರೆ ನಿಮಗೆ ಕೊಡಲು ಅವರಲ್ಲಿ ದುಡ್ಡಿಲ್ಲ, ಇದ್ದರೂ ಮನಸಿಲ್ಲ.
ಒಟ್ಟಿನಲ್ಲಿ ನಮ್ಮ ಜೀವನದ ಒಳ್ಳೆತನ(ದಡ್ಡತನ!), ಅಭದ್ರತೆ, ಆದರ್ಶಗಳು ಮೇಲೆ ಇನ್ನೊಬ್ಬರು ಲಾಭ ಗಳಿಸುತ್ತಿರುತ್ತಾರೆ. ಇದೆಲ್ಲ ವ್ಯವಹಾರದಲ್ಲಿ ಮಾಮೂಲು ಎನ್ನುವವರಿಗೆ ನನ್ನದೊಂದು ನಮಸ್ಕಾರ. ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಎನ್ನುವುದು ಪ್ರಾಣಿಗಳಲ್ಲಿ ಮಾಮೂಲು ಎನ್ನುವವರಿಗೆ ಇನ್ನೂ ದೊಡ್ಡ ನಮಸ್ಕಾರ. ಆದರೂ ಒಬ್ಬರು ನಡೆಸುತ್ತಿರುವ ಜೀವನ ಕ್ರಮವನ್ನು, ಮನುಷ್ಯತ್ವದ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ಹಾಳು ಮಾಡುವುದು ಎಷ್ಟು ಸರಿ?
ಎಲ್ಲವನ್ನು ನೋಡಿದರೆ ಸಮಸ್ಸ್ಯೆ ನಮ್ಮದೇ ಅನಿಸುತ್ತದೆ. ನಾವು ಪ್ರಾಕ್ಟಿಕಲ್ ಆಗಬೇಕಷ್ಟೇ. ನನ್ನೊಬ್ಬ ಸ್ನೇಹಿತ ಹೇಳಿದಂತೆ “ನಾನು ಸರಿ ಇದ್ದೇನೆ, ಜನರೂ ಕೂಡ ನನ್ನ ಜೊತೆ ಸರಿ ಇರಬೇಕು ಎನ್ನುವುದು ಹೇಗಿರುತ್ತೆ ಎಂದರೆ, ಒಂದು ಹುಲಿ ನನ್ನ ಎದುರು ಬಂದಾಗ ನಾನು ಹುಲಿಯನ್ನು ತಿನ್ನುವುದಿಲ್ಲ, ಹಾಗಾಗಿ ಹುಲಿಯೂ ಕೂಡ ನನ್ನನ್ನು ತಿನ್ನಬಾರದು ಎನ್ನುವಷ್ಟೇ ಮೂರ್ಖತನ”.
-ದೀಪಕ್ ಬಸ್ರೂರು