ಯುಗಗಳ ಹಿಂದೆ ಬೆಂಕಿ ಉಂಡೆಯಂಥಹ ಭೂಮಿಯೂ ತನ್ನ ಮೇಲ್ಮೈ ಬೆಂಕಿಯೆಲ್ಲ ಉರಿದ ನಂತರ ಸಾವಿರಾರು ವರ್ಷಗಳ ಕಾಲ ಮಳೆ ರೂಪದಲ್ಲಿ ಬಿದ್ದ ನೀರಿಂದ ತಣಿದು ಇಂದು ನಾವು ನೋಡುತ್ತಿರುವ ಜಗತ್ತಾಗಿದೆ. ಆಗ ಸಾವಿರಾರು ವರ್ಷಗಳು ಬಿದ್ದ ಮಳೆಯಿಂದ ಈಗ ನಾವು ನೋಡುತ್ತಿರುವ ಸಾಗರ, ನದಿಗಳು ಹುಟ್ಟಿಕೊಂಡವು. ಹೀಗೆ ರೂಪುಗೊಂಡ ನೀರಿನ ಜೀವ ನೀಡುವ ಅಂಶದಿಂದ ಎಲ್ಲ ರೀತಿಯ ಜೀವಗಳು ಬೆಳೆದವು. ನಾವು ಸಹ ಬೆಳೆದದ್ದು ಇದೇ ರೀತಿಯಲ್ಲೇ. ನದಿ, ಸಾಗರ, ನೀರು ಇತರೆ ಎಲ್ಲ ಜೀವಗಳಿಗೆ ಎಷ್ಟು ಮುಖ್ಯವಾದದ್ದೋ ಮನುಷ್ಯರಾದ ನಮಗೂ ಅಷ್ಟೆ ಮುಖ್ಯ.

ನಮ್ಮ ಇತಿಹಾಸವನ್ನು ತೆಗೆದು ನೋಡಿದರೆ ಮೊದ – ಮೊದಲ ಮಾನವ ಕುಲ ಹುಟ್ಟಿ – ಬೆಳೆದು – ಅಳಿದದ್ದು ನದಿ – ಸಾಗರಗಳ ತೀರದಲ್ಲಿಯೇ. ನದಿ ತೀರಗಳಲ್ಲಿ ನೆಲೆಸಿದ ಮಾನವ ನಿಧಾನಕ್ಕೆ ಆ ನೀರಿಂದ ತನ್ನ ಆಹಾರಗಳನ್ನು ತಾನೇ ಬೆಳೆಯಲು ಕಲಿತ , ನಿಧಾನಕ್ಕೆ ಆಹಾರದ ಜೊತೆ ಅವಶ್ಯ ಕತೆಗೆ ಬೇಕಾದ ಇತರೆ ವಸ್ತುಗಳನ್ನೂ ಸಹ ತಾನೇ ತಯಾರಿಸವುದ ಕಲಿತ. ಪ್ರತಿಯೊಂದು ಜೀವಕ್ಕೂ ನದಿಗಳು ಹಾಗು ನೀರು ಅತ್ಯ ವಶ್ಯಕ ವಾಯಿತು. ನಾಗರೀಕತೆ – ಸಂಸ್ಕೃತಿ – ಜನಸಂಖ್ಯೆ ಬೆಳೆದಂತೆ ಮಾನವರ ನೀರಿನ ಮೇಲಿನ ಅವಲಂಬನೆ ಹೆಚ್ಚುತ್ತಾ ಹೋಯಿತು. ಹೀಗೆ ಇತರೆ ಪ್ರಾಣಿ – ಪಕ್ಷಿ – ಕೀಟಗಳಿಗೆ ನೀರು ಎಷ್ಟು ಅತ್ಯವಶ್ಯವೋ ಮನುಷ್ಯರಿಗೂ ನೀರು ಅಷ್ಟೆ ಅತ್ಯವಶ್ಯವಾಗಿದೆ, ಬಳಕೆಯ ರೂಪಗಳು ಬೇರೆ ಅಷ್ಟೆ. ಆದರೆ ಅವಶ್ಯಕತೆಯು ಒಂದೇ ಸಮಾನದ್ದು. ಬೇರೆ ಪ್ರಾಣಿಗಳಿಗೆ ನೀರು , ನದಿ , ಸಮುದ್ರ ಇವುಗಳ ಮೇಲೆ ಎಷ್ಟರ ಮಟ್ಟಿಗೆ ಭಾವನೆಗಳಿವೆಯೋ ಮನುಷ್ಯನಿಗೂ ಸಹ ಅಂತರಾಳದಲ್ಲಿ ಅಷ್ಟೆ ಇರಬೇಕಿತ್ತು. ಆದರೆ ನಾಗರೀಕತೆಯ ನಡುವಲ್ಲಿ ಸರಳತನವನ್ನು ಕಳೆದುಕೊಂಡು ಪ್ರತಿಯೊಂದಕ್ಕೂ ವೈಭವದ ಬಣ್ಣವನ್ನು ಹಚ್ಚಿ ಮೆರೆದಾಡಲು ಹವಣಿಸುತ್ತಿದ್ದೇವೆ.

ಕೃಷ್ಣರಾಜಸಾಗರ

ಕೃಷ್ಣರಾಜಸಾಗರ – ಮೈಸೂರು

ಕಾವೇರಿ ನದಿಯನ್ನೇ ತಗೆದುಕೊಂಡರೆ, ಆ ನದಿಯೂ ಕೊಡಗಿನಲ್ಲಿ ಹುಟ್ಟಿ ನಿಧಾನವಾಗಿ ಹಾಸನದ ಅಂಚಿನಲ್ಲಿ ಹರಿದು , ಮೈಸೂರಿನಲ್ಲಿಯ ಕನ್ನಂಬಾಡಿಯಲ್ಲಿ ಸುಧಾರಿಸಿಕೊಂಡು , ಮತ್ತೆ ಮುಂದಕ್ಕೆ ಮಂಡ್ಯವ ಹಾದು ರಾಮನಗರ , ಚಾಮರಾಜನಗರದ ಅಂಚಿನಲ್ಲಿ ಹರಿದು ಕರ್ನಾಟಕದಿಂದ ಹೊರಕ್ಕೆ ಹರಿದು ಹೋಗುತ್ತದೆ. ಹೀಗೆ ಹರಿಯುವ ಕಾರಣಕ್ಕೆ ಈ ಭಾಗದ ಜನರ ಜೀವನದ ಭಾಗವಾಗಿ ಕಾವೇರಿ ನದಿಯು ತನ್ನ ಕೆಲಸವನ್ನು ಮಾಡುತ್ತದೆ.

ತುಂಗಭದ್ರ

ತುಂಗಭದ್ರ – ಹಂಪೆ

ಇದೇ ರೀತಿ ತುಂಗಾ ಹಾಗು ಭದ್ರಾ ನದಿಗಳು ಚಿಕ್ಕಮಗಳೂರಿನಲ್ಲಿ ಹುಟ್ಟಿ , ಶಿವಮೊಗ್ಗದ ಹೊಳೆಹೊನ್ನೂರಿನ ಸಮೀಪದ ಕೂಡ್ಲಿಯಲ್ಲಿ ಒಂದಾಗಿ ಮುಂದಕ್ಕೆ ತುಂಗಭದ್ರವಾಗಿ ಹರಿದು ದಾವಣಗೆರೆಯನ್ನು ದಾಟಿ , ಬಳ್ಳಾರಿಯ ಹೊಸಪೇಟೆಯಲ್ಲಿ ಸ್ವಲ್ಪ ವಿರಮಿಸಿ ಅಲ್ಲಿಂದ ಮುಂದಕ್ಕೆ ಆಂಧ್ರ, ಹೀಗೆ ಆ ಭಾಗದ ಜನರ ಜೀವನದ ಭಾಗ ತುಂಗಭದ್ರಾ ನದಿಗಳಾಗಿವೆ. ಶರಾವತಿಯು ತೀರ್ಥಹಳ್ಳಿಯಲ್ಲಿ ಹುಟ್ಟಿ ಶಿವಮೊಗ್ಗದ ಘಟ್ಟಗಳಲ್ಲಿ ಹರಿದು ಲಿಂಗನಮಕ್ಕಿಯಲ್ಲಿ ಸುಧಾರಿಸಿಕೊಂಡು, ಜೋಗದಲ್ಲಿ ಜಾರಿ ಮುಂದಕ್ಕೆ ಬಹಳವೇ ಪ್ರಶಾಂತವಾಗಿ, ವಿಶಾಲವಾಗಿ ಹರಿದು ಉತ್ತರ ಕನ್ನಡದ ಹೊನ್ನಾವರದಲ್ಲಿ ಸಾಗರವನ್ನು ಸೇರುತ್ತದೆ. ನೇತ್ರಾವತಿಯು ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಹುಟ್ಟಿ ಮುಂದೆ ಬೆಳೆದು ದಕ್ಷಿಣ ಕನ್ನಡ ಜಿಲ್ಲೆಯ ಸೇರಿ, ಉಪ್ಪಿನಂಗಡಿಯಲ್ಲಿ ಕುಮಾರಧಾರ ಹಾಗು ಕೆಂಪುಹೊಳೆಗಳ ಸೇರಿ ಮುಂದೆ ಅರಬ್ಬೀ ಸಮುದ್ರಕ್ಕೆ ಧುಮುಕುತ್ತದೆ.

ಕೃಷ್ಣಾ ನದಿಯು ಕರ್ನಾಟಕದ ಬೆಳಗಾವಿ, ವಿಜಯಪುರ, ಕಲಬುರ್ಗಿ ಜಿಲ್ಲೆಗಳಲ್ಲಿ ಹರಿದು ಆ ಭಾಗದ ಜೀವವಾಗಿದೆ.

ಕಾಳಿ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ, ಕೆಂಪುಹೊಳೆ ಸಕಲೇಶಪುರದ ಭಾಗದಲ್ಲಿ, ವರದಾ ನದಿ ಸಾಗರ-ಸೊರಬ-ಹಾವೇರಿ ಹತ್ತಿರ, ಸೌಪರ್ಣಿಕ, ಕುಬ್ಜ, ಕೇದಕ, ಪಂಚಗಂಗಾವಳಿ, ಶಾಂಭವಿ, ಚಕ್ರ, ಗುರುಪುರ, ಹೇಮಾವತಿ, ಕುಮುದಾವತಿ, ಮಲಪ್ರಭಾ, ಘಟಪ್ರಭ, ವಾರಾಹಿ, ಲಕ್ಷ್ಮಣತೀರ್ಥ, ವೃಷಭಾವತಿ, ಕುಮಾರಧಾರ, ವೇದಾವತಿ, ಹೀಗೆ ಕರ್ನಾಟಕದ ಉದ್ದಗಲಕ್ಕೆ ಅನೇಕ ನದಿಗಳು ನಮಗೆ ಸಿಗುತ್ತವೆ.

ಹೀಗೆ ಒಂದಲ್ಲ ಒಂದು ನದಿಯು ಕರ್ನಾಟಕದ ಪ್ರತಿಯೊಂದು ಭಾಗದಲ್ಲಿ ತನ್ನದೇ ಆದ ರೀತಿಯಲ್ಲಿ ಜೀವದಾನ ಮಾಡಿ ಎಲ್ಲಾ ಪ್ರಾಣಿಗಳಲ್ಲಿ ಚಲನವುಂಟು ಮಾಡುತ್ತಿವೆ. ಇವುಗಳಲ್ಲಿ ಯಾವ ನದಿಯು ಉತ್ತಮ, ಯಾವುದು ಮಧ್ಯಮ ಅಥವಾ ಇನ್ಯಾವುದೋ ನದಿಯು ಅಧಮ ಎಂದು ಯಾರೂ ಹೀಳರಾರರು. ಪ್ರತಿಯೊಂದು ನದಿಯೂ ನೀರಿನ ಮೂಲವು, ಜನಗಳಿಗೆ ಜೀವನದ ಮೂಲವೇ ಆಗಿವೆ. ಆದರೆ ಜನರು ಕೆಲವು ನದಿಗಳಿಗೆ ಉಳಿದ ನದಿಗಿಂತ ಹೆಚ್ಚಿಗೆ ಪ್ರಾಶಸ್ತ್ಯವಿದೆ ಎಂಬಂತೆ ವೈಭವೀಕರಿಸಿ ಆ ನದಿಯ ಹೆಸರನ್ನು ಮೆರೆಸುತ್ತಾರೆ. ಜನರು ಈ ರೀತಿ ಮಾಡಿದ್ದಕ್ಕೆ ಆ ಒಂದು ನದಿಯು ಜನರಿಗೆ ಹೆಚ್ಚಿಗೆ ನೀರು ಕೊಡಲು ಆರಂಭಿಸಲಿಲ್ಲ, ಅಥವಾ ತನ್ನ ನೀರಿನಲ್ಲಿ ಅಡಗಿರುವ ಲವಣಾಂಶಗಳ ಹೆಚ್ಚಿಸಿ ಜನರಿಗೆ ‘ಮಿನರಲ್ ನೀರು’ ಕೊಡಲು ಆರಂಭಿಸಲಿಲ್ಲ. ಯಾರ ಕೂಗಾಟ, ಗೋಳಾಟ, ಪ್ರೀತಿ-ಅಭಿಮಾನದ ಮಾತುಗಳಿಗೂ ಕಿವಿಗೊಡದೆ ಸಾವಿರಾರು ವರುಷಗಳಿಂದ ನಡೆಸಿದ ತನ್ನ ಕೆಲಸವನ್ನು ಹಾಗೆ ನಡೆಸಿಕೊಂಡು ಸಾಗಿತು. ಉಳಿದ ನದಿಗಳಿಗೆ ಜನ ಹೆಚ್ಚಿನ ಗೌರವ ಕೊಡಲಿಲ್ಲವೆಂದು ಆ ನದಿಗಳೇನು ಹರಿಯೋದ ನಿಲ್ಲಿಸಲಿಲ್ಲ, ಅಥವಾ ತಮ್ಮ ಜೀವೊದ್ಭವ ಶಕ್ತಿಯ ಹಂಚುವುದ ಬಿಡಲಿಲ್ಲ. ಆ ನದಿಗಳಿಗೂ ಸಹ ತಮ್ಮ ಕಾರ್ಯವನ್ನು ಎಂದಿನಂತೆಯೇ ನಡೆಸಿಕೊಂಡು ಸಾಗಿದವು. ಆದರೂ ಜನರು ಕೆಲವು ನದಿಗಳ ಹೆಸರನ್ನು ಮೆರೆಸುವ ಅಭ್ಯಾಸವನ್ನು ಬಿಡಲಿಲ್ಲ.

ಭತ್ತದ ಗದ್ದೆ

ಭತ್ತದ ಗದ್ದೆ – ಕೆ.ಆರ್.ಎಸ್

ಎಲ್ಲ ನದಿಗಳಂತೆ ದಕ್ಷಿಣದ ಕಾವೇರಿ ನದಿಯು ಜನರಿಗೆ ಕುಡಿಯಲು ಹಾಗು ಆಹಾರ ಬೆಳೆಯಲು ನೀರನ್ನು ಒದಗಿಸಿದೆ.. ಆದರೂ ಕನ್ನಡ ಚಿತ್ರರಂಗದ ಜನ ಕರ್ನಾಟಕದ ಮಟ್ಟಿಗೆ ಕೇವಲ ಕಾವೇರಿಯೊಂದೇ ನದಿ ಎಂಬಂತೆ ಚಿತ್ರಿಸುತ್ತಾ ಬಂದಿದ್ದಾರೆ. ಬೆಂಗಳೂರು-ಮೈಸೂರು ಭಾಗದಲ್ಲಿ ಕೆಂದ್ರೀಕೃತವಾದ ಚಿತ್ರಗಳಲ್ಲಿ, ಕೇವಲ ಕಾವೇರಿ ನದಿಯನ್ನು ಚಿತ್ರದ ಸಂಧರ್ಭಗಳಲ್ಲಿ, ಹಾಡುಗಳಲ್ಲಿ ಬಳಸಿಕೊಂಡು ಆ ನದಿಯನ್ನು ಅಭಿಮಾನದ ಸಂಕೇತವಾಗಿಸಿ ವೈಭವೀಕರಿಸಲಾಗಿದೆ. ಆ ರೀತಿ ಹಾಡುಗಳ, ಚಿತ್ರಗಳ ತೆಗೆದವರು ಹೆಚ್ಚಿನವರು ಹಳೆ ಮೈಸೂರಿನ ಭಾಗದವರಾಗಿದ್ದಿರಬಹುದು. ಈ ಕಾರಣದಿಂದ ಅವರ ಭಾವನೆಗೆ ಹತ್ತಿರವಾದ ಕಾವೇರಿಯ ವೈಭವೀಕರಿಸಿರಬಹುದು.

ಆದರೆ ಈ ವೈಭವೀಕರಣ ಯಾವತ್ತಿದ್ದರೂ ಕಾವೇರಿ ಹರಿಯುವ ಹತ್ತಿರದ ಊರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಕಾವೇರಿಯನ್ನು ಎಷ್ಟೇ ವೈಭವೀಕರಿಸಿದರೂ ಅದರ ಪ್ರಭಾವ ದೂರದ ಮಂಗಳೂರು, ಉಡುಪಿ, ಕಾರವಾರ, ಕುಮಟ, ಬೀದರ್, ಬೆಳಗಾವಿ, ಕಲಬುರ್ಗಿ, ಬಳ್ಳಾರಿ, ಗೋಕಾಕ್ ಊರುಗಳ ಮೇಲೆ ಎಂದಿಗೂ ಆಗುವುದಿಲ್ಲ. ದೂರದ ಊರುಗಳೇಕೆ? ಅವಕ್ಕಿಂತ ಸ್ವಲ್ಪ ಹೊತ್ತಿನ ಹತ್ತಿರವಾದ ಶಿವಮೊಗ್ಗವನ್ನೇ ತೆಗೆದುಕೊಂಡರೆ ಅಲ್ಲಿಗೂ ಕಾವೇರಿ ವೈಭವೀಕರಣದ ಪ್ರಭಾವ ಪೂರ್ತಿಯಾಗಿ ಆಗಲಾರದು. ಈ ಕಾರಣಕ್ಕೆ ಈ ರೀತಿಯ ಸ್ಥಳೀಯ ವೈಭವೀಕರಣ ಇರುವ ಚಿತ್ರಗಳು ರಾಜಧಾನಿಯಿಂದ ದೂರ ಇರುವ ಊರುಗಳಲ್ಲಿ ಪರಿಣಾಮ ಬೀರುವುದಿಲ್ಲ. ಅದಕ್ಕೆ ಚಿತ್ರರಂಗದ ಜನ ದೂರದೂರಿನ ಜನರ ದೂರುವಂಗಿಲ್ಲ.

ಶರಾವತಿ ಕಣಿವೆ

ಶರಾವತಿ ಕಣಿವೆ – ಜೋಗ

ಹಾಗೆ ನೋಡಿದರೆ ಇಡೀ ಕರ್ನಾಟಕದ ೪೦% ವಿದ್ಯುತ್ ಉತ್ಪಾದನೆ ಆಗೋದು ಶರಾವತಿ ಕೇಂದ್ರದಲ್ಲಿ, ಭಾರತದ ಅತೀ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಮೂಡಿರುವುದು ಶರಾವತಿ ಇಂದ, ಕರ್ನಾಟಕದ ಅತೀ ದೊಡ್ಡ ಅಣೆಕಟ್ಟಾದ ಲಿಂಗನಮಕ್ಕಿ ಇರುವುದು ಶರಾವತಿಗೆ. ಕರ್ನಾಟದಲ್ಲಿ ಅತೀ ಹೆಚ್ಚು ಜೀವವೈವಿಧ್ಯ ಇರುವುದು ಶರಾವತಿ ಕಣಿವೆಯಲ್ಲಿ. ಹೀಗೆ ಹಲವು ಮಹತ್ತರ ಕಾರ್ಯಗಳು ಶರಾವತಿ ನದಿಯಿಂದಾಗಿದೆ. ಆದರೂ ಚಿತ್ರರಂಗದ ಜನರು ಶರಾವತಿಯ ವೈಭವೀಕರಿಸಿಲ್ಲ. ಶರಾವತಿಯ ಹೋಲಿಕೆಯಲ್ಲಿ ಕಾವೇರಿಯ ವೈಭವೀಕರಣ ಬಹಳ ಹೆಚ್ಚು. ಇನ್ನು ತುಂಗಭದ್ರಾ, ಕೃಷ್ಣಾ ನದಿಗಳನ್ನು ವೈಭವೀಕರಿಸಲು ಅನೇಕ ಕಾರಣಗಳು ಸಿಗುತ್ತವೆ. ಹೆಸರಿಗೆ ಮಂಡ್ಯ ಜಿಲ್ಲೆಯ ಸಕ್ಕರೆನಾಡು ಎನ್ನುತ್ತಾರೆ, ಆದರೆ ವಾಸ್ತವದಲ್ಲಿ ಕರ್ನಾಟದಲ್ಲಿ ಅತೀ ಹೆಚ್ಚು ಕಬ್ಬು ಬೆಳಗಾವಿಯಲ್ಲಿ ಬೆಳೆಯೋದು. ಬೆಳಗಾವಿಗೆ ಈ ಕಾರಣಕ್ಕೆ ‘ಕರ್ನಾಟಕದ ಸಕ್ಕರೆ ಬಟ್ಟಲು’ ಎಂಬ ಬಿರುದಿದೆ. ಅಲ್ಲಿ ಹರಿಯುವುದು ಕೃಷ್ಣಾ ನದಿ. ಮೈಸೂರು-ಮಂಡ್ಯ ಕಡೆ ಭತ್ತ ಬೆಳೆಯುತ್ತಾರಾದರೂ ಕರ್ನಾಟಕದ ಭತ್ತದ ಕಣಜವು ಕೊಪ್ಪಳವಾಗಿದೆ. ಕೊಪ್ಪಳ-ದಾವಣಗೆರೆ-ಬಳ್ಳಾರಿಯು ಇದೇ ಕ್ರಮದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಭತ್ತ ಬೆಳೆವ ಜಿಲ್ಲೆಗಳಾಗಿವೆ. ಅಲ್ಲಿ ಹರಿಯುವು ಕಾವೇರಿಯಲ್ಲ, ಬದಲಿಗೆ ತುಂಗಭದ್ರ ನದಿ. ಆದರೂ ಹಾಡುಗಳಲ್ಲಿ ಚಿತ್ರರಂಗದವರು ಕೃಷ್ಣಾ ಹಾಗು ತುಂಗಭದ್ರಾ ನದಿಗಳ ವೈಭವೀಕರಿಸಿಲ್ಲ.

ಬ್ರಿಟೀಷರ ಕಾಲದಲ್ಲಿ ಕರ್ನಾಟಕದಲ್ಲಿ ಉಳಿದಿದ್ದ ಅರಸರಲ್ಲಿ ಮೈಸೂರು ಅರಸರು ತುಸು ಪ್ರಾಬಲ್ಯ ಹೊಂದಿದವರಾದ್ದರಿಂದ, ಕರ್ನಾಟಕದ ಉಳಿದ ಭಾಗಗಳು ಬ್ರಿಟೀಷರ ಇತರೆ ಪ್ರಾಂತ್ಯದ ಆಡಳಿತದಲ್ಲಿ ಇದ್ದ ಕಾರಣಕ್ಕೆ ಮೈಸೂರು ಕೇಂದ್ರೀಕೃತ ಬೆಳವಣಿಗೆ ಹಾಗು ಅದರ ವೈಭವೀಕರಣ ನಡೆದದ್ದು ಸಹಜ. ಆದರೆ ಸ್ವಾತಂತ್ರ್ಯದ ನಂತರ ಈಗಿನ ಕರ್ನಾಟಕದ ಏಕೀಕರಣ ನಡೆದಮೇಲೂ ಮೈಸೂರು-ಬೆಂಗಳೂರು ಕೇಂದ್ರೀಕೃತ ಬೆಳವಣಿಗೆ ಹಾಗು ವೈಭವೀಕರಣ ನಡೆಯುತ್ತಿರುವುದು ಈಗಿನ ದುರಂತ.

ಜೀವನದಿ ಎಂದಾಕ್ಷಣ ಕೇವಲ ಒಂದು ನದಿಯ ಹೆಸರನ್ನು ಥಟ್ ಎಂದು ಹೇಳಿಬಿಡುತ್ತೇವೆ, ಆದರೆ ಆಯಾ ಪ್ರದೇಶಗಳಿಗೆ ತನ್ನದೇ ಜೀವನದಿ ಇರುತ್ತದೆ, ಆ ಪ್ರದೇಶದವರಲ್ಲದ ಉಳಿದವರು ಹೇಳುವ ಜೀವನದಿಯು ನಮಗೆ ಕೇವಲ ನದಿಯಾಗಿರುತ್ತದೆ ಅಲ್ಲವೇ?

- ಆದರ್ಶ