ಗೆಲುವೆಂದರೆ ಅಷ್ಟೇ.. ಅದೊಂದು ನಿಂತ ನೀರು. ಹೆಚ್ಚೆಂದರೆ ಗೆದ್ದೆವು ಎನ್ನುವ ನಿಟ್ಟುಸಿರು, ನಾಲ್ಕು ಜನಗಳ ಹೊಗಳಿಕೆ. ಮೂರ್ನಾಲ್ಕು ದಿನಗಳಾದ ಮೇಲೆ ನೀವು ಗೆದ್ದ ಮೂಡಿನಲ್ಲಿ ಯಾರಾದರು ಮುಂದೆ ಹೋದರೆ “ಓವರ್ ಆಗಿ ಬಿಲ್ಡ್ ಅಪ್ ಕೊಡಬೇಡ, ಅಮಿಕೊಂಡು ಸೈಡಿಗ್ ಹೋಗಪ್ಪ!” ಅಂತ ಮುಖಕ್ಕೆ ಉಗಿಯುತ್ತಾರೆ, ಅಂದರೆ ನೀವು ಸತ್ತವರಷ್ಟೇ ಅಪ್ರಸ್ತುತ. ಸಾಧಿಸಿದ್ದು ಆಯ್ತು ಅಂದ ಮೇಲೆ ಮುಂದೆ ಏನಿದೆ? ನಿಮ್ಮ ಕ್ರಿಯಾಶೀಲತೆ ಕೊನೆಗೊಂಡಂತೆ. ಆದರೆ ಸೋಲು ಎಂದರೆ ಹರಿಯುವ ನೀರಿದ್ದಂತೆ. ಸೋತಷ್ಟು ಮತ್ತಷ್ಟು ಅವಕಾಶ. ಮತ್ತೆ ಜೀವನದಲ್ಲಿ ಚಲನೆ.

ಉದಾಹರಣೆಗೆ ಹೇಳುತ್ತೀನಿ ಕೇಳ್ರಿ.. ಅದ್ಯಾರೋ ಎಡಿಸನ್ ಅಂತ ಇದ್ನಲ್ವ? ಅದೇ ಬಲ್ಬ್ ಕಂಡು ಹಿಡಿದವನು. ಅವನು ಆ ಬಲ್ಬ್ ಕಂಡು ಹಿಡಿಯಲು ನೂರಾರು ಬಾರಿ ಪ್ರಯತ್ನಿಸಿ ಸೋತಿದ್ನಂತೆ. ಅಂದರೆ ಜನ ಅವನು ಸೋತಿದ್ದು ಕೂಡ ಲೆಕ್ಕ ಇಟ್ಟಿದ್ದರು. ಅವನ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಅದೇ ಅವನು ಬಲ್ಬ್ ಅನ್ನು ಕಂಡು ಹಿಡಿದ ಮೇಲೆ ಅವನನ್ನ್ನು ಯಾರು ಮೂಸಿಯೂ ಸಹ ನೋಡಲಿಲ್ಲ. ಅವನು ಕಂಡುಹಿಡಿದ ಬಲ್ಬ್ ಅನ್ನು ತಮ್ಮ ಮನೆಯ ಹೋಲ್ಡರ್ಗೆ ಸಿಕ್ಕಿಸಿಕೊಂಡು “ ಗುರು ಬಲ್ಬ್ ಅನ್ನ ಎಡಿಸನ್ ಆದ್ರು ಕಂಡು ಹಿಡಿಯಲಿ, ಒಬಾಮ ಆದ್ರು ಕಂಡು ಹಿಡಿಯಲಿ, ಕರೆಂಟ್ ಬಿಲ್ ಕಟ್ಟೋರು ನಾವಲ್ವ!?” ಎಂದು ಅವನನ್ನು ಮರೆತೆ ಹೋದರು. ಜೀವನ ಅಂದರೆ ಹಾಗೆ ಇಡಿ ಜಗತ್ತು ನಿಮ್ಮನ್ನು ಗೆದ್ದಿದ್ದೀರ ಎಂದುಕೊಂಡಾಗ ನೀವು ನಿಜವಾಗಲು ಸೋತಿರುತ್ತೀರ. ಅದೇ ಇಡಿ ಜಗತ್ತು ನಿಮ್ಮನ್ನು ಸೋತಿದ್ದೀರ ಎಂದುಕೊಂಡಾಗ ನೀವು ನಿಜವಾಗಲು ಗೆದ್ದಿರುತ್ತೀರ.

ಆದರೆ ಪ್ರಯತ್ನ ಬಿಡಬಾರದು ಅಷ್ಟೆ. ಅದೇ ಹೇಳಲ್ವ “ಸೋಲೆ ಗೆಲುವಿನ ಮೆಟ್ಟಿಲು“ ಎಂದು. ಅದು ತುಂಬ ದೊಡ್ಡ ಮಾತು. ಅದೇ ಚಿಕ್ಕದಾಗಿ ಹೇಳಬೇಕು ಎಂದರೆ “ನಮ್ ಕೈಲಿ ಏನು ಮಾಡಕ್ ಆಗಲ್ಲ ಗುರು, ಜೀವನ ಬಂದಂಗೆ ತಗೊಂಡು ಮುಚ್ಕೊಂಡು ಬಾಳಬೇಕು ಅಷ್ಟೇ!!”. ಆದರೆ ಸೋಲು ನಿಮ್ಮನ್ನು ಗಟ್ಟಿ ಮಾಡಿದಷ್ಟು, ಗೆಲುವು ನಿಮ್ಮನ್ನು ಹಗುರ ಮಾಡಲಾರದು. ಸಮಸ್ಸ್ಯೆ ಎಂದರೆ ನಾವು ಸೋತಾಗ ನಮ್ಮ ಜೀವನಪ್ರೀತಿಯನ್ನು ಕಳೆದುಕೊಳ್ಳುವುದು. ನಮ್ಮ ಮೇಲೆ ನಾವೇ ನಂಬಿಕೆ ಕಳೆದುಕೊಳ್ಳುವುದು. ಈ ಸಂದರ್ಬದಲ್ಲಿ ನಾವು ಸ್ವಲ್ಪ ಗಟ್ಟಿಯಾಗಿರಬೇಕಾಗುತ್ತದೆ. ಜಗತ್ತು ನಿಮ್ಮ ಮೇಲೆ ವಿಶ್ವಾಸ ಕಳೆದುಕೊಂಡರೆ ಅದು ಜಗತ್ತು ಸತ್ತಂತೆ, ಅದೇ ನೀವೇ ನಿಮ್ಮ ಮೇಲೆ ವಿಶ್ವಾಸ ಕಳೆದುಕೊಂಡರೆ ನೀವೇ ಸತ್ತಂತೆ. ನಾಯಿಗೂ ಒಂದು ದಿನ ಬರುತ್ತಂತೆ, ನಮಗೆ ಬರಲ್ವ?.

ಮೊನ್ನೆ ಸಿ.ಆರ್.ಸಿಂಹ ಅವರ ಪುಸ್ತಕ ಓದುತ್ತಿದ್ದೆ. ಅವರು ಅಬ್ದುಲ್ ಕಲಾಂ ಬಗ್ಗೆ ಒಂದು ಮಾತು ಬರೆದಿದ್ದರು. ಅದು ಎಲ್ಲರಿಗೂ ಗೊತ್ತಿರೋದೆ. ಆದರೂ ಹೇಳುತ್ತೀನಿ. ಕಲಾಂ ಇಂಜಿನಿಯರಿಂಗ್ ಸೇರುವಾಗ ಫೀಸ್ ಕಟ್ಟಲು ದುಡ್ಡಿಲ್ಲದೆ ಅವರ ಸಹೋದರಿಯ ಚಿನ್ನವನ್ನು ಅಡ ಇಟ್ಟಿದ್ದರಂತೆ. ಅದರಲ್ಲೇನಿದೆ? ಎಷ್ಟೋ ಮನೆಯಲ್ಲಿ ಇದು ಆಗುತ್ತದೆ. ಆದರೆ ವಿಷಯ ಅದಲ್ಲ. ಕಲಾಂ ಅವರು ಆ ಬಡತನದಿಂದ ಕುಗ್ಗಲಿಲ್ಲ. ವಿದ್ಯಾಭ್ಯಾಸಕ್ಕೆ ಚಿನ್ನ ಅಡಮಾನ ಇಟ್ಟವರು ಕೊನೆಗೆ ದೇಶಕ್ಕೆ ಚಿನ್ನವಾದರು. ಅಂದರೆ ಭಾರತ ರತ್ನ ಪುರಸ್ಕಾರ ದಕ್ಕಿಸಿಕೊಂಡರು. ಅದಕ್ಕೆ ಹೇಳೋದು ಸೋತು ಗೆಲ್ಲಬೇಕು ಎಂದು. ಆಗ ನಮಗೆ ಗೆಲುವಿನ ಜೊತೆ ಗೆಲುವನ್ನು ಸ್ವೀಕರಿಸುವ ವಿನಯವೂ ಬರುತ್ತದೆ.

ಏನೇ ಆಗಲಿ ಗೆಲ್ಲೋಣ, ನಿಧಾನಕ್ಕೆ ಗೆಲ್ಲೋಣ, ಮತ್ತೆ ಸೋಲದಿದ್ದ ಹಾಗೆ ಗೆಲ್ಲೋಣ.

– ದೀಪಕ್ ಬಸ್ರೂರು