ನಾನಾರೆಂಬುದು ನಾನಲ್ಲ
by Deepak Basrur
ಅವನು ಬೆಳಿಗ್ಗೆ ಎದ್ದೇಳುವಾಗಲೇ ಎಂಟು ಗಂಟೆ ಆಗಿತ್ತು. ಹತ್ತು ಗಂಟೆಗೆ ಮೀಟಿಂಗ್ ಬೇರೆ ಇತ್ತು.ತಾನೇ ಕರೆದಿರುವ ಮೀಟಿಂಗ್ ಆದ್ದರಿಂದ ಹೋಗದೆ ಇರುವ ಹಾಗೆ ಇರಲಿಲ್ಲ. ಕಂಪನಿಗೆ ಅವನೆ ಬಾಸ್ ಬೆರೆ. ಕಾಫಿ ತಂದ ಹೆಂಡತಿಗೆ “ಬೇಗ ಎಬ್ಬಿಸೊಕೆ ಆಗಲಿಲ್ವ” ಅಂತ ರೇಗುತ್ತಾನೆ. ಪ್ರತಿ ದಿನ ತಾನಾಗೆ ಅಲಾರಂ ಇಟ್ಟುಕೊಂಡು ಎದ್ಹೆಳುತ್ತಿದ್ದವನು ಇವತ್ತು ಬೇಕು ಅಂತಲೆ ಮಲಗಿರಬಹುದು ಎಂದುಕೊಂಡು ಆಕೆ ಕೂಡ ಸುಮ್ಮನಿದ್ದಳು.ಅದನ್ನೆ ಅವನಿಗೆ ಹೇಳಲು ಭಯವಾಗಿ ಸುಮ್ಮನಾಗುತ್ತಾಳೆ. ಇವನು ಗಡಿಬಿಡಿ ಇಂದ ರೆಡಿ ಆಗಿ ಆಚೆಗೆ ಬಂದರೆ ಕಾರು ಇರೊದಿಲ್ಲ. ಜೊತೆಗೆ ಡ್ರೈವರ್ ಸುಳಿವು ಕೂಡ ಇರೊದಿಲ್ಲ. ಅಷ್ಟರಲ್ಲಿ ಹೆಂಡತಿ ಹೊಳಗಿನಿಂದ “ಡ್ರೈವರ್ ಕಾರನ್ನು ಸರ್ವಿಸ್ ಗೆ ಬಿಡಲು ಹೋಗಿದ್ದಾನೆ, ಹಾಗೆ ಮಗಳನ್ನು ಸ್ಕೂಲಿಗೆ ಬಿಟ್ಟು ಹೋಗುತ್ತಾನಂತೆ” ಎನ್ನುತ್ತಾಳೆ. ಮತ್ತೂ ಮುಂದುವರೆಸಿ “ ಡಾಕ್ಟರ್ ಫೋನ್ ಮಾಡಿದ್ದರು. ಮುಂದಿನ ಸೋಮವಾರ ನಿಮ್ಮ ಅಮ್ಮನಿಗೆ ಕಾಲಿನ ಮಂಡಿ ಚಿಪ್ಪಿನ ಆಪರೇಷನ್ ಮಾಡುತ್ತಾರಂತೆ. ನೀವು ಜೊತೆಯಲ್ಲೇ ಇರಬೇಕಂತೆ ” ಎಂದು ಅವನನ್ನು ಮುಂಗಡವಾಗಿ ಕಾಯ್ಧಿರಿಸುತ್ತಾಳೆ. ಇವನಿಗೆ ಅವನ್ನೆಲ್ಲ ಕೇಳಿಸಿಕೊಳ್ಳುವ ವ್ಯವಧಾನ ಇರೊದಿಲ್ಲ. ಅವನು ಡ್ರೈವರ್ಗೆ ಇವತ್ತೆ ಸಮಯ ಸಿಕ್ಕಿದ್ದ ಕಾರನ್ನು ಸರ್ವಿಸ್ಗೆ ಬಿಡಲು ಎಂದು ಮನಸಿನಲ್ಲೇ ಬೈಯ್ಯುತ್ತ ಇರುತ್ತಾನೆ. ಅಷ್ಟಕ್ಕೂ ನಿನ್ನೆ ಇವನೇ ಡ್ರೈವರ್ಗೆ ಗಾಡಿನ ಸರ್ವಿಸ್ಗೆ ಬಿಡಲು ಹೇಳಿದ್ದ. ಸಮಯ ಬೆರೆ ಮೀರುತಿತ್ತು. ಟ್ಯಾಕ್ಸಿ, ಆಟೋ ಸ್ಟ್ರೈಕ್ ಬೆರೆ. ಶೆಡ್ಡಿನಲ್ಲಿ ನಿಲ್ಲಿಸಿದ್ಧ ಡೇವಿಡ್ಸನ್ ಬೈಕನ್ನು ತೆಗೆದುಕೊಂಡು ಹೊರಡುತ್ತಾನೆ. ದಾರಿಯಲ್ಲಿ ಹೋಗುವಾಲು ಅಷ್ಟೇ, ಎದುರಿಗೆ ಬಂದವರಿಗೆಲ್ಲ ಬೈಗುಳವೇ. ಟ್ರಾಫಿಕ್ ಪೋಲಿಸಗೆ, ಬೀಳುವ ಸಿಗ್ನಲ್ಗೆ, ಬಸ್ಸಿನ ಡ್ರೈವರ್, ರೋಡು ಮಾಡಿದವನಿಂದ ಇಡಿದು ರೋಡಿನಲ್ಲಿ ಇರುವವವರಿಗೆಲ್ಲ ಬೈಗುಳವೆ.
ಅವನಿದ್ದಿದ್ದೆ ಹಾಗೆ. ಚಿನ್ನದ ತೊಟ್ಟಿಲಲ್ಲಿ ಬೆಳೆದ ಅವನಿಗೆ ಕಷ್ಟದ ಅನುಭವ ಇಲ್ಲ. ಏನು ಬೇಕಾದರುಕ್ಷಣದಲ್ಲಿ ಸಿಗುತಿತ್ತು. ಅದ್ದರಿಂದ ಬದುಕು ಅವನು ಹೇಳಿದ ಹಾಗೆ ಕೇಳುತಿತ್ತು. ಅವನು ಅಂದುಕೊಂಡದ್ದೆಲ್ಲ ನಡೆಯುತ್ತದೆ, ಯಾರೂ ಅವನ ಎದುರು ಮಾತನಾಡುವುದಿಲ್ಲ, ಒಂದು ರೀತಿ ಸರ್ವಾಧಿಕಾರಿ ಭಾವನೆ.
ಮೀಟಿಂಗ್ನಲ್ಲೂ ಅದೇ ಕೂಗಾಟ, ದರ್ಪ. ತಿಂಗಳ ಸಂಬಳಕ್ಕಾಗಿ ಕೆಲಸ ಮಾಡುವವರು ಅವನ ಎದುರು ಏನು ತಾನೆ ಮಾತಾಡಲು ಸಾಧ್ಯ? ಅವನು ಹೇಳಿದ್ದನ್ನು ಕೇಳಿಸಿಕೊಂಡು, ಬೈದಿದ್ದನ್ನು ಬೈಸಿಕೊಂಡು ಸುಮ್ಮನೆ ಕುಳಿತಿರುತ್ತಾರೆ. ಅಂತು ಮೀಟಿಂಗ್ ಮುಗಿಯುವಾಗ ಮಧ್ಯಾಹ್ನ ಮೂರು ಗಂಟೆ. ತನ್ನ ಕ್ಯಾಬಿನ್ಗೆ ಬಂದವನಿಗೆ ಹೆಂಡತಿಯಿಂದ ಫೋನ್ ಬರುತ್ತದೆ.” ಕಾರು ಇನ್ನು ರೆಡಿ ಆಗಿಲ್ಲವಂತೆ, ಮಗಳನ್ನು ನೀವೇ ಕರೆದುಕೊಂಡು ಬರಬೇಕು “ ಎನ್ನುತ್ತಾಳೆ. ಇವನು ಒಲ್ಲದ ಮನಸ್ಸಿನಿಂದ ಹೊರಡುತ್ತಾನೆ. ರಸ್ತೆಯ ಮೇಲೆ ಬೈಕಿನಲ್ಲಿ ಇವನ ಪಯಣ ಸಾಗುತ್ತಿರುತ್ತದೆ. ಮುಂದೆ ಯಾವುದೊ ನೀರಿನ ಟ್ಯಾಂಕರನ್ನು ಹಿಂದೆ ಇಕ್ಕುವ ಪ್ರಯತ್ನದಲ್ಲಿದ್ದ. ಟ್ಯಾಂಕರಿವನು ಮುಂದೆ ಇದ್ದ ಹಳ್ಳವನ್ನು ತಪ್ಪಿಸಲು ಹೋಗಿ ಟ್ಯಾಂಕರ್ ಸ್ವಲ್ಪ ವಾಲುತ್ತದೆ. ಅಷ್ಟೇ..ಟ್ಯಾಂಕರ್ ಇವನ ಬೈಕ್ ಗೆ ಗುದ್ದುತ್ತದೆ. ಇವನು ಕೆಳಗೆ ಬೀಳುತ್ತಾನೆ.
ಹತ್ತು ನಿಮಿಷದ ನಂತರ ಎಚ್ಚರವಾಗಿ ನೋಡಿದರೆ ಜನರೆಲ್ಲ ಅವನ ಸುತ್ತ ಆ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲದೆ ಇರುವವರ ಹಾಗೆ ನಿಂತಿರುತ್ತಾರೆ. ಅವನು ಅವರಿಗೆಲ್ಲ ಮನಸ್ಸಿನಲ್ಲೇ ಬೈಯುತ್ತ ಎದ್ದು ನಿಲ್ಲುತ್ತಾನೆ. ಬೈಕನ್ನು ಎತ್ತಲು ತಿರುಗಿ ನೋಡಿದರೆ, ಆಶ್ಚರ್ಯ!!!. ಇವನ ತರವೆ ಇರುವಂತ ಇನ್ನೊಬ್ಬ ಅಲ್ಲಿ ಮಲಗಿದ್ದನು. ಇವನು ಅವನನ್ನು ನೋಡುತ್ತಾ ಗೊಂದಲದಲ್ಲೇ ಬೈಕನ್ನು ಮೇಲೆ ಎತ್ತಲು ಹೋದರೆ, ಬೈಕು ಕೈಗೇ ಸಿಗುವುದಿಲ್ಲ. ಅವನಿಗೆ ವಸ್ತುಗಳ ಮೇಲೆ ಸ್ಪರ್ಶ ಜ್ಞಾನವೇ ಇಲ್ಲದಂತಾಗುತ್ತದೆ. ಜನರನ್ನು ಮಾತನಾಡಿಸಿದರೆ ಅವರಿಗೆ ಇವನ ಮಾತು ಕೇಳಿಸದಂತೆ ಇರುತ್ತಾರೆ. ಇವನಿಗೆ ಇನ್ನು ಗೊಂದಲ ಹೆಚ್ಚಾಗುತ್ತದೆ. ಆಗ ಗುಂಪಿನಲ್ಲಿ ಹಿಂದೆ ಇಂದ ಯಾರೋ ಬೆನ್ನು ಮುಟ್ಟಿ ಕರೆದಂತೆ ಆಗುತ್ತದೆ. ತಿರುಗಿ ನೋಡಿದರೆ ಅವರಿಬ್ಬರು ಕಾಣುತ್ತಾರೆ. ಒಳ್ಳೆ ಸಿನಿಮಾದಲ್ಲಿ ಬರುವ ಯಮಕಿಂಕರರ ಹಾಗೆ. ಈಗ ಅವನಿಗೆ ಅವನ ಪ್ರಾಣ ಹೋಗಿರುವ ಸುಳಿವು ಸಿಕ್ಕಿದಂತೆ ಆಗುತ್ತದೆ. ಅವನು ಸ್ವಲ್ಪ ಗಟ್ಟಿ ದನಿಯಲ್ಲಿ ಅವರಿಬ್ಬರಿಗೆ “ ನಾನು ಎಲ್ಲಿಗು ಬರುವುದಿಲ್ಲ ” ಎಂದು ಕೂಗುತ್ತಾನೆ. ಅದಕ್ಕವರು ಏನು ಮಾತಾಡದೆ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು ಮುಗುಳ್ನಗುತ್ತಾರೆ ಅಷ್ಟೇ. ಅವನಿಗೆ ಈಗ ಯಾಕೊ ಸೋತಂಥ ಅನುಭವ ಆಗುತ್ತದೆ. ಕೆಲಸದವರ ಮುಂದೆ ಹುಲಿಯಂತೆ ಕೂಗುತಿದ್ದವನು ಅಲ್ಲಿ ಮೂಕನಂತೆ ನಿಂತಿರುತ್ತಾನೆ. ಅಷ್ಟಕ್ಕೂ ಅವನಿಗೆ ಮತ್ತೆ ಜೀವ ಯಾಕೆ ಬೇಕು? ಒಮ್ಮೆಯೂ ಯಾರೊಬ್ಬರ ಜೊತೆ ತಣ್ಣಗೆ ಮಾತಾಡಲಿಲ್ಲ, ಮನೆಯವರ ಜೊತೆ ಕಲ ಕಳೆಯಲಿಲ್ಲ, ಮಕ್ಕಳ ಜೊತೆ ಆಟ ಆಡಲಿಲ್ಲ. ಈಗ ಎಲ್ಲ ಮಾಡುತ್ತೆನೆಂದರು ಸಮಯ ಅವಕಾಶ ಕೊಡಲಿಲ್ಲ. ಎಲ್ಲ ಯೋಚನೆಯ ನಡುವೆ ಅವನಿಗೆ ಪೆದ್ದು ಮುಖ ಮಾಡಿಕೊಂಡು ಕಾಯುತ್ತಿರುವ ಮಗಳ ನೆನಪಾಗುತ್ತದೆ. ಅವನು ಅವರಿಬ್ಬರಿಗೆ “ ಕೊನೆ ಪಕ್ಷ ಮಗಳನ್ನು ಸ್ಕೂಲಿನಿಂದ ಮನೆಗೆ ಬಿಟ್ಟು ಬರುತ್ತೇನೆ “ ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಅವರು “ ಈಗ ಅವಳು ನಿನ್ನ ಮಗಳಲ್ಲ “ ಎನ್ನುತ್ತಾರೆ. ಹೋಗಲಿ ತಾಯಿಯ ಆಪರೇಷನ್ ಆಗುವವರೆಗೆ ಆದರು ಅವರ ಜೊತೆ ಇದ್ದು ಬರುತ್ತೇನೆ ಎಂದರೆ, ಅವರೊ ಈಗ ನಿನ್ನ ತಾಯಿ ಅಲ್ಲ, ಸಧ್ಯಕ್ಕೆ ಇಲ್ಲಿ ಯಾವುದು ನಿನ್ನದಲ್ಲ ಎನ್ನುತ್ತಾರೆ. ಅವನಿಗೆ ಏನು ಮಾಡಬೇಕೆಂಬುದೇ ತಿಳಿಯದೆ ತಿರುಗಿ ನೋಡಿದರೆ, ಅವನ ದೇಹವನ್ನು ಆಂಬುಲೆನ್ಸ್ನಲ್ಲಿ ತುಂಬುತ್ತಿರುತ್ತಾರೆ. ಇವನು ಯಾವುದೊ ಪ್ರಶ್ನೆ ಮೂಡಿದವನಂತೆ ಇವರಿಬ್ಬರ ಕಡೆ ತಿರುಗುತ್ತಾನೆ. ಪಾಪ, ಅವನ ಗೊಂದಲ ಅವರಿಗೆ ಅರ್ಥ ಆಗುತ್ತದೆ ಅನ್ನಿಸುತ್ತದೆ. “ ಆ ದೇಹ ಕೂಡ ನಿನ್ನದಲ್ಲ” ಎನ್ನುತ್ತಾರೆ. ನನಗೆ ಜನ್ಮ ಕೊಟ್ಟವಳು ನನ್ನ ತಾಯಿ ಅಲ್ಲ, ನಾನು ಜನ್ಮ ಕೊಟ್ಟವಳು ನನ್ನ ಮಗಳಲ್ಲ, ಹೋಗಲಿ ಇಷ್ಟು ದಿನ ಜೋತೆಲಿದ್ದ ದೇಹವು ಕೂಡ ನನ್ನದಲ್ಲ ಎನ್ನುವುದಾದರೆ ಇಲ್ಲಿ ನನ್ನದೇನು?. ಅವನು ಏನು ತಿಳಿಯದೆ ಬಿಕ್ಕಿ ಬಿಕ್ಕಿ ಅಳುತ್ತಾನೆ.
ಕಥೆ ಅಲ್ಲಿಗೆ ಮುಗಿಯುತ್ತದೆ. ಆದರೆ ಅದೊಂದು ಪ್ರಶ್ನೆ ಹಾಗೆ ಉಳಿದುಕೊಂಡು ಬಿಟ್ಟಿದೆ. ನೀವು ಯಾವುದಾದರು ಪ್ರವಾಸಕ್ಕೆ ಹೊರಟರೆ ಎಷ್ಟೆಲ್ಲಾ ತಯಾರಿ ಮಾಡಿಕೊಳ್ಳುತ್ತಿರಿ ಅಲ್ಲವೇ. ಯಾವ ಗಾಡಿಯಲ್ಲಿ ಹೋಗಬೇಕು? ಯಾವ ಮಾರ್ಗದಲ್ಲಿ ಹೋಗಬೇಕು ಎಂದೆಲ್ಲ ಮೊದಲೇ ನಿರ್ಧರಿಸುತ್ತಿರಿ. ಹಲ್ಲು ಉಜ್ಜುವ ಬ್ರಷ್ನಿಂದ ಇಡಿದು ಬೇಕಾದ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ಹೋದ ನಂತರವೂ ಅಲ್ಲಿಗೆ ಹೋಗಿ ಇನ್ನೇನೋ ಬಿಟ್ಟೆವಲ್ಲ ಅಂತ ಕೈ ಹಿಸುಕಿ ಕೊಳ್ಳುತ್ತೇವೆ. ಒಂದೆರಡು ದಿನ ಇದ್ದು ವಾಪಸ್ಸು ಬರುವಂತಹ ಜಾಗಕ್ಕೆ ಹೋಗುವಾಗಲೇ ಇಷ್ಟೆಲ್ಲಾ ತಯಾರಿ ನಡೆಸುವ ನಮಗೆ, ಎಂದೂ ನೋಡಿರದ, ಮತ್ತೆ ತಿರುಗಿಯೂ ಬರಲು ಆಗದಂತ ಜಾಗಕ್ಕೆ ಹೋಗಬೇಕು ಅನ್ನಿಸಿದಾಗ ನಮಗೆ ಏನನ್ನಿಸಬಹುದು? ಬದುಕಿದ್ದಾಗ ನಾವು ಎಲ್ಲರೂ ಇಲ್ಲಿ ರಾಜಾಹುಲಿಗಳೇ, ಒಮ್ಮೆ ವಿಧಿ ಬೆನ್ನು ಸವರಿ ತಲೆ ಮೇಲೆ ಹೊಡೆದ ನಂತರವೆ ನಮಗೆ ಗೊತ್ತಾಗುವುದು ನಾವೆಷ್ಟು ಅಸಾಹಾಯಕರು ಎಂದು!!!!!
-ದೀಪಕ್ ಬಸ್ರೂರು