ಸೋಲು ಗೆಲುವಿನ ನಡುವೆ ಈ ಪ್ರಪಂಚದ ಸುತ್ತ ಒಂದು ಸಣ್ಣ ಪಯಣ. ಮನುಷ್ಯ ಉಗಮವಾದಾಗಿನಿಂದಲೂ ಪ್ರತಿ ಹಂತ ಹಂತದಲ್ಲೂ ಈ ಎರಡು ಮುಖಗಳ ಮಧ್ಯೆ ಜೀವಿಸುತ್ತಾನೆ. ಇವೆರಡು ಪದಗಳು ಯುಗ ಯುಗಾಂತರಗಳಿಂದ ಬಂದಿರುವಂತದ್ದು ನಿಜವೆ. ತ್ರೇತ್ರಾಯುಗದಲ್ಲಿ ರಾಮ ರಾವಣನ ನಡುವೆ,ದ್ವಾಪರಯುಗದಲ್ಲಿ ಪಾಂಡವ ಕೌರವರ ನಡುವೆ, ಇನ್ನು ಕಲಿ ಯುಗದಲ್ಲಿ ಸಾವಿರಾರು ಮಂದಿಗಳ ನಡುವೆ ಅಟ-ಪರಿಪಾಟ ನಡೆದಿತ್ತು. ಹಾಗಾದರೆ ಗೆದ್ದವರ ಪ್ರಾಣ ಉಳಿಯಿತೆ,ಸೋತವರ ಪ್ರಾಣ ಚಿಗುರಿತೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದರೂ ಅದನ್ನು ಕೇಳಲಾಗದೆ ಮನಸ್ಸಿನ ಗೋಡೆಗಳ ಮೇಲೆ ಪರದೆಯನ್ನು ಸರಿಸಿ ಮುಚ್ಚಿರುತ್ತೇವೆ,ಕಾರಣ ಗೆದ್ದವರ ಮೇಲಿರುವ ಭಕ್ತಿ, ಒಲವು ಮತ್ತು ಅಭಿಮಾನ. ಅವುಗಳೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದಾಗ ಶ್ರೀರಾಮನು ತನ್ನ ಪತ್ನಿ ಸೀತಾ ಮಾತೆಯ ಮೇಲೆ ಅನುಮಾನ ಪಟ್ಟು ಅವರನ್ನು ಅಗ್ನಿಗೆ ಆಹುತಿಯಾಗುವಂತೆ ಮಾಡಿದನು. ಆದರೆ ಆ ಸೀತಾಮಾತೆಗಾಗಿಯೇ ರಾಮಾಯಣ ನಡೆಯಿತು ಎಂಬುದು ನಮಗೆ ಗೊತ್ತಿರುವ ಸಂಗತಿ.

ಹಾಗೆಯೇ ಮಹಾಭಾರತವು ಪಾಂಡವರು ಮತ್ತು ಕೌರವರು ಎಂಬ ಒಂದೆ ತಾಯಿಯ ಹೊಟ್ಟೆಯಲ್ಲಿ ಹುಟ್ಟದ ಅಣ್ಣ ತಮ್ಮಂದಿರ ನಡುವೆ ನಡೆಯಿತು. ಮೂರನೇ ವ್ಯಕ್ತಿಯ ಮಾತಿಗೆ ತಲೆದೂಗಿ ತನ್ನ ಅಣ್ಣ ತಮ್ಮಂದಿರಿಂದಲೇ ಪ್ರಾಣ ಕಳೆದುಕೊಂಡ ಕೌರವರು ಗಳಿಸಿದ್ದು ಸಾವೆಂಬ ಸೋಲು. ಹಾಗಾದರೆ ಗೆದ್ದ ಪಾಂಡವರು ಗಳಿಸಿದ್ದಾದರು ಏನು..? ಕೌರವರನ್ನು ಸೋಲಿಸಿದ ಖುಷಿಯಿಂದ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ ಅಥವಾ ತಮ್ನ ಸಹೋದರರನ್ನು ಸಾಯಿಸಿದ ಸಂಕಟವು ಅವರನ್ನು ಕಾಡ ತೊಡಗಿತೆ ಎಂಬ ಪ್ರಶ್ನೆಗೆ ಉತ್ತರ ಮಹಾ ಕಾವ್ಯವಾದ ಮಹಾಭಾರತದಲ್ಲಿ ಹುಡುಕಲಾಗುವುದೇ..?

ಇನ್ನು ಕಲಿಯುಗದಲ್ಲಿ ಸಾವಿರಾರು ಮಂದಿ ನೆನಪಾದರು ವಿಶ್ವವನ್ನೆ ತನ್ನದಾಗಿಸಿಕೊಂಡಿದ್ದ ಅಲೆಕ್ಸಾಂಡರ್ ಎಂಬ ಹೆಸರು ಥಟ್ಟನೆ ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಅವನು ಗೆಲುವಿನ ಪ್ರತಿಬಿಂಬನಾಗಿದ್ದನು. ಎಲ್ಲವನ್ನು ಗೆದ್ದ ನಂತರ ಅವನಿಗೆ ಗೆಲ್ಲಲು ಉಳಿದಿದ್ದಾದರು ಏನು, ಸಾವು ಒಂದೆಯೇ..? ಅದರೆ ಅದನ್ನು ಗೆಲ್ಲಲು ಸಾಧ್ಯವೇ. ಇದನ್ನು ಜಗತ್ತಿಗೆ ತಿಳಿಸಲು ತಾನು ಸಾಯುವ ಮುನ್ನ ತನ್ನ ಕೈಯನ್ನು ಮಣ್ಣಿನಿಂದ ಮುಚ್ಚದೆ ಹೊರಗೆ ಉಳಿಸಲು ಹೇಳುತ್ತಾನೆ.

ಹಾಗೆಯೇ ಈಗಿನ ಕಾಲದಲ್ಲಿ ಮನುಷ್ಯ ತಾನೆಷ್ಟೆ ಎತ್ತರಕ್ಕೆ ಬೆಳೆದರು,ತನ್ನವರಿಗಾಗಿ ಸೋಲಲೇ ಬೇಕು. ಒಬ್ಬ ಮಾನವನು ತಾನೆಷ್ಟೇ ಎತ್ತರಕ್ಕೆ ಬೆಳೆದರು ತನ್ನ ಹೆಂಡತಿ ಮತ್ತು ಮಕ್ಕಳಿಗೆ ಮನಸ್ಸು ಬಾಗಿಸಲೇಬೇಕು. ತಾನೆಷ್ಟೇ ಆರ್ಥಿಕವಾಗಿ ಬೆಳೆದಿದ್ದರು ತನ್ನ ಮಗುವಿನ ಮುಂದೆ ಮಗುವಾಗಲೇಬೇಕು ಏಕೆಂದರೆ ತನ್ನ ಮಗು ನಡೆದು ಬಂದ ದಾರಿಯಲ್ಲಿ ತಾನೂ ನಡೆದಿದ್ದ ಹೆಜ್ಜೆ ಗುರುತಿನ ಹಚ್ಚೆಯಾಗಿತ್ತು. ಆ ಸಮಯದಲ್ಲಿ ನಿನ್ನ ಮಗುವಿನ ಜಾಗದಲ್ಲಿ ನೀನಿರುವಂತೆ,ನಿನ್ನ ಜಾಗದಲ್ಲಿ ನಿನ್ನ ತಂದೆ ಇದ್ದಂತಹ ಸಮಯದ ನೆನಪು ಬರುವುದು ನಿಶ್ಚಯ. ನೀನಿಲ್ಲಿ ಸೋತರು ಗೆಲುವಿನ ತಿಲಕ ನಿನ್ನ ಹಣೆಯಲ್ಲಿದ್ದಂತೆ. ಹಠವ ಮಾಡಿ ನಿನಗೆ ಬೇಕಾದುದನ್ನು ಪಡೆಯುವುದರಲ್ಲಿ ನೀನು ಗೆಲುವು ಕಂಡರೆ, ಅದರಲ್ಲೇ ಕೆಲವೊಮ್ಮೆ ನಿನಗಾಗಿ ಸೋತವರ ನೋವಿರುತ್ತದೆ.

ನಿನ್ನ ಬೆಳವಣಿಗೆಗಾಗಿ ಗೆಲ್ಲು, ನಿನ್ನವರಿಗಾಗಿ ಸೋಲು, ಅಂದಿಗೆ ನಿನ್ನ ಜನ್ಮ ಸಾರ್ಥಕವಾಗುತ್ತದೆ. ಈ ನಿನ್ನ ಜೀವನದ ಸೋಲು ಗೆಲುವಿನ ತೀರ್ಪು ಏನಾಯಿತು ಎಂಬ ಪ್ರಶ್ನೆಗೆ ಉತ್ತರ ನಿನಗೆ ದೊರಕುವ ಮುನ್ನವೇ ಜವರಾಯನ ದೂತರು ನಿನ್ನ ಅಂಗಳದಲ್ಲಿ ಕಾಯುತ್ತಾ ಇರುತ್ತಾರೆ.

ಹಾಗಾದರೆ ನಿನ್ನ ಗೆಲುವು ಗೆದ್ದಿತೆ,ಸೋಲು ಸೋತಿತೆ ಅಥವಾ ಗೆಲುವು ಸೋತಿತೆ, ಸೋಲು ಗೆದ್ದಿತೆ ಎಂಬ ಪ್ರಶ್ನೆಗೆ ಉತ್ತರ ನಿನ್ನ ನಿಂತ ಉಸಿರಿನಲ್ಲಿರುತ್ತದೆ. ಆ ಉತ್ತರ ನಿನ್ನನ್ನು ಹೊರತು ನಿನ್ನ ಪ್ರಪಂಚಕ್ಕೆ ತಲುಪುತ್ತದೆ.

– ಅಮೃತ್ ಸಾಗರ್