ಅಣ್ಣನ ನೆನಪು ಪುಸ್ತಕ ಕೊಂಡುಕೊಳ್ಳುವಾಗ ಇದರಲ್ಲಿ ಬಹುಶಃ ಕುವೆಂಪುರವರ ಕವಿತೆ, ಕಾದಂಬರಿ, ನಾಟಕಗಳ ವಿಷಯವೇ ಪೂರ್ತಿ ಇರಬಹುದೇನೋ? ಅಥವಾ ತೇಜಸ್ವಿಯವರ ಬಾಲ್ಯದ ಬಗ್ಗೆ, ಅವರು ನಡೆದು ಬಂದ ದಾರಿ ಬಗ್ಗೆ ಈ ವಿಷಯಗಳೇ ತುಂಬಿರಬಹುದು ಎಂದು ಆಲೋಚಿಸಿದ್ದೆ.

ಪುಸ್ತಕ ಓದುವುದಕ್ಕೆ ಶುರುಮಾಡಿದ ನಂತರ ಒಂದೊಂದೇ ವಿಷಯಗಳು, ಕುವೆಂಪು ಅವರ ವಿಭಿನ್ನ ವಕ್ತಿತ್ವ ಅನಾವರಣಗೊಳ್ಳುತ್ತಾ ಹೋದವು. ತೇಜಸ್ವಿಯವರ ಬಾಲ್ಯದ ಕುಚೇಷ್ಟೆಗಳು, ಮೈಸೂರಿನ ಆ ಕಾಲದ ಚಿತ್ರಣ, ಅವರ ಫೋಟೋಗ್ರಫಿಯ ಪಾಂಡಿತ್ಯ, ಸಂಗೀತಭ್ಯಾಸದ ಪ್ರಲಾಪಗಳು, ಅವರ ಕಡುವೈರಿಯಾದ ಇಂಗ್ಲಿಷ್ ವಿಷಯದ ಕಥೆಗಳು, ಚಳುವಳಿಗಳಲ್ಲಿ ಭಾಗವಹಿಸುವ ಮುಂದಾಳತ್ವ, ಹೀಗೆ ಪ್ರತಿಯೊಂದರಲ್ಲೂ ತೇಜಸ್ವಿಯವರ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದ ಕುವೆಂಪುರವರ ಬಗ್ಗೆ ಸೊಗಸಾಗಿ ಚಿತ್ರಿಸಲಾಗಿದೆ.

ಕುವೆಂಪು ಅವರು ಎಂದೂ ದೇವಸ್ಥಾನಗಳಿಗೆ ಹೋದವರಲ್ಲ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಅವರು ದೇವರ ಮನೆಯಲ್ಲಿ ಗಂಟೆಗಟ್ಟಲೆ ಕೂತು ಪೂಜೆ, ಧ್ಯಾನ ಮಾಡುತ್ತಾ ಇದ್ದರು. ಅವರ ಮನೆ ಎದುರಿಗಿದ್ದ ಪನ್ನೇರಳೆ ಮರದಲ್ಲಿ ಟುವ್ವಿ ಹಕ್ಕಿ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಗೂಡು ಬಿಟ್ಟು ಹಾರಿಹೋಗುವವರೆಗೂ, ದಿನ ಪೂರ್ತಿ ಕೂತು ಅದರ ಚಲವಲನಗಳನ್ನು ನೋಡುವ ಅವರ ಅಪಾರ ತಾಳ್ಮೆ ಯಾವ ಋಷಿಮುನಿಗಳಿಗಿಂತನೂ ಕಮ್ಮಿ ಅಲ್ಲ. ಕುವೆಂಪು ಅವರಿಗಿದ್ದ ಕನ್ನಡಭಿಮಾನ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕೆಂಬ ದಿಟ್ಟ ನಿಲುವು, ಜಾತಿಪದ್ಧತಿ ವಿನಾಶಕ್ಕೆ ಮಾಡಿದ ಸರಳವಿವಾಹದ ಮುನ್ನುಡಿ, ಅನೇಕ ಸಾಹಿತಿಗಳಿಗಿದ್ದ ದ್ವೇಷ, ಅಸೂಯೆಗಳನ್ನು ಖಂಡಿಸುವ ಧೈರ್ಯ, ತತ್ವಶಾಸ್ತ್ರದ ಮೇಲಿನ ಪ್ರೀತಿ…. ಹೀಗೆ ವೈವಿಧ್ಯ ವಕ್ತಿತ್ವ ಹೊಂದಿರುವ ಕುವೆಂಪುರವರು ನಮಗೆಲ್ಲ ಮಾದರಿಯಾಗಿದ್ದಾರೆ. ಒಮ್ಮೆ ತೇಜಸ್ವಿ ಅವರ ಟೀಚರ್ ಕ್ಲಾಸಿನಲ್ಲಿ ಪಾಠಮಾಡುವಾಗ, ಕುವೆಂಪುರವರು ರಾಮಾಯಣ ದರ್ಶನಂ ಬರೆಯುವಾಗ ಸಂಪೂರ್ಣ ಮಾಂಸಾಹಾರ ತ್ಯಜಿಸಿದ್ದರೆಂದು, ಮಲೆಗಳಲ್ಲಿ ಮದುಮಗಳು ಬರೆಯುವಾಗ ಶಾಕಾಹಾರಿಯಾಗಿರಲಿಲ್ಲ ಎಂದು ಹೇಳಿದ್ದನ್ನು ತೇಜಸ್ವಿ ಅವರು ತಮ್ಮ ತಂದೆಗೆ ಹೇಳಿದಾಗ ಅದನ್ನು ಕೇಳಿದ ಕುವೆಂಪು ಕೆಂಡಾಮಂಡಲವಾಗಿದ್ದರು. ವೈಸ್ ಛಾನ್ಸ್ಲರ್ ಆಗಿದ್ದಾಗ, ಅವರ ವಿರುದ್ದ ಗುಂಪೊಂದು ಪ್ರತಿಭಟನೆ ನಡೆಸಿ, ಮನೆಯ ಕಿಟಕಿ, ಬಾಗಿಲು, ಹೂವಿನ ಕುಂಡಗಳನ್ನು ಧ್ವಂಸ ಮಾಡಿದ್ದನ್ನು ನೋಡಿದರೆ, ಎಂತಹ ಮಹಾನ್ ವ್ಯಕ್ತಿಗಳಿಗೂ ವಿರೋಧಿಗಳಿರುವುದು ವಿಷಾದವೆನಿಸುತ್ತದೆ. ಎಂಥಹ ಸುಶಿಕ್ಷಿತರೂ ಜ್ಞಾನವಂತರು ಕೂಡ ಈ ಜಾತಿಯ ಬಲೆಯಲ್ಲಿ, ಸಂಪ್ರದಾಯದ ಚೌಕಟ್ಟಿನಲ್ಲಿ ಬಂಧಿತರಾಗುವುದನ್ನು ಬಹಳ ಸೊಗಸಾಗಿ ಅಣ್ಣನ ನೆನಪು ಪುಸ್ತಕದಲ್ಲಿ ಚಿತ್ರಿಸಲಾಗಿದೆ.

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂದು ವಿಶ್ವ ಸಂದೇಶ ಸಾರಿರುವ ವಿಶ್ವ ಮಾನವನ ತತ್ವಗಳನ್ನು, ಆದರ್ಶಗಳನ್ನು ನಾವು ಅಳವಡಿಸಿಕೊಳ್ಳೋಣ. ಸಮಾಜದ ಬದಲಾವಣೆಗಾಗಿ ಯಾರನ್ನು ಕಾಯದೆ, ನಾವೇ ಬದಲಾವಣೆ ಮಾಡುವ ಚಿಕ್ಕ ಪ್ರಯತ್ನಕ್ಕೆ ಕೈ ಹಾಕೋಣ ಎನಂತೀರಾ???!!!

-ಅರ್ಚನ ಬಾವಿಮನೆ