ಒಂದೊಳ್ಳೆ ಕಥೆ. ಓದಿದ ನಂತರ ಒಂದು ಪಾತ್ರ ಹಾಗೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಮಹಾಭಾರತವನ್ನೇ ತೆಗೆದುಕೊಳ್ಳಿ. ಒಬ್ಬರಿಗೆ ಕೃಷ್ಣ ಇಷ್ಟ ಆದರೆ ಇನ್ನೊಬ್ಬರಿಗೆ ಭೀಮ, ಮತ್ತೊಬ್ಬರಿಗೆ ಅರ್ಜುನ. ಇನ್ನು ನನ್ನಂಥವರಿಗೆ ದುರ್ಯೋಧನ. ಹೀಗೆ ಆ ಪಾತ್ರ ಪಟ್ಟ ಕಷ್ಟ, ಬದುಕಿದ ಖುಷಿಯ ರೀತಿ, ಮಾಡಿದ ಸಾಧನೆಯೊಂದು ಮನಸ್ಸಿನ ಯಾವುದೊ ಮೂಲೆಯಲ್ಲಿ ಕೂತು ಯೋಚನೆಗೆ ತಳ್ಳುತ್ತದೆ. ”ಛೆ.. ಎಂಥಹ ಪಾತ್ರ!!!. ಎಂದು ಉದ್ಗಾರ ತೆಗೆದುಕೊಳ್ಳುವಂತೆ ಮಾಡುತ್ತದೆ.

ಆ ಪಾತ್ರ ಕಥೆಯಲ್ಲಿ ಗೆಲ್ಲಲಿ ಬಿಡಲಿ ನಿಮ್ಮ ಮನಸ್ಸನ್ನಂತು ಗೆದ್ದಿರುತ್ತದೆ. ನನಗೆ ಎಷ್ಟೋ ಬಾರಿ ಅನಿಸುತ್ತದೆ ನಮ್ಮ ಜೀವನವು ಕೂಡ ಕಥೆಯಷ್ಟು ಈಜಿಯಾಗಿರಬಾರದಿತ್ತ?. ಕಷ್ಟಗಳು ಕಥೆ ಓದಿದಷ್ಟೇ ಸ್ಪೀಡಾಗಿ ಕಳಿಬಾರದಿತ್ತ.

ಅವಳು ಚಿಕ್ಕಮಗಳೂರ ಬಳಿಯ ಒಂದು ಸಣ್ಣ ಹಳ್ಳಿಯವಳು. ಅಪ್ಪ ದುಡಿದಿದ್ದೆಲ್ಲ ಹೆಂಡಕ್ಕೆ, ಮೋಜಿಗೆ ಕಳಿದು ಬಿಡುತಿದ್ದ. ಅಮ್ಮ ಅವರಿವರ ಮನೆಯಲ್ಲಿ ಕೆಲಸ ಮಾಡಿ ಇವಳನ್ನು, ಇವಳ ಒಬ್ಬ ತಮ್ಮನನ್ನು ಸಾಕುತಿದ್ದಳು. ಇವಳೂ ಕೂಡ ಶಾಲೆ ಬಿಟ್ಟ ಉಳಿದ ಸಮಯದಲ್ಲಿ ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುತಿದ್ದಳು. ಶಾಲೆಯಲ್ಲಿ ಇವಳೇ ಓದಿನಲ್ಲಿ ಮೊದಲಿಗಳು. ಭಾಷಣ, ಹಾಡು ಹಾಡುವುದರಲ್ಲೂ ಎತ್ತಿದ ಕೈ. ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೆಯವಳು. ಮುಂದೆ ಬಿ.ಎಸ್ಸಿ. ಮುಗಿಸಿದಾಗ ಕೂಡ ಇವಳೇ ಕಾಲೇಜಿನ ಟಾಪರ್. ಊರಿನಲ್ಲಿ ಒಳ್ಳೆ ಹೆಸರು. ಪದವಿ ಮುಗಿದ ಮೇಲೆ ಇದ್ದ ಸ್ವಲ್ಪ ಹಣ ತೆಗೆದುಕೊಂಡು ಕೆಲಸಕ್ಕಾಗಿ ಬೆಂಗಳೊರಿಗೆ ಬಂದಳು. ಮನಸ್ಸಿನಲ್ಲಿ ಅವಳ ಬಗ್ಗೆ ಅವಳಿಗೆ ಹೆಮ್ಮೆ. ತನಗಿರುವ ಜ್ಞಾನಕ್ಕೆ, ಪಟ್ಟ ಕಷ್ಟಕ್ಕೆ ದೇವರು ಒಳ್ಳೆಯ ಕಡೆಯಲ್ಲೇ ಕೆಲಸ ಕೊಡಿಸುತ್ತಾನೆ ಎನ್ನುವ ಧೈರ್ಯ. ಹೇಗೊ ಒಂದು ಪಿ.ಜಿ. ಹುಡುಕಿಕೊಂಡು ಬದುಕು ಶುರುಮಾಡುತ್ತಾಳೆ.

ಆದರೆ ಅವಳ ನಂಬಿಕೆ ತುಂಬ ದಿನ ಉಳಿಯಲಿಲ್ಲ. ಹೋದ ಇಂಟರ್ವ್ಯೂಗಳಲೆಲ್ಲ ನಿಮ್ಮ ಕಮ್ಯುನಿಕೇಷನ್ ಸರಿ ಇಲ್ಲ, ನೀವು ನಮ್ಮ ಕೆಲಸಕ್ಕೆ ಲಾಯಕ್ ಅಲ್ಲ, ಇನ್ನು ಏನೇನೋ ಕಾರಣ ಕೊಟ್ಟು ಅವಳನ್ನು ಕಳುಹಿಸಿಬಿಡುತಿದ್ದರು. ಹೊರಗಿನ ಜಗತ್ತು ನಡೆಯುತ್ತಿರುವ ವೇಗಕ್ಕೆ ಇವಳ ಮನಸ್ಸು, ಮೆದಳು ಸ್ಪಂದಿಸಲಾರದೆ ಸೋತು ಬಿಡುತ್ತಿತ್ತು. ತಲೆಯಲ್ಲಿ ಸಾವಿರ ಕುದುರೆಗಳು ಒಟ್ಟಿಗೆ ಓಡಿದಂಥ ಅನುಭವ. ಸಹಾಯಕ್ಕೆ ಇರಲಿ, ಕುಳಿತು ಧೈರ್ಯ ಹೇಳಲು ಕೂಡ ಯಾರು ಇರಲಿಲ್ಲ. ಹೋಗಲಿ ಅಮ್ಮನಿಗೆ ಫೋನ್ ಮಾಡಿ ಹೇಳೋಣ ಅಂತ ಫೋನ್ ಮಾಡಿದರೆ ಇವಳು ಏನಾದರು ಹೇಳುವ ಮೊದಲೇ ಅಮ್ಮನೇ ಸಮಸ್ಯೆಗಳನ್ನು ಹೇಳುತಿದ್ದಳು. ನಿನಗೆ ಬೇಗ ಕೆಲಸ ಸಿಕ್ಕಿದರೆ ಈ ಸಮಸ್ಯ ತೀರಿದಂತೆ ಎಂದು ಅಮ್ಮ ಹೇಳಿದಗಾಲಂತೂ ಹೃದಯಕ್ಕೆ ಸೂಜಿ ಚುಚ್ಚಿದಂಥ ಅನುಭವ. ಕೈಯಲ್ಲಿದ್ದ ಹಣವೂ ಖಾಲಿಯಾಗುತ್ತ ಬಂತು. ಯಾವ ಕೆಲಸವಾದರೂ ಸರಿ. ಹಣವನ್ನು ಸಂಪಾದಿಸಬೇಕು ಎಂದು ನಿರ್ಧರಿಸಿ ಹೊರಟವಳಿಗೆ ಒಂದು ಪಿಜ್ಜಾ ಹಟ್ನಲ್ಲಿ ಕೆಲಸ ದೊರಕಿತು. ಆ ಅಂಗಡಿ ಇದ್ದ ರಸ್ತೆಯಲ್ಲಿ ಓಡಾಡುವ ಜನರಿಗೆ, ಆ ರಸ್ತೆ ಎಷ್ಟು ಚೆನ್ನಾಗಿ ಕಾಣುತಿತ್ತು ಎಂದರೆ ಅಲ್ಲಿನ ಬೀದಿ ದೀಪಗಳು, ಬಗೆ ಬಗೆಯ ಅಂಗಡಿಗಳು, ಇದ್ದ ವೈಭವ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಇತ್ತು. ಆದರೆ ಇವಳಿಗೆ ಅದೇ ರಸ್ತೆ ಮಸಣದ ಹಾದಿಯಂತೆ ಇತ್ತು.

ಇದನ್ನು ಓದಿದ ನಂತರ ಅವಳ ಜೀವನ ನಮ್ಮ ತಲೆ ಹೊಕ್ಕುತ್ತದೆ. ಛೆ!.. ಅವಳಿಗೆ ಹೀಗೆ ಆಗಬಾರದಿತ್ತು ಅನಿಸುತ್ತದೆ(ನಿಮಗೆ ಅನಿಸಲಿಲ್ಲ ಅಂದರೆ ಹಾಳಾಗಿ ಹೋಗಲಿ ಬಿಡಿ!!!.). ಸಾವು ಬರೀ ನಿಮ್ಮ ದೇಹದಿಂದ ಆತ್ಮ ಬೇರೆ ಆದಾಗ ಮಾತ್ರ ಅಲ್ಲ, ಅದು ನೀವು ಬದುಕುತ್ತಿರುವ ರೀತಿಯಿಂದಲೂ ಬರಬಹುದು. ನೀವು ಹೇಗೊ ಬದುಕಬೇಕು ಅಂದುಕೊಳ್ಳುತ್ತಿರ, ಆದರೆ ಹಾಗೆ ಬದುಕಲು ಆಗುವುದಿಲ್ಲ. ಇದು ಒಂದು ಹಂತದಲ್ಲಿ ಪರವಾಗಿಲ್ಲ. ಆದರೆ ನೀವು ನಾನು ಸತ್ತರು ಈ ರೀತಿ ಬದುಕಬಾರದು ಎಂದು ಅಂದುಕೊಂಡಿರುವಾಗ ಸಂದರ್ಭ ನಿಮ್ಮನ್ನು ಹಾಗೆ ಬದುಕುವಂತೆ ಮಾಡಿದರೆ ಅಲ್ಲಿಗೆ ನೀವು ಸತ್ತಂತೆ. ಅದಕ್ಕೆ ಹೇಳಿದೆ ಬದುಕು ಕಥೆಯಷ್ಟು ಈಜಿಯಾಗಿರುತಿದ್ದರೆ ಚೆನ್ನಾಗಿರುತಿತ್ತು. ಕಷ್ಟದ ಸಾಂದ್ರತೆ ಹೆಚ್ಚಾಗದೆ, ಖುಷಿಯ ಅಮಲು ನೆತ್ತಿಗೇರದೆ ಒಂದು ಪಾತ್ರವಾಗಿ ಉಳಿದುಬಿಡಬಹುದಿತ್ತು. ನಮ್ಮ ಜೀವನವನ್ನು ಓದಿದವರ ಮನಸ್ಸನ್ನು ಅರ್ಧ ಗಂಟೆ ಕಾಡಬಹುದಿತ್ತು.

– ದೀಪಕ್ ಬಸ್ರೂರು