(ಜೋಪಡಿ-೧ ರಿಂದ ಮುಂದುವರೆದದ್ದು)

ಆಸ್ಪತ್ರೆಯಲ್ಲಿ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ನಾನು ಸಮಸ್ಯೆ ಗಂಭೀರ ಆಗಲಿ ಎಂದು ಕಾಯುತಿದ್ದೆ. ಆದರೆ ಆ ಜನರು ಅದಕ್ಕೆ ಅವಕಾಶ ಕೊಡಲಿಲ್ಲ. ತಮ್ಮ ಬಳಿ ಇದ್ದ ಎಲ್ಲ ಹಣವನ್ನು ಒಟ್ಟು ಮಾಡಿದರು. ಇದ್ದ ಅಲ್ಪ ಸ್ವಲ್ಪ ಚಿನ್ನವನ್ನು ಮಾರಿದರು. ಕೆಲವರು ಅದೇ ಆಸ್ಪತ್ರೆಗೆ ರಕ್ತ ಕೊಟ್ಟು ಹಣ ತಂದರು. ಅಂತೂ ಹಣ ಒಟ್ಟು ಆಯಿತು. ಮಗು ಉಳಿಯಿತು.

ಅಂದು ರಾತ್ರಿ ನನಗೆ ನಿದ್ರೆ ಬರಲಿಲ್ಲ. ಚಿಕ್ಕ ವಯಸ್ಸಿನಿಂದ ಹಣಕ್ಕಾಗಿ ಜನರು ಏನೇನೊ ಮಾಡಿದ್ದು ನೋಡಿದ್ದೆ. ಆದರೆ ಇವರು ಪ್ರೀತಿ, ಸ್ನೇಹಕ್ಕೆ ಏನು ಬೇಕಾದರು ಮಾಡುವವರು. ಇವರ ನಡುವಿನ ನಂಬಿಕೆ ಹಾಳು ಮಾಡಿ ನಾನು ಏನು ಸಂಪಾದಿಸೋದು? ಇದು ಇಲ್ಲ ಅಂದ್ರೆ ಇನ್ನೊಂದು ಕೆಲಸ. ಬೆಳಗ್ಗೆಯೇ ಈ ಸ್ಲಂ ಅನ್ನು ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆ. ಆದರೆ ಒಂದು ಗೊಂದಲ. ನನಗೆ ಹೇಗೆ ಬೇರೆ ಕೆಲಸ ಇತ್ತೋ, ಹಾಗೆ ಈ ಕೆಲಸ ಮಾಡಲು ಬೇರೆಯವನು ಇದ್ದೇ ಇರುತ್ತಾನೆ. ಆಮೇಲೆ ಈ ಜನರ ಸ್ಥಿತಿ? ಆಗ ಒಂದು ನಿರ್ಧಾರಕ್ಕೆ ಬಂದೆ. ಇಲ್ಲೇ ಇದ್ದು ಇವರನ್ನು ಕಾಯಬೇಕು ಎಂದು. ಈ ನಿರ್ಧಾರ ನನ್ನನ್ನು ಆ ಸ್ಲಂಗೆ ಯಾವ ಕೆಲಸಕ್ಕೆ ಕಳುಹಿಸಿದ್ದರೋ ಅವರಿಗೆ ಕೋಪ ತರಿಸಿತು. ಆದರೆ ಅವರು ನನ್ನ ಮೇಲೆ ಮುಗಿ ಬೀಳುವ ಸಾಹಸಕ್ಕೆ ಕೈ ಹಾಕಲಿಲ್ಲ ಹಾಗೆ ಮಾಡಿದರೆ ಆಗುತಿದ್ದ ಅನಾಹುತದ ಬಗ್ಗೆಯೂ ಅವರಿಗೆ ತಿಳಿದಿತ್ತು. ಅವರೂ ಕೂಡ ಸಮಯಕ್ಕೆ ಕಾಯ್ದು ಕುಳಿತರು.

ಅಲ್ಲಿಂದ ಬಂದೊಡನೆ ಸ್ಲಂನ ಬದಲಾವಣೆಗೆ ನಿಂತೆ. ನನ್ನ ಹುಡುಗರು ನನ್ನ ಜೊತೆ ನಿಂತರು. ಅಲ್ಲದೆ ಆ ಸ್ಲಂನ ಕೆಲ ಹುಡುಗರು ಜೊತೆಯಾದರು. ಮೊದಲು ನಾವು ಸ್ಲಂನ್ನು ಶುಚಿಯಾಗಿಸಿದೆವು. ಜೋಪಡಿಗಳು ಹೋಗಿ ಸಣ್ಣದಾದ ಶೀಟಿನ ಮನೆಗಳು ನಿರ್ಮಾಣವಾದವು. ರಸ್ತೆಗಳನ್ನು ಮಾಡಿದೆವು. ಚಿಕ್ಕ ಮಕ್ಕಳನ್ನು ಹತ್ತಿರದ ಶಾಲೆಗೆ ಸೇರಿಸಲಾಯಿತು. ಆ ಮಕ್ಕಳು ಶಾಲೆ ಇಂದ ಕಲಿತು ಬಂದ ಕನ್ನಡದ ಕಥೆಗಳು, ಇಂಗ್ಲಿಷ್ ಪದ್ಯಗಳನ್ನು ಅಪ್ಪ-ಅಮ್ಮರ ಮುಂದೆ ಹೇಳುತ್ತಿದ್ದರೆ ಅಪ್ಪ-ಅಮ್ಮರಿಗೆ ಸಂತೋಷ. ಚಾಪೆ ಹೆಣೆಯುವುದರ ಜೊತೆ ಬೇರೆ ಕೆಲಸಗಳನ್ನು ಮಾಡತೊಡಗಿದರು. ಹೀಗೆ ಸಣ್ಣ ನಾಗರೀಕತೆ ಅಲ್ಲಿ ಹುಟ್ಟಲು ಶುರುವಾಯಿತು. ನಾನೂ ಕೂಡ ಖುಷಿಯಾದೆ. ನಾವು ಬೆಳಕಿನೆಡೆಗೆ ಹೋದಂತೆ ಭಾವಿಸುತ್ತಿದ್ದಂತೆ ಹಿಂದೆಯಿಂದ ಕಗ್ಗತ್ತಲು ನಮ್ಮನು ಆವರಿಸುತಿತ್ತು.

ಮುಂಚೆ ಎಲ್ಲ ಒಂದೇ ಎಂದು ಬದುಕುತಿದ್ದವರ ನಡುವೆ ಈಗ ಒಂದು ಸ್ಪರ್ಧೆ ಏರ್ಪಟ್ಟಿತ್ತು. ಅವರಿಗಿಂತ ನಾವು ಒಂದು ಹೆಜ್ಜೆ ಮುಂದಿರಬೇಕೆಂಬ ಆಸೆ ಹುಟ್ಟಿತ್ತು. ಮುಂಚೆ ಮಕ್ಕಳು ಶಾಲೆಯ ಮುಖವನ್ನೂ ನೋಡದೆ ಇದ್ದಾಗ ಸುಮ್ಮನಿದ್ದವರು ಈಗ ನಮ್ಮ ಮಗ ಇತರರ ಮಕ್ಕಳಿಗಿಂತ ಓದಿನಲ್ಲಿ ಮುಂದಿರಬೇಕು ಎಂದುಕೊಂಡರು. ಅದಕ್ಕೆ ಪೈಪೋಟಿಗೆ ಬಿದ್ದು ಒಳ್ಳೊಳ್ಳೆ ಶಾಲೆಗೆ ಮಕ್ಕಳನ್ನು ಸೇರಿಸಿದರು. ಪಕ್ಕದ ಮನೆಯವರು ಒಂದು ರೇಡಿಯೋ ತಂದರೆ ಇವರು ಒಂದು ಟಿವಿಯನ್ನು ತಂದು ಸೆಡ್ಡು ಹೊದೆಯುತಿದ್ದರು. ಎಲ್ಲರೂ ಸಂಜೆ ಸೇರುತಿದ್ದನ್ನು ನಿಲ್ಲಿಸಿಬಿಟ್ಟರು. ಅದೂ ಹೋಗಲಿ, ಯಾರಾದರು ಮನೆ ಮುಂದೆ ನಡಿದುಕೊಂಡು ಹೋದರೆ ಮನೆಯ ಬಾಗಿಲನ್ನು ಮುಚ್ಚಿಕೊಳ್ಳಲು ಶುರು ಮಾಡಿದರು. ಮೊದಲೆಲ್ಲ ಮನೆಯ ಒಳಗೆ ಕೊಳಚೆ ನೀರು ಬಂದರೂ ಸುಮ್ಮನಿದ್ದವರು. ಈಗ ಪಕ್ಕದ ಮನೆಯವರು ಗಾಡಿ ತೊಳೆದ ನೀರು ಮನೆ ಮುಂದೆ ಬಂದರೂ ಜಗಳಕ್ಕೆ ನಿಂತುಕೊಳ್ಳುತ್ತಿದ್ದರು. ಜನರ ನಡುವೆ ಸ್ನೇಹ ಇರಲಿ, ಪರಿಚಯದ ನಗೆಯು ಕೂಡ ಇರುತ್ತಿರಲಿಲ್ಲ. ನಾವು ಮನೆಗಳಿಗೆ ಗೋಡೆ ಕಟ್ಟಿಸಿದೆವು, ಅವರು ಮನಸ್ಸುಗಳಿಗೆ ಗೋಡೆ ಕಟ್ಟಿಸಿಕೊಂಡರು.

ಆ ಜಾಗದ ಮೇಲೆ ಕಣ್ಣು ಇಟ್ಟವರು ಈ ಸಮಯವನ್ನೇ ಕಾಯುತಿದ್ದರು. ಒಬ್ಬರಿಗೆ ತಿಳಿಯದಂತೆ ಇನ್ನೊಬ್ಬರನ್ನು ಸಂಪರ್ಕಿಸಿ ಒಬ್ಬರ ಮೇಲೆ ಇನ್ನೊಬ್ಬರನ್ನು ಕಟ್ಟಿದ್ದರು. ದುಡ್ಡಿನ ಆಸೆ ತೋರಿಸಿ ಅವರ ಬಳಿ ಜಾಗವನ್ನು ಬರೆಸಿಕೊಂಡರು. ಮತ್ಸರ ತುಂಬಿಕೊಂಡಿದ್ದ ಜನರು ಮೊದಲು ದುಡ್ಡನ್ನೂ ಕೂಡ ತೆಗೆದುಕೊಳ್ಳದೆ ಜಾಗವನ್ನು ಬರೆದುಕೊಟ್ಟರು. ಈ ವಿಷಯ ನನಗೆ ತಿಳಿದು, ಅದನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ಆ ಜನರು ನನ್ನ ಮಾತು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಇತ್ತ ರಾಜಕೀಯ ನಾಯಕನೊಬ್ಬನ ಪ್ರಭಾವದಿಂದ ನನ್ನ ಮೇಲಿದ್ದ ಹಳೆ ಕೇಸ್ ಒಂದು ರೀ- ಓಪನ್ ಆಯಿತು. ನನ್ನನ್ನು ಪೊಲೀಸರು ಬಂಧಿಸಿದರು. ನನ್ನನ್ನು ಬಿಡಿಸಲು ಯಾರು ಇರಲಿಲ್ಲ. ನನಗೂ ಬಿಡುಗಡೆಯಾಗುವ ಆಸೆ ಇರಲಿಲ್ಲ.

ಅಂದು ರಾತ್ರಿ ಆ ಜನರೆಲ್ಲ ಮಲಗಿದ್ದರು. ಯಾರಿಗೂ ನಿದ್ರೆ ಹತ್ತಿರಲಿಲ್ಲ. ಎಲ್ಲರೂ ಮನಸ್ಸಿನಲ್ಲೇ ಕತ್ತಿ ಮಸಿಯುತಿದ್ದರು. ಇನ್ನೇನು ಬೆಳಗಿನ ಜಾವ ಸಮಯದಲ್ಲಿ ಸ್ವಲ್ಪ ನಿದ್ರೆಯ ಮಂಪರು ಹತ್ತಿತ್ತು. ಅಷ್ಟರಲ್ಲಿ ಭಾರಿ ಶಬ್ಧ ಕೇಳಿಸಿತು. ಎಲ್ಲರೂ ಮನೆಯಿಂದ ಆಚೆ ಓಡಿಬಂದರು. ಎಂಟತ್ತು ಜೆಸಿಬಿ ಗಾಡಿಗಳು ಒಂದೊಂದರಂತೆ ಅವರ ಮನೆಗಳನ್ನು ನೆಲಸಮ ಮಾಡುತಿತ್ತು. ಪೊಲೀಸರು ಸರ್ಪ ಕಾವಲು ಹಾಕಿದ್ದರು. ಈ ಜನರು ಪ್ರತಿರೋಧ ಒಡ್ಡಿದಾಗ ಅವರೆ ಈ ಜಾಗವನ್ನು ಸಹಿ ಮಾಡಿ ಕೊಟ್ಟಿದ್ದ ಪತ್ರ ತೋರಿಸಲಾಯಿತು. ದುಡ್ಡು ಕೊಡುತ್ತೇವೆ ಎಂದವರು ಮೋಸ ಮಾಡಿದ್ದರು. ಸ್ಲಂನ ಎಲ್ಲ ಜನರು ಅಸಹಾಯಕರಾಗಿ ಅಳುತ್ತ ನಿಂತರು. ಈಗ ಒಬ್ಬರ ಕಣ್ಣಿರನ್ನು ಇನ್ನೊಬ್ಬರ ಕೈ ಒರೆಸಿತು. ಒಬ್ಬರು ಇನ್ನೊಬ್ಬರ ಹೆಗಲ ಮೇಲೆ ತಲೆ ಇಟ್ಟು ಅಳ ತೊಡಗಿದರು. ಅತ್ತ ಎಲ್ಲ ಮನೆ ಸರ್ವನಶವಾಯಿತು. ಇತ್ತ ಎಲ್ಲರು ಒಮ್ಮೆ ಎದ್ದು ನಿಂತರು. ಎಲ್ಲರೂ ತಪ್ಪು ಮಾಡಿದ್ದರಿಂದ ಯಾರಿಗೂ ಪಾಪ ಪ್ರಜ್ಞೆ ಕಾಡಲಿಲ್ಲ. ಒಬ್ಬರ ಮೇಲೆ ಇನ್ನೊಬ್ಬರಿಗೆ ಇದ್ದ ಸಿಟ್ಟು ಸುಟ್ಟು ಬೂದಿಯಗಿತ್ತು. ಎಲ್ಲರೂ ಜೊತೆಯಾಗಿ ಅಳಿದುಳಿದ ಪಾತ್ರೆ ಪಗಡೆ, ಬಟ್ಟೆಗಳನ್ನು ತೆಗೆದುಕೊಂಡು ಬೇರೊಂದು ಜಾಗ ಹುಡುಕಿಕೊಂಡು ಹೊರಟರು.

-ದೀಪಕ್ ಬಸ್ರೂರು