ನೆನ್ನೆಯೇ ಆಡಿದ್ದೆ ಎಳೆತನದಿ,
ಇದೀಗ ನಿಂತಿಹೆನು ಕೊನೆಗಾಲದಿ.
ಎಲ್ಲಿ ಹೋಯಿತೋ ಕಾಲ ಸರಿದು,
ಹಿಡಿತದಲ್ಲಿ ಸಾಗಿತ್ತೇ ಬದುಕು ಹರಿದು?

ಅಲೆಗಳಿಗೇ ತಿಳಿಯಲಿಲ್ಲ ತೀರದ ದೂರ,
ಗಾಳಿಯೊಡನೆ ಒಂದಾಗಿ ಉರುಳಿ ಬರಲು.
ಒಲಿಯದ ಒಲವಿನ ನೆನಪುಗಳೇ ಭಾರ,
ನೆನಪುಗಳಿಗೇ ನಿಲುಕಿತ್ತೇ ಅನುಭವದ ಸಾರ?

ನೆನ್ನೆಯೇ ನೋಡಿದ್ದೆ ಮುಗಿಲ ಮಿಂಚು,
ಮತ್ತೆ ಕಾಣುವುದೇ ಆ ಬೆಳಕು.
ಇದೀಗ ಕಾಣುತಿದೆ ಮುಗಿಲ ಅಂಚು,
ಮನವು ಹಾಕುತಿದೆ ಆ ಮಳೆಯ ಮೆಲುಕು.

- ಆದರ್ಶ