ಎದೆಯನಪ್ಪಿದ ಮೊಗವನು ಎತ್ತಿ ನೋಡಲಿ ಹೇಗೆ,
ಕಣ್ಣು ತುಂಬಿ ಹರಿದ ಮೇಲೆ ಒಲವು ತಂದ ಬೇಗೆ.
ಸೇರುತಿರಲಿ ರಾಗಗಳು ನಿತ್ಯವೂ ಸರಾಗವಾಗಿ,
ಒಲವ ಜಪಿಸಿ ಬದುಕಿದವನೆ ನಿತ್ಯ ಶಾಂತ ಯೋಗಿ.

ಬೇಡವೆನ್ನಲಿ ಹೇಗೆ ಒಲವು ತಂದ ಮಳೆಯ,
ಸೋನೆಯಲ್ಲಿ ತಣಿದ ಮನವು ಈಗ ತಾನು ದಿವ್ಯ.
ಮನದ ಕಾಂತಿ ಚಿಮ್ಮಿ ಬೀರಿದೆ, ಜೊತೆಗೆ ಇರುವ ಬಯಕೆ,
ಓಟ ಕಿತ್ತ ಮನಸ್ಸ ಹಿಡಿದು ನಿಲ್ಲಿಸಿತು ಈ ಅರವಳಿಕೆ.

ಅರಳಿದಂತ ಹೂವು ತನ್ನ ಕಂಪನೆಲ್ಲ ಸೂಸಿ,
ಒಲವು ಮೂಡಿಬಂತು ನೋವನೆಲ್ಲ ಮುಗಿಸಿ,
ಎದೆಯನಪ್ಪಿದ ಮೊಗವನು ಬಿಡಿಸಿ ಹೇಗೆ ನೋಡಲಿ,
ನೂರು ವರುಷಕಾಗುವ ರಾಗ ಈ ಹಾಡಿನಲ್ಲಿರಲಿ.

- ಆದರ್ಶ