ಮನಸ್ಸು ಇಂದು ಬಯಸಿದೆ, ನಿಲುಕದ ಒಂದು ದೂರ,
ಹೇಗೆ ತಾನೇ ನುಗ್ಗುವುದು ಮುಂದಕ್ಕೆ, ನಿತ್ಯವು ನೂತನ ಘೋರ.
ಸುತ್ತುತಿಹುದು ಜೀವನ, ನಿಂತ ಕಡೆಯೇ ಕದಲದೆ;
ಗಾಳಿಯು ಬಾರದೇ ಮರವು ತಾನಾಗೆ ಬೀಸುತಲಿರಬಹುದೇ?

ನಿಂತ ಭಾವನೆ ಹರಿಯಲಾರದೇ ಮನದೊಳಗೆ ಹೆಪ್ಪುಗಟ್ಟಿದೆ,
ಸ್ಪಂದನೆ ಮರೆತ ಮನವು ಈಗ, ನನ್ನ ಒಳಗೆ ಸಿಲುಕಿದೆ.
ಹೇಗೆ ತಾನೇ ಸಾಗಬೇಕು ಇನ್ನು, ಎಲ್ಲವನು ಕಳೆದುಕೊಂಡ ಬದುಕು?
ಕೈಯ್ಯ ಚಾಚಿ ಬೇಡಿದರೂನು, ಸಿಗದು ಈಗ ಒಲವ ಸರಕು.

ಮನಸ್ಸು ಇಂದು ಬಯಸಿದೆ, ನಿಲುಕದ ಒಂದು ದೂರ.
ಕೈಗೆ ಸಿಗದ ಆಗಸವ ನೋಡಿ, ಇಮ್ಮಡಿ ಈಗ ಮನದ ಭಾರ.
ಜೀವನದ ವ್ಯಾಪಾರವೀಗ ನಿಂತ ಕಡೆಯೇ ನಿಂತಿದೆ;
ಸ್ಪಂದನೆ ಮರೆತ ಜೀವಕೀಗ, ಎತ್ತ ಹೋದರೂ ಬದುಕು ಒಂದೇ.

- ಆದರ್ಶ