ಸಂತೆಯ ನಡುವಿದೆ ನನ್ನ ಮನೆ,
ಸದ್ದು ಮಾಡದಿರುವುದೆ ಜಗವು ಎಲ್ಲವ ಬಿಟ್ಟು ಸುಮ್ಮನೆ.

ಸುತ್ತ ಜನರು ಸುಳಿವರು,
ಕೇಕೆ ಹಾಕಿ ಕುಣಿವರು,
ಧ್ಯಾನಕ್ಕೆಂದು ನಾ ಕೂರಲು,
ಶಪಥಗೈವರು ಸುತ್ತ ಎಲ್ಲರು, ಆಗಸವನೇ ಧರಗೆಳಿಸಲು.

ಅಲ್ಲೊಬ್ಬನ ಅಳು, ಇಲ್ಲೊಬ್ಬಳ ನಗು,
ಹುಚ್ಚೆದ್ದು ಓಡುವುದು ಯಾರದ್ದೋ ಮಗು,
ಇಲ್ಲೊಂದು ನಾಯಿ, ಅಲ್ಲೊಂದು ದನ
ಇವೆಡರ ನಡುವೆ ಘೋರ ಕದನ.

ಸಂತೆಯ ನಡುವಿದೆ ನನ್ನ ಮನೆ,
ಸದ್ದು ಮಾಡದೆ ಇರುವರೆ ಎಲ್ಲರಿಲ್ಲಿ ಸುಮ್ಮನೆ.

ಮೋಡದಲು ಗುಡುಗು, ಭೂಮಿಯ ಕಂಪನ,
ನಾ ಕುಳಿತಾಗಲೇ ಧ್ಯಾನಕ್ಕೆ,
ಎದ್ದೆದ್ದು ಬೀಳುವುದು, ಜಗವೆಲ್ಲ ಹೇಳುವುದು,
ಕೈಕಟ್ಟಿ ಸುಮ್ಮನಿರುವುದು ಯಾತಕ್ಕೆ.

ಸಂತೆಯ ನಡುವಿದೆ ನನ್ನ ಮನೆ,
ಊಳಿಟ್ಟು ಘೀಳಿಡದಿರುವುದೆ ಜಗವಿಲ್ಲಿ ಸುಮ್ಮನೆ.

- ಆದರ್ಶ