ಮಳೆಗಾಲದ ಆರಂಭಕ್ಕೆ ಬೆಟ್ಟವು ಬೆಳೆದು ಆಗಸವ ನೋಡ್ತಿತ್ತು,
ಮಳೆ ಹನಿಗಳ ಬರಮಾಡಿಕೊಳ್ಳಲು ತಾ ಮುಗಿಲಿಗೆ ನೀಡಿತ್ತು ಮುತ್ತು.
ತಣ್ಣನೆಯ ಗಾಳಿ ತೆಂಕಣದಿಂದ ಬಂದಿತ್ತು,
ಸುಯ್ಯನೆ ಸುತ್ತಿ ಬೆಟ್ಟವನೆ ಹತ್ತಿ ಹೇಳಿತ್ತು,
ಇನ್ಮುಂದೆ ಮಳೆಯು ಬೆಟ್ಟದ ಸ್ವತ್ತು.

ಮಣ್ಣ ಗಂಧ ಹೊರಬರುವೆನೆಂದು ಕೈ ಬೀಸಿ ಹೇಳಿತ್ತು,
ಮಳೆಯ ಆಗಮನವ ಅರಿತ ಭೂಮಿಯ ಕಣ್ಣೂ ತುಂಬಿತ್ತು,
ಮಳೆಗಾಲದ ಆರಂಭಕ್ಕೆ ಈಗ ಕಾಡೆಲ್ಲ ಹಸಿರು,
ಕಳೆದ ಯುಗಾದಿಯಿಂದ ಕಾದು ಕುಳಿತಿವೆ ಹೊಚ್ಚ ಹೊಸ ಚಿಗುರು.

ಮಳೆಯಲ್ಲಿ ಮಿಂದೆದ್ದಿವೆ ಈಗ ಹಗಲು ಇರುಳು,
ಮನಸಾಗಬಹುದೆ ಯಾರಿಗಾದರೂ ಮಳೆಯಿಂದ ಮರುಳಾಗದಿರಲು.
ಕಾರ್ಮೋಡ ಸುರಿಸಿತ್ತು ಎಲ್ಲರೆದೆಯ ಇಂಗಿತ,
ಭುವಿಯ ಆವರಿಸಿತ್ತು ಮಳೆಯು ತನ್ನೆ ಹರುಶವನೆಲ್ಲ ಎರಚುತ.

ಮಳೆಗಾಲದಾರಂಭಕ್ಕೆ ಈಗ ಜಗವೆಲ್ಲ ಮತ್ತೊಮ್ಮೆ ಹೊಸದು,
ಸ್ವರ್ಗವೀಗ ವಾಸಿಸುತ್ತಿದೆ ಮಲೆಗಳಿಂದ ಕೆಳಗಿನ ಭುವಿಗಿಳಿದು.

- ಆದರ್ಶ