ಎಷ್ಟು ನೆತ್ತರ ಹರಿದಿವೆಯೋ ಇಲ್ಲಿ,
ಆದರೂ ಒಂದು ಹನಿ ನೀರು ಹನುಕಲಿಲ್ಲ ನಮ್ಮ ಕಣ್ಣಲ್ಲಿ.
ಎಷ್ಟೋ ಜೀವ ಹೋಗಿದೆ ಇಲ್ಲಿ,
ಸಿಕ್ಕಿಕೊಂಡು ನಮ್ಮದೇ ಗಾಲಿಯ ಅಡಿಯಲ್ಲಿ.

ಹೆದ್ದಾರಿಯ ಜೀವನವಿದು, ಒಂದೇ ಕ್ಷಣದ ಬದುಕು,
ಕಣ್ಣ ಮಿಟುಕಿಸುವುದರೊಳಗೆ ಆರುವುದು ಜೀವನದ ಬೆಳಕು.
ಬೇಕಿರುವ ನಿಧಾನವಿಲ್ಲ ನಮ್ಮಲ್ಲಿ,
ನಮ್ಮ ಗಾಲಿಗೆ ಸಿಕ್ಕಿ ಸತ್ತ ಜೀವಕೆ ಹನಿಯೊಂದು ಬರಲಿಲ್ಲ ನಮ್ಮ ಕಣ್ಣಲ್ಲಿ.

ಕಪ್ಪೆ, ಕಿರುಬ, ಹಾವು, ನಾಯಿ, ಹಸು, ಹಕ್ಕಿ
ಯಾವುದಕ್ಕೂ ನಾವು ನಿಲ್ಲಲಿಲ್ಲ,
ಹೊಡೆದ ನಾವು, ಹೊಡೆದ ಮೇಲೆ, ಒಮ್ಮೆಯೂ ತಿರುಗಿ ನೋಡಲಿಲ್ಲ.
ಎಷ್ಟು ನೆತ್ತರ ಹರಿದಿವೆಯೊ ಈ ಹಾದಿಗಳಲ್ಲಿ,
ಎಂದೊ ಬದುಕು ಬರಿದಾಯಿತು, ರಸ್ತೆ ದಾಟುವ ತವಕದಲಿ.

- ಆದರ್ಶ