ನನ್ನ ಸ್ವಾರ್ಥಕ್ಕೆ ಅವಳ ಬಲಿ
ಪಡೆದು ಅವಳ ಜೊತೆಗೆ ಹೇಗೆ ಇರಲಿ!
ಆದರೂ ಅವಳು ನನ್ನ ಮಡದಿ,
ಅವಳ ಬಲಿಯ ಮೇಲೆ ನಡೆವ ಜೀವನ ತರುವುದೇ ಮನಕೆ ನೆಮ್ಮದಿ?
ನನ್ನ ಸ್ವಾರ್ಥಕ್ಕೆ ಅವಳ ಬಲಿ,
ಪಡೆದು ಅವಳ ಜೊತೆಗೆ ಹೇಗೆ ಇರಲಿ!

ತೇಲೋ ಮೇಘ ಅವಳು, ತಿರುಗೋ ಭೂಮಿ ನಾನು,
ಹೇಗೆ ತಾನೆ ಆಗುವುದು ಮಿಲನ?
ಉರಿಯ ಬೆಂಕಿ ನಾನು, ತಣಿಸೋ ನೀರು ಅವಳು,
ನಡೆಯದಿರದೆ ನಮ್ಮ ನಡುವೆ ಸಣ್ಣದೊಂದು ಕದನ.
ನನ್ನ ಸ್ವಾರ್ಥಕ್ಕೆ ಅವಳ ಬಲಿ,
ಪಡೆದು ಅವಳ ಜೊತೆಗೆ ಹೇಗೆ ಇರಲಿ?
ಎಣ್ಣೆ ನೀರು ಸರಾಗವಾಗಿ ಬೆರೆಯೋದು ಹೇಗೆ ತಾನೇ ಇಲ್ಲಿ?

ಸಾಗೋ ಗಾಳಿ ನಾನು, ತೂಗೋ ಹೂವು ಅವಳು,
ಅನುಗಾಲ ಒಂದೆಡೆ ಹೇಗೆ ಇರುವುದು?
ಬೀಳೋ ಮಳೆಯು ನಾನು, ಕಮಲದ ಎಲೆಯು ಅವಳು,
ಕ್ಷಣಕಾಲ ಹರಿಯದೆ ಹೇಗೆ ಉಳಿವುದು?

ನನ್ನ ಸ್ವಾರ್ಥಕ್ಕೆ ಅವಳ ಬಲಿ,
ಪಡೆದು ಅವಳ ಜೊತೆಗೆ ಹೇಗೆ ಇರಲಿ?
ಸ್ವಾರ್ಥ ತೊರೆದ ಮನದ ಜಗಲಿ, ಅವಳಿಗಾಗಿ ಸದಾ ಕಾಯುತಲಿರಲಿ.

- ಆದರ್ಶ