ಅದೊಂದು ದಿನ ಮುಂಜಾನೆ ಹೊರಟು ಕೊಟ್ಟಿಗೆಹಾರಕ್ಕೆ ಹೋಗ್ಬೇಕಿತ್ತು. ಅದಕ್ಕಾಗಿ ಬೇಗ ಎದ್ದು ರೆಡಿಯಾಗಿ ಆರು ಗಂಟೆಗೆ ಮನೆ ಬಿಟ್ಟು , ಏಳು ಗಂಟೆ ಹೊತ್ತಿಗೆ ಬೆಂಗಳೂರ ಹೊರಗಿದ್ದ ಗೆಳೆಯನ ಮನೆಗೆ ತಲುಪಿ , ಅಲ್ಲಿ ನನ್ನ ಬೈಕನ್ನ ನಿಲ್ಲಿಸಿ ಅಲ್ಲಿಂದ ಮುಂದಕ್ಕೆ ಎಲ್ರೂ ಕಾರಲ್ಲಿ ಹೋಗೋರಿದ್ವಿ.

ಮನೆ ಬಿಟ್ಟು ಹತ್ತು ನಿಮಿಷಕ್ಕೆ ಒಂದು ಸಣ್ಣ ಸೋನೆ ಮಳೆ ಬಿತ್ತು. ಬೈಕ್ ನಿಲ್ಲಿಸಿ ಮಳೆ ಕೋಟು ಪ್ಯಾಂಟು ಹಾಕ್ಕೊಳ್ಳಲಾ ಅತವಾ ಹಂಗೆ ಮಳೆಲೆ ಹೋಗ್ಲಾ ಅಂತ ಯೋಚನೆ ಮಾಡೋ ಹೊತ್ತಿಗೆ ಮಳೆ ನಿಲ್ತು.

ಮಳೆ ಬಂತಲ್ವಾ! ನಿಧಾನಕ್ಕೆ ಹೋಗೋಣ ಅಂತ ಯಾರೂ ಇರದ ದಾರಿಯಲ್ಲಿ ಹೋಗ್ತಿದ್ದೆ. ಒಂದು ಕಾರು, ಒಂದು ಬಸ್ಸು, ಆಟೋಗಳ ಹಿಂದಾಕಿ ಹೋದೆ. ಯಾವಾಗ್ಲೂ ಬೆಂಗಳೂರು ಹೊರಗೆ ಹೋಗ್ಬೇಕು ಅಂದಾಗ ಹೋಗ್ತಿದ್ದ, ಗೊತ್ತಿದ್ದ ದಾರಿ. ಕಾಲಿಗೆ ಬೂಟು, ಕೈಗೆ ಗ್ಲೌಸ್ , ರೈಡಿಂಗ್ ಜಾಕೆಟ್ ಹಾಕೊಂಡಿದ್ದೆ. ರೈಡಿಂಗ್ ಪ್ಯಾಂಟು ಒಂದು ಇರಲಿಲ್ಲ. ನಿಧಾನಕ್ಕೆ ಎಡಕ್ಕೆ ತಿರುಗುತ್ತಿದ್ದೆ. ಹೆಚ್ಚು ಬಾಗಿದ್ರೆ ಜಾರಿ ಬೀಳ್ತೀನಿ ಅನ್ನೋದು ತಲೆಗೆ ಬಂತು. ಅಷ್ಟರಲ್ಲೇ ನಂಗೇ ತಿಳಿಯದಂಗೆ ಬೈಕು ಹೆಚ್ಚು ಬಾಗಿ ಹಿಂದಿನ ಗಾಲಿ ಸರದು ಮುಂದೇನು ಮಾಡಬೇಕು ಅಂತ ಯೋಚನೆ ಮಾಡೋ ಹೊತ್ತಿಗೆ ಎಡಕ್ಕೆ ಬಿದ್ದೆ. ನೆಲಕ್ಕೆ ಮೊದಲು ಮಂಡಿ ಬಡಿದು ಉಜ್ಜಿ ತರಿಚಿತು. ಅದರೊಟ್ಟಿಗೆ ಹೆಗಲು ಬಡಿದು ನೋವಾಯ್ತು. ಜಾಕೆಟ್ , ಗ್ಲೋವ್ಸ್ ಹಾಕಿದ್ಕೇ ಹೆಗಲು, ತೋಳು, ಕೈ ತರಚಿಕೊಳ್ಳಲಿಲ್ಲ.

ಬಿದ್ದ ಏಟಿಗೆ ಒಂದೆರಡು ಘಳಿಗೆ ನನ್ನ ಮೈ ಅಲ್ಲಾಡದೆ ಹಂಗೆ ಬಿದ್ದಿತ್ತು ಅಷ್ಟರಲ್ಲಿ ಮತ್ತೆ ಎಚ್ಚರವಾದಂಗೆ ಬೈಕನ್ನು ಅಲ್ಲೇ ಬಿಟ್ಟು ಮೇಲೆದ್ದೆ. ಮಂಡಿಗೆ ಎಂತ ಒಳ್ಳೆ ಏಟು ಬಿದ್ದಿತ್ತು ಅಂದ್ರೆ ನೆಟ್ಟಗೆ ನಿಲ್ಲೋಕೆ ಆಗ್ತಿರಲಿಲ್ಲ. ಬೈಕ್ ಬಿಟ್ಟು ದಾರಿ ಬದಿಗೆ ಬಂದು ನಿಂತೆ. ಹಿಂದೆ ಆಟೋ ಬರ್ತಿತ್ತಲ್ವಾ, ಇನ್ನೂ ಆದರೂ ಯಾಕೆ ಯಾರು ಬಂದಿಲ್ಲ ಅಂತ ನೋಡುವಾಗ ಮೊದಲು ಆಟೋ, ನಂತರ ಬಸ್ ಬಂದು ಬಿದ್ದಿದ್ದ ನನ್ನ ಬೈಕ್ ನೋಡಿ ನಿಂತ್ವು.

ಆಟೋದವ ಬಂದು bike ಎತ್ತಿಕೊಟ್ಟ. ಇಬ್ಬರು ತಳ್ಳಿ bike ಅನ್ನು ಬದಿಗೆ ಹಾಕಿ ನಿಲ್ಲಿಸಿದ್ವಿ. ಇಲ್ಲೇ ಹತ್ರ ಆಸ್ಪತ್ರೆ ಇದೆ, ಹೋಗಿ bandage ಹಾಕಿಸಿಕೊಳ್ಳಿ ಅಂತ ಅಂದು ಅವ ಹೊರಟ. ಅವನ ಹಿಂದೆ ನಿಂತಿದ್ದ ಬಸ್ಸು. ಕಾರು ಎಲ್ಲರೂ ಹೊರಟು ಹೋದ್ರು. ನೋವಲ್ಲಿ ಮುಂದೇನು ಮಾಡಬೇಕು ಅಂತ ಯೋಚನೆ ಮಾಡುತ್ತಾ ಅಲ್ಲೇ ನಿಂತೆ.

ಬದುಕಲ್ಲಿ ಬಿದ್ರೆ ಏನ್ ಮಾಡೋದು? ಕುಂತು ಅಳೋದಾ, ಎದ್ದು ಮುಕ್ಳಿ ಕೊಡುವ್ಕೊಂಡು ಮುಂದಕ್ ಹೋಗೋದಾ?

ಗಾಯದಲ್ಲೇ ಮುಂದಕ್ ಹೋಗ್ಲಾ, ಅಥವಾ ತಿರುಗಿ ಮನೆಗೆ ಹೋಗಿ ಬೈಕ್ ಬಿಟ್ಟು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಲಾ ಅಂತ ನೋಡ್ತಿದ್ದೆ. ಮನೆಗೆ ಹೋಗಿ ಬೈಕ್ ಬಿಟ್ಟು, ರಕ್ತದಲ್ಲಿ ನೆಂದ, ಹರಿದ ಪ್ಯಾಂಟ್ ತೆಗೆದು ಬೇರೆ ಪ್ಯಾಂಟ್ ಹಾಕೊಂಡು, ಅಲ್ಲಿಂದ ತಿರುಗಿ ಮೆಟ್ರೋಲಿ ಗೆಳೆಯರ ದಾರಿ ಕೂಡಿಕೊಳ್ಳೋಣ ಅಂತ ಅನ್ಕೊಂಡು ಮನೆ ಕಡೆಗೆ ಹೊರಟೆ.

ದಾರಿಲಿ ಒಂದು ಆಸ್ಪತ್ರೆ ಕಣ್ಣಿಗೆ ಬಿದ್ದು , ನೋಡೋಣ ಅಂತ ಬೈಕ್ ನಿಲ್ಲಿಸಿ ಕುಂಟುತ್ತಾ ಆಸ್ಪತ್ರೆಯ ಮುಚ್ಚಿದ್ದ ಕದ ತಟ್ಟಿದೆ. ಒಳಗೆ ಎಲ್ಲ ಲೈಟ್ ಆರಿಸಿದ್ರು, ಯಾರು ಇದ್ದಂಗಿರಲಿಲ್ಲ. ತಿರುಗಿ ಮನೆಗೆ ಹೋಗೋಣ ಅಂತ ಹೋಗುವಾಗ ಒಳಗಿಂದ ಯಾರೋ ಬಂದು ಕದ ತೆಗೆದ್ರು.

" ನನ್ನ ಕೆಲವು friends ನನ್ನ ಮೇಲೆ ಕಣ್ಣು ಹಾಕಿದ್ದಕ್ಕೆ ಇಲ್ತಿಲೇ ತಿರುವಲ್ಲಿ ಬಿದ್ದು ಗಾಯ ಆಯ್ತು" ಅಂತ ಅಂದೆ.

ಅವರು “ನಿನ್ನ friends ಇಂದ ಅಲ್ಲಪ್ಪಾ, ಆ ತಿರುವಲ್ಲಿ ಬೀಳುವವರ ಸಂಖ್ಯೆಗೆ ಲೆಕ್ಕನೇ ಇಲ್ಲ, ಅಲ್ಲಿ ಯಾವಾಗ್ಲೂ ಜನ ಬೀಳ್ತಾನೆ ಇರ್ತಾರೆ” ಅಂತಂದ್ರು. </p> “ಹೋಗ್ಲಿ ನನ್ನ ಕಾಲಿಗೆ ಒಂದು first aid ಮಾಡ್ಸಿ “” ಅಂತ ಅಂದೆ.

ಒಳಗೋಗಿ ಮಲಗಿದ್ದ ಒಬ್ಬ ನರ್ಸ್ ನ ಎಬ್ಬಿಸಿದರು. ಅವನು “doctor ಬೇಕಾ?” ಅಂತ ಅಂದ.

“ಇಲ್ಲ, ಬರೇ first aid ಸಾಕು” ಅಂತ ಅಂದೆ.

ಒಳಗೆ ಕರೆದುಕೊಂಡು ಹೋಗಿ ಗಾಯ ತೊಳೆದು, ಮದ್ದು ಹಚ್ಚಿ, ಒಂದಷ್ಟು ಸುತ್ತು ಬ್ಯಾಂಡೇಜ್ ಸುತ್ತಿ “ಓಡು ಮಗನೇ” ಅಂತ ಕಳಿಸಿದ್ರು.

ನಾನು ಕುಂಟುತ್ತಾ ನಡೆದು bike ಹತ್ತಿ, gear ಹಾಕೋಕೂ ಕಾಲು ಬಗ್ಗಿಸೋಕೆ ಆಗ್ದೆ ಹೆಂಗೋ, ಬೈಕ್ ಓಡಿಸಿಕೊಂಡು ಮನೆಗೆ ಬಂದೆ.

ಬೇರೆ ಪ್ಯಾಂಟ್ ಹಾಕ್ಕೊಂಡು, ಆಟೋ , ಮೆಟ್ರೋ ಹಿಡ್ದು, ಗೆಳೆಯರು ಇದ್ದ ಕಡೆಗೆ ಹೋಗಿ, ಸಿಗುವವರಿಗೆಲ್ಲ ಇಪ್ಪತ್ತು ಸೆಕೆಂಡಲ್ಲಿ ಬಿದ್ದು ಎದ್ದ ಕಥೆನ ಇಷ್ಟುದ್ದ ಮಾಡಿ ಹೇಳಿ, "ಅಯ್ಯೋ ಪಾಪ" ಅಂತ ಹೇಳಿಸಿಕೊಂಡು, ನೋವಲ್ಲಿ ಸಮಾಧಾನ ಪಡ್ತಿದ್ದೆ.

ಆ ನೋವಲ್ಲೇ ಮಲೆನಾಡ ಮಳೆಯಲ್ಲಿ ಕುಂಟುತ್ತಾ, ನಿಂತ್ರೆ ಕೂರೋಕೆ ಅಳು, ಕುಂತಿದ್ರೆ ಏಳೋಕೆ ಅಳು. ಆದ್ರೂ ಮೂರು ದಿನ ಇದ್ದು ತಿರುಗಿ ಮನೆಗೆ ಬಂದು ಒಂದು ತಿಂಗಳು ಸುಧಾರಿಸಿಕೊಂಡು ಮತ್ತೆ ನಡೆಯೋ ಹಂಗಾದೆ.

ಏನೇ ಅಂದ್ರೂ ತಿರುವುಗಳಲ್ಲಿ ನಿಧಾನಕ್ಕೆ ಹೋಗ್ತಿದ್ರೂ, ಬೀಳದಂಗೆ ಹೋದ್ರೆ ಒಳ್ಳೇದು. ಬಿದ್ರೆ ಎದ್ದು ನಡೆಯೋಕೆ ಬಹಳ ಕಷ್ಟ.

- ಆದರ್ಶ