ತ್ರಿಶೂರ್
by Adarsha
ಬೆಂಗಳೂರು
ಬೆಳಗ್ಗೆ ೬ ಗಂಟೆಗೆ ಎದ್ದು ಸಚಿನ್ ನಂಗೆ ಫೋನ್ ಮಾಡಿ, ತ್ರಿಶೂರಲ್ಲಿ ನಡಿಯೋ 'ಪೂರಮ್' ಜಾತ್ರೆಗೆ ಹೋಗೋಣ್ವ ಅಂದ. ಸರಿ, ವಿಷ್ಣು ನೂ ಕೇಳೋಣ ಅಂದು ಅವ್ನಿಗೂ ಫೋನ್ ಮಾಡಿದ್ವಿ. ವಿಷ್ಣು ನೂ ಹೊರಡೋಣ ಅಂದು ಅರ್ಧ ಗಂಟೆಯಲ್ಲಿ ಸಿದ್ದರಾಗಿ ಮನೆ ಬಿಟ್ವಿ.
ದಾರಿಲಿ ನಮ್ಮ ದೇಶದ "ಅತೀ ದೊಡ್ಡ ಹೊಟೇಲ್" ಅಂತ ಹೇಳ್ಕೋಂಡು ಓಡಾಡ್ತೀರೊ ರಾಮೇಶ್ವರಂ ಕೆಫೆಲಿ ತಿಂಡಿ ತಿಂದು ತಮಿಳುನಾಡಿನ ಕಡೆಗೆ ಹೊರಟ್ವಿ. ತಿಂಡಿ ತಕ್ಕ ಮಟ್ಟಿಗೆ ಚೆನ್ನಾಗಿತ್ತು.
ಮದ್ಯಾನದ ಊಟದ ಹೊತ್ತಿಗೆ ಅವಿನಾಶಿ ಅನ್ನೋ ಊರಲ್ಲಿದ್ವಿ. ಸರಿಯಾದ ಹೊಟೇಲ್ ಸಿಗದೇ, ಬದಿಯಲ್ಲಿ ಕಂಡ ಹೊಟೇಲ್ ಬಳಿ ನಿಲ್ಸಿ ಕಾರಿಂದ ಹೊರಬಂದ ನಮಗೆ ಅಲ್ಲಿನ ಧಗೆಯ ಕಂಡು "ಮೊದ್ಲು ಅಲ್ಲಿಂದ ಓಡಬೇಕು" ಅಂತ ಅನ್ನಿಸಿತ್ತು. ಬೆಳಗ್ಗೆ ೨೦° ಚಿಲ್ಲರೆ ಇದ್ದ ಬೆಂಗಳೂರಿಂದ, ಮದ್ಯಾನ ೩೯° ಇದ್ದ ಊರ ನೋಡಿ, ಬೇಗ ಊಟ ಮಾಡಿ ಅಲ್ಲಿಂದ ಓಟ ಕಿತ್ವಿ.
ತ್ರಿಶೂರ್
ಕೊಯಮತ್ತೂರು ದಾಟಿದ ಮೇಲೆ ಹೆದ್ದಾರಿಲಿ ಒಂದು ದೊಡ್ಡ ಗುಡ್ಡ ಅಡ್ಡ ಬಂದು, ಅದನ್ನ ಕೊರ್ದು ಮಾಡಿದ ಸುರಂಗದೊಳಗೆ ನುಸುಳಿ ಹೊರಬಂದು, ಕೇರಳದ ಗಡಿ ಒಳಗೆ ಬರ್ತಿದ್ದಂಗೆ ಹೆದ್ದಾರಿಯ ಎರಡೂ ಬದಿಯಲ್ಲಿ ದೊಡ್ಡ ದೊಡ್ಡ ಮನೆಗಳು ಕಂಡವು, ಎಲ್ಲ ಮನೆಗಳು ದೊಡ್ಡದಾಗಿರೋದ ನೋಡಿ ನಂಗೆ ಅಚ್ಚರಿ. ವಿಷ್ಣು ಇದ್ದೋನು "ಇಲ್ಲಿ ಜನರೆಲ್ಲ ಬಹಳ ದುಡ್ಡಿಟ್ಟಿದ್ದಾರೆ, ಆದ್ರೆ ಸರಕಾರ ಬಡವಾಗಿದೆ" ಅಂತ ಇಂದಿನ ಕೇರಳದ ರಾಜಕೀಯವ ನೆನಪಿಸಿದ.
ತ್ರಿಶೂರು ತಲುಪಿದಾಗ ೬:೩೦ ಆಗಿತ್ತು, ನೇರ ಜಾತ್ರೆ ನಡೆಯೋ ವಡಕ್ಕುನಾತನ್ ಗುಡಿಯ ಬಯಲಿನಲ್ಲಿ ನಿಲ್ಲಿಸಿ ಹೊರಬಂದ್ವಿ. ಕತ್ತಲಾಗಿದ್ದರಿಂದ ಬೇಸಿಗೆಯೂ ಕಷ್ಟ ಅನ್ನಿಸಲಿಲ್ಲ. ಸುತ್ತ ಚಂದ ಜಾತ್ರೆಯ ಅಲಂಕಾರ, ಬಣ್ಣ, ಬೆಳಕು. ಜನ ಅಂಗಡಿಯಲ್ಲಿ ಬಗೆಬಗೆಯ ತಿನಿಸು, ವಸ್ತುಗಳ ಕೊಳ್ಳುತ್ತಿದ್ದರು. ನಾವು ನೋಡುವ ಅಂತ ಎಳೆ ಕೊಬ್ಬರಿಯ milkshake ಕೊಂಡು ಕುಡಿದ್ವಿ. ಮತ್ತೆ ಆ milkshake ತಗೋತೀವಿ ಅಂತ ಅನ್ನಿಸಲಿಲ್ಲ. ಜಾತ್ರೆಗೆಂದು ಬಹಳ ಆನೆಗಳ ಕರೆಸಿದ್ದರು, ಎಲ್ಲ ಒಳ್ಳೆ ಕೋರೆ ಹಲ್ಲುಗಳಿದ್ದ ಗಂಡು ಆನೆ. ನಾವು "ಇವೆಲ್ಲ ಕರ್ನಾಟದಲ್ಲಿ ಹಿಡಿದು, training ಕೊಟ್ಟು, ಕಳಿಸಿರೋ ಆನೆ ಇರಬೇಕು. ಕನ್ನಡದಲ್ಲಿ ಮಾತಾಡ್ಸಿದ್ರೆ ಅವಕ್ಕೆ ತಿಳಿಬೋದಾ?" ಅಂತ ಮಾತಾದ್ಕೋತಿದ್ವಿ. ತಿನ್ನೋಕೆ ರುಚಿಯಾದ್ದು ಬೇರೇನೆಲ್ಲ ಸಿಗತ್ತೆ ಅಂತ ಕಣ್ಣಾಯಿಸುತ್ತಾ "ವಡಕ್ಕುನಾತನ್ ಗುಡಿ" ಮುಂದೆ ಬಂದು ನಿಂತು ನಾವಿದ್ದ ಬಟ್ಟೆಲಿ ಒಳಗೋಗಬಹುದಾ ಅಂತ ನೋಡುತ್ತಾ ನಿಂತೆವು, ಕಡೆಗೆ ಮನಸ್ಸು ಮಾಡಿ ನೋಡೇ ಬಿಡೋಣ ಅಂತ ಒಳ ಹೊಕ್ವಿ.
ಬಹಳ ದೊಡ್ಡದಾದ ಪ್ರಾಂಗಣದಲ್ಲಿ ನಡೆದು ಹೋಗುವಾಗ ನಿಂತು ಫೋಟೋ ತೆಗೆದೆ. ಅದನ್ನ ನೋಡಿದ ಒಬ್ಬ "ಇಲ್ಲಿ ಫೋಟೋ ತೆಗಿಬಾರದು" ಅಂತ ಅಂದ. ನಾವು ಸರಿ ಅಂದು ನಡೆದೆವು. ಪಕ್ಕದಲ್ಲೇ ಹುಡುಗಿಯರ ಗುಂಪೂ ಫೋಟೋ ತೆಗಿತಿದ್ದರು, "ಅವರಿಗೂ ನಮ್ಮಂಗೇ ಹೇಳಲಿಲ್ಲ ಅಂದ್ರೆ ಇವ್ನಿಗಿದೆ" ಅಂತ ಅಂದುಕೊಳ್ಳುವಾಗ್ಲೆ ಅವ ಆ ಹುಡುಗಿಯರಿಗೂ ಅದನ್ನೇ ಹೇಳಿ ಅವನ ಜೀವ ಉಳಿಸಿಕೊಂಡಿದ್ದ.
ಗುಡಿಯ ಒಳಗೆ ಒಂದು ಕಡೆ ಶಿವನ ಒಕ್ಕಲಿನ ಗುಡಿಗಳು, ಇನ್ನೊಂದು ಕಡೆ ವಿಷ್ಣುವಿನ ಒಕ್ಕಲಿನ ಗುಡಿಗಳು. ನಡುವೆ ಜನ ಭಕ್ತಿಯಿಂದ ಹೊಡೆದಾಡದಿರೋದೆ ಈ ಕಾಲದ ಸೊಬಗು. ಹಳೆ ಕಾಲ ಆಗಿದ್ರೆ ಮಾತೆ ಬೇರೆ ಆಗಿರೋದು. ಶಿವನ ಗುಡಿಯಿಂದ ಪೂಜೆಗೆ ಬಳಸಿದ ನೀರು ಹೊರಬಂದು ಹರಿಯುತ್ತಿತ್ತು, ಅಲ್ಲಿ 'ಗಂಗೆಯನ್ನು ದಾಟಬೇಡಿ' ಅಂತ ಬರೆದಿದ್ದರು. ಅದನ್ನ ನೋಡದೆ ವಿಷ್ಣು ದಾಟಿಬಿಟ್ಟಿದ್ದ. ನಾವು "ದಾಟಬಾರದಿತ್ತೋ,. ಈಗ ಜಗತ್ತು ಮುಳುಗೊಗುತ್ತೆ," ಅಂತ ಆಡ್ಕೋತಿದ್ವಿ. ಅಷ್ಟರಲ್ಲೇ ವಿಷ್ಣುಗೆ ಫೋನ್ ಬಂತು "ಆಫೀಸ್ ನ production software, ಕೆಲಸ ಮಾಡ್ತಿಲ್ಲ. ಈಗ್ಲೆ ಕೆಲಸಕ್ಕೆ ಬಂದು ಅದನ್ನ ಸರಿ ಮಾಡ್ಬೇಕು" ಅಂತ.
ವಿಷ್ಣು: “ಯಾವ ಬಾಯಲ್ಲಿ production ಹಾಳಾಗಿ, ಕೆಲಸ ಬರುತ್ತೆ ಅಂತ ಹೇಳಿದ್ಯೋ, ಹಂಗೆ ಆಯ್ತು” ಅಂತ.
ನಾನು : “ನಾ ಹೇಳಿದ್ದಕ್ಕಲ್ಲೋ, ಗಂಗೆ ನ ದಾಟಿದ್ದಕ್ಕೆ ಹಿಂಗಾಗಿದ್ದು, ಇದನ್ನ ನಿಮ್ಮ ಮ್ಯಾನೇಜರ್ ಗೆ ಹೆಳ್ಲಾ”. ಈಗಲಾದರೂ ದೇವರಿದ್ದಾನೆ ಅಂತ ಒಪ್ಕೋ ಅಂದೆ.
ಕೂಡ್ಲೆ ಕಾರ್ ಇರೋ ಕಡೆಗೆ ಹೊರಟು, ಕೆಲಸ ಬಂದ ರಗಳೆ ನ ನೆನಸ್ಕೊಂಡು ನಗ್ತಾ ಇದ್ವಿ. ಕಾರ್ ಬಳಿ ಹೋಗಿ, ವಿಷ್ಣು ಲ್ಯಾಪ್ಟಾಪ್ ತೆಗ್ದು ಕೆಲಸಕ್ಕೆ ಕೂತ. ರಾತ್ರಿಯ ಸೆಖೆಗೆ ಕಾರಿನಲ್ಲಿ ಬೆವರು ಸುರಿಸಿ ಕೆಲಸ ಮಾಡಬೇಕಾದ್ರೆ, ಅರ್ದದಲ್ಲೇ battery ಮುಗಿದು, ಯಾವುದಾದರೂ ಹೊಟೇಲ್ ಗೆ ಹೋದ್ರೆ ಅಲ್ಲಿ laptop charge ಗೆ ಹಾಕಿಕೊಂಡು ಕೆಲಸ ಮಾಡ್ಬೋದು ಅಂತ ನಾವು ಹತ್ತಿದರ ಬಹಳ ಹೆಸರಿರೋ 'ಭರತ್ ಹೊಟೇಲ್' ಹುಡುಕಿ ಗೆ ಹೋದ್ರೆ, ಅಲ್ಲಿ ನಿಲ್ಲೋಕೂ ಜಾಗವಿಲ್ಲದೆ, ಅದರ ಎದುರಿಗೆ ಕಂಡ ಇನ್ನೊಂದು ಹೊಟೇಲ್ ಅಲ್ಲಿ laptop ಹಿಡಕೊಂಡು ಕೂತು, ಜೊತೆಗೆ ಅಲ್ಲೇ ರುಚಿ ಹಿಡಿಸದ ಊಟ ಮಾಡಿ ಹೊರಟರೂ, ವಿಷ್ಣು laptop ಹಿಡಿದು ಕೂತಿದ್ದ. ನಾವು ಕಾರ್ ತಂದು ಅವನನ್ನ ಕರೆದುಕೊಂಡು, ರಾತ್ರಿ ಉಳಿಯಲು lodge ಒಂದನ್ನ ಹುಡುಕಿ, ಹೋಗಿ ನಾ ಮಲಗುವ ಹೊತ್ತಿಗೂ ಅವ ಕೆಲಸ ಮಾಡ್ತಾನೆ ಇದ್ದ. ರಾತ್ರಿ ಅವನ ಕೆಲಸ ಮುಗಿಸಿ ಮಲಗುವ ಹೊತ್ತಿಗೆ ದೇವರಿದ್ದಾನೆ ಅಂತ ಅವ ಒಪ್ಪಿದನಾ ಅನ್ನೋ ಪ್ರಶ್ನೆ ಹಂಗೆ ಉಳ್ಕೊಂಡಿತ್ತು.
ಪೂರಮ್
ಬೆಳಗ್ಗೆ ಎದ್ದು ready ಆಗಿ ಮತ್ತೆ ಪೂರಮ್ ಕಡೆಗೆ ಬಂದ್ವಿ. ದಾರಿಯುದ್ದಕ್ಕೂ ಅಂದವಾಗಿ, ದೊಡ್ಡದಾಗಿ, ಚೊಕ್ಕವಾಗಿದ್ದ ತ್ರಿಶೂರು ಕಂಗೊಳಿಸುತ್ತಿತ್ತು. ಜನಕ್ಕೆ ಬೇಸಿಗೆಯ ತಡ್ಕೊಳ್ಳಲು ಕೊಡುತ್ತಿದ್ದ ಬೀಸಣಿಗೆ, ಮಜ್ಜಿಗೆ ಗಳ ತೆಗೆದುಕೊಂಡು ಗಾಳಿ ಬೀಸಿಕೊಂಡು ಜಾತ್ರೆಯ ಅಂಗಳಕ್ಕೆ ಬಂದು, ಚಂಡೆಯ ಮೇಳ ನೋಡುತ್ತಾ ನಿಂತೆ. ಚಂಡೆಯ ಸದ್ದಿಗೆ ಎಲ್ಲ ವಯಸ್ಸಿನವರು ಒಟ್ಟಿಗೆ ತಲೆಯಾಡಿಸುತ್ತಾ ಕುಣಿಯುತ್ತಿದ್ದರು. ಇಂತ ಒಂದು ಒಮ್ಮತದ ಹುರುಪಿನ ತಾಳ, ಕುಣಿತ ನಮ್ಮ ಕರ್ನಾಟಕದಲ್ಲಿ ಯಾವ ಹಬ್ಬ, ಜಾತ್ರೆಯಲ್ಲೂ ನಾ ಕಂಡ ನೆನಪಿರಲಿಲ್ಲ. ಅದನ್ನು ಕಂಡು ಮುಂದೆ ಅಲ್ಲೇ ಹತ್ತಿರದಲ್ಲಿ ನಡೆಯುತ್ತಿದ್ದ ಆನೆಯ ಮೆರವಣಿಗೆ ನೋಡೋಕೆ ಹೋದೆ. ಪಕ್ಕದಲ್ಲೇ ಇದ್ದ ಇನ್ನೊಂದು ಗುಡಿಯಿಂದ ನಿಧಾನಕ್ಕೆ ಒಂದೊಂದಾಗಿ ಆನೆಗಳು ಹೊರಬಂದಾಗೆಲ್ಲ ಜನರ ಹುರುಪು, ಕೇಕೆ ಹಾಕುತ್ತಿದ್ದರು. ದೊಡ್ಡ ಬಯಲನ್ನು ತಿರುಗಿ ನೋಡಿದಾಗ ನೆರೆದಿದ್ದ ಎಲ್ಲ ಜನರ ನೋಡೋದೆ ಒಂದು ಚಂದವಾಗಿತ್ತು.
ನಿಧಾನಕ್ಕೆ ಬಿಸಿಲಿನ ಝಳ ಏರುತ್ತಿದ್ದ ನೋಡಿ, ಇನ್ನು ನಮ್ಮ ಇಲ್ಲಿನ ಕಾಲ ಮುಗೀತು, ಈಗ ಹೊರಟರೆ ರಾತ್ರಿ ಊಟದ ಹೊತ್ತಿಗೆ ಬೆಂಗಳೂರಲ್ಲಿರಬಹುದು ಅಂತ ಚಂದದ ತ್ರಿಶೂರಿಗೆ ಅಡ್ಡಬಿದ್ದು ಅಲ್ಲಿಂದ ಹೊರಟ್ವಿ. ಮತ್ತೆ ಯಾವಾಗಾದ್ರೂ ತ್ರಿಶೂರಿಗೆ ಹೋಗುವ, ಅಲ್ಲಿನ ಕೇರಳದ 'ಸಾದ್ಯ' ಊಟದ ರುಚಿ ನೋಡುವ ಮನಸ್ಸಿದೆ.
- ಆದರ್ಶ