ಸನ್ನಿವೇಶ ೧

ಮೂರನೇ ಸೆಮ್ ಶುರುವಾಗಿ ಸುಮಾರು ಮೂರು ತಿಂಗಳಾಗಿತ್ತು ಅನಿಸುತ್ತೆ. ಒಂದು ಶನಿವಾರ ಬೆಳಗ್ಗೆ ಕ್ಲಾಸ್ ಗೆ ಬಂದಿದ್ದ ನಮ್ಮ ಗುಂಪಿನ ಒಂದು ೮ ಜನ, ಇದ್ದಕ್ಕಿದ್ದ ಹಾಗೆ ಮೇಕೆದಾಟಿಗೆ ಹೋಗಣ ಅಂತ ಮಾತುಕತೆ ಶುರು ಮಾಡಿದ್ರು. ಒಂದರ್ಧ ಗಂಟೆಯಲ್ಲಿ ಎಲ್ಲವನ್ನ ಇತ್ಯರ್ಥ ಸಹ ಮಾಡಿಬಿಟ್ಟಿದ್ರು. ಕೆಲವರು ಅವರಪ್ಪನದ್ದೋ, ಸ್ನೇಹಿನದ್ದೋ, ಇನ್ಯಾರದ್ದೊ ಗಾಡಿಗಳನ್ನ ಎತ್ತಾಕ್ಕೊಂಡು ಮಧ್ಯಾಹ್ನ ಒಂದು ೧೧ ಗಂಟೆಯಷ್ಟರಲ್ಲಿ ನಾಲ್ಕು ಗಾಡಿಗಳಲ್ಲಿ ಮೇಕೆದಾಟಿನ ಕಡೆಗೆ ಹೊರಟೆ ಬಿಟ್ಟಿದ್ವಿ.

ಆ ಒಂದು ಪುಟ್ಟ ಪ್ರವಾಸದಲ್ಲಿ ಎಷ್ಟೆಲ್ಲ ಅಪೇಕ್ಷಿಸದ ಸನ್ನಿವೇಶಗಳಲ್ಲಿ ತಗಲಾಕ್ಕೊಂಡಿದ್ವಿ ಅಂದ್ರೆ!

ನಾಗರಭಾವಿಯ ಕಾಲೇಜಿನಿಂದ ಹೊರಟು, ಕನಕಪುರ ರಸ್ತೆಯಲ್ಲಿ ಸುಮಾರು ೨೦ ಕಿಮೀ ಸಹ ಹೊಗಿರಲಿಲ್ಲ ಅಷ್ಟರಲ್ಲಿ, ಅಮೋಘ ತಂದಿದ್ದ ಅವರಪ್ಪನ ಗಾಡಿ ಮೊದಲನೆ ಸಲ ಕೈ ಕೊಡ್ತು! ಅಲ್ಲೆ ಹತ್ತಿರದಲ್ಲಿ ಇದ್ದ ಒಂದು ರಿಪೇರಿ ಅಂಗಡಿಯಲ್ಲಿ ಒಂದತ್ತು ರೂಪಾಯಿ ಕೊಟ್ಟು ಗಾಡಿ ಸರಿ ಮಾಡಿಸಿ ಮುಂದೆ ಹೋಗಿದ್ವು. ಅಲ್ಲಿಂದ ಒಂದೈದು ಕಿಮೀ ಹೋಗಿರಬಹುದು, ಗಾಡಿ ಮತ್ತೆ ಮೊದಲಿನ ಹಾಗೆ ಎಡಬಿಡಂಗಿ ಆಟ ಶುರು ಮಾಡಿತ್ತು. ಈ ಸಲ ಹೋದ ಅಂಗಡಿಯವನು, "ಸರ್ ಗಾಡಿಯನ್ನ ಸ್ಲೋ ಮಾಡಬೇಡಿ, ರೈಜ಼್ ಮಾಡ್ಕೊಂಡೆ ಓಡ್ಸಿ" ಅಂತ ಹೇಳಿದ ಹಾಗೆ ನಂಗೆ ನೆನಪು. ಆ ಪುಟ್ಟ ಪ್ರವಾಸ ಮುಗಿಸಿ ವಾಪಸ್ಸು ಬರೋವಾಗ್ಲೆ ಗೊತ್ತಾಗಿದ್ದು, ಅವನು ಹೇಳಿದ್ದನ್ನ ಅಮೋಘ ಎಷ್ಟು ಸೀರಿಯಸ್ ಆಗಿ ತಗೊಂಡಿದ್ದ ಅಂತ! ಜೊತೆ ಜೊತೆಗೆ ಇದ್ದವ, ವಾಪಸ್ಸು ಬರ್ತಾ ಕೆಂಗೇರಿ ನೈಸ್ ಟೋಲ್ ಹತ್ರ ಬರುವಾಗ, ಕಣ್ಣಿಗೆ ಕಾಣಿಸದ ಹಾಗೆ ಹೋಗಿದ್ದ! ಮೇಕೆದಾಟಿನಿಂದ ಹೊರಟಾಗ ಸಮಯ ೬ ರ ಗಡಿ ದಾಟಿತ್ತು. ಅಷ್ಟರಲ್ಲಿ ನಮ್ಮ ಜೊತೆಗೆ ಬಂದಿದ್ದ, ಅರುಣ್ ಮೋಹನ್ ಮತ್ತೆ ಅರುಣ್ ಇಬ್ಬರೂ ಹೊರಟು ಬಿಟ್ಟಿದ್ರು. ಅರುಣ್ ಮೋಹನ್ ನ ಮನೆಯಲ್ಲಿ ಬೈತಾರೆ ಅವನು ಟ್ರಿಪ್ ಹೋಗಿರೋದು ಗೊತ್ತಾದ್ರೆ ಅಂತ ಹೇಳಿ, ಅವನು ಸುಮಾರು ಐದು ಗಂಟೆಗೆ ಹೊರಟುಬಿಟ್ಟಿದ್ದ. ಮಧ್ಯಾಹ್ನ ಊಟಕ್ಕೆ ಏನು ತಿಂದಿದ್ವೋ ಇಲ್ವೋ ನೆನಪಿಲ್ಲ, ಆದ್ರೆ ಸಂಜೆ ವಾಪಸ್ಸು ಬರೋ ಹೊತ್ತಿಗೆ ಎಲ್ಲರಿಗೂ ಹೊಟ್ಟೆ ಹಸಿದಿತ್ತು. ಕಾಲೇಜಿಗೆ ಅಂತ ತಂದಿದ್ದ ಊಟದ ಡಬ್ಬಿಗಳು ಮಾತ್ರ ಕಾಲಿಯಾಗದೆ ಹಾಗೆ ಉಳಿದುಬಿಟ್ಟಿದ್ವು. ಆಗ್ಲೆ, ಯಾವ್ದೋ ಊರಲ್ಲಿ ಗಾಡಿಗಳನ್ನ ಬದಿಗೆ ಹಾಕಿ, ರಸ್ತೆ ಪಕ್ಕದಲ್ಲೆ ಗಾಡಿಗಳನ್ನ ನಿಲ್ಲಿಸಿ ಎಲ್ಲರ ಡಬ್ಬಿಗಳನ್ನ ಗಬ ಗಬನೆ ಕಾಲಿ ಮಾಡಿದ್ವಿ. ಅವತ್ತು ಗೊತ್ತಾಯ್ತು, "ಒಟ್ಟಿಗೆ ಡಬ್ಬಿಗಳಿಗೋ ಅಥವಾ ತಟ್ಟೆಗಳಿಗೋ ಕೈ ಹಾಕಿ ತಿನ್ನೋದರ ಮಜವೇ ಮಜಾ! ಹಾಗೆ, ಆ ರೀತಿ ತಿಂದಾಗ, ತಿಂದದ್ದು ಹೊಟ್ಟೆ ತುಂಬಿಸಿದೆ ಅಂತ ಗೊತ್ತು ಸಹ ಆಗೋದಿಲ್ಲ" ಅಂತ.

ಸನ್ನಿವೇಶ ೨

ಕಾಲೇಜು ಮುಗಿಸಿ ಬಸ್ ಸ್ಟಾಪಿಗೆ ಬಂದು, ಒಂದಷ್ಟು ಜನ ಒಂದು ಕಡೆಯ ಬಸ್ ಸ್ಟಾಪಿನ ಕಡೆ ನಿಂತ್ರೆ, ಇನ್ನೊಂದು ಕಡೆಯಲ್ಲಿ ಇನ್ನೊಂದಷ್ಟು ಜನ. ಬಸ್ಸು ಹತ್ತಿ, ಬಸ್ಸಲ್ಲಿದ್ದ ಕಂಬಗಳಿಗೆ ಬೆನ್ನು ಹಾಕೋ, ಅಥವಾ ಕಷ್ಟ ಪಟ್ಟು ಹಿಡಿದ ಸೀಟಿನ ಮೇಲೋ ಕೂತು ಜೇಬಿಂದ ಫೋನು ತೆಗೆದು ಅದಕ್ಕೆ ಇಯರ್ ಫೋನ್ ಚುಚ್ಚಿ ಎಫ್.ಎಮ್ ಹಾಕೋದು ನನ್ನ ದಿನ ನಿತ್ಯದ ರೂಡಿ ಆಗೋಗಿತ್ತು. ಅದೆ ಸುಮಾರಿಗೆ ಒಂದು ಮೆಸ್ಸೇಜ್ ಬಂದಿರೋದು, ಅದರ್ಶನದ್ದು, "ಮಗ, 98.3 ಕೇಳೋ" ಅಂತ. ಮತ್ತೆ ಇಲ್ಲಿ ಜಾಹಿರಾತು ಬರೋವಾಗಲೋ, ಅಥವಾ ಇನ್ಯಾವ್ದೋ ಸ್ಟೇಷನ್ ಹಾಕಿದ್ದಾಗಲೋ, ನನ್ನಿಂದ ಅದೆ ತರಹದ ಮೆಸ್ಸೇಜ್ ಅವನಿಗೆ ಹೊಗಿರೋದು. ಹೀಗೆ, ಅದೆಷ್ಟೋ ದಿನಗಳು, ಇರ್ತಾ ಇದ್ದ ೧೦೦ ಮೆಸ್ಸೇಜ್ ಗಳ ಮೂಲಕ, ಅದೆಷ್ಟೋ ಹಾಡುಗಳ ಪರಿಚಯ ಮಾಡ್ಕೊಂಡಿದ್ದೀವಿ. ಇನ್ಯಾವುದೋ ಸಮಯದಲ್ಲಿ ಇಯರ್ ಫೋನ್ ಕಿತ್ತು, ಹೊಸದನ್ನ ತಗೊಳ್ಳೋದಕ್ಕೆ ದುಡ್ಡು ಇಲ್ಲದೆ, ಮೊಬೈಲ್ ಅಲ್ಲಿದ್ದ 7MB ಜಾಗದಲ್ಲಿ ಒಂದು ಹಾಡನ್ನ ತುಂಬಿ, ದಿನ ಪೂರ್ತಿ ಅದನ್ನೆ ಮತ್ತೆ ಮತ್ತೆ ತಿರುಗಿಸಿ ಕೇಳಿದ್ದೂ ಇದೆ. ಈ ತರಹ ಅದೆಷ್ಟೋ ಮರೆಯಲಾಗದ ನೆನಪುಗಳು, ತಲೆಯ ಮೂಲೆ ಮೂಲೆಯಲ್ಲಿ ತನ್ನದೆ ಸಮಯಕ್ಕಾಗಿ ಹೊರಬರೋದಕ್ಕೆ ಕಾಯ್ತಾ ಇದ್ದಾವೆ. ಬಂದಾಗ, ತುಟಿಯ ಅಂಚಿನಲ್ಲೊಂದು ಸಣ್ಣ ಕಿರುನಗೆಯನ್ನ ಮೂಡಿಸಿ ಹೋಗತ್ತೆ. ಅಥವಾ ಇಂತದ್ದೆ ಇನ್ನಷು ನೆನಪುಗಳನ್ನ ಹೊರತೆಗೆಯೋದಕ್ಕೆ ಅಣಿ ಮಾಡಿ ಕೊಟ್ಟಿರತ್ತೆ. ಈಗ ಕಾಲ ಬದಲಾಗಿದೆ. ಇಂಜಿನಿಯರಿಂಗ್ ಓದೋವಾಗ ಜೇಬಲ್ಲಿ ೧೦೦ರೂ ಇಟ್ಕೊಂಡು, ವಾರಗಟ್ಟಲೆ ಕಳೀತಾ ಇದ್ದವ್ರು, ಈಗ ಒಂದು ಊಟಕ್ಕೆ ೧೦೦೦ದ ವರೆಗು ಕರ್ಚು ಮಾಡೋ ಅಷ್ಟು ಬೆಳೆದು ನಿಂತಿದ್ದೀವಿ. ಟ್ರಿಪ್ ಹೋಗಬೇಕು ಅಂತ ನಿರ್ಧರಿಸಿ, ಬೈಕ್ ಗಳು ಸಾಲದಿದ್ದಾಗ ಅವರಿವರತ್ರ ಕೇಳಿಯು ಸಿಗದೆ, ಅದೆಷ್ಟೋ ಟ್ರಿಪ್ಗಳನ್ನ ಕೈಬಿಟ್ಟಿದ್ದಿದೆ. ಈಗ ಹೆಚ್ಚು ಕಡಿಮೆ ಪ್ರತಿಯೊಬ್ಬರ ಹತ್ರವು ಒಂದು ಬೈಕೋ ಅಥವಾ ಕಾರೋ ಇದೆ. ಪ್ರವಾಸಗಳಿಗೆ ಮಾತ್ರ ಕರೆದ್ರೆ ಬರೋರು ಬಹಳ ಕಡಿಮೆ. ಆದ್ರೆ ಆಗ ಸಿಗ್ತಾ ಇದ್ದಂತ ಕುಶಿ, ಆಗ ಸಿಗ್ತಾ ಇದ್ದಂತ ಅನುಭವಗಳ ರುಚಿ, ಈಗಿನ ಅನುಭವಗಳಲ್ಲಿ ಸಿಗೋದೆ ಇಲ್ಲ ಅನಿಸುತ್ತೆ. ಅಥವಾ, ಈಗಿನ ಅನುಭವಗಳ ಬಗ್ಗೆ, ಮುಂದೆ ಹೋಗಿ ಹಿಂದೆ ತಿರುಗಿ ನೋಡಿದಾಗ ಮತ್ತೆ ಇದೆ ರೀತಿ ಅನ್ಸುತ್ತಾ?

ಕಳೆದು ಹೋದ ಕಾಲ ಮತ್ತೆ ಸಿಗೋದಿಲ್ಲ ಅಂತ?

- ಚೇತನ್