ಜನವರಿ ೨೬ ಗಣರಾಜ್ಯೋತ್ಸವ ದಿನದ ಬೆಳಗ್ಗೆ ೭:೫೦ ಕ್ಕೆ ಸೊಲ್ಲಾಪುರ - ಹಾಸನ ಎಕ್ಸ್ಪ್ರೆಸ್ ರೈಲಿನಲ್ಲಿ ಯಶವಂತಪುರದಿಂದ ಹೋಗುವುದೆಂದು ನಾನು, ಸುಷ್ಮಾ, ಸಿದ್ದು ಶನಿವಾರ ಸಂಜೆ ನಿರ್ಧಾರ ಮಾಡಿದೆವು. ನಾನು ಭಾನುವಾರ ಬೆಳಗ್ಗೆ ೬:೧೫ ಕ್ಕೆ ಬಿಟಿಮ್ ನಿಂದ ಹೊರಡಬೇಕೆಂದುಕೊಂಡರೂ, ಹೊರಡೊ ಅಶ್ಟರಲ್ಲಿ ೬:೪೦ ಆಗಿತ್ತು. ೭ ಗಂಟೆಗೆ ಬನಶಂಕರಿ ಸ್ಟಾಪ್ ನಲ್ಲಿ ಇಳಿದು ಮೆಟ್ರೊ ನಿಲ್ದಾಣಕ್ಕೆ ಅವಸರವಾಗಿ ನಡೆದುಕೊಂಡು ಬಂದು ಪ್ಲಾಟ್ ಫಾರಂ ತಲುಪಿದೆ. ಆದರೆ ಅಷ್ಟರಲ್ಲಾಗಲೇ ರೈಲು ಜಾಗ ಖಾಲಿ ಮಾಡಿಯಾಗಿತ್ತು. ಇನ್ನು ೬ ನಿಮಿಷಕ್ಕೆ ಮತ್ತೊಂದು ಮೆಟ್ರೊ ರೈಲು ಬರುತ್ತದೆಂದು ಬೋರ್ಡ್ ನೋಡಿದರೆ ೭:೧೨ ಕ್ಕೆ ಮುಂದಿನ ರೈಲು ಬರುವುದೆಂದು ತೋರಿಸುತ್ತಿತ್ತು. ಅದನ್ನ ನೋಡಿದ ಮೇಲೆ ಸಿದ್ದುಗೆ ಕರೆಮಾಡಿ "೭:೫೦ ರ ಒಳಗೆ ನಾನು ತಲುಪುವುದು ಕಷ್ಟ ನೀನೇ ಎಲ್ಲರಿಗೂ ಟಿಕೇಟ್ ತೆಗೆದುಕೊ, ರೈಲಿನಲ್ಲಿಯೇ ಎಲ್ಲರೂ ಭೇಟಿಯಾಗೋಣ" ಅಂದೆ. ಬಾಹುಬಲಿಗೆ ಮನಸ್ಸಿನಲ್ಲಿ ನಮಸ್ಕರಿಸುತ್ತಾ ಹೇಗಾದರೂ ನಾನು ಶ್ರವಣಬೆಳಗೊಳ ನೋಡುವ ಹಾಗಾಗಲಿ ಅಂತ ಮನವಿ ಮಾಡಿಕೊಂಡೆ. ೭:೧೨ ಕ್ಕೆ ಮೆಟ್ರೊ ರೈಲು ಹತ್ತಿದೆ, ನನಗೇಕೋ ಆ ದಿನ ರೈಲು ತುಂಬಾನೇ ನಿಧಾನವಾಗಿ ಚಲಿಸುತ್ತಾ ಇದೆ ಅಂತ ಅನ್ನಿಸುತ್ತಿತ್ತು. ಬೇಕಾಗಿರೋ ಹೊತ್ತಲ್ಲೇ ಈ ಸಮಯ ಬೇಗ ಓಡೋದಿಲ್ಲ.

೭:೫೦ ಕ್ಕೆ ಯಶವಂತಪುರ ಮೆಟ್ರೊ ನಿಲ್ದಾಣ ತಲುಪಿದೆ. ಸಿದ್ದುಗೆ ಕರೆಮಾಡಿ 'ರೈಲು ಯಾವ ಪ್ಲಾಟ್ ಫಾರಂ ನಲ್ಲಿದೆ? ಹೊರಟಿದೆಯಾ?' ಅಂತ ಕೇಳಿದಾಗ ಅವನು ೨ ನೇ ಪ್ಲಾಟ್ ಫಾರಂ ನಲ್ಲಿದೆ, ಇವಾಗ ಹೊರಡತ್ತೆ ಬೇಗ ಬಾ ಅಂದ. ನನ್ನ ಮುಂದೆ ೫-೬ ಜನ ಆದಿಚುಂಚನಗಿರಿ ೨ ನೇ ಪ್ಲಾಟ್ ಫಾರಂ ಅಂತ ಹೇಳಿ ಓಡೋಕೆ ಶುರುಮಾಡಿದರು. ಯಾವತ್ತೂ ಅಷ್ಟು ಚುರುಕಾಗಿ ಕೆಲಸ ಮಾಡದ ನನ್ನ ಮೆದುಳು ತಕ್ಷಣ ಇವರೆಲ್ಲಾ ಹೋಗುವ ರೈಲಿಗೆ ನಾನೂ ಹೋಗಬೇಕೆಂದು ಗೊತ್ತಾಗಿ ಅವರನ್ನು ಹಿಂಬಾಲಿಸಿದೆ. ಮೆಟ್ರೊ ನಿಲ್ದಾಣದ ನಿರ್ಗಮನದ ಗೇಟ್ನಿಂದ ಓಡೋಕೆ ಶುರು ಮಾಡಿ ೨ ನೇ ಪ್ಲಾಟ್ ಫಾರಂ ಗೆ ಬಂದರೆ ರೈಲು ಚಲಿಸುತ್ತಿದ್ದ ಕಂಡು ಬೆದರಿದೆ. ನನ್ನ ಮುಂದಿದ್ದ ಆ ಆರು ಜನ ಹೇಗೋ ಹತ್ತಿದರು. ನಾನು ಹಾಗೆ ಹತ್ತಲು ಹೋದಾಗ ರೈಲಿನ ಒಳಗಿದ್ದವರು "ಹತ್ತಬೇಡ, ಮುಂದಿನ ರೈಲಿಗೆ ಬಾ" ಎಂದರು. ನಾನು ಸುಷ್ಮಾಗೆ ಕರೆಮಾಡಿ "ನಾನು ಬರ್ತಾ ಇಲ್ಲ ನೀವಿಬ್ಬರೇ ಹೋಗಿಬನ್ನಿ" ಅಂತ ಹೇಳಬೇಕಾದ್ರೆ, ಯಾರೋ ಹಿಂದಿನಿಂದ “ರೈಲು ತುಂಬಾ ವೇಗವಾಗೇನೂ ಹೋಗ್ತಾ ಇಲ್ಲ, ಸ್ವಲ್ಪ‌ ಓಡಿ ಹೋಗಿ ಹತ್ತು ಆಗತ್ತೆ” ಎಂದು ಧೈರ್ಯ ಹೇಳಿದರು. ಹೇಗೋ ಧೈರ್ಯ ಮಾಡಿ ಓಡಿ ಹೋಗಿ ರೈಲು ಹತ್ತಿದೆ. ನನ್ನ ಹಿಂದೆ ಮತ್ತಿಬ್ಬರು ಮಗು ಹಿಡಿದುಕೊಂಡು ಹತ್ತಿದರು. ನಾನು ಅವರಿಗೆ "ಚಿಕ್ಕ ಮಗು ಇರಬೇಕಾದರೆ ಯಾಕೆ ಈ ಸಾಹಸ ಮಾಡ್ತೀರಾ" ಅಂದಿದಕ್ಕೆ, “ನಾವು ಹತ್ತೋದು ಬೇಡ ಅಂದುಕೊಂಡಿದ್ದೆವು, ಆದರೆ ನೀವು ಹತ್ತಿದನ್ನು ನೋಡಿ ಈ ಕೆಲಸ ಮಾಡಿದೆವು” ಅಂದರು. ಆಗ ಒಳಗೊಳಗೆ ನಾನು ಮಾಡಿರುವ ಕೆಲಸ ಇಬ್ಬರಿಗಾದ್ರೂ ಸ್ಪೂರ್ತಿ ಕೊಡುವ ಹಾಗಾಯಿತೆಂದು ಖುಷಿಪಟ್ಟೆನು. ಜೀವನದಲ್ಲಿ ಮೊದಲ ಬಾರಿಗೆ ಚಲಿಸುವ ರೈಲು ಹತ್ತಿದ ಸಾಹಸ ಮಾಡಿದೆನೆಂದು ಸಂತೋಷಪಟ್ಟಿದ್ದೆ.

ನೆಲಮಂಗಲ ಕ್ರಾಸಿಂಗ್ ನಲ್ಲಿ ೨೦ ನಿಮಿಷ ರೈಲು ನಿಲ್ಲಿಸಿದಾಗ ಸಿದ್ದು, ಸುಷ್ಮಾ ಇರುವ ಬೋಗಿಗೆ ಹೋದೆ. ಅವರಿಗೆ ನಾನು ನನ್ನ ಸಾಹಸದ ಬಗ್ಗೆ ಹೇಳಿ ಹೆಮ್ಮೆ ಪಡುತ್ತಿದ್ದರೆ, ಆವರಿಬ್ಬರೂ ನನ್ನನ್ನು ನೋಡಿ ನೋಡಿ ನಗುತ್ತಿದ್ದರು. ಓಡಿ ಬಂದು ರೈಲು ಹತ್ತಿದನ್ನು ವಿಡಿಯೋ ಮಾಡಿ ಯಟೂಬ್ ನಲ್ಲಿ ಹಾಕೋ ಅವಕಾಶ ತಪ್ಪಿಹೋಯಿತಲ್ಲಾ ಎಂದು ಗೇಲಿ ಮಾಡಿದರು. ೧೦:೩೦ ಕ್ಕೆ ಶ್ರವಣಬೆಳಗೊಳದ ರೈಲ್ವೇ ನಿಲ್ದಾಣವನ್ನು ತಲುಪಿದೆವು. ಅಲ್ಲಿಂದ ಶೇರಿಂಗ್ ಆಟೋದಲ್ಲಿ ತಲಾ ೧೫ ರೂ ಕೊಟ್ಟು ೩ ಕಿ.ಮೀ ದೂರ ಇರುವ ದೇವಸ್ಥಾನಕ್ಕೆ ಬಂದೆವು. ವಿಂಧ್ಯಾಗಿರಿ ಬೆಟ್ಟದಲ್ಲಿರುವ ಏಕಶಿಲಾ ಬಾಹುಬಲಿ ಪ್ರತಿಮೆಯನ್ನು ನೋಡಲು ಕಷ್ಟಪಟ್ಟು ೭೦೦ ಮೆಟ್ಟಿಲುಗಳನ್ನು ಹತ್ತಿ ಹೋದೆವು. ೫೭ ಅಡಿ ಎತ್ತರ ಇರುವ ಬಾಹುಬಲಿ ಪ್ರತಿಮೆ ಮುಂದೆ ನಾವೆಲ್ಲ ಇರುವೆಗೆ ಸಮನೆಂದು ಬೆರಗಾಗಿ ನೋಡಿದೆವು. ಸ್ವಂತೀ ಭಾವಚಿತ್ರಗಳನ್ನು ತೆಗೆದುಕೊಂಡು ಸ್ವಲ್ಪ ಹೊತ್ತು ಅಲ್ಲೇ ಕುಳಿತು, ೧ ಗಂಟೆ ಹಾಗೆ ಕೆಳಗೆ ಇಳಿದು ಬರುತ್ತಿದ್ದಾಗ ಇಬ್ಬರು ಹೆಂಗಸರು ನಮ್ಮ ಮುಂದೆ ಹೋಗ್ತಾ ಇದ್ದ ವಿದೇಶಿ ಪ್ರವಾಸಿಗರ ಕೈ ಕುಲುಕುತ್ತಾ ವೆಲ್ಕಮ್ ಟು ಇಂಡಿಯಾ ಎಂದು ಶುಭಾಷಯ ಹೇಳುತ್ತಾ ಇದ್ದರು (ಈಗ ಕೊರೋನಾ ಬಂದಿರುವ ಸಮಯದಲ್ಲಿ ಏನಾದ್ರೂ ವಿದೇಶಿಯವರನ್ನು ನೋಡಿದ್ರೆ ನಮ್ಮ ಜನ ದೂರ ಓಡಿಹೋಗ್ತಾ ಇದ್ದರು). ಆಗ ನಾನು ಅವರ ಮುಂದೆ ಕೈ ಚಾಚಿ ನಾವೇನು ವಿದೇಶದವರಲ್ಲಾ, ಅದರೂ ‘ವೆಲ್ಕಮ್ ಟು ಶ್ರವಣಬೆಳಗೊಳ’ ಅಂತ ಹೇಳಬಹುದು ಅಂದೆ. ಅದಕ್ಕೆ‌ ಅವರು ನಸುನಗುತ್ತಾ ಕೈ ಕುಲುಕಿ ಮುಂದೆ ಸಾಗಿದರು. ಕೆಳಗೆ ಹೋಗುವ ಹೊತ್ತಿಗೆ ನಮ್ಮ ಹೊಟ್ಟೆ ಬೇರೆ ತಾಳ ಹಾಕ್ತಾ ಇತ್ತು, ಊಟಕ್ಕೆ ಹೋಟೆಲ್‌ ಒಂದನ್ನ ಹುಡುಕಿಕೊಂಡು ಹೋಗಬೇಕಾದರೆ ಒಬ್ಬ ವ್ಯಕ್ತಿ “ನಮ್ಮ ಹೋಟೆಲ್ ಗೆ ಬನ್ನಿ, ಮನೆ ಊಟದ ಹಾಗೆ ಚೆನ್ನಾಗಿರತ್ತೆ” ಎಂದು ಕರೆದರು. ಆ ಹೋಟೆಲ್ ನ ಊಟ ನಿಜಕ್ಕೂ ಚೆನ್ನಾಗಿತ್ತು. ಸಂಜೆ ೪:೩೦ ಕ್ಕೆ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ನಾವು ಮೊದಲೇ ಸೀಟನ್ನು ಕಾಯ್ದಿರಿಸಿದ್ದರಿಂದ, ಊಟವಾದ ಮೇಲೆ ಇನ್ನೂ ಸಮಯ ಇದ್ದುದ್ದರಿಂದ, ಚಂದ್ರಗಿರಿ ಬೆಟ್ಟಕ್ಕೆ ಹೋಗೋಣವೆಂದು ಆ ಕಡೆ ಹೆಜ್ಜೆ ಹಾಕಿದೆವು. ವಿಂಧ್ಯಾಗಿರಿಗಿಂತ ಕಡಿಮೆ ಮೆಟ್ಟಲುಗಳಿದ್ದರಿಂದ ಬೇಗ ಬೆಟ್ಟದ ತುದಿಯನ್ನು ತಲುಪಿದೆವು. ಆ ಬೆಟ್ಟದಲ್ಲಿ ೧೨-೧೪ ಜೈನ ಬಸದಿಗಳ ಸಮೂಹವೇ ಇದೆ. ವಿಂಧ್ಯಾಗಿರಿ, ಚಂದ್ರಗಿರಿ ಬೆಟ್ಟಗಳನ್ನು ನೋಡಿ ೪:೧೫ ಕ್ಕೆ ರೈಲ್ವೇ ನಿಲ್ದಾಣವನ್ನು ಮತ್ತೆ ಶೇರಿಂಗ್ ಆಟೋದಲ್ಲಿ ತಲುಪಿದೆವು. ಸಂಜೆ ೭ ಗಂಟೆ ಹಾಗೆ ಯಶವಂತಪುರ ರೈಲ್ವೇ ನಿಲ್ಲಾಣವನ್ನು ತಲುಪಿದೆವು. ಅಂತೂ ಇಂತೂ ಬೆಳಗ್ಗೆ ಮಾಡಿದ ಮನವಿಯು ಬಾಹುಬಲಿಯನ್ನು ತಲುಪಿ, ನಾನು ಶ್ರವಣಬೆಳಗೊಳ ನೋಡಿದೆನೆಂಬ ಸಮಾಧಾನ ಇತ್ತು.

- ಅರ್ಚನ ಬಾವಿಮನೆ