ನಮ್ಮ ಮನೆಗೆ ಬೆಕ್ಕಿನ ಮರಿಯನ್ನು ತಂದಾಗ ಅದಕ್ಕೆ ಸುಮಾರು ಎರಡು ತಿಂಗಳು ಆಗಿತ್ತು. ಅದಕ್ಕೆ ಆರೇಳು ತಿಂಗಳು ತುಂಬಿದಾಗ ಅದೂ ಸಹ ಮರಿ ಹಾಕುವ ಪ್ರಾಯಕ್ಕೆ ಬಂದಿತ್ತು. ಜೊತೆಗೆ ಕೆಲವು ತಿಂಗಳಲ್ಲಿ ಮರಿಗಳನ್ನೂ ಹಾಕಿತು. ಹಾಕಿದ ಮರಿಗಳು ಆರೋಗ್ಯವಾಗಿ ಬೆಳೆದು ತಮ್ಮ ದಾರಿಗಳನ್ನು ನೋಡಿಕೊಂಡವು. ನಮ್ಮ ಮನೆಯ ಬೆಕ್ಕೂ ಸಹ ಮರಿಗಳ ಹಾಕೋದರ ಅನುಭವ ಪಡೆಯಲಾರಂಭಿಸಿತು. ವರ್ಷಕ್ಕೆ ಎರಡು ಬಾರಿ ಮರಿಗಳ ಹಾಕುತ್ತಿತ್ತು. ಹೀಗೆ ಒಂದು ಸರಿ ನಮ್ಮ ಬೆಕ್ಕು ಬಸಿರಾದಾಗ ಪ್ರತಿ ಬಾರಿಯಂತೆ ತನ್ನ ಎಂದಿನ ಚಟುವಟಿಕೆಗಳ ಕಡಿಮೆ ಮಾಡಿತು, ವೇಗವಾಗಿ ಓಡುವುದು, ಜಿಗಿದಾಡೋದನ್ನ ನಿಲ್ಲಿಸಿತು. ಹೆಚ್ಚಿನ ಸಮಯ ಮನೆಯ ಒಂದು ಮೂಲೆಯಲ್ಲಿ ಕೂತಿರುತ್ತಿತ್ತು. ಹೀಗೆ ದಿನಗಳೆದಂತೆ ಅದರ ಹೊಟ್ಟೆ ದಪ್ಪ ಆಗುತ್ತಿತ್ತು. ಹಂಗೆ ಜೊತೆಗೆ ಮರಿಗಳು ಹೊರಗೆ ಬರುವ ದಿನವೂ ಹತ್ತಿರ ಬಂದಿತ್ತು.

ಇದರ ಹಿಂದಿನ ಎರಡು ಸಲವೂ ಮನೆಯ ಬಾಗಿಲಿನ ಎದುರಿದ್ದ ಒಂದು ಗೂಡಿನಲ್ಲಿ ಪೇಪರ್ ಗಳನ್ನು ಹಾಸಿ, ಆ ಗೂಡಿಗೆ ಒಂದು ಹಲಗೆಯನ್ನ ಮುಚ್ಚಿ ನಮ್ಮ ಬೆಕ್ಕಿಗೆ ಮರಿ ಹಾಕಿ ಇರಲು ವ್ಯವಸ್ಥೆ ಮಾಡಿದ್ದೆವು. ಈ ಬಾರಿಯೂ ಅಲ್ಲೇ ವ್ಯವಸ್ಥೆ ಮಾಡುವ ಯೋಚನೆ ಇತ್ತು, ಆದರೆ ಬೆಕ್ಕು ಮರಿ ಹಾಕುವ ದಿನಕ್ಕಾಗಿ ಕಾಯುತ್ತಿದ್ದೆವು.

ಸಾಮಾನ್ಯವಾಗಿ ನಮ್ಮ ಬೆಕ್ಕು ಮರಿ ಹಾಕುವ ಒಂದು ದಿನದ ಮುಂಚೆ ಬಹಳ ಮಂಕಾಗಿ, ಊಟವನ್ನು ಸಹ ಕಡಿಮೆ ಮಾಡಿ ಆದಷ್ಟು ತನ್ನ ಓಡಾಟವನ್ನು ಕಡಿಮೆ ಮಾಡುತ್ತದೆ. ಬೆಕ್ಕು ಮರಿ ಹಾಕಲು ಗೂಡನ್ನು ಸಿದ್ಧಪಡಿಸಲು ಅದು ಮೊದಲ ಸೂಚನೆ. ಈ ಸರಿ ನನಗೆ ಆ ದಿನಕ್ಕೆ ಇನ್ನೂ ಅಂತಹ ಸೂಚನೆ ಕಂಡಿರಲಿಲ್ಲ ಅಂತ ಹಂಗೆ ಸುಮ್ನೆ ಕೂತಿದ್ದೆ. ಆಗ ಸಂಜೆ ಹೊತ್ತಾಗಿತ್ತು ನಮ್ಮ ಬೆಕ್ಕು ಒಮ್ಮೆಗೆ ಕೂಗ್ತಾ ಅತ್ತಿತ್ತಾ ಅಡ್ಡಾಡೋಕೆ ಶುರು ಮಾಡ್ತು. ಯಾತಕ್ಕೆ ಅಂತ ನಂಗೆ ಹೊಳೀಲಿಲ್ಲ. ಸುಮ್ನೆ ನನ್ನ ಪಾಡಿಗೆ ನಾನು ಕೂತ್ಕೊಂಡೇ ಇದ್ದೆ. ಬೆಕ್ಕು ನನ್ನ ಹತ್ರ ಬಂದು ಸುಳಿದಾಡೋಕೆ ಶುರು ಮಾಡ್ತು, ಜೊತೆಗೆ ಕೂಗುತ್ತಿತ್ತು. ಬೆಕ್ಕು ಮರಿ ಹಾಕೋ ಕಾಲ ಬಂದಿದೆ ಅಂತ ಆ ಘಳಿಗೆಗೆ ನಂಗೆ ಹೊಳೀತು. ತಕ್ಷಣ ಎದ್ದು ಓಡಿ ಅದರ ಗೂಡನ್ನು ಸಿದ್ಧ ಮಾಡೋಕೆ ಕುಂತೆ. ಬೆಕ್ಕು ಸಹ ನನ್ನ ಜೊತೆಯಲ್ಲಿಯೇ ನಿಂತು ನಾನು ಗೂಡನ್ನು ಸಿದ್ಧಪಡಿಸುವುದನ್ನೇ ಬಹಳ ಕಾತರದಿಂದ ಕಾಯುತ್ತಿತ್ತು. ಗೂಡು ಸಿದ್ಧವಾದ ತಕ್ಷಣ ತಾನಾಗೆ ಅದರೊಳಗೆ ಹೋಗಿ ಸದ್ದು ಮಾಡದಂಗೆ ಕೂತಿತು.

ಇದೆಲ್ಲ ನೋಡಿ ಬಂದ ನನಗೆ ದಂಗು ಬಡಿದಂಗಾಗಿತ್ತು. ಬೆಕ್ಕು ತಾನಾಗೆ ಹೋಗಿ ಎಲ್ಲೋ ಒಂದು ಜಾಗ ಹುಡುಕಿಕೊಂಡು ಮರಿಗಳನ್ನ ಹಾಕಬೋದಿತ್ತು. ಆದರೆ ಅದು ಹಂಗೆ ಮಾಡದೆ ಆ ದಿನ ನನ್ನ ಬಳಿ ಬಂದು ಗೂಡನ್ನ ಮಾಡಿಕೊಡು ಎಂಬಂತೆ, ಅದರ ನೋವನ್ನು ಹೇಳಿ, ಗೂಡು ಸಿದ್ಧವಾದ ನಂತರ ಹೋಗಿ ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ನನ್ನ ಸುತ್ತ ಯಾರಾದ್ರೂ ಮನುಷ್ಯರಿಗೆ ನೋವಾದ್ರೆ, ಬೇಜಾರಿನಲ್ಲಿದ್ರೆ, ಪೆಟ್ಟು ತಿಂದಿದ್ರೆ ನನಗೆ ಅವರ ಬಗ್ಗೆ ಅಯ್ಯೋ ಪಾಪ ಅಂತ ಅನಿಸುತ್ತಿರಲಿಲ್ಲ. ಅವರವರ ಜೀವನಕ್ಕೆ ತಕ್ಕಂಗೆ ಅವರವರ ಬದುಕು ಅಂತ ಅಂದುಕೊಂಡು ಸುಮ್ಮನಾಗ್ತಿದ್ದೆ. ಆದ್ರೆ ಈ ಬೆಕ್ಕಿನ ವಿಷಯದಲ್ಲಿ ನಾನು ಸುಮ್ಮನಿರಲಿಲ್ಲ. ನಂಗೇ ತಿಳಿಯದಂಗೆ ನಾನು ಬೆಕ್ಕಿನ ನೋವಿಗೆ ಸ್ಪಂದಿಸಿದ್ದೆ. ನನ್ನಲ್ಲೂ ಭಾವನೆಗಳಿಗೆ ಸ್ವಲ್ಪ ಜಾಗ ಇದೆ ಅಂತ ಗೊತ್ತಾಗಿತ್ತು.

ಬಹಳ ವರ್ಷಗಳಿಂದ ನಾನು ನನ್ನ ಗೆಳೆಯರ ಮುಂದೆಲ್ಲ “ಎದೆಯಲ್ಲಿ ಕಲ್ಲಿರೋ ನಂಗೆ ಈ ಭಾವನೆಗಳೆಲ್ಲ ಅಂಟಲ್ಲ” ಅಂತ ಹೇಳ್ಕೋಂಡು ತಿರುಗಾಡ್ತಿದ್ದೆ. ಆದ್ರೆ ಆ ದಿನ ಆ ಬೆಕ್ಕಿನ ಪ್ರಸವದ ನೋವು ನನಗೆ ತಾಕಿತ್ತು.

“ಅವತ್ತು ಎದೆಲ್ಲಿ ಕಲ್ಲಿದ್ದವನ ಕರುಳು ಕರಗಿತ್ತು”

- ಆದರ್ಶ