ನಮ್ಮಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ದೇವಿರಿ ಎಂಬ ಹೆಸರಿಟ್ಟಿದ್ದ ಕಂಡಿದ್ದೆ. ಆದರೆ ಆ ಹೆಸರು ಹೇಗೆ ಬಂದಿರಬಹುದು ಅನ್ನೋ ಜ್ಞಾನ ಇರಲಿಲ್ಲ. ಹೆಸರುಗಳ ಹಿಂದೆ ಏನಾದರು ಒಂದು ಕಾರಣ, ವಿಶೇಷತೆ ಇರುತ್ತೆ ಅನ್ನೋ ಯೋಚನೆ ಮಾಡೋ ಶಕ್ತಿನೂ ಇರಲಿಲ್ಲ. ಇದು ನಾನು ಇಂಜಿನೀರಿಂಗ್ ಗೆ ಸೇರಿದಾಗ ಬದಲಾಯಿತು. ನನ್ನ ಗೆಳೆಯ ನವೀನನಿಂದ ದೇವಿರಮ್ಮ ದೇವಸ್ಥಾನ ಚಿಕ್ಕಮಗಳೂರಲ್ಲಿದೆ ಅಂತ ತಿಳೀತು. ಜೊತೆಗೆ ನನಗೆ ಆಶ್ಚರ್ಯ, “ಹುಡುಗಿಯರಿಗೆ ದೇವಿರಿ ಎಂಬ ಹೆಸರಿಡಲು, ದೇವರೇ ಕಾರಣ” ಅಂತ.

ಪ್ರತಿ ವರ್ಷ ದೀಪಾವಳಿ ಹಬ್ಬದ ಅಮಾವಾಸ್ಯೆಯ ದಿನ ಜನರೆಲ್ಲ ತಮ್ಮ ಮನೆಗಳಿಂದ ಸೌದೆ ಹೊತ್ತು ಬೆಟ್ಟದ ಮೇಲಕ್ಕೆ ಹೋಗಿ ಎಲ್ಲರೂ ತಂದ ಸೌದೆಗಳಿಂದ ದೇವರಿಗೆ ದೀಪವನ್ನು ಹಚ್ಚಿ ದೀಪಾವಳಿ ಹಬ್ಬದ ಸ್ವಾಗತ ಮಾಡುತ್ತಾರೆ. ಈ ಬೆಟ್ಟದ ಮೇಲೆ ಹೀಗೆ ಹಚ್ಚುವ ದೀಪವನ್ನು ದೂರದ ಮೈಸೂರಿನ ಅರಮನೆಯವರು ನೋಡಿ ಅಲ್ಲಿ ದೀಪಾವಳಿ ಹಬ್ಬದ ಆಚರಣೆ ಆರಂಭಿಸುತ್ತಿದ್ದರು. ಅದು ಮೊದಲ ಬಾರಿಗೆ ನಾವು ಹಬ್ಬದ ದಿನ ದೇವಿರಮ್ಮನ ಬೆಟ್ಟಕ್ಕೆ ಹೊರಟಿದ್ದು. ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರಿನ ನಮ್ಮ ಗೆಳೆಯ ನವೀನನ ಮನೆಯನ್ನು ತಲುಪಿದಾಗ ಬೆಳಗ್ಗೆ ಸುಮಾರು 5 ಗಂಟೆಯಾಗಿತ್ತು. ಚಳಿಗಾಲದ ಮಂಜು ಊರೆಲ್ಲ ಕವಿದಿದ್ದು ಬೀದಿ ದೀಪಗಳಡಿಯಲ್ಲಿ ಕಾಣುತ್ತಿತ್ತು. ಅದೇ ಮುಂಜಾವಿನ ಕತ್ತಲಲ್ಲಿ ನಾವೆಲ್ಲರೂ ನವೀನನ ಮನೆಗೆ ಹೋಗಿ ಮುಖ ತೊಳೆದುಕೊಂಡು, ನಮ್ಮ ಚಪ್ಪಲಿಗಳನ್ನು ಮನೆಯಲ್ಲೇ ಬಿಟ್ಟು, ಚಿಕ್ಕಮಗಳೂರಿನ ಬಸ್ ಸ್ಟಾಂಡ್ ಅನ್ನು ತಲುಪಿದಾಗ ನೂರಾರು ಜನರು ಹಬ್ಬದ ಪ್ರಯುಕ್ತ ಬಿಟ್ಟ ಬಸ್ಸುಗಳನ್ನ ದಂಡುದಂಡಾಗಿ ಒಂದಾದ ಮೇಲೊಂದು ಎಂಬಂತೆ ಹತ್ತಿ ದೇವಿರಮ್ಮನ ಬೆಟ್ಟಕ್ಕೆ ಹೊರಟಿದ್ದರು. ನಮ್ಮ ಮುಂದೆ ಬಂದ ಒಂದು ಬಸ್ಸನ್ನು ಹತ್ತಿ ನಾವೂ ಸಹ ಬೆಟ್ಟದ ತಪ್ಪಲಿಗೆ ಬಂದಿಳಿದೆವು. ಅಲ್ಲೆಲ್ಲ ಒಂದು ರೀತಿಯ ಹಬ್ಬದ ಗದ್ದಲ. ಕತ್ತಲಲ್ಲಿ ಜನರೆಲ್ಲ ಟಾರ್ಚು, ಪಂಜು, ಮೊಬೈಲಿನ ಬೆಳಕು ಹಿಡಿದು ಬೆಟ್ಟಕ್ಕೆ ಹೊರಟಿದ್ದರು. ಹಿಂದಿನ ೨ ದಿನಗಳಲ್ಲಿ ಸಣ್ಣದಾಗಿ ಮಳೆಯಾಗಿದ್ದರಿಂದ ದಾರಿಯುದ್ದಕ್ಕೂ ಕೇಸರಿನ ರಾಡಿ ಹರಡಿತ್ತು. ಅದನ್ನ ತುಳಿದೇ, ತೂರಾಡುತ್ತಾ ಜನರೆಲ್ಲ ಸಾವಿರಾರು ಸಂಖ್ಯೆಯಲ್ಲಿ ಬರಿಗಾಲಲ್ಲೆ ಬೆಟ್ಟಕ್ಕೆ ನಡೆದಿದ್ದರು.

ಆ ಕತ್ತಲಲ್ಲಿ, ಆ ಜನಸಾಗರದಲ್ಲಿ ಮೊದಲ ಹಂತದಲ್ಲಿಯೇ ನಮ್ಮ ಹುಡುಗರೆಲ್ಲರೂ ಕಳೆದು ಹೋಗಿದ್ದರು. ಯಾರು ಯಾರ ಜೊತೆ ಇದ್ದರೋ ಯಾರಿಗೂ ತಿಳಿದಿರಲಿಲ್ಲ. ಮತ್ತೆ ಎಲ್ಲರೂ ಭೇಟಿಯಾಗಿದ್ದು ದಾರಿಯಲ್ಲಿದ್ದ ಕಾಪಿ ತೋಟ ಹಾಗೂ ಕಾಡನ್ನು ದಾಟಿ ಹುಲ್ಲುಗಾವಲು ಬಂದಾಗಲೇ. ಅಲ್ಲಿಂದ ಮುಂದಕ್ಕೆ ಎಲ್ಲರೂ ಒಟ್ಟಿಗೇ ನಡೆದೆವು. ಬೆಟ್ಟವನ್ನು ಬರಿಗಾಲಲ್ಲಿ ಹತ್ತಲು ನಮ್ಮಂತ ಹುಡುಗರೆ ಕಷ್ಟ ಪಡುತ್ತಿದ್ದಾಗ ನಮ್ಮ ಅಕ್ಕ-ಪಕ್ಕ ಸಣ್ಣ ಮಕ್ಕಳಿಂದ ಹಿಡಿದು, ಹಿರಿಯ ಮುದುಕ-ಮುದುಕಿಯರೂ ಸಹ ನಮ್ಮಂತೆಯೇ ಬೆಟ್ಟ ಹತ್ತುತ್ತಿದ್ದುದ್ದನ್ನು ಕಂಡ ಮೇಲೆ ನಮ್ಮ ದಣಿವೆಲ್ಲ ಇಂಗಿ ರೋಷದಿಂದ ಬೆಟ್ಟ ಹತ್ತಲು ಆರಂಭಿಸಿದೆವು.

ಚಳಿಗಾಲವಾದರೂ ಬಿಸಿಲಿಗೆ ಬೆಟ್ಟದ ಕಲ್ಲು-ಮಣ್ಣು ಕಾದು ಬಿಸಿಯಾಗುತ್ತಿತ್ತು. ಆದರೂ ಜನರ ಸಾಲು ಸಾಗುತ್ತಲೇ ಇತ್ತು. ಕೆಲವರು ಕಾಲುದಾರಿಯ ಬಿಟ್ಟು ಬೆಟ್ಟದ ಇಳಿಜಾರಿನಲ್ಲಿಯೇ ಬೆಟ್ಟ ಹತ್ತಲು ಹೊರಟರು. ನಾವು ಕಾಲು ದಾರಿಯ ಬಿಟ್ಟು ಬೆಟ್ಟವ ಹತ್ತಿ ಮೇಲೆ ಇದ್ದ ದೇವಸ್ಥಾನದ ಬಳಿ ಕುಂತೆವು. ಬೆಟ್ಟದ ತಪ್ಪಲಿನಲ್ಲಿ ಚದುರಿ ಹೋಗಿದ್ದ ನಮ್ಮ ಹುಡುಗರ ಇಡೀ ಗುಂಪು ಮತ್ತೆ ಸೇರಿತು. ಆ ಎತ್ತರದ ಬೆಟ್ಟದಿಂದ ಕಾಣುತ್ತಿದ್ದ ರಮ್ಯವಾದ ನೋಟವ ನೋಡುತ್ತಾ ನಾವೆಲ್ಲರೂ ನಮ್ಮ ದಣಿವಾರಿಸಿಕೊಂಡಿದ್ದೆವು. ತಿರುಗಿ ಬೆಟ್ಟ ಇಳಿಯುವ ಕಾಲ ಬಂದಿತ್ತು. ಬಂದ ಕಾಲುದಾರಿಯಲ್ಲಿಯೇ ಎಲ್ಲರೂ ಸಾಲಾಗಿ ನಿಧಾನಕ್ಕೆ ಹೋಗುತ್ತಿದ್ದರು. ಆದರೆ ಕೆಲವು ಧೈರ್ಯವಂತರು ಬೆಟ್ಟದ ಇಳಿಜಾರಿನಲ್ಲಿ ಹೊಸ ಕಾಲುದಾರಿಯನ್ನೇ ಮಾಡಿ ಆ ದಾರಿಯಲ್ಲಿ ಹೋಗಿ, ಜನರ ಗುಂಪನ್ನು ದಾಟಿ ಬೇಗನೇ ಮುಂದಕ್ಕೆ ಹೋಗುತ್ತಿದ್ದರು. ನಿಧಾನಕ್ಕೆ ಸಾಗುತ್ತಿದ್ದ ಜನರ ಹಿಂದೆ ಆ ಉರಿ ಬಿಸಿಲಿನಲ್ಲಿ ನಡೆಯೋಕೆ ತಾಳ್ಮೆ ಇಲ್ಲದೆ ನಮ್ಮ ಒಳಗಿದ್ದ ಧೈರ್ಯವಂತ ಎದ್ದು ನಿಂತನು. ನಾನು ನನ್ನ ಜೊತೆ ಇದ್ದ ಇಬ್ಬರು ಗೆಳೆಯರನ್ನು ಒಪ್ಪಿಸಿ ಅಡ್ಡದಾರಿ ಹಿಡಿಯೋಣ ಅಂತ ಹೊರಟೆ. ಅವರೂ ಒಪ್ಪಿದರು. ಕೆಲವು ಗೆಳೆಯರು ಆಗಲೇ ಮುಂದಿದ್ದರು. ಅಡ್ಡದಾರಿ ಹಿಡಿದು ಬೇಗನೇ ಅವರನ್ನು ಹಿಂದಿಕ್ಕುವ ಯೋಚನೆ ನನ್ನದಾಗಿತ್ತು. ನಾ ನಿಂತಿದ್ದ ಜಾಗದಿಂದ ೩ ಅಡಿ ಕೆಳಗಿಳಿದು ನಂತರ ಬಲಕ್ಕೆ ತಿರುಗಿ ಸಮತಟ್ಟಾದ ನೆಲದಲ್ಲಿ ಬೆಟ್ಟವ ಇಳಿದು ಜನಸಂದಣಿ ಇಲ್ಲದ ಹಾದಿಯಲ್ಲಿ ನಡೆದು ಹೋಗಬೇಕೆಂಬುದು ನನ್ನ ಯೋಚನೆಯಾಗಿತ್ತು. ನಾನು ಇಳಿಬೇಕಿದ್ದ ಜಾಗದಲ್ಲಿ ಇಳಿಜಾರು ಬಹಳ ಇದ್ದುದ್ದರಿಂದ ಕೂತ್ಕೊಂಡು ನಿಧಾನಕ್ಕೆ ಇಳಿದು ಸಮವಾಗಿದ್ದ ಜಾಗದಲ್ಲಿ ನಿಂತೆ. ತಕ್ಷಣ ನನ್ನ ಕಾಲು ಜಾರಿತು, ಜಾರಿ ಇನ್ನೂ ಸ್ವಲ್ಪ ಕೆಳಕ್ಕೆ ಹೋದೆ. ಆದರೂ ಹೇಗೋ ನನ್ನ ಆಯ ತಪ್ಪದಂಗೆ ನಿಲ್ಲಲು ನೋಡಿದೆ. ಅಷ್ಟರಲ್ಲಿಯೇ ಮತ್ತೆ ಕಾಲು ಜಾರಿತು. ಇಳಿಜಾರಿದ್ದಿದ್ದರಿಂದ ನನ್ನನ್ನು ನಾನು ಹಿಡಿದು ನಿಲ್ಲಿಸಲಾರದೇ ಜಾರಲಾರಂಭಿಸಿದೆ. ಕೇವಲ ೨-೩ ಸೆಕೆಂಡುಗಳಲ್ಲಿ ನನಗೆ ಹಿಡಿತವಿಲ್ಲದೆ ಜಾರುತ್ತಿದೆ, ಬೀಳುವುದನ್ನ ತಪ್ಪಿಸಿಕೊಳ್ಳುವುದಕ್ಕೆ ಆ ಬೆಟ್ಟದ ಇಳಿಜಾರಿನಲ್ಲಿ ಓಡಲಾರಂಭಿಸಿದ್ದೆ. ಕೆಲವೇ ಕ್ಷಣಗಳಲ್ಲಿ ನನ್ನ ವೇಗ ಎರಡರಷ್ಟಾಗಿ ನಿಲ್ಲಲು ಆಗದಂತ ಸ್ಥಿತಿಗೆ ತಲುಪಿದ್ದೆ. ಮುಗ್ಗರಿಸಿ ಬೀಳಬಾರದಂತ ನನ್ನ ದೇಹದ ಭಾರವನ್ನ ಹಿಂದಕ್ಕೆ ಹಾಕಿ, ಹಿಂದಕ್ಕೆ ವಾಲಿಕೊಂಡು ಓಡುತ್ತಿದ್ದೆ. ಮುಗ್ಗರಿಸಿ ಬಿದ್ದರೆ ಹಿಡಿತ ಸಿಗುವ ಯಾವ ಸೂಚನೆಯು ಇರಲಿಲ್ಲ, ನನ್ನನ್ನ ತಡೆಯಲು ಯಾವ ವಸ್ತುವೂ ಇರಲಿಲ್ಲ. ಬರೀ ಬೆಟ್ಟ ಹಾಗೂ ಹುಲ್ಲು. ಓಡುತ್ತಿದ್ದ ನನಗೆ ಮುಂದೆ ಸ್ವಲ್ಪ ದೂರದಲ್ಲಿ ಪ್ರಪಾತ ಕಾಣಲಾರಂಭಿಸಿತು. ತಕ್ಷಣ ನಾನು ಓಡುವುದ ನಿಲ್ಲಿಸದಿದ್ದರೆ ನೆಟ್ಟಗೆ ಹೋಗಿ ಪ್ರಪಾತಕ್ಕೆ ಬೀಳುತ್ತಿದ್ದೆ.

ನಾ ಹೀಗೆ ಇಳಿಜಾರಿನಲ್ಲಿ ಬಿದ್ದು ಓಡುತಿದ್ದುದ್ದನ್ನು ಕಂಡ ಜನರು ಕೂಗಲಾರಂಭಿಸಿದರು. ನನ್ನ ಗೆಳೆಯರೆಲ್ಲ ದಿಗಿಲಾಗಿ ನಾ ಬಿದ್ದ ಜಾಗಡೆದೆಗೆ ಬಂದರು. ಇನ್ನೂ ಕೆಲವರು ಏನಾಗುತ್ತಿದೆ ಎಂದು ಅರಿವಾಗದೆ ನಿಂತಿದ್ದರು. ತಕ್ಷಣವೇ ನಾ ಏನಾದರೂ ಮಾಡದಿದ್ದರೆ ನನ್ನ ಮುಂದಿದ್ದ ಪ್ರಪಾತಕ್ಕೆ ಬಿದ್ದು ಸಾಯುತ್ತಿದ್ದೆ. ಇಲ್ಲಿವರೆಗೆ ಸುಳಿದಿರದ ಹೆದರಿಕೆ ಈಗ ನನ್ನನ್ನಾವರಿಸಿ ಆ ಸಂದರ್ಭದ ತೀಕ್ಷ್ಣತೆ ಅರಿವಾಯಿತು. ಸಾವು ನನ್ನ ಕಣ್ಣ ಮುಂದೆಯೇ ಕುಣಿಯುತ್ತಿತ್ತು. ಬುದ್ಧಿ ಹೇಗೆ ಹಿಡಿತಕ್ಕೆ ಬಂದು ಕೆಲಸ ಮಾಡಿತೋ ಗೊತ್ತಿಲ್ಲ. ತಕ್ಷಣವೇ ಆ ಇಳಿಜಾರಿನಲ್ಲಿ ಅಂಗಾತ ಬಿದ್ದು ಜಾರಲಾರಂಭಿಸಿದ್ದೆ. ಜಾರುತ್ತಿದ್ದಂತೆ ಅಲ್ಲಿದ್ದ ಹುಲ್ಲುಗಳನ್ನು ಹಿಡಿಯೋ ಪ್ರಯತ್ನ ಪಟ್ಟೆ. ನನ್ನ ವೇಗ ಕಡಿಮೆ ಆಗುತ್ತಿತ್ತು. ಜಾರುತ್ತಲೇ ಮಕಾಡೆ ತಿರುಗಿ ಇನ್ನೂ ಹೆಚ್ಚಿನ ಹುಲ್ಲುಗಳನ್ನು ಗಟ್ಟಿಯಾಗಿ ಹಿಡಿಯುತ್ತಿದ್ದೆ. ಹಿಂಗೆ ಹಿಡಿದ ಕಾರಣ ನನ್ನ ವೇಗ ತಗ್ಗಿ ನಾ ಪೂರ್ತಿಯಾಗಿ ನಿಂತಿದ್ದೆ. ಪುಣ್ಯಕ್ಕೆ ಆ ಇಳಿಜಾರಿನಲ್ಲಿ ದೊಡ್ಡ ಕಲ್ಲುಗಳಿರಲಿಲ್ಲ. ಎದ್ದು ನಿಂತು ನಂಗೆ ತರಚಿರುವುದ ಬಿಟ್ಟು ಹೆಚ್ಚೇನು ಗಾಯಗಳಾಗದೇ ಇರೋದ ಕಂಡು, ಜೀವ ಉಳಿದ ಸಂತಸದಲ್ಲಿ ಮುಂದೆ ನೋಡಿದೆ. ಇನ್ನೂ ಸ್ವಲ್ಪವೇ ದೂರದಲ್ಲಿ ಪ್ರಪಾತವಿತ್ತು. ಹಿಂದೆ ತಿರುಗಿ ನನ್ನನ್ನೇ ಭಯದಿಂದ ದುರುಗುಟ್ಟುಕೊಂಡು ನೋಡುತ್ತಿದ್ದ ನನ್ನ ಗೆಳೆಯರೆಡೆಗೆ ಕೈ ಬೀಸಿ ನನ್ನ ಕ್ಷೇಮದ ಬಗ್ಗೆ ತಿಳಿಸಲು ಕೂಗಿದೆ. ಅಷ್ಟರಲ್ಲಿ ಮುಂದಿದ್ದ ನಮ್ಮ ಹುಡುಗರಿಗೆ “ಯಾರೋ ಬಿದ್ದಿದ್ದರು” ಎಂಬ ಸುದ್ದಿಯಲ್ಲಿ ಬಿದ್ದಿದ್ದು ನಾನೇ ಎಂದು ಅರಿವಾಗಿ ಕೆಳಗೆ ನೋಡಲು ಓಡಿ ಬಂದರು. ನಾನು ನಿಧಾನಕ್ಕೆ ಮುಂದಕ್ಕೆ ನಡೆದು ಮತ್ತೆ ಎಲ್ಲರೂ ಓಡಾಡುವ ಕಾಲು ದಾರಿಯ ಕಡೆ ಹೊರಟೆ. ಮೊಣಕೈಗೆ ತರಚಿದ ಗಾಯ, ಹಾಕಿದ್ದ ಅಂಗಿ ಸ್ವಲ್ಪ ಹರಿದಿದ್ದ ಬಿಟ್ಟರೆ ಹೆಚ್ಚೇನು ಆಗಿರಲಿಲ್ಲ.

ನಾನು ಇಳಿದ ಮೇಲೆ, ನನ್ನ ಹಿಂದೆ ಆ ಅಡ್ಡದಾರಿಗೆ ಇಳಿಯಬೇಕು ಎಂದು ಕಾದು ಕುಳಿತ ನನ್ನ ಗೆಳೆಯರು, ನಾ ಬಿದ್ದಿದ್ದ ಕಂಡು ಅಲ್ಲೇ ಕುಳಿತಿದ್ದರು. ಅಲ್ಲೇ ನೆರೆದಿದ್ದ ಜನರು ನಮ್ಮ ಹುಡುಗರಿಗೆ “ನೀವು ಅವನ ಹಿಂದೆ ಹೋಗೋದಾದರೆ ಹೋಗಿ” ಎಂದು ವ್ಯಂಗ್ಯ ಮಾಡಿದರು. ಇನ್ನೂ ಕೆಲವರು ಅವರಿಗೆ “ಆ ಬಿದ್ದ ಹುಡುಗ ಯಾರ ಜೊತೆ ಬಂದಿದ್ದ?” ಎಂದು ಕೇಳಿದಾಗ ತಮಗೂ ಜನರು ಸಿಟ್ಟಿನಿಂದ ಬೈಯ್ಯಬೋದು ಎಂಬ ಅಂಜಿಕೆಯಲ್ಲಿ ನಾನು ಅವರ ಗೆಳೆಯನೆಂದು ಹೇಳದೇ ಸುಮ್ಮನೆ ಉಳಿದಿದ್ದರು. ಇದೆಲ್ಲ ಅವರು ನಂತರ ನನಗೆ ಹೇಳಿದ್ದು. ಕಡೆಗೆ ಎಲ್ಲರೂ ಕೆಳಗೆ ಬಂದಮೇಲೆ ನನ್ನೆಲ್ಲ ಗೆಳೆಯರಿಗೆ ನಡೆದ ವಿಷಯವನ್ನೆಲ್ಲಾ ಹೇಳಿ ಅವರಿಂದ ಮಂಗಳಾರತಿಯ ಮಾಡಿಸಿಕೊಂಡು ಎಲ್ಲರೂ ನವೀನನ ಮನೆಗೆ ಬಂದ್ವಿ.

ಆ ದಿನ ಕೇವಲ ೨೦-೩೦ ಸೆಕೆಂಡುಗಳಲ್ಲಿ ಯಾವುದೋ ದೊಡ್ಡ ಸಾಹಸ ಮಾಡಿದ ಅನುಭವ. ಸಾವಿನ ದಾರಿಯನ್ನು ಬಹಳ ಹತ್ತಿರದಿಂದ ನೋಡಿ ಬಂದಿದ್ದೆ. ಅದೃಷ್ಟಕ್ಕೆ ವಿಧಿ ನನ್ನ ಪರವಾಗಿತ್ತು, ನಾನು ಸಾಯಲಿಲ್ಲ. ಅದಾದ ನಂತರ ಮತ್ತೊಂದು ವರ್ಷ ದೇವಿರಮ್ಮನ ಬೆಟ್ಟಕ್ಕೆ ಹೋಗಿ ಬಂದಿದ್ದೆ. ಆದರೆ ಯಾವ ಸಾಹಸಕ್ಕೂ ಕೈ ಹಾಕಲಿಲ್ಲ.

- ಆದರ್ಶ