ನಾನು ಹುಟ್ಟಿದ ವರುಷ ನಮ್ಮೂರ ಕೆರೆಯ ಕೋಡಿ ಬಿದ್ದಿತ್ತಂತೆ. ಅದಾದ ನಂತರ ನಾನು ಕಣ್ಣು ಬಿಟ್ಟು ಓಡಾಡುವ ಹಾಗಾದಾಗ ಕೆರೆ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಕೇಳಲಿಲ್ಲ. ಆದ್ರೆ ಜೋರು ಅನ್ನುವಂತ ಮಳೆ ಬಿದ್ದಿದ್ದನ್ನು ಊರಲ್ಲಿ ನಮ್ಮ ಮನೆಯ ಕಿಟಕಿಯ ಗೂಡಲ್ಲಿ ಕುಳಿತುಕೊಂಡು ನೋಡಿದ್ದೆ. ಒಂದು ಇನ್ನೂರು ಮೀಟರ್ ದೂರದ ಸಣ್ಣ ಹಳ್ಳದಲ್ಲಿ ಭರ್ಜರಿಯಾಗಿ ಮಳೆ ನೀರು ಹರಿಯುತ್ತಿತ್ತು. ಆ ದಿನಕ್ಕೆ ನನಗೆ ಅದು ನಡುಕ ಹುಟ್ತಿಸಿದಂತ ಸೊಗಸಾದ ಮಳೆಯಾಗಿತ್ತು. ಆದರು ಕೆರೆ ತುಂಬಿರಲಿಲ್ಲ.

ನಮ್ಮ ಕರ್ನಾಟಕದ ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಜನರೆಲ್ಲರೂ ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಿಕೊಳ್ಳದೆ ಮಳೆಗಾಲವನ್ನು ಸರಾಗವಾಗಿ ಎದುರಿಸುವ ಧೈರ್ಯವನ್ನು ಯಾರು ಮಾಡಲಾರರು. ಇದರ ಬಗ್ಗೆ ಯೋಚನೆ ಬಂದಿದ್ದು ‘ಗೇಮ್ ಆಫ್ ಥ್ರೋನ್ಸ್’ ಧಾರಾವಾಹಿ ನೋಡುವಾಗ. ಅದರಲ್ಲಿನ ಉತ್ತರ ಪ್ರಾಂತ್ಯದ ಜನರಲ್ಲಿ “ಚಳಿಗಾಲ ಬರ್ತಿದೆ” ಅನ್ನೋದೇ ವೇದವಾಕ್ಯ ಆಗಿತ್ತು. ಅವರಿಗೆಲ್ಲ ಚಳಿಗಾಲವೆಂದರೆ ಒಂದು ರೀತಿ ಭಯ. ಅಲ್ಲಿ ಚಳಿಗಾಲ ಒಮ್ಮೆ ಬಂದರೆ ಎಷ್ಟೋ ವರುಷ ಇರುತ್ತದೆ, ಬರುವಾಗ ತನ್ನೊಡನೆ ಹಸಿವು, ಕತ್ತಲು, ಕ್ರೂರ ಮೃಗಗಳು, ಕೆಟ್ಟ ಶಕ್ತಿಗಳನ್ನು ಜೊತೆಯಲ್ಲಿ ತರುತ್ತದೆ. ಈ ಎಲ್ಲ ಕಾರಣಕ್ಕೆ ಅಲ್ಲಿನ ಜನಕ್ಕೆ ಚಳಿಗಾಲವೆಂದರೆ ಹೆದರಿಕೆ. ಚಳಿಗಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಕಳೆದರೆ ಮಾತ್ರ ಬದುಕಲು ಸಾಧ್ಯವೆಂಬ ಸ್ಥಿತಿ.

ಇದನ್ನೆಲ್ಲಾ ನೋಡುತ್ತಿದ್ದ ನನಗೆ ನನ್ನ ಬಾಲ್ಯದ ನೆನಪಾಯಿತು. ಬೇಸಿಗೆಯ ರಜೆಗೆ ಊರಿಗೆ ಹೋದಾಗ ಒಂದು ದಿನ ನನ್ನ ಅಜ್ಜ ನನ್ನನ್ನು ಕರೆದು ತೆಂಗಿನ ಗರಿಯ ಚಪ್ಪರ ಹೆಣೆದು, ಮನೆಯ ಗೋಡೆಗೆ ಈಗಾಗಲೇ ಹೊದಿಸಿದ್ದ ಹಳೆಯ ಒಣಗಿದ್ದ ಗರಿಗಳ ತೆಗೆದು ಹೊಸ ಗರಿಗಳ ಹೊದ್ದಿಸಬೇಕು ಎಂದರು. ಆಗ ನಾನು ಪ್ರೈಮರಿ ಕ್ಲಾಸಿನಲ್ಲಿ ಇದ್ದ ನೆನಪು. ಮನೆಯ ಅಂಗಳದಲ್ಲಿ ಇದ್ದ ತೆಂಗಿನ ಮರದಿಂದ ಸುಮಾರು ೨-೩ ಒಳ್ಳೆಯ ಗರಿಗಳನ್ನು ಮುರಿದು ಇಳಿಸಿದೆವು. ನಂತರ ನಮ್ಮ ಅಜ್ಜ ಗರಿಯಲ್ಲಿ ಚಪ್ಪರ ಹೆಣೆಯುವುದನ್ನ ಹೇಳಿಕೊಟ್ಟರು. ಅವರನ್ನೇ ಅನುಸರಿಸುತ್ತಾ ನಾನು ಸಹ ಚಪ್ಪರವೊಂದನ್ನ ಹೆಣೆದೆ. ಎರಡನೆಯದನ್ನು ಹೆಣೆಯುವಷ್ಟರಲ್ಲಿ ತಕ್ಕ ಮಟ್ಟಿಗೆ ಕಲಿತೆ. ಅಷ್ಟರಲ್ಲಿ ನನ್ನ ಅಜ್ಜ ಸಹ ಬೇಕಾದಷ್ಟು ಚಪ್ಪರಗಳ ಹೆಣೆದಿದ್ದರು. ಇಬ್ಬರೂ ಚಪ್ಪರಗಳ ಒಯ್ದು ಮನೆಯ ಒಂದು ಗೋಡೆಗೆ ಹೊದಿಸಿದೆವು. ಅದು ಮಳೆಗಾಲದಲ್ಲಿ ನೀರು ಗೋಡೆಯ ಒಳಗೆ ಬಸಿಯುವುದನ್ನು ತಡೆಯುತ್ತವೆ. ಇದು ಮಳೆಗಾಲಕ್ಕೆಂದು ಮಾಡಿಕೊಳ್ಳುವ ಒಂದು ತಯಾರಿ. ಇನ್ನೂ ಮನೆಯ ಸೂರಿನಲ್ಲಿ ಸರಿದ ಹೆಂಚುಗಳನ್ನು ಮರುಜೋಡಿಸುವುದು, ಬೆರಣಿಯ ತಟ್ಟಿ ಬೇಸಿಗೆಯಲ್ಲಿ ಒಣಗಿಸಿ ಮಳೆಗಾಲಕ್ಕೆ ಬೇಕಾಗುವಷ್ಟನ್ನು ಸೇರಿಸಿ ಇಡುವುದು. ಒಣಗಿದ ಕಟ್ಟಿಗೆಗಳ ಜೋಡಿಸಿ ಮುಂದೆ ಇಡೀ ಮಳೆಗಾಲಕ್ಕೆ ಆಗುವಷ್ಟು ಸೌದೆ ತಂದಿಟ್ಟುಕೊಳ್ಳುವುದು ಹಾಗು ಮಳೆಗಾಲ ಬಂದಾಗಲೂ ಅದಾವುದೂ ನೆನೆಯದಂತೆ ನೋಡಿಕೊಳ್ಳುವುದು. ಹೀಗೆ ಮಳೆಗಾಲಕ್ಕೂ ಮುನ್ನ ಬಹಳ ಸಿದ್ಧತೆಗಳು ಅವಶ್ಯಕ, ಅನಿವಾರ್ಯ. ಈ ಎಲ್ಲ ಸಿದ್ಧತೆಗಳಿರದೆ ಸುಲಭವಾಗಿ ಮಳೆಗಾಲವನ್ನು ಕಳೆಯಲು ಯಾರಿಗೂ ಆಗುತ್ತಿರಲಿಲ್ಲ. ಕೆಲವೊಮ್ಮೆ ಕೂಡಿಟ್ಟ ಸೌದೆ ಸಾಲದೆ, ಮಳೆಗಾಲದಲ್ಲಿ ಎಲ್ಲೂ ಒಣಗಿದ ಸೌದೆ ಸಿಗದೆ ಎಷ್ಟೋ ಜನ ಪರದಾಡುವ ಸ್ಥಿತಿ ಸಹ ಬರುತ್ತಿತ್ತು.

ಹೀಗೆ ಬೇಸಿಗೆ ರಜೆಗೆ ಬಂದು ಊರ ಮನೆಯ ಮಳೆಗಾಲಕ್ಕೆ ಸಿದ್ಧಪಡಿಸಿ, ಬೆಂಗಳೂರಿಗೆ ಹಿಂತಿರುಗಿದ ನನಗೆ, ಮತ್ತೆ ಮಳೆಗಾಲದ ನಡುವಲ್ಲಿ ಊರಿಗೆ ಹೋಗುವ ಅವಕಾಶ ಬಂದಿತು. ಆಗ ಊರ ಕಡೆ ತಕ್ಕ ಮಟ್ಟಿಗೆ ಮಳೆಯಾಗುತ್ತಿತ್ತು. ಒಂದು ದಿನ ಜೋರಾಗಿ ಆರಂಭವಾದ ಮಳೆ ನಿಲ್ಲದೆ ಬೀಳುತ್ತಿತ್ತು. ತುಸುವಾಗಿ ಆಲಿಕಲ್ಲು ಸಹ ಬಿದ್ದಿತ್ತು. ಸಣ್ಣಗಿದ್ದ ನಾನು, ನಮ್ಮ ಮನೆಯ ಕಿಟಕಿಯಲ್ಲಿ ಕುಳಿತುಕೊಂಡು ಹೊರಗಿನ ಮಳೆ ಮತ್ತು ಮಳೆಯಿಂದ ಕಾಣುವಷ್ಟು ದೂರದಲ್ಲಿ ಮೂಡಿದ್ದ, ರಭಸದಿಂದ ಹರಿಯುತ್ತಿದ್ದ ಝರಿಯೊಂದನ್ನ ನೋಡುತ್ತಾ ಕುಳಿತಿದ್ದೆ. ಅದು ಆ ವಯಸ್ಸಿಗೆ ನನಗೊಂದು ವಿಸ್ಮಯವಾಗಿತ್ತು. ಬೀದಿ ಬದಿಯಲ್ಲಿನ ಹಳ್ಳದಲ್ಲಿ ನೀರು ಅಷ್ಟು ರಭಸವಾಗಿ ಹರಿಯುವುದನ್ನು ನೋಡಿದ್ದು ಅದೇ ಮೊದಲು. ಕಾರ್ಮೋಡದಡಿಯಲ್ಲಿ, ಕತ್ತಲೆ ತುಂಬಿದ ಮಧ್ಯಾಹ್ನದ ಹೊತ್ತಲ್ಲಿ ಶುರುವಾದ ಮಳೆ ನಿಲ್ಲುವಷ್ಟರಲ್ಲಿ ಸೂರ್ಯ ಮುಳುಗುವ ಹೊತ್ತಾಗಿತ್ತು. ನಾ ಕಂಡ ಅತೀ ಕಪ್ಪಾದ ಮೋಡ ಕವಿದ ಮಳೆಗಾಲ ಅದಾಗಿತ್ತು. ಈಗಲೂ ನೆನೆದರೆ, ಮಳೆಯ ನೆನಪು ಬಾಲ್ಯವನ್ನು ಮತ್ತೆ ನನ್ನ ಕಣ್ಣ ಮುಂದೆ ತರುತ್ತದೆ. ಈಗ ಮನದಲ್ಲಿ ಒಂದೇ ಜಪ.

“ಮಳೆಗಾಲ ಬರುತ್ತಿದೆ!”.

ಆದರೆ ‘ಗೇಮ್ ಆಫ್ ಥ್ರೋನ್ಸ್’ನ ಹಾಗೆ ಹೆದರಿಕೆಯ ಛಾಯೆಯಿಂದಲ್ಲ.

- ಆದರ್ಶ