ಹಿಂಗೆ ಒಂದು ಸಂಜೆ ಕೆಲ್ಸ ಮುಗುಸ್ಕಂಡು ಮೆಟ್ರೊನಾಗೆ ಮನೆಗ್ ಹೋಗ್ತಿದ್ದೆ! ಮೆಟ್ಲು ಇಳ್ದು, ಸುರಂಗದೊಳಗೆ ಹೋಗಿ ಟಿಕೆಟ್ ತಗಂಡು ರೈಲಿಗೆ ಕಾಯ್ತಾ ನಿಂತ್ಕಂಡೆ. ನನ್ನಂಗೆ ಬಹಳ ಜನ ನಿಂತಿದ್ರು. ರೈಲು ಬಂತು ನೂಕು-ನುಗ್ಲಲ್ಲೇ ಎಲ್ಲ ರೈಲೊಳಗೆ ಹತ್ತಿ ನಿಂತ್ಕಂಡ್ವಿ. ನಾನು ರೈಲು ಹತ್ತೋ ಕಷ್ಟ ಪಡ್ಲೇ ಇಲ, ಜನ್ರೇ ನನ್ನ ಹತ್ಸಿದ್ರು. ರೈಲಲ್ಲಿ ನಾನು ಒಂಚೂರು ಒಳಗ್ ಹೋಗಿ ಕಿಟಕಿ ಕಡೆ ಮುಖ ಮಾಡ್ಕಂಡು ನಿಂತು, ಅತ್ಲಾಗಿತ್ಲಾಗ್ ನೋಡ್ತಿದ್ದೆ. ಆ ಸುರಂಗದ ಕತ್ಲಲ್ಲಿ ಆ ಮೆಟ್ರೊ ಒಳಗೆ ಅದೇನು ಅನ್ವೇಶಣೆ ಮಾಡೋಕೆ ಹೊರಟಿದ್ನೊ ಗೊತ್ತಿಲ್ಲ. ಜನ ಕುಂತಿದ್ರು, ನಿಂತಿದ್ರು, ಮಾತಾಡ್ತಿದ್ರು, ನೇತಾಡ್ತಿದ್ರು, ಮಕ್ಕೊಂಡಿದ್ರು, ಇನ್ನೊಂದಷ್ಟು ಜನ ನನ್ನಂಗೆ ಅತ್ತಿತ್ಲಾಗೆ ನೋಡ್ಕಂಡು ನಿಂತಿದ್ರು. ಮುಂದಿನ ಸ್ಟಾಪಲ್ಲಿ ಒಂದಷ್ಟು ಜನ ಇಳ್ದು, ಹೊಸದಾಗಿ ಯಾರೋ ಇಬ್ರು ಬಂದು ನನ್ನ ಎರಡೂ ಮಗ್ಲಲ್ಲಿ ನಿಂತ್ಕಂಡ್ರು. ಎಡಕ್ಕೆ ತಿರುಗಿ ನೋಡ್ದೆ ಚಂದದ ಹುಡುಗಿ, ಬಲಕ್ಕೆ ತಿರುಗಿ ನೋಡ್ತೀನಿ, ಅಕಿನೂ ಚಂದ ಇದ್ಳು, ಜೀವ ಹೆಂಗ್ ಸುಮ್ನಿರ್ಬೇಕು? ಅದಕ್ಕೆ ನನ್ ಪಾಡಿಗ್ ನಾನು ಸುಮ್ನೆ ಕಿಟಕಿ ನೋಡ್ಕಂಡು ನಿಂತೆ (ಇದನ್ನ ಬಿಟ್ಟು ಬೇರೇನೇ ಮಾಡಿದ್ರೂ ನಾನು ರೈಲಾಗ್ ಇರ್ತಿರಲಿಲ್ಲ, ರೈಲು ನನ್ನ ಮ್ಯಾಗಿರೋದು). ಕಿಟಕಿ ಹೊರಗೆ ಸುರಂಗದಲ್ಲಿ ಕಡುಗಪ್ಪು. ರೈಲೊಳಗೆ ಇದ್ದ ದೀಪದ ಬೆಳಕಿಂದ ಕಿಟಕಿಯ ಗಾಜಲ್ಲಿ ನನ್ನ ಮುಖದ ಬಿಂಬ ನಂಗ್ ಕಾಣ್ತು.

ಧಗ್ ಅಂತ ಒಂದ್ ಕ್ಷಣ ನಂಗೆ ಹೆದ್ರಿಕೆ ಆಯ್ತು. ಗಾಜಲ್ಲಿ ಕಂಡಿದ್ ಬಿಂಬ ನಂದಾ ಅನ್ನುವಷ್ಟು ಅನುಮಾನ. ಆದ್ರೂ, ಹೋಗ್ಲಿ ಅಂತ ಧೈರ್ಯ ಮಾಡಿ ಮತ್ತೆ ಗಾಜನ್ನ ನೋಡ್ದೆ. ಮತ್ತದೇ ಹೆದ್ರಿಕೆ ಹುಟ್ಸುವಂಥ ಮುಖ. ಎಲ್ಲೋ ಏನೋ ತಪ್ಪಾಗ್ತಿದೆ ಅಂತ ಅನ್ಸ್ತು. ಆಗ ನನ್ನ ಪಕ್ಕ ಇದ್ದ ಹುಡುಗಿಯರನ್ನ ವಾರೆಗಣ್ಣಲ್ಲೇ ನೋಡ್ದೆ, ಚೆನ್ನಾಗಿ ಕಾಣ್ತಿದ್ದನ್ನ ನೋಡಿ ಸಮಾಧಾನ ಆಯ್ತು. ಹಂಗೆ ನಿಧಾನಕ್ಕೆ ಬಲಗಡೆ ಇದ್ದೋಳ ಮುಖವನ್ನ ಗಾಜಲ್ಲಿ ನೋಡ್ದೆ, ಭಯಾನಕವಾದ ಮುಖ ಕಾಣ್ತು. ಹೆದರಿ ಎಡಗಡೆಯವಳ ಮುಖವನ್ನೂ ಗಾಜಲ್ಲಿ ನೋಡ್ದೆ. ಅಲ್ಲೂ ಭಯಾನಕವಾದ ಮುಖ ಕಾಣ್ತು. ಆದ್ರೆ ಗಾಜಿನ ಬಿಂಬ ಬಿಟ್ಟು ನಿಜವಾದ ಮುಖ ನೋಡಿದ್ರೆ ಚಂದ ಕಾಣೋ ಮುಖಗಳು. ಆದ್ರೆ ಆ ಮುಖಗಳ ಬಿಂಬ ರೌದ್ರವಾಗಿದ್ವು. ಬೇರೆ ಜನರ ಬಿಂಬನೂ ನೋಡ್ದೆ, ಅವರೂ ಗಾಜಲ್ಲಿ ವಿಕಾರವಾಗಿ ಕಾಣ್ತಿದ್ರು. ಎಲ್ಲ ಮುಖಕ್ಕೂ ನಾಲ್ಕು ಕಿವಿ, ನಾಲ್ಕು ಕಣ್ಣು, ಎರಡು ಮೂಗು, ಎರಡು ಬಾಯಿ. ಒಂದು ಕ್ಷಣ ಪುರಾಣದ ಕಥೆಗಳ ರಾಕ್ಷಸರ ನೆನಪಾಯ್ತು. ಅಷ್ಟರಲ್ಲಿ ರೈಲು ಸುರಂಗದಿಂದ ಹೊರಗ್ ಬಂದು ಹೊರಗಿನ ಬೆಳಕಿಂದ ಬಿಂಬದ ತೀವ್ರತೆ ಕಡಿಮೆ ಆಯ್ತು, ನಾ ಇಳಿಬೇಕಿದ್ದ ಸ್ಟಾಪು ಬಂತು. ರೈಲೊಳಗೆ ಕಂಡದ್ನೆಲ್ಲ ಅಲ್ಲಿಗೇ ಬಿಟ್ಟು ಹೊರಗ್ ಬಂದೆ.

ಆ ರೈಲಲ್ಲಿದ್ದ ಹುಡುಗೀರು ಹೊರಗ್ ಬಂದ್ರು. ಒಳಗೆ ಕಂಡ ಬಿಂಬದಲ್ಲಿ ಭಯ ಹುಟ್ಸುವಂಗೆ ಕಂಡೋರು ಹೊರಗೆ ಅಂದವಾಗಿ ಕಾಣ್ತಿದ್ರು. ಒಂದ್ ಸರಿ ನನ್ನ ಮುಖದ ಬಿಂಬವನ್ನೂ ನನ್ನ ಫೋನಿನ ಡಿಸ್ಪ್ಲೇ ನಲ್ಲಿ ನೋಡ್ಕೊಂಡೆ. ನಾನೂ ಸಹ ಈಗ ಸರಿಯಾಗಿ ಕಾಣ್ತಿದ್ದೆ. ಆದ್ರೆ ಆ ಬಿಂಬದಲ್ಲಿ ವಿಕಾರವಾಗಿದ್ದೆ. ಒಂದು ಕ್ಷಣ ಏನೋ ಯೋಚನೆ ಬಂತು."ಹೊರಗೆ ನಾವೆಲ್ರೂ ಅಂದವಾಗೇ ಕಾಣ್ತೀವಿ, ಆದ್ರೆ ಒಳಗೆ ಹೊಕ್ಕಿ ನೋಡ್ದಾಗ್ಲೇ ನಮ್ಮ ನಿಜ ರೂಪ ಕಾಣೋದು" ಅಂತ. ಅಷ್ಟರಲ್ಲಿ ಇನ್ನೊಂದು ಕಡೆಯಿಂದ ಮನ್ಸು "ಲೋ!! ಯಾಕೋ ಸುಮ್ನೆ ತಲೆ ಕೆರ್ಕೊತಿಯಾ? ಮನೆಗ್ ಹೋಗಣ ನಡಿ" ಅಂತು. ಇದ್ದೆಲ್ಲ ಯೋಚನೆ ಬಿಟ್ಟು ಕಣ್ಣಿಗೆ ಸುಂದರವಾಗಿ ಕಾಣ್ತಿದ್ದ ಹುಡುಗೀರು, ಮರ, ಗಿಡ, ಸಂಜೆ ಆಕಾಶ, ಬೀಸ್ತಿದ್ದ ತಂಗಾಳಿ, ಸುತ್ತ-ಮುತ್ತ ಜನ ಎಲ್ಲವ ನೋಡ್ಕಂಡು ಮನೆ ಕಡೆ ಹೋದೆ!

- ಆದರ್ಶ