ನನ್ನ ಕಾಲೇಜಿನ ದಿನಗಳಲ್ಲಿ ಹೆಚ್ಚಿನ ಲ್ಯಾಬ್ ವೈವಾ ದಲ್ಲಿ ಕೂತಿದ್ದು ದೀಕ್ಷಿತಾ ನಾಯ್ಡು ಜೊತೆ. ಇಬ್ಬರ ರೋಲ್ ನಂಬರ್ ಹಿಂದೆ ಮುಂದೆ ಇದ್ದ ಕಾರಣ  ನಾನೇ ಸಿಕ್ಕಿ ಬೀಳುತಿದ್ದೆ.  ಮೊದಲು ನನಗೆ ಕ್ವೆಶ್ಚನ್ ಕೇಳೋರು. ನಾನು ಗೊತ್ತಿಲ್ಲ ಅಂತಾ ಇದ್ದೆ. ಆಮೇಲೆ ಇವಳನ್ನ ಕೇಳೋರು. ಇವಳು ಒಂತರಾ ಗೂಗಲ್ ಇದ್ದಂಗೆ. ಒಂದು ಕ್ವೆಶ್ಚನ್ ಕೇಳಿದ್ರೆ ಹತ್ತು ಆನ್ಸರ್ ಕೊಡ್ತಾ ಇದ್ದಳು. ಅಷ್ಟೇ, ಆಮೇಲೆ ಏನಿದ್ರೂ ಅವರಿಬ್ಬರದ್ದೇ ಮಾತುಕಥೆ. ನಾನು ಮೇಜಿನ ಮೇಲೆ ನನ್ನ ಗಲ್ಲಕ್ಕೆ ಕೈ ಕೊಟ್ಕೊಂಡು ಇವ್ರಿಬ್ರನ್ನ ನೋಡೋದೇ ಕೆಲಸ. ನಾನು ಸಾಧು ಕೋಕಿಲ ತರ “ಲೇ, ನಾನೂ ಕೂಡ ಇದೀನಿ ಕಣ್ರೋ ಇಲ್ಲಿ. ನೀವಿಬ್ರೆ ಮಾತಾಡುವ ಹಾಗಿದ್ರೆ ನನ್ನ ಯಾಕೆ ಮರಕೋತಿ ಆಟ ಆಡೋಕಾ ಕರಿಸಿದ್ರಿ?” ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಇದ್ದೆ. ಮಧ್ಯೆ ಮಧ್ಯೆ “ಸರ್, ಇಬ್ರಿಗೂ ಮಾತಾಡಿ ಮಾತಾಡಿ ಸುಸ್ತಾಗಿದೆ ಅನ್ಸುತ್ತೆ, ಟೀನೋ ಕಾಫಿನೋ ತಂದು ಕೊಡ್ಲ“ ಅಂತ  ಕೇಳೋಣ ಅನಿಸುತಿತ್ತು. ಮೊದಮೊದಲು ಕ್ವೆಶ್ಚನ್ ಕೇಳ್ತಾ ಇದ್ದ ಲೆಕ್ಚರರ್ ಆಮೇಲ್ ಆಮೇಲೆ ಅವ್ರಿಗೆ ಏನಾದ್ರು ಸಬ್ಜೆಕ್ಟ್ ಮೇಲೆ ಡೌಟ್ ಇದ್ರೆ ಇವ್ಳನ್ನ್ ಕೇಳೋರು . ಇವಳು ಆನ್ಸರ್ ಕೊಡೋಳು.  ಕೊನೆಗೆ, ಲೆಕ್ಚರೆರ್ರೆ  ಥ್ಯಾಂಕ್ಸ್ ಅಂತ ಹೇಳಿ, ಅವಳನ್ನ ಮನೆಗೆ ಬಂದಿರೋ ನೆಂಟರು ತರ ಕಳಿಸಿ ಕೊಡುತ್ತಾ ಇದ್ದರು. ಆಮೇಲೆ ನನ್ ಕಡೆ ತಿರುಗಿದರೆ, ನಾನು “ಅರ್ಥವಾಯಿತು ಬಿಡಿ” ಅಂತ ಅವರು ಓಡಿಸೋ ಮುಂಚೆನೇ ಬಂದು ಬಿಡ್ತಾ ಇದ್ದೆ..!!!

ನನಗಿನ್ನೂ ನೆನಪಿದೆ, ಅದು ಎಇಸಿ ಲ್ಯಾಬ್. ಅವತ್ತು ಕೂಡ ನಾನು ಇವಳ ಜೊತೆ ವೈವಕ್ಕೆ ಕೂತಿದ್ದೆ. ಅವರು ನನಗೆ ಕ್ವೆಶ್ಚನ್ ಕೇಳಿದ ಕೂಡಲೆ ನಾನು “ಥಟ್ ಅಂತ ಹೇಳಿ” ಪ್ರೊಗ್ರಾಮ್ ತರ “ಕ್ವೆಶ್ಚನ್ ಪಾಸ್“ ಅಂತ ಹೇಳಿ ಲೆಕ್ಚರರ್ ಮುಖ ನೋಡಿಕೊಂಡು “ಇನ್ನ ನಿನಗೆ ಕಾದಿದೆ ಮಗನೆ“ ಅಂದ್ಕೊಂಡು ಸುಮ್ನಾದೆ. ಇವಳು ಶುರು ಹಚ್ಚಿಕೊಂಡಳು. ಅವಳು ಮೊದಲ ಕ್ವೆಶ್ಚನ್ ಗೆ ಆನ್ಸರ್ ಹೇಳಿದ್ದನ್ನ ನೋಡಿ ಆ ಲೆಕ್ಚರರ್ ನನ್ನ ಕಡೆ ತಿರುಗಿ “ನೋಡು ಹೇಗೆ ಆನ್ಸರ್ ಮಾಡ್ತಾ ಇದ್ದಾಳೆ” ಅನ್ನೋ ರೇಂಜಿಗೆ ನೋಡಿದ. ನಾನು “ನಾನು ಮೊದಲಿಂದ ನೋಡ್ತಾ ಇದೀನಿ. ನೀವ್ ಮುಂದುವರ್ಸಿ, ಗೊತ್ತಾಗುತ್ತೆ” ಅನ್ನೋ ರೇಂಜಿಗೆ ನೋಡ್ದೆ. ಇವಳು ಎಲ್ಲಾದಕ್ಕೂ ಉತ್ತರ ಕೊಟ್ಟು ಕೊನೆಗೆ “ಸರ್, ನಾನು ಮೂರ್ನಾಲ್ಕು ಬುಕ್ ಓದ್ಕೊಂಡು ಬಂದಿದ್ದೀನಿ. ಆದರೂ ನನಗೆ ಸರಿಯಾಗಿ ಆನ್ಸರ್ ಕೊಡೋಕೆ ಆಗ್ತಾ ಇಲ್ಲ” ಅಂದಾಗ ನಾನು ಗಲಿಬಿಲಿ “ಇಷ್ಟೊತ್ತು ಆನ್ಸರ್ ಹೇಳದೆ ಮತ್ತೆ ಏನು ಕ್ವೆಶ್ಚನ್ ಕೇಳ್ತಾ ಇದ್ಯಾ” ಅಂತ. ಇನ್ನೊಂದು ಲ್ಯಾಬಿನ ವೈವದಲ್ಲಿ ಒಬ್ಬರು ಲೆಕ್ಚರರ್ ಇನ್ನೊಬ್ಬರು ಲೆಕ್ಚರರ್ ನ “ನೋಡಿ ಮೇಡಂ, ಈ ಹುಡುಗಿ ಇಂದ ನಾವು ಕೂಡ ತುಂಬ ಕಲಿಬೇಕಿದೆ“ ಅಂದಾಗ, ನಾನು ಲೆಕ್ಚರರ್ ಗುಂಪಿಗೆ ಶಿಫ್ಟು. ನಾನು ಕೂಡ ಅವರ ಜೊತೆ “ಹು, ಮೇಡಂ ನಾವೆಲ್ಲರು ಕಲಿಬೇಕಿದೆ ಅಂತ” ಸಣ್ಣಗೆ ಹೇಳಿ ಬಂದಿದ್ದೆ. ಇನ್ನು ಕೆಲವೊಮ್ಮೆ ನಮ್ಮಿಬ್ಬರ ಜೊತೆ ಚೇತನ್.ಸಿ ಕೂಡ ಇರುತಿದ್ದ. ಅದು ಇನ್ನೂ ಘನಘೋರ!. ಒಂದು ಕಡೆ ಶಂಖ, ಇನ್ನೊಂದು ಕಡೆ ಜಾಗಟೆ. ನನ್ನ ವೈವ ಹೊಗೆ.

ನಾನಂತೂ ಆಮೇಲ್ ಆಮೇಲೆ ವೈವಕ್ಕೆ ಓದೋದೇ ಬಿಟ್ಟುಬಿಟ್ಟೆ. ವೈವದಿಂದ ಬರುವ ಎಂಟು ಮಾರ್ಕನ್ನು ದೇವರಿಗೆ ಅಂತ ಎತ್ತಿ ಇಟ್ಟು ಬಿಟ್ಟೆ!. ಕೆಲವೊಮ್ಮೆ  ಕೆಲವು ಲೆಕ್ಚರರ್ ಗಳು ಮೊದಲು ಔಟ್ ಪುಟ್ ತೋರಿಸಿದವರನ್ನು ವೈವಕ್ಕೆ ಕರಿತಾ ಇದ್ದರು. ಆಗ ಎಲ್ಲರೂ ಔಟ್ ಪುಟ್ ತೋರಿಸೋ ಮೊದಲು ವೈವಕ್ಕೆ ದೀಕ್ಷಿತ ಬರ್ತಾ ಇದ್ದಾಳ? ಅಂತ ಖಾತ್ರಿ ಮಾಡಿಕೊಳ್ಳುತ್ತ ಇದ್ರು. ಅವಳು ಬರ್ತಾ ಇದ್ದರೆ ಈ ಉಗ್ರಂ ಮೂವಿನಲ್ಲಿ “ಅವನು ಬರ್ತಾ ಇದ್ದಾನೆ ಕಣ್ರೋ” ಅಂದಂಗೆ, “ಅವಳು ಬರ್ತಾ ಇದ್ದಾಳೆ ಕಣ್ರೋ” ಅಂತ ಯಾರೋ ಬ್ಯಾಗ್ರೌಂಡಿನಲ್ಲಿ ಕೂಗ್ತಾ ಇದ್ದಂಗೆ ಆಗ್ತಾ ಇತ್ತು.  ಅಷ್ಟೇ, ಎಲ್ಲರೂ ಚೆಲ್ಲಾಪಿಲ್ಲಿ. ಔಟ್ ಪುಟ್ ತೋರಿಸಿ ಇನ್ನೇನು ವೈವಕ್ಕೆ ಬರೋರು ಕೂಡ "ಇಲ್ಲ ಸರ್, ಔಟ್ ಪುಟ್ ತಪ್ಪಿದೆ. ನಿಮಗೆ ಗೊತ್ತಾಗ್ತಾ ಇಲ್ಲ ಅನ್ನಿಸುತ್ತೆ. ಸರಿ ಮಾಡಿಕೊಂಡು ಬರ್ತೀನಿ"  ಅಂತ ಹೇಳಿ ಲೆಕ್ಚರರ್ ಹು ಅನ್ನೋ ಮೊದಲೇ ಹಿಂದಕ್ಕೆ ನೋಡದೆ ಎದ್ನೋ ಬಿದ್ನೋ ಅಂತ ಓಡಿ ಹೋಗ್ತಾ ಇದ್ರು.

ಎಕ್ಸಾಮ್ ಟೈಮಿನಲ್ಲಿ ಎಲ್ಲರಿಗೂ ಯಾವ ಬುಕ್ ಓದಿದೆ ಅಂತ ಕೇಳಿದರೆ ದೀಕ್ಷಿತಾಳಿಗೆ ಎಷ್ಟು ಬುಕ್ ಓದಿದೆ ಅಂತ ಕೇಳಬೇಕಿತ್ತು. ಅವಳ ಆನ್ಸರ್ ಗಳನ್ನ ಕೇಳಿದ ಲೆಕ್ಚರರ್ “ಇವಳು ಎಷ್ಟು  ಚೆನ್ನಾಗಿ ಆನ್ಸರ್ ಮಾಡ್ತಾಳೆ, ನಿಮಗೇನ್ರಿ ದಾಡಿ? ಇವಳನ್ನು ನೋಡಿ ಕಲೀರಿ“  ಅಂದಾಗೆಲ್ಲ “ನಾನು ಟ್ರೈ ಮಾಡ್ದೆ ಗುರು, ಆಗ್ಲಿಲ್ಲ. ಇನ್ನು ಇವಳ ಕೈಗೊಂದು ತ್ರಿಶೂಲ ಕೊಟ್ಬಿಟ್ಟು, ನಾನು ಕಾಳಿದಾಸನ ಹಾಗೆ ನಾಲಿಗೆನ ಆ ಅಂತ ಆಚೆ ಹಾಕಿ” ಏನಾದ್ರು ಬರಿಯವ್ವ, ಆವಗ್ಲಾದ್ರು ನಾಲಿಗೆ ತಿರುಗುತ್ತ ನೋಡೋಣ!!” ಅಂತ ಹೇಳೋಣ ಅನಿಸುತ್ತಾ ಇತ್ತು.

ಈಗ ಯಾರದ್ರು ಜೂನಿಯರ್ಸ್ “ಅಣ್ಣ, ವೈವಕ್ಕೆ ಏನು ಓದಿಲ್ಲ ಅಂದ್ರೆ”, ನಾನು “ಅಯ್ಯೋ ವೈವಾನ?” ಅಂತ ಓಡೋ ಹಾಗೆ ಹಾಗಿದೆ.

- ದೀಪಕ್ ಬಸ್ರೂರು