ಏನಿದು?
by Chethan
ಜೀವನದಲ್ಲಿ ನನ್ನ ಪ್ರಕಾರ ಮುಖ್ಯವಾಗಿ ಬೇಕಾಗಿರುವ ಒಂದು ಗುಣ ಅಂತ ಅಂದ್ರೆ ನಂಬಿಕೆ. ನಾವು ಇನ್ನೊಬ್ಬರ ಮೇಲೆ ನಂಬಿಕೆ ಇಡುವುದಕ್ಕಿಂತ, ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದದ್ದು ಅಂತ ನನ್ನ ಅಭಿಪ್ರಾಯ. ನೀವೇ ಒಂದು ಸನ್ನಿವೇಶದ ಬಗ್ಗೆ ಯೋಚನೆ ಮಾಡಿ, ನಿಮಗೆ ಮೊದಲನೇ ಬಾರಿಗೆ ಯಾರೊಬ್ಬರದ್ದು ಪರಿಚಯ ಆಗಿರುತ್ತದೆ, ಅವರು ನಿಮ್ಮ ಹತ್ತಿರ ಬಂದು ಸ್ವಲ್ಪ ಹಣ ಕೊಡು ಅಂತ ಕೇಳಿಕೊಳ್ಳುತ್ತಾರೆ ಅಂದುಕೊಳ್ಳೋಣ, ನೀವು ಅವರಿಗೆ ಹಣ ಕೊಡುವಿರಾ? ಅದೇ ರೀತಿ, ನಿಮ್ಮ ಆತ್ಮೀಯ ಸ್ನೇಹಿತ ಒಬ್ಬ ಬಂದು ಹಣ ಕೇಳುತ್ತಾನೆ ಅಂದುಕೊಳ್ಳೋಣ ಅವನಿಗೆ ಹಣ ಕೊಡುವ ಸಾಧ್ಯತೆ ಹೊಸ ಪರಿಚಯದವನಿಗಿಂತ ಹೆಚ್ಚಾಗಿರುವುದಂತೂ ಖಂಡಿತ. ಇನ್ನೊಂದು ಸನ್ನಿವೇಶದ ಬಗ್ಗೆ ಆಲೋಚನೆ ಮಾಡಿ, ನಿಮಗೆ ತಿಳಿದಿರುವ, ಬಹಳ ದಿವಸಗಳಿಂದ ಪರಿಚಯ ಇರುವಂತಹ ಗೆಳೆಯನೊಬ್ಬ ಇನ್ನೊಮ್ಮೆ ನಿಮ್ಮಿಂದ ಹಣ ಪಡೆದು ಸಾಕಷ್ಟು ದಿವಸಗಳ ನಂತರ ಸತಾಯಿಸಿ ಆ ಹಣವನ್ನು ಹಿಂತಿರುಗಿಸಿರುತ್ತಾನೆ, ಅವನು ಮತ್ತೊಮ್ಮೆ ನಿಮ್ಮ ಬಳಿ ಬಂದಾಗ ನೀವು ಅವನಿಗೆ ಹಣ ಕೊಡಲು ಯಾವುದೇ ಹಿಂಜರಿಕೆ ಇಲ್ಲದೆ ಮುಂದುವರಿಯುವಿರಾ?
ಇನ್ನೊಂದು ರೀತಿಯ ಸನ್ನಿವೇಶಗಳನ್ನ ನೋಡೋಣ.
ಸಹಜವಾಗಿ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸಾಕಷ್ಟು ಜನರಿಗೆ ಭರವಸೆಗಳನ್ನ ಕೊಡುವುದರಲ್ಲಿ ನಿರತರಾಗಿರುತ್ತೇವೆ. ನಾನು ಈ ದಿನ ಸಂಜೆ ನಿಮ್ಮ ಕೆಲಸವನ್ನು ಖಂಡಿತವಾಗಿಯೂ ಮಾಡಿ ಮುಗಿಸಿರುತ್ತೇನೆ ಅಂತಲೋ, ತಪ್ಪದೇ ನಿಮ್ಮ ಮದುವೆಗೆ ನಾವು ಕುಟುಂಬ ಸಮೇತರಾಗಿ ಬಂದು ಆಶೀರ್ವದಿಸುತ್ತೇವೆ ಅಂತಲೋ, ಅಥವಾ ನಿಮಗೆ ತಪ್ಪದೆ ನೀಡಬೇಕಾದ ಹಣವನ್ನು ಇಂತಿಷ್ಟು ಸಮಯಕ್ಕೆ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಅಂತಲೂ ಭರವಸೆಯನ್ನು ನೀಡಿರುತ್ತೇವೆ. ಇಂಥ ಭರವಸೆಗಳನ್ನು ನಾವು ತಪ್ಪದೇ ಪಾಲಿಸಿದ್ದಲ್ಲಿ ನಮ್ಮ ಎದುರಿನ ವ್ಯಕ್ತಿಗಳಿಗೆ ನಮ್ಮ ಮೇಲಿನ ನಂಬಿಕೆ ಹೆಚ್ಚುತ್ತದೆ. ಅದೇ ರೀತಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸದ ಪಕ್ಷದಲ್ಲಿ ನಮ್ಮ ಮೇಲಿನ ನಂಬಿಕೆ ಜನರಿಲ್ಲಿ ಕ್ಷೀಣಿಸುತ್ತಾ ಹೋಗುತ್ತದೆ. ಹೀಗೆ ಕ್ಷೀಣಿಸುತ್ತಾ ಹೋಗಿ ಒಂದು ದಿನ ನಮ್ಮ ಮೇಲಿನ ನಂಬಿಕೆ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಅಂತ ನಂಬಿಕೆಯನ್ನು ಕಳೆದುಕೊಂಡ ನಂತರ ಸಹಜವಾಗಿ ನಮ್ಮ ಸುತ್ತಮುತ್ತಲಿನ ಜನರು ನಮ್ಮ ಜೊತೆಗಿನ ಒಡನಾಟಗಳಲ್ಲಿ ಹೆಚ್ಚು ಎಚ್ಚರ ವಹಿಸುವುದು ಸಾಮಾನ್ಯ. ಇದಲ್ಲದೆ ನಮ್ಮ ಜೊತೆಗಿನ ವ್ಯವಹಾರಗಳನ್ನು ಅವರು ಆದಷ್ಟು ಕಡಿಮೆ ಮಾಡುತ್ತಾರೆ.
ಇಂಥ ವಿಷಯಗಳನ್ನು ಗಮನಿಸಿದ ಮೇಲೆ ಸಹಜವಾಗಿ ನಾವು ನಮಗೆ ಅಥವಾ ನಮ್ಮ ಆತ್ಮೀಯರಿಗೆ ಹೇಳುವ ಅಥವಾ ಕೊಡುವ ಸಲಹೆಗಳು ಏನೆಂದರೆ "ಯಾರೊಡನೆ ಆದರೂ ನಂಬಿಕೆಯ ವಿಷಯದಲ್ಲಿ ಆಟವಾಡ ಬೇಡ" ಎಂದು. ಕಾರಣ ಒಮ್ಮೆ ಗಳಿಸಿದ ನಂಬಿಕೆ ಕಳೆದುಕೊಂಡ ನಂತರ, ಅದನ್ನು ಮತ್ತೆ ಪಡೆಯುವುದು ಅಸಾಧಾರಣವಾದ ಮಾತೇ ಸರಿ. ಆದ್ದರಿಂದ ನಾವು ಸಹಜವಾಗಿ ಯಾರೊಡನೆಯಾದರೂ ಭರವಸೆಗಳನ್ನು ನೀಡುವಾಗ, ನಮ್ಮಿಂದ ಅಂತ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬುದನ್ನು ಕೂಲಂಕುಶವಾಗಿ ಆಲೋಚಿಸಿ ಮುಂದುವರೆಯುವುದು ಉತ್ತಮ.
ಆದರೆ ನಮ್ಮ ಸುತ್ತಮುತ್ತಲೇ, ನನಗೆ ತಿಳಿದಿರುವ ಒಂದು ವಿಷಯದ ಮೇಲೆ ಸಾಕಷ್ಟು ಜನರಿಗೆ ಅಪಾರವಾದ ನಂಬಿಕೆ ಕಾಲ ಕಾಲದಿಂದಲೂ ಹಾಗೆ ಉಳಿದಿದೆ ಅನ್ನುವುದೇ ಆಶ್ಚರ್ಯದ ಸಂಗತಿ. ನಾವು ಇಷ್ಟು ಹೊತ್ತು ಚರ್ಚಿಸಿದಂತೆ ಸಾಮಾನ್ಯವಾಗಿ ಯಾರಾದರೂ ನಮ್ಮ ಭರವಸೆಗಳನ್ನು ಪದೇ ಪದೇ ಮುರಿಯುತ್ತಾ ಹೋದರೆ, ಅಂತವರ ಮೇಲೆ ನಾವು ನಂಬಿಕೆ ಕಳೆದುಕೊಳ್ಳುವುದು ಸರ್ವೇಸಾಮಾನ್ಯ. ಆದರೆ, ಇಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪರಿಕಲ್ಪನೆ ಸಾಕಷ್ಟು ಕಾಲದಿಂದ ತನ್ನ ಮೇಲೆ ಜನರು ಇಟ್ಟಿರುವ ನಂಬಿಕೆಗಳನ್ನು ಆಶ್ವಾಸನೆಗಳನ್ನು, ಆತ್ಮವಿಶ್ವಾಸವನ್ನು ಮುರಿಯುತ್ತಲೇ ಬಂದಿದೆ. ಆದರೂ ಕೂಡ ಜನರು, ಆ ಪರಿಕಲ್ಪನೆಯ ಮೇಲೆ ಯಾವುದೇ ರೀತಿ, ತಮ್ಮ ನಂಬಿಕೆಗಳನ್ನು ಕಳೆದುಕೊಳ್ಳದೆ, ಮತ್ತೆ ಆ ಪರಿಕಲ್ಪನೆಯ ಬಳಿ ತಮ್ಮ ಸಹಾಯ ಹಸ್ತವನ್ನು ಚಾಚಿ ಮೊರೆ ಹೋಗುತ್ತಲೆ ಇದ್ದಾರೆ, ಇರುತ್ತಾರೆ.
"ಏನಿದು?"
- ಚೇತನ್