ಇವತ್ತಿಗೆ ಭೂಮಿಯ ಮೇಲೆ ಜನರ ಸೇರಿಸಿ ಇತರೆ ಎಲ್ಲ ಪ್ರಾಣಿಗಳಿಗೂ ಬಹಳ ರೀತಿಯಲ್ಲಿ ಕೆಟ್ಟ ಪರಿಣಾಮಗಳಾಗ್ತಿವೆ. ಇದಕ್ಕೆ ಮಾನವನೇ ಮುಖ್ಯ ಕಾರಣ. ಜನರು ತಾವು ಕಂಡುಹಿಡಿದ ಅದೆಷ್ಟೋ ಲೆಕ್ಕವಿಲ್ಲದ ಆವಿಷ್ಕಾರಗಳು, ಕಂಡುಕೊಂಡ ಪ್ರಕೃತಿಯ ಚಮತ್ಕಾರಗಳು, ಕಲೆ, ಕಟ್ಟಡ ಕಟ್ಟುವ ಪದ್ಧತಿ, ಗಣಿಗಾರಿಕೆ, ಔಷಧಗಳ ಆವಿಷ್ಕಾರ ಇವೆಲ್ಲವೂ ನಮಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿಗೆ ಅಪಾಯಗಳನ್ನೇ ತಂದುಕೊಟ್ಟಿವೆ.

ಪ್ರಕೃತಿಯಲ್ಲಿ ಬೇರೆ ಪ್ರಾಣಿಗಳಲ್ಲಿ ಕಾಣದ ಬುದ್ಧಿವಂತಿಕೆ, ರೀತಿ-ನೀತಿಗಳು, ಕಲಿಕೆ ಹಾಗೂ ತಿಳಿದ ವಿಷಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಶಕ್ತಿ ಬೇರಾವ ಜೀವಿಗಳಲ್ಲೂ ಮನುಷ್ಯನಲ್ಲಿ ಕಾಣುವಷ್ಟು ನಾವು ಕಾಣುವುದಿಲ್ಲ. ಹೆಚ್ಚು ಕಡಿಮೆ ಎಲ್ಲ ಜೀವಿಗಳೂ ಸಂಘ ಜೀವಿಗಳೆ. ಆದರೆ ಮನುಷ್ಯ ಮಾತ್ರ ತನ್ನ ಸುತ್ತಲ ಸಮಾಜವನ್ನು ಒಂದು ಸಂಕೀರ್ಣವಾದ, ತೊಡಕುಗಳ ತುಂಬಿದ ಸಮಾಜವನ್ನಾಗಿ ಬೆಳೆಸಿ ಅದರ ಚೌಕಟ್ಟಿನಲ್ಲಿ ಜೀವಿಸುತ್ತಿದ್ದಾನೆ. ಮನುಷ್ಯನ ಬುದ್ಧಿವಂತಿಕೆ ಬೆಳೆದಂತೆ ಆಸೆ, ಆಕಾಂಕ್ಷೆಗಳೂ ಬೆಳೆದು ಬರೀ ಹೊಟ್ಟೆಯ ಊಟದ ಅವಶ್ಯಕತೆ ಮೀರಿ ಇನ್ನೂ ಹೆಚ್ಚಿನ ಸಂತಸದ ಅವಶ್ಯಕತೆಗಳಿಗಾಗಿ ಯೋಚಿಸಿ, ಹೋರಾಟ ಮಾಡಿ ಜೀವನ ನಡೆಸುವ ಜೀವನ ಪರಿಯನ್ನು ಬೆಳೆಸಿಕೊಂಡಿದ್ದಾನೆ.

ನಾವು ಅನುಭವಿಸುತ್ತಿರುವ ಔಷಧಿಗಳು, ಕಾರು, ಬೈಕು, ವಿಮಾನ, ಪೆಟ್ರೋಲ್, ಬೆಳ್ಳಿ – ಬಂಗಾರ, ಪ್ಲಾಸ್ಟಿಕ್, ಸಾಫ್ಟ್ವೇರ್ ತಂತ್ರಜ್ಞಾನ, ಗಣಿಗಾರಿಕೆ ಎಲ್ಲವೂ ವಿಜ್ಞಾನದಿಂದ ಬೆಳೆದಂತವೆ. ಇದರಿಂದ ನಮಗೆ ಸಿಕ್ಕ ಉಪಯೋಗಗಳ ಜೊತೆಗೆ ಕೆಟ್ಟ ಪರಿಣಾಮವೂ, ಅನಾನುಕೂಲವೂ ವಿಜ್ಞಾನದಿಂದಲೇ ಅನ್ನುವುದು ಒಂದು ವಾದ. ಇದೇ ವಿಜ್ಞಾನದಿಂದ ನಮ್ಮ ಜೀವನ ಎಷ್ಟು ಸುಗಮವಾಗುತ್ತಿದೆಯೋ ಅಷ್ಟೇ ಈ ಭೂಮಿ ಮೇಲೆ ಎಲ್ಲ ಜೀವಿಗಳು ಒಟ್ಟಾರೆ ಬದುಕುವ ಕಾಲವೂ ಸಹ ಕಡಿಮೆ ಆಗ್ತಿದೆ. ನಾವು ಇದುವರೆಗೆ ಕಲಿತಿರುವ ವಿಜ್ಞಾನವು ಸಂಪನ್ಮೂಲಗಳ ಹೆಚ್ಚಿಗೆ ಬಳಸಿಕೊಂಡು ಬದುಕುವ ಪದ್ಧತಿಯ ಮೇಲೆ ನಡಿತಿದೆಯೆ ಹೊರತು, ಬಳಸಿದಂತ ಸಂಪನ್ಮೂಲಗಳ ಮರುದುಂಬಿಸುವ ಪದ್ಧತಿಯನ್ನು ಅಷ್ಟಾಗಿ ರೂಢಿಸಿಕೊಂಡಿಲ್ಲ. ನಮ್ಮ ಬಳಕೆಯಲ್ಲಿರುವ ಭೂಮಿಯ ಎಲ್ಲ ಸಂಪನ್ಮೂಲಗಳೂ ಮಿತವಾದವು ಎಂದು ಅರಿತಿರುವ ನಾವು ಮುಂದೊಂದು ದಿನ ಭೂಮಿ ಮೇಲಿನ ಎಲ್ಲವೂ ಮುಗಿದು ಮನುಷ್ಯ ಬದುಕೋಕಾಗದ ಹಂತ ಬಂದೇ ಬರುತ್ತೆ, ಅಂಥ ದಿನಕ್ಕೆ ಸಿದ್ಧರಿರಲು ನಾವು ೧೯೫೦ನೇ ಇಸವಿಯಿಂದಲೇ 'ಸ್ಪೇಸ್ ಟೆಕ್ನಾಲಜಿ' ಆವಿಷ್ಕಾರ ಮಾಡಿ ಭೂಮಿ ಬಿಟ್ಟು ಹೋಗೋಕೆ ಬೇಕಿರುವ ಸಾಧನಗಳ ಬಗೆಗಿನ ಕೆಲಸಗಳ ನಡೆಸುತ್ತಿದ್ದೇವೆ. ಬಹಳ ದೇಶಗಳು, ಬಹಳ ದೊಡ್ಡ ಮಟ್ಟದ ಜನಶಕ್ತಿ, ಬುದ್ಧಿಶಕ್ತಿ, ಮತ್ತು ದುಡ್ಡನ್ನ ವ್ಯಯ ಮಾಡುತ್ತಾ ಬಂದಿವೆ.

ಇವತ್ತಿನ ಮಟ್ಟಿಗೆ ಭೂಮಿ ಮೇಲೆಯೇ ಜನರಿಗೆ ಊಟ, ಆರೋಗ್ಯ, ಯುದ್ಧ, ನೀರು ಅಂತ ಅನೇಕ ತೊಂದರೆಗಳಿವೆ. ಈ ತೊಂದರೆಗಳಿಗೆ ನಾವು ವಹಿಸಬೇಕಿರುವುದಕ್ಕಿಂತ ಹೆಚ್ಚಿನ ದುಡ್ಡು, ಬುದ್ಧಿ, ಶ್ರಮವನ್ನ ಭೂಮಿಯಾಚಿನ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಳಸುತ್ತಿದ್ದೇವೆ ಅಂತ ಅನ್ನಿಸುತ್ತೆ. ಈ ಬಾಹ್ಯಾಕಾಶದ ಸಂಶೋಧನೆಯ ಫಲವಾಗಿ ನಮಗೆ ಇಂಟರ್ನೆಟ್, ಇ-ಮೇಲ್ ನಂಥ ಉಪಯೋಗದ ಹೊಸ ಆವಿಷ್ಕಾರಗಳು ಸಿಕ್ಕಿರಬಹುದು, ಆದರೂ ಇವ್ಯಾವು ಇವತ್ತಿಗೆ ಇಲ್ಲಿನ ಸಮಸ್ಯೆಗಳಿಗೆ ನೇರ ಉತ್ತರವನ್ನು ಕೊಡಲು ಸಫಲವಾಗಿಲ್ಲ. ಜೊತೆಗೆ ನಾವು ಉಪಗ್ರಹಗಳ ಭೂಮಿ ಸುತ್ತ ತಿರುಗಲು ಕಳಿಸುತ್ತಿರುವ ಫಲವಾಗಿ ಅಲ್ಲೂ ಸಹ ‘ಸ್ಪೇಸ್ ಜಂಕ್’ ಹೆಚ್ಚುವ ಎಚ್ಚರಿಕೆಯನ್ನು ಈಗಾಗಲೇ ವಿಜ್ಞಾನಿಗಳು ನೀಡಿದ್ದಾರೆ. ಇವೆಲ್ಲ ವಿಷಯಗಳು ಒಂದು ರೀತಿಯಲ್ಲಿ ಯೋಚಿಸಿ ನೋಡಿದರೆ ಜನರ ಬುದ್ಧಿವಂತಿಕೆ, ಅದರಿಂದ ಹೊರಬಂದ ವಿಜ್ಞಾನದ ಪದ್ಧತಿ ಅನುಕೂಲದ ಜೊತೆಗೆ ತಿರುಗಿ ನಮಗೆ ಮಾರಕವಾಗಿಯೂ ಪರಿಣಮಿಸಿದೆ. ಒಂದು ರೀತಿ ನಮ್ಮ ಗುಂಡಿಯನ್ನ ನಾವೇ ತೋಡಿಕೊಂಡಂಗೆ.

ಆದರೆ ಇದೆಲ್ಲ ನಮಗೆ ಹೇಗೆ ಬಂತು? ಇತರೆ ಪ್ರಾಣಿಗಳ ಹೋಲಿಕೆಯಲ್ಲಿ ದೈಹಿಕ, ಬೌದ್ಧಿಕ ಬೆಳವಣಿಗೆ ನಮ್ಮಲ್ಲೇಕೆ ಹೆಚ್ಚಾಯ್ತು? ನಮ್ಮ ಬುದ್ಧಿ ಹೆಚ್ಚು ಬೆಳೆಯುವಂತ ವಾತಾವರಣ ನಮಗೇಕೆ ಸಿಕ್ಕಿತು? ಎಲ್ಲವೂ ಪ್ರಕೃತಿಯ ಗಡಿಯೊಳಗೆ ನಡೆದಿರೋದು. ನಮ್ಮ ಸುತ್ತಲಿನ ಲೋಕವನ್ನು ನೋಡಿ ಯೋಚನೆಗಳ ಹುಟ್ಟುವಂತೆ ಮಾಡಿದ್ದು ಪ್ರಕೃತಿ. ಆ ಯೋಚನೆಗಳ ಅಳೆದು ತೂಗಿ ಹೊಸತನ್ನ ಅರಿಯುವ, ಹೊಸದನ್ನ ಆವಿಷ್ಕರಿಸುವ ಯೋಚನಾ ಶಕ್ತಿಯೂ ಬೆಳೆದಿದ್ದು ಪ್ರಕೃತಿಯಿಂದಲೇ. ಈ ಪ್ರಕೃತಿಯಲ್ಲೇ ಹುಟ್ಟಿದ ನಾವುಗಳು ಇಲ್ಲಿನ ಸಂಪನ್ಮೂಲಗಳ ಬಳಸಿಕೊಂಡು ಜೀವನ ನಡೆಸುವ ಕಲಿಕೆಯ ಕೊಟ್ಟಿದ್ದೂ ಪ್ರಕೃತಿಯೇ. ಅಂದ್ರೆ ಒಂದು ರೀತಿಯಲ್ಲಿ ನಮ್ಮನ್ನ ಹುಟ್ಟಿಸಿದ ಪ್ರಕೃತಿಯು ತನ್ನ ಮೂಲಕವೇ ನಮ್ಮ ಅಂತ್ಯಕ್ಕೂ ದಾರಿಮಾಡಿಕೊಟ್ಟಿದೆ.

ಪ್ರಕೃತಿಯಿಂದಲೇ ಹುಟ್ಟು, ಪ್ರಕೃತಿಯಿಂದಲೇ ಸಾವೂ ಸಹ. ಇದು ಪ್ರಕೃತಿಯಲ್ಲಿನ ವಿರೋಧಾಭಾಸ.

The Paradox in Nature.

- ಆದರ್ಶ

ಹೆಚ್ಚಿನ ಓದಿಗೆ
೧. ಸ್ಪೇಸ್ ಜಂಕ್
೨. ಸಾವು: ಜೀವವಿಕಾಸದ ದೃಷ್ಟಿಯಲ್ಲಿ - ಭಿನ್ನ ಬಿಂಬ