ಸಕಲವೂ ಅವನಿಂದ ಅಂತಾದರೆ, ಸಕಲವೂ ಅವನ ಇಶ್ಟ ಅಂತಾದರೆ, ನಾ ಮಾಡೋ ಪಾಪಗಳು ಕೂಡ ಅವನಿಂದ ಅಂತಲ್ವ? ನಾ ಬರಿ ಪಾತ್ರದಾರಿ, ಅವನೇ ಸೂತ್ರದಾರಿಯಾದರೆ, ನಾ ಮಾಡೋ ಕೆಲಸಗಳಿಗೆಲ್ಲ ಅವನೇ ಕಾರಣ ಅಂತಲ್ವ? ನಾ ಮಾಡೋ ಊಟಕ್ಕೂ ಅವನೇ ಕಾರಣ, ನಾ ನೋಡೋ ನೋಟಕ್ಕೂ ಸಹ... ಹೀಗಿದ್ದಾಗ ನಾನು ಮಾಡಿದ್ದು ಪಾಪ ಅಂತ ಹೇಳೋದು ಯಾಕೆ?? ಇದು ದೇವರು ನನ್ನಿಂದ ಮಾಡಿಸಿದ್ದು, ಅಂತ ಹೇಳಬಹುದಲ್ವ? ಅವನಿಗೆ ಮಾಡಬೇಕು ಅನಿಸಿದನ್ನ, ನನ್ನಿಂದ ಮಾಡಿಸಿದ್ದು ತಾನೆ? ಅಲ್ಲಾ, ಒಬ್ಬ ಮನುಶ್ಯನ ಪ್ರತಿ ಕ್ಶಣದ, ಪ್ರತಿ ನಡೆಯನ್ನ ಬರೆಯೋವಷ್ಟು ಪುರುಸೊತ್ತನ್ನ ನಿಜವಾಗ್ಲು ದೇವರು ಮಾಡ್ಕೊಂಡಿರ್ತಾನಾ? ಅಶ್ಟು ವಿವರವಾಗಿ ಬರೆದಿರ್ತಾನಾ?

ಎತ್ತುಗೆಗೆ, ನಾನು ಬೆಳಿಗ್ಗೆ ಇಶ್ಟು ಗಂಟೆಗೆ ಏಳಬೇಕು; ಈ ದಿಕ್ಕಿನಲ್ಲಿ ಮುಖ ಮಾಡಿ ಏಳಬೇಕು; ಎದ್ದ ನಂತರ ಆಕಳಿಕೆ ಬಂದಾಗ ಬಾಯಿ ಇಶ್ಟಗಲವೇ ತೆಗೆಯಬೇಕು; ಬೆನ್ನಿನಲ್ಲಿ ನವೆ ಬಂದ್ರೆ (ಅವನೇ ಯಾವ ಕ್ಶಣಕ್ಕೆ ಅಂತನೂ ನಿರ್ಧರಿಸಿರ್ತಾನೆ) ಎಡಗೈಯಲ್ಲಿ ಕೆರೆದುಕೊಳ್ಳಬೇಕಾ ಅತವ ಬಲಗೈಯಲ್ಲಾ; ಯಾವಾಗ ಸ್ನಾನ ಮಾಡ್ಬೇಕು, ಅದಕ್ಕೆ ಬಕೆಟ್ ಅಲ್ಲಿ ನೀರು ಹಿಡಿಯಬೇಕ, ಅತವ ಇವತ್ತು ಅಥವಾ ಬಳಸಬೇಕ, ಇಂತಹ ಯೋಚನೆಗಳಿಗೆ/ಕೆಲಸಗಳಿಗೆ ಕೊನೆಯೇ ಇಲ್ಲ. ಮಂಗನಂತೆ ಜಿಗಿದಾಡೊ, ಲಾಗಮಿಲ್ಲದೆ ಅಲೆದಾಡೋ ಮನಸ್ಸಿನ ಓಡಾಟಗಳಿಗೆ ಆ ದೇವರೆ ಕಾರಣನ? ಇಂತಹ ಪ್ರಶ್ನೆಗಳಿಗೆ ಕೆಲವರು, "ನೀನು ಏನು ಮಾಡಬೇಕು ಅನ್ನೋದನ್ನ ಮಾತ್ರ ಅವನು ನಿರ್ಧರಿಸಿರ್ತಾನೆ, ಅದು ಹೇಗೆ ಮಾಡ್ತಿಯ ಅನ್ನೋದು ನಿಂಗೆ ಬಿಟ್ಟಿದ್ದು" ಅಂತ ಹೇಳಿ ಕೈ ತೊಳೆದುಕೊಂಡದ್ದು ಇದೆ. ಅವರಿಗೆ ಆ ದೇವರು ನಾ ಹೀಗೆ ಮಾಡೋದು ಅಂತೇನಾದ್ರು ಹೇಳಿದ್ದಾನ! ಹುಟ್ಟೋ ಮುಂಚೆನೆ ನಿರ್ಧಾರ ಆಗಿರೋ ಭವಿಶ್ಯಕ್ಕೆ, ನಕ್ಶತ್ರಗಳನ್ನ ನೋಡಿ ಅಕ್ಶರ ಗುರುತಿಸಿ, ಆ ಅಕ್ಶರದಲ್ಲೇ ಹೆಸರಿಡೋದು ಯಾಕೆ? ಒಬ್ಬನಿಗೆ ಕಂಟಕ ಬರೋದು ದೇವರ ನಿಶ್ಚಯ ಆದ್ರೆ, ಅದನ್ನ ಪರಿಹಾರ ಮಾಡಿಸಿಕೊಡೊ ಅರ್ಚಕ, ದೇವರ ನಿರ್ಣಯವನ್ನೆ ಬದಲಾಯಿಸಬಹುದ? ಅರ್ಚಕ ಅಶ್ಟು ಬಲಶಾಲಿನಾ, ಅತವಾ ದೇವರ ನಿರ್ಣಯಗಳು ಅಶ್ಟು ದುರ್ಬಲನಾ?

ಇದನ್ನ ಬದಿಗಿಟ್ಟು, ಇನ್ನು ನರಕ ಸ್ವರ್ಗಗಳು, ಪಾಪ ಪುಣ್ಯ, ಪುನರ್ಜನ್ಮಗಳ ವಿಶಯಕ್ಕೆ ಬರೋಣ.

ಈ ಒಂದು ಬಗೆಯ ಯೋಚನೆಗಳನ್ನ ಮಾಡೋದಕ್ಕೆ, ನಾನು ಮೇಲೆ ಮಾಡಿದ ಯೋಚನೆಗಳನ್ನ ಸಧ್ಯಕ್ಕೆ ಬದಿಗಿಡಬೇಕು. ಅಂದ್ರೆ, ದೇವರು ಸೂತ್ರದಾರಿಯಲ್ಲ. ಅವನು ಬರಿ ಸೃಷ್ಟಿಕರ್ತ ಇರಬಹುದು, ಆನಂತರ ನಮ್ಮ ವಿಶಯಗಳಲ್ಲಿ ಅವನು ತಲೆ ಹಾಕೋದಿಲ್ಲ ಅಂತ ಒಂದು ಅನಿಸಿಕೆಯನ್ನ ತಾಳಿ, ನಾವು ಮುಂದುವರೆಯಬೇಕು. ಹೀಗೆ ಮುಂದುವರೆಯುತ್ತ ಹೋದ್ರೆ, ಹಣೆಬಹರ ಅನ್ನೋದು ಸುಳ್ಳಾಗತ್ತೆ, ಇಂಗ್ಲೀಷ್ ನ ‘ಡೆಸ್ಟಿನಿ’ ಅನ್ನೋದು ಸುಳ್ಳಾಗತ್ತೆ. ಅವನು ನಮ್ಮನ್ನ ಸೃಷ್ಟಿ ಮಾಡಿ ಬಿಟ್ಟಮೇಲೆ, ನಮ್ಮ ವಿಶಯಕ್ಕೆ ಅವನು ಬರೋದು, ನಾವು ಸತ್ತ ಮೇಲೆ ಇರಬಹದು ಅಂದುಕೊಳ್ಳಬೇಕಾಗತ್ತೆ. ಎಲ್ಲರು ಹೇಳೋ ಪಾಪ ಪುಣ್ಯಗಳ ಅಳತೆ ಮಾಡಿ ನಮ್ಮನ್ನ ಸ್ವರ್ಗಕ್ಕೋ ನರಕಕ್ಕೋ ಕಳಿಸೋ ನಿರ್ದಾರ ಮಾಡೋ ಕ್ಷಣಕ್ಕೆ ಆ ದೇವರ ಪುನರಾಗಮನ. ಅಲ್ಲಿವರೆಗು ಪಾಪ, ಒಬ್ಬ ಮನಶ್ಯನ ವಿಷಯಕ್ಕೆ ಆ ದೇವರ ಅಲ್ಪವಿರಾಮ. ಪುನರುಜನ್ಮದ ಬಗ್ಗೆ ನಂಬಿಕೆ ಇರೋ ನಮ್ಮ ದರ್ಮದಲ್ಲಿ ಈ ವಿಶಯದ ಬಗ್ಗೆ ತುಂಬ ಪುರಾಣಗಳಲ್ಲಿ ಧರ್ಮ ಗ್ರಂತಗಳಲ್ಲಿ ಪ್ರಸ್ತಾಪ ಆಗುತ್ತೆ. ಅವುಗಳಲ್ಲಿ ಕೆಲವೊಂದನ್ನ ನೋಡೋಣ.

ಪಾಪಿಗಳಿಗೆ ನರಕದಲ್ಲಿ ಆಗೋ ಶಿಕ್ಶೆ: ಪಾಪಿ ಅನಿಸಿಕೊಂಡವನು ಎಲ್ಲಿಯವರೆಗು ಪಾಪಿಯಾಗಿರ್ತಾನೆ? ಅವನಿಗೆ ಎಲ್ಲಿಯವರೆಗೆ ಶಿಕ್ಶೆ? ಆ ಶಿಕ್ಶೆಗೆ ಎಂದಾದ್ರು ಕೊನೆಯುಂಟೆ? ಕೊನೆಯಿದ್ರೆ, ಕೊನೆಯಾದಮೇಲೆ, ಅವನಿಗೆ ನೇರ ಸ್ವರ್ಗದ ಒಳಗೆ ಪ್ರವೇಶನ? ಕೊನೆಯೇ ಇಲ್ಲದ್ದಾದ್ರೆ ಅವನಿಗೆ ಶಿಕ್ಶೆ ನಿರಂತರನಾ? ಪಾಪಿಗಳು ಪಾಪ ಮಾಡುವಾಗ, ದೇವರು ಅನಿಸಿಕೊಂಡವನು ಅದನ್ನ ತಡೆಯೋ ಶಕ್ತಿ ಇದ್ದು, ಮೂಕ ಪ್ರೇಕ್ಶಕನಾಗಿ ಇರ್ತಾನ? ಎಲ್ಲ ಅವನ ಮನರಂಜನೆಗಾಗಿ ಮಾತ್ರನ? ಮನರಂಜನೆಗಾಗಿ ಸೃಶ್ಟಿಯಾದ ಪಾತ್ರಗಳಿಗೆ ಪಾಪ‌ ಪುಣ್ಯಗಳ ಅಳತೆ ಯಾಕೆ, ಮನರಂಜಿಸಿದ ಮೇಲೆ ಅವುಗಳ ಅಭಿನಯ ಮುಗಿದಮೇಲೆ, ಅವುಗಳ ಶಿಕ್ಶೆಯ ಭಾಗವಾದ್ರು ಯಾಕೆ? ಅದು ಮನರಂಜನೆಯ ಒಂದು ಭಾಗನಾ? ಮತ್ತದೆ ಪ್ರಶ್ನೆ, ಆ ಭಾಗಕ್ಕೆ ಕೊನೆ ಯಾವುದು?

ಒಂದು ಮಗು‌ ಹುಟ್ಟೋವಾಗಲೇ ಸತ್ರೆ ಅದಕ್ಕೆ ಅದರ ಹಿಂದಿನ ಜನ್ಮದ ಪಾಪವೇ ಕಾರಣನಾ, ಆ ಮಗುವಿಗೂ ‘ಕನ್ಸೆಶನ್’ ಕೊಡದೇ ಇರುವಶ್ಟರ ಮಟ್ಟಿಗಿನ ನಿರ್ದಯಿಯಾಗಿರ್ತಾನ ದೇವರು? ಇನ್ನು ಎಶ್ಟೊ ಮಕ್ಕಳು ಹೊಟ್ಟೆಗೆ ಹಿಟ್ಟಿಲ್ಲದೆ ಮೈಗಳಲ್ಲಿ ಮೂಳೆ ಕಾಣುವಶ್ಟರ ಮಟ್ಟಿಗೆ ಕುಂದಿ ಹೋಗಿರ್ತಾರೆ, ಆ ಮಗುವಿಗೆ ತನ್ನ ಹಿಂದಿನ ಜೀವನದ ಅರಿವಿರಲಿ, ಹಿಂದಿನ ದಿನದ ನೆನಪುಗಳೆ ಇರೋದು ಕಡಿಮೆ, ಅವರಿಗೆ ಆ ರೀತಿ ಶಿಕ್ಶೆ ಕೊಡೋ ಮಟ್ಟಿಗೆ ಇಳೀತಾನ ಆ ದೇವರು, ಕೊಟ್ಟು ಅವರಿಗೆ ಏನನ್ನ ತಿಳಿಸೋದಕ್ಕೆ ಹೊರಟಿರ್ತಾನೆ?

ಕೆಲವೊಮ್ಮೆ ‌ಹೀಗೆ ಮನಸ್ಸಿನಲ್ಲಿ ಅದೇನೇನೋ ಪ್ರಶ್ನೆಗಳು ಹುಟ್ಟತ್ತೆ, ಉತ್ತರ ಸಿಗದ ಪ್ರಶ್ನೆಗಳು. ಆಗ ದೇವರು ಇದ್ದಾನೆ ಅಂತ ಅವನನ್ನೆ ನಂಬಿ ಬದುಕೋದಕ್ಕಿಂತ, ಮನುಶ್ಯತ್ವದ ನೆರಳಲ್ಲಿ ಬದುಕಿ, ಕಶ್ಟದಲ್ಲಿದ್ದವರಿಗೆ ಹೆಗಲು ಕೊಡೋದ್ರಲ್ಲೆ ದೇವರು ಕಾಣೋದು ಉತ್ತಮ ಅನಿಸತ್ತೆ. ಕಾಣಿಸದ ದೇವರಿಗೆ ಕೈ ಮುಗಿದು ಎಲ್ಲಕ್ಕೂ ಅವನೇ ಕಾರಣ ಅಂತ ಸುಮ್ನೆ ಕೂರೋ ಬದಲು ನಮ್ಮ ಜೀವನದ ಬಂಡಿ ದಾರಿ ತಪ್ಪಿದಾಗ, ಸರಿ ಪಡಿಸಿಕೊಳ್ಳೋದಕ್ಕೆ ನಾವೆ ಕಶ್ಟ ಬಿದ್ರೆ ಸಾರ್ತಕತೆ, ನೆಮ್ಮದಿಯಾದ್ರು ಮನಸ್ಸಿನಲ್ಲಿ ಮೂಡಬಹುದು.

- ಚೇತನ್