ಉರಿಯುವ ಬೆಂಕಿ ನೂರು ಪ್ರತಿಶತ ಪರಿಶುದ್ಧ ಎಂದು ಕೆಲವರು ಹೇಳಿದರೆ, ಆ ಬೆಂಕಿಯಿಂದ ಕೂಡ ಕಪ್ಪನೆ ಹೊಗೆ ಬರುತ್ತದೆ, ಆದ್ದರಿಂದ ಅದನ್ನು ಪರಿಶುದ್ದ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಕೆಲವರು ವಾದಿಸುತ್ತಾರೆ. ವ್ಯಕ್ತಿ ಬದಲಾದಂತೆ, ದ್ರಶ್ಟಿಕೋನ ಬದಲಾದಂತೆ ವಸ್ತು ಅಥಾವ ವಿಷಯ ಅಥಾವ ಮನುಷ್ಯ ಅವನಿಗೆ ಕೊಡುವ ಅನುಭವ ಕೂಡ ಬದಲಾಗುತ್ತ ಹೋದಂತೆ ಅನಿಸುತ್ತದೆ. ನಮ್ಗೆ ಒಳ್ಳೇದು ಮಾಡಿರುವ ವಿಷಯವನ್ನು ನಾವು ಒಳ್ಳೆಯದು ಎನ್ನುವ ಹೊತ್ತಿಗೆ, ಅದರಿಂದ ಕೆಟ್ಟದ್ದು ಆದವನು ಅದು ಕೆಟ್ಟದ್ದು ಎಂದು ಕೂಗುತ್ತಾನೆ. ನಿಜವಾಗಲೂ ಆ ವಿಷಯ ಒಳ್ಳೇದೊ ಕೆಟ್ಟದ್ದೋ ಒಟ್ಟಿನಲ್ಲಿ ಅದು ನಮಗೆ ಒಳ್ಳೇದು ಮಾಡಬೇಕು, ಅದರಿಂದ ನಮಗೆ ಲಾಭ ಇರಬೇಕು. ಇಲ್ಲಾ ಅಂದ್ರೆ ಅದು ಕೆಟ್ಟದ್ದೆ. ಅದನ್ನು ಸಮರ್ಥಿಸಿಕೊಳ್ಳಲು ಸಾವಿರ ಕಾರಣಗಳನ್ನು ಮನಸ್ಸು ಹುಡುಕುತ್ತಿರುತ್ತದೆ. ಎಲ್ಲರಿಗೂ ಈ ದ್ವಂಧ್ವ ನೀತಿ ಇದ್ದೇ ಇರುತ್ತದೆ.

ಯಾರೊ ಒಬ್ಬ ಸಿಡಿಲು ಹೊಡೆದು ಸತ್ತರೂ, ಇಲ್ಲಾ ಇನ್ನೊಬ್ಬ ಯಾರೊ ಲೈನ್ ಮ್ಯಾನ್ ವಿದ್ಯುತ್ ತಂತಿಯ ಮೇಲೆ ಶಾಕ್ ಹೊಡೆದು ಸತ್ತ ಅಂದಾಗ ಮನಸ್ಸು ಸ್ವಲ್ಪ ಬೇಸರಿಸಿಕೊಳ್ಳಬಹುದು, ಹಾಗಂತ ಮನೆಯಲ್ಲಿ ಸೊಳ್ಳೆ ಬ್ಯಾಟ್ ನಲ್ಲಿ ಸೊಳ್ಳೆ ಹೊಡೆಯೋದು ಬಿಟ್ಟು ಆದರ ಮೂತಿಗೆ ಮುತ್ತು ಕೊಡೋಕೆ ಆಗುತ್ತ? ದಾರಿಯಲ್ಲಿ ಎಲ್ಲಾದರು ಒಂದು ಹಸು ಸಿಕ್ಕರೆ ಆದರ ಬಾಲ , ಮುಖ, ಕೊಂಬು, ಕಾಲು ಎಲ್ಲಾ ಮುಟ್ಟಿ ಆಶೀರ್ವಾದ ತೆಗೆದುಕೊಳ್ಳುವುದನ್ನ ನೀವು ನೋಡಿರಬಹುದು. ಆದರೆ ಅದೇ ಹಸು ಮಳೆ ಬಂದ ಸಮಯದಲ್ಲಿ ಆಶ್ರಯಕ್ಕಾಗಿ ಮನೆಯ ಅಂಗಳಕ್ಕೆ ಬಂದರೆ ಸುಮ್ಮನೇ ಬಿಡುತ್ತಾರ? ಎಲ್ಲಿ ಗಬ್ಬು ಎಬ್ಬಿಸಿಬಿಡುತ್ತೊ ಅಂತ ಹಿಂದೆ ಮುಂದೆ ನೋಡದೆ ಓಡಿಸಿಬಿಡುತ್ತಾರೆ. ಮನೆಯಲ್ಲಿ ಮುದ್ದಿನ ನಾಯಿಗೆ ಮನೆಯೆಲ್ಲ ಓಡಾಡೊ, ಹಾಸಿಗೆಯ ಮೇಲೆ ಬಿದ್ದು ಹೊರಳಾಡೊ ಸ್ವಾತಂತ್ರ ಇದ್ದರೂ, ಅದಕ್ಕೆ ಯಾವುದಾದರು ಗುಣ ಮಾಡಲು ಆಗದೇ ಇರುವ ಕಾಯಿಲೆ ಬಂದರೆ ಮುಲಾಜಿಲ್ಲದೆ ಅದನ್ನು ಮನೆಯಿಂದ ಹೊರ ಹಾಕುತ್ತಾರೆ. ಯಾವುದು ನಮಗೆ ಎಲ್ಲಿಯವರೆಗೂ ಸರಿ ಇರುತ್ತದೆಯೊ ಅಲ್ಲಿ ವರೆಗೂ ಅದು ನಮಗೆ ಉತ್ತಮವೆ. ನಮ್ಗೆ ಸರಿ ಇಲ್ಲದಿರುವುದೆಲ್ಲಾ ಕೆಟ್ಟದ್ದೆ. ಇದಕ್ಕೆ ಯಾರೂ ಹೊರತಾಗಿಲ್ಲ.

ಮುಂಚೆ ಎಲ್ಲಾ ಅಂಬಾನಿಯನ್ನ "ಅವನೇನ್ರಿ ಮಹಾ, ಅಪ್ಪನ ದುಡ್ಡಲ್ಲಿ ಮೇಲೆ ಬಂದಿದ್ದಾನೆ" ಅಂತ ಬೈತಾ ಇದ್ದವರೆಲ್ಲ ಅವನು ಬಿಟ್ಟಿ ಕರೆ, ಡಾಟ ಕೊಟ್ಟ ತಕ್ಷಣ ಅವನನ್ನು ಸ್ವಂತ ಸೋದರ ಮಾವನ ಥರ ಹೊಗೊಳೊಕೆ ಶುರು ಮಾಡಿ ಬಿಟ್ಟರು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ "ರೀ ಅಂಬಾನಿ ನಮ್ಮ ದೇಶದವನು, ಜಿಯೋ ತೆಗೆದುಕೊಂಡರೆ ದುಡ್ಡು ನಮ್ಮ ದೇಶದಲ್ಲೇ ಉಳಿಯುತ್ತೆ"ಅಂತ ಶುರು ಇಟ್ಟುಕೊಂಡರು. ಹಾಗಾದ್ರೆ ಆದಿತ್ಯ ಬಿರ್ಲಾನ ಐಡಿಯಾ ಭಾರತದ್ದು ಅಲ್ವ ಅಂತ ಕೇಳಿದರೆ, ಐಡಿಯಾ ರೇಟ್ ಜಾಸ್ತಿ ಅಲ ಮರ್ರೆ ಅಂತ ಸುಮ್ಮನಾಗಿಬಿಟ್ಟರು. ತೀರ ಇತ್ತೀಚಿಗೆ ಎಲ್ಲಾ ಮೊಬೈಲ್ ಕಂಪೆನಿಯವರು ಅವರ ಕರೆ, ಡಾಟಗಳ ಬೆಲೆ ಕಡಿಮೆ ಮಾಡಿದ ಕೂಡಲೇ ಹೆಚ್ಚಿನವರು ತಮ್ಮ ಅಂಬಾನಿಯ ಮೇಲಿನ ಪ್ರೀತಿ ಕಡಿಮೆ ಮಾಡಿ ಮೊದಲಿನ ನಂಬರ್ ಗೆ ರೀಚಾರ್ಚ್ ಮಾಡಿದ್ರು. "ಜಿಯೋ ಬಪ್ಪುಕ್ಕೋಸ್ಕರ ಮಿಕ್ಕ್ ಮೋಬೈಲ್ ಕಂಪೆನಿಯವರೆಲ್ಲಾ ರೇಟ್ ಕಡಿಮೆ ಮಾಡ್ರ್ ಮರ್ರೆ" ಎಂದು ಅದೇ ಮೂವತ್ತೆರೆಡು ಹಲ್ಲು ಬಿಟ್ಟರು. ಎದುರಿಗೆ ನಮ್ಮದು ಜಾತ್ಯಾತೀತ ದೇಶವೇ, ಹಾಗಂತ ಜಾತಿ ಗಣತಿ ಮಾಡದೆ ಬಿಡೂಕೆ ಆಗುತ್ತ? ಪಂತಂಜಲಿ ಉಪ್ಪು ಟಾಟಾ ಉಪ್ಪಿಗಿಂತ ಕಡಿಮೆ ಬೆಲೆ. ಅದಕ್ಕೆ ರಾಮದೇವ್ ನಮಗೆ ಇನ್ನೂ ಹತ್ತಿರ. ಸದ್ಯಕ್ಕೆ ಪಂತಂಜಲಿ ಉಪ್ಪು ದೇಶದ ಉಪ್ಪು!!!

ಎಲ್ಲಾ ವಿಷಯದಲ್ಲೂ ನಮ್ಮ ಸ್ವಾರ್ಥ ಎನ್ನೋದು ಅಡಗಿದೆ. ಅದನ್ನು ನಾವು ಒಪ್ಪಿ ಕೊಳ್ಳೋದಿಲ್ಲ ಅಷ್ಟೆ. ತೀರವನ್ನು ಬಂದು ಮುಟ್ಟಿ ಹೋಗುವ ಸಮುದ್ರದ ತೆರೆಗಳೂ ಚೆನ್ನಾಗಿ ಕಾಣಿಸ್ತವೆ, ಸುನಾಮಿ ಎಂಬ ದೈತ್ಯ ಬಂದು ಅಪ್ಪಳಿಸುವವರೆಗು. ಮೆಲ್ಲನೆ ಬೀಸುವ ಗಾಳಿ ಮೆದುವಾಗಿರುತ್ತೆ, ತನ್ನ ಬಲ ಜಾಸ್ತಿ ಮಾಡಿ ನಮ್ಮನ್ನು ತಲೆ ಕೆಳಗಾಗಿ ಮಾಡುವವರೆಗು. ಬೇರೆ ಮನೆಯಲ್ಲಾದ ಸಾವು ಏನೂ ಅನ್ನೀಸುವುದಿಲ್ಲ, ನಮ್ಮ ಮನೆಯಲ್ಲಿ ಒಂದು ಸಾವು ಆಗುವವರೆಗು...

- ದೀಪಕ್ ಬಸ್ರೂರು