ಪ್ರಕೃತಿಯಲ್ಲಿ ಯಾವಾಗಲೂ ಶಕ್ತಿಯಿದ್ದವರದ್ದೇ ಮೇಲುಗೈ ಹಾಗೂ ಬದುಕಿ ಜೀವನ ಮುಂದುವರಿಸುವ ಅರ್ಹತೆ ಅಂತಾಗುತ್ತದೆ. ಎಣಿಸಲಾಗದ ಅದೆಷ್ಟೋ ಯುಗಗಳು ಹೀಗೆ ಕಳೆದಿವೆ. ಆದರೆ ಕಾಲಾಂತರದಲ್ಲಿ ಮನುಷ್ಯತ್ವದ ಜನನವಾದ ನಂತರ ಈ ಪ್ರಕೃತಿಯ ನಿಯಮದಲ್ಲಿ ಸ್ವಲ್ಪ ಬದಲಾವಣೆ ಬಂದಂತಿದೆ. ಮನುಷ್ಯನು ಇತರ ಪ್ರಾಣಿ, ಪಕ್ಷಿ, ಕೀಟಗಳಿಗಿಂತ ಶ್ಯಕ್ತನಲ್ಲವಾದರೂ ಇತರೆ ಪ್ರಾಣಿಗಳು ಅಳಿದರೂ ಮಾನವನು ಬದುಕುತ್ತಾ ಇರುವನು. ಈಗ ಮನುಷ್ಯನ ಯೋಚನಾ ಶಕ್ತಿಯೇ ಅವನ ದೈಹಿಕ ಶಕ್ತಿಯಾಗಿದೆ. ಪ್ರಕೃತಿಯಲ್ಲಿ ಬದುಕೋದ ಕಲಿಯುತ್ತಿರುವಾಗ ಇತರ ಪ್ರಾಣಿಗಳ ದಯೆಯ ಮೇಲೆ ಅವಲಂಬಿತನಾಗಿದ್ದವ ಇಂದು ಅದೇ ಪ್ರಾಣಿಗಳು ಬದುಕೋಕೆ 'ಪ್ರಾಣಿ ದಯಾ ಸಂಘ' ಗಳ ನೆರವು ಬೇಕಾಗಿದೆ. ಮನುಷ್ಯ, ಪ್ರಾಣಿ, ಪಕ್ಷಿ, ಕೀಟಗಳೆಲ್ಲ ಒಂದೇ ವಾತಾವರಣದಲ್ಲಿ ಸ್ವಚ್ಛಂದವಾಗಿ ಊಟ ಮಾಡಿಕೊಂಡು ಓಡಾಡುತ್ತಿದ್ದ ಕಾಲ ಕಳೆದು, ಈಗ ಪ್ರಾಣಿ, ಪಕ್ಷಿ, ಕೀಟಗಳನ್ನು ಕಾಪಾಡಲು ಮನುಷ್ಯನೇ ನಿರ್ಮಿಸಿದ ಮೃಗಾಲಯಗಳಲ್ಲೋ, ವನ್ಯಧಾಮಗಳಲ್ಲೋ ಇರಿಸಬೇಕಾಗಿರುವ ಕಾಲ ಬಂದಿದೆ!

ಸಮಾಜ ಹಾಗೂ ಸಂಸ್ಕೃತಿಯ ಉಗಮವಾದಾಗ ಮನುಷ್ಯನು ತನ್ನ ಅವಶ್ಯಕತೆಗಳಿಗೆ ಪ್ರಾಣಿ-ಪಕ್ಷಿಗಳ ಸಾಕುವುದ ಕಲಿತ, ಅವುಗಳೊಂದಿಗೆ ಒಡನಾಟವನ್ನು ಬೆಳೆಸಿಕೊಂಡು ತನ್ನ ನಿರ್ಮಿತ ಸಮಾಜದಲ್ಲಿ ಅವುಗಳೊಂದಿಗೆ ಅನ್ಯೋನ್ಯವಾಗಿ ಬದುಕುತ್ತಿದ್ದ. ಸಾಕು ಪ್ರಾಣಿಗಳಿಂದ ತನ್ನ ಎಷ್ಟೋ ಅವಶ್ಯಕತೆಗಳು ಪೂರೈಕೆಯಾಗುತ್ತಿದ್ದವು. ಈ ರೀತಿಯಲ್ಲಿ ಮನುಷ್ಯ ಮತ್ತು ಪ್ರಾಣಿ ಒಟ್ಟಿಗೆ ಬಾಳುವುದ ಕಲಿತಿದ್ದರು. ಆದರೆ ನಿಧಾನವಾಗಿ ಮನುಷ್ಯ ಕಟ್ಟಿದ ಸಮಾಜವು ಸರಳತೆಯನ್ನು ಕಳೆದುಕೊಳ್ಳುತ್ತಾ ಬಂದಿತು. ಹಳ್ಳಿಗಳು ಎಂಬ ಸಂಸ್ಕೃತಿಯು ನಗರಗಳೆಂಬ ಸಂಕೀರ್ಣತೆಯತ್ತ ಮುಖ ಮಾಡಿದವು. ಕೃಷಿ, ದನ-ಕರು, ಆಡು, ಕುರಿ, ಕೋಳಿ ಹೀಗೆ ಅನೇಕ ಸಾಕು ಪ್ರಾಣಿಗಳ ನಡುವಿನ ಜೀವನ ಮರೆಯಾಗುತ್ತಾ ಯಾಂತ್ರಿಕತೆಯ ಜೀವನದೆಡೆಗೆ, ಧನಪ್ರಾಮುಖ್ಯತೆಯ ಸಮಾಜಡೆದೆಗೆ ಜೀವನ ಸಾಗಿತು.

ಹೊಸ ಸಮಾಜದ, ಹೊಸ ನಗರಗಳಲ್ಲಿ ಪ್ರಾಣಿಗಳ ನೇರ ಅವಶ್ಯಕತೆ, ಪ್ರಾಣಿಗಳ ಪ್ರಾಮುಖ್ಯತೆ ಕಡಿಮೆಯಾಯಿತು. ಜನರು ಮನೆಗಳಲ್ಲಿ ಹಸು, ಎಮ್ಮೆಗಳ ಸಾಕುವುದ ಬಿಟ್ಟರು. ಅತಿಯಾದ ಕಟ್ಟಡ ನಿರ್ಮಾಣದಿಂದ ಗೋಮಾಳದ ಜಾಗಗಳು ಮರೆಯಾದವು. ದನ-ಕರುಗಳಿಗೆ ಮೇವು ಸಿಗುವ/ ಬೆಳೆಯುವ ಜಾಗವೂ ಮರೆಯಾಗಿ ಹೊಸದಾಗಿ ಹಸು-ಎಮ್ಮೆ ಕೊಂಡು ಸಾಕಬೇಕು ಎಂದು ಮನಸ್ಸು ಮಾಡುವವರಿಗೂ ನಿರಾಶೆಯಾಗಿ ಅವರ ಯೋಜನೆಯ ಕೈ ಬಿಡುವಂತಾಯಿತು. ನಾಗರೀಕತೆಯ ಆರಂಭದಲ್ಲಿ ಇದ್ದ ಮನುಷ್ಯ-ಪ್ರಾಣಿ ನಡುವಿನ ಬಾಂಧವ್ಯ ಮುಂದುವರಿಸಲಿಕ್ಕೆ ಇದ್ದ ಕೊನೆಯ ಅವಕಾಶವೂ ಕಳೆದುಹೋಯಿತು. ಇದರ ಪಳೆಯುಳಿಕೆ ಎಂಬಂತೆ ಈಗ ನಾವು ನಗರಗಳಲ್ಲಿ ಪ್ರಾಣಿ-ಪಕ್ಷಿಗಳು ಕಷ್ಟ ಪಡುತ್ತಿರುವುದನ್ನು ನೋಡುತ್ತಿದ್ದೇವೆ.

ಹೀಗೆ ಒಂದು ದಿನ ಸಂಜೆ ಹೊತ್ತಿನಲ್ಲಿ ನಾನು ಮೈಸೂರಿನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಹಸುವಿನೊಂದಿಗೆ ರಸ್ತೆಯನ್ನು ದಾಟಲು ನಿಂತಿದ್ದನು. ೧೦ ನಿಮಿಷ ಕಳೆದರೂ ಸಹ ರಸ್ತೆಯು ಬಿಡುವಾಗಲಿಲ್ಲ. ಸರಣಿಯಲ್ಲಿ ಬಿಡುವು ನೀಡದಂತೆ ವಾಹನಗಳು ಒಂದರ ಹಿಂದೆ ಒಂದು ಬರುತ್ತಲೇ ಇದ್ದವು. ಕೇವಲ ೮೦ ಅಡಿಯಗಲದ ರಸ್ತೆಯನ್ನು ದಾಟಲು ಆ ದಿನ ಆತನಿಗೆ ಮತ್ತು ಆ ಹಸುವಿಗೆ ೨೦ ನಿಮಿಷವಾಯಿತು. ಆ ಹೊತ್ತಿಗೆ ಆ ವ್ಯಕ್ತಿ ಇಲ್ಲದೆ ಆ ಹಸು ತಾನಾಗೆ ರಸ್ತೆಯನ್ನು ದಾಟಬೇಕಿದ್ದರೆ ಆ ಪ್ರಾಣಿಗೆ ಇನ್ನೆಷ್ಟು ಸಮಯ ಹಿಡಿಯಬದುಹುದಿತ್ತು ಎಂದು ಊಹೆ ಮಾಡುವುದೂ ಕಷ್ಟದ ಸಂಗತಿ. ಹೆದ್ದಾರಿಯಾದ ಆ ರಸ್ತೆಯಲ್ಲಿ ಪ್ರತಿಯೊಂದು ಗಾಡಿಯೂ ಹುಚ್ಚೆದ್ದ ಕುದುರೆಯಂತೆ ಉಸಿರು ಬಿಗಿ ಹಿಡಿದು ಓಡುತ್ತಿದ್ದವು, ತಮ್ಮನ್ನು ಬಿಟ್ಟು ಬೇರಾರಿಗೂ ಅಲ್ಲಿ ಸ್ಥಾನವಿರಲಿಲ್ಲ. ನಗರವಲ್ಲದ ಯಾವುದೋ ಒಂದು ಹಳ್ಳಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಪ್ರಾಣಿಗಳಿಗೆ ಅಷ್ಟು ಕಷ್ಟವಾಗುತ್ತಿದ್ದರೆ, ಇನ್ನೂ ಬೆಂಗಳೂರಿನಂಥಹ ನಗರದಲ್ಲಿ ಪ್ರಾಣಿಗಳ ಅವಸ್ಥೆಯು ಹೇಗಿರಬಹುದೆಂದು ಯೋಚಿಸಬೇಕು.

ಹಳ್ಳಿಗಳ ಕಡೆ ರಾಸುಗಳ ಸಾಕುವ ಜನ ಮುಂಜಾನೆ ಅವುಗಳನ್ನು ಹೋಡೆದುಕೊಂಡು ಹೋಗಿ ಮೇವು ಸಿಕ್ಕುವ ಜಾಗಗಳಲ್ಲಿ ಬಿಟ್ಟು ತಮ್ಮ ಕೆಲಸಕ್ಕೆ ನಡೆಯುತ್ತಾರೆ. ಸಂಜೆಯ ಬಂಗಾರದ ಸೂರ್ಯ ಭೂಮಿಯ ಹೊಳೆಯುವಂತೆ ಮಾಡುವ ಸಮಯಕ್ಕೆ ರಾಸುಗಳು ತಾವಾಗೆ ಹಿಂಡು-ಹಿಂಡಾಗಿ ತಮ್ಮ ಮನೆಗಳೆಡೆಗೆ ಬರುತ್ತವೆ. ಈ ಗೋಧೂಳಿಯ ಸಮಯದಲ್ಲಿ ದನ-ಕರುಗಳು ಹಿಂದಿರುಗುವುದರ ಜೊತೆಗೆ ತಮ್ಮ ಊರು-ಕೇರಿಗಳಿಗೆ ಹೊಸ ಚೈತನ್ಯವನ್ನು ಅನುದಿನವೂ ತರುತ್ತವೆ. ಬೆಂಗಳೂರಿನಂಥಹ ದೊಡ್ಡ ಊರಲ್ಲಿ ಈ ಚಿತ್ರವೂ ಈಗ ಬಹಳವಾಗಿಯೇ ಬದಲಾಗಿದೆ.

ಗೋಧೂಳಿಯ ಸಮಯವು ಕೇವಲ ಬಂಗಾರಮಯ ವರ್ಣದ್ದಾಗಿ ಉಳಿದಿಲ್ಲ, ಸೂರ್ಯಾಸ್ತಮಾನವು ತಂಪಗಿನ ಕೆಂಪಾಗಿ ಉಳಿಯುತ್ತಿಲ್ಲ. ಮೇಯಲು ಹೋದ ರಾಸುಗಳು ಗೋಧೂಳಿಯ ಸಮಯದಲ್ಲಿ ಸರಾಗವಾಗಿ ಹಿಂದಿರುಗಲು ಜನರು ರಸ್ತೆಗಳಲ್ಲಿ ಜಾಗವನ್ನು ಉಳಿಸಿಲ್ಲ. ಒಂದು ಸಂಜೆ ನಾನು ಕೆಲಸದಿಂದ ಮರಳುವಾಗ ಬಸ್ಸಿನಿಂದ ಇಣುಕಿ ಹೊರನೋಡುತ್ತಿದ್ದೆ. ರಸ್ತೆಯ ಆಚೆ ಬದಿಯಲ್ಲಿ ಒಂದೆರೆಡು ಹಸುಗಳು ನಿಂತು ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದವು. ಆದರೆ ಕೆಲಸದಿಂದ ಮನೆಗೆ ಬೇಗನೇ ಹಿಂದಿರುಗಬೇಕೆಂದು ವೇಗವಾಗಿ ಎಡಬಿಡದೆ ಸಾಗುತ್ತಿದ್ದ ಜನಗಳ ನಡುವೆ ಗೇರು, ಆಕ್ಸಲರೇಟರ್, ಹಾರನ್ ಇರದ ಆ ಪ್ರಾಣಿಗಳಿಗೆಲ್ಲಿಯ ಅವಕಾಶ? ಹೇಗೋ ಆ ಗಾಡಿಗಳ ನಡುವೆಯೇ ನುಗ್ಗಿ ಪ್ರಾಣವ ಪಣವಿಟ್ಟು ರಸ್ತೆಯನ್ನು ದಾಟಲು ಹೋದರೆ ಮನುಷ್ಯರಿಗೇ ದಾಟಲು ತುಸು ತ್ರಾಸಾಗುವಂಥಹ ಡಿವೈಡರ್ ಗಳು ಅಡ್ಡವಾಗುತ್ತವೆ. ಸುಮಾರು ೨ ಅಡಿವರೆಗೆ ಇರುವಂಥಹ ರಸ್ತೆಯ ದಿವೈಡರ್ಗಳ ಕಟ್ಟುವಾಗ ನಾವು ಒಂದು ಬಾರಿಯೂ ಯಾವೊಂದು ಪ್ರಾಣಿಯಾದರೂ ದಾಟಬಹುದಾ? ಎಂಬ ಯೋಚನೆ ನಮ್ಮ ಮನದಲ್ಲಿ ತಂದುಕೊಳ್ಳಲಿಲ್ಲ.

ಮನುಷ್ಯನ ಪ್ರಕೃತಿಯಲ್ಲಿನ ಅತಿಕ್ರಮಣದ ೨ ಅಡಿಯ ಉದಾಹರಣೆ ಇದು. ಸಾವಿರಾರು ಎಕ್ಕರೆಯ ಅತಿಕ್ರಮಣ ನಡೆದ ಊರುಗಳಲ್ಲಿ ಆಗಾಗ ಕಾಡು ಪ್ರಾಣಿ, ಹುಳ ಎಲ್ಲಾದರೂ ಊರೊಳಗೆ ಕಾಲಿಟ್ಟರೆ ದೇಶಕ್ಕೆ ಕೇಳಿಸುವಂತೆ ಬೊಬ್ಬೆ ಹೊಡೆಯೋದು, 'ನಮ್ಮ ಜಾಗಗಳಿಗೆ ಪ್ರಾಣಿಗಳು ಬರುತ್ತಿವೆ' ಎನ್ನುವುದು. ಆದರೆ ವಾಸ್ತವದಲ್ಲಿ ನಾವುಗಳು ಹಿಂದಿನಿಂದಲೂ ಇದ್ದ ಕಾಡು, ನದಿ, ಸಮುದ್ರಗಳ ಜಾಗವನ್ನು ಅತಿಕ್ರಮಿಸಿಕೊಂಡಿದ್ದೇವೆ. ಪ್ರಗತಿಶೀಲ ಕೆಲಸಗಳು ಎಂಬ ಹೆಸರಿನಡಿಯಲ್ಲಿ ಪ್ರಕೃತಿಯ ದಯೆಯಿಂದ ಬದುಕುತ್ತಿರುವ ನಾವು ನಮ್ಮ ಬುಡಕ್ಕೇ ಕೊಡಲಿ ಹಾಕಿಕೊಳ್ಳುತ್ತಾ ಮುಂದುವರೆಯುತ್ತಿದ್ದೇವೆ.

ಮನುಷ್ಯ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳೆಲ್ಲ ಸೌಹಾರ್ದತೆಯಿಂದ ಇರಬೇಕಾಗಿದ್ದ ಪರಿಸರದಲ್ಲಿ ಮನುಷ್ಯರಾದ ನಾವುಗಳು ನಮ್ಮ ವಿಕೃತ ಬುದ್ಧಿಯ ಬಳಕೆಯಿಂದ ಇತರ ಪ್ರಾಣಿಗಳ ಲೆಕ್ಕಿಸದೆ ಬಾಳುತ್ತಿದ್ದೇವೆ. ಯಾವ ಪರಿಸರದಲ್ಲಿ ಪ್ರಾಣಿಗಳು ನೆಮ್ಮದಿಯಾಗಿರಲು ಸಾಧ್ಯವಿಲ್ಲವೊ, ಅಂಥಹ ಪರಿಸರದಲ್ಲಿ ಮನುಷ್ಯನೂ ಸಹ ಶಾಂತಿಯಿಂದ ಬಾಳಲಾರ ಎಂಬುದಕ್ಕೆ ಇಂದಿನ ದೊಡ್ಡ ನಗರಗಳೇ ಜೀವಂತ ಸಾಕ್ಷಿಯಾಗಿವೆ.

-ಆದರ್ಶ