ತುಂಬಾ ದೊಡ್ಡ ಸಾಧನೆ ಮಾಡಬೇಕಾ ಅಥವಾ ಏನೂ ಮಾಡದೇ ಆರಾಮಾಗಿ ಇರಬೇಕಾ?

ದೊಡ್ಡ ಸಾಧನೆ ಎಂದರೆ ಎಷ್ಟು ದೊಡ್ಡ ಸಾಧನೆ. ಎಲ್ಲಿಯವರೆಗೆ ಸಾಧಿಸಬೇಕು? ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಾಂತಿಯಿಂದ ಬದುಕಬೇಕು ಎಂದರೆ ಎಲ್ಲಿಯವರೆಗೆ ಸುಮ್ಮನಿರಬೇಕು, ಎಷ್ಟೂ ಅಂತ ಸುಮ್ಮನಿರಬಹುದು?

ಸಾಧನೆ ಮಾಡಲು ಹೋದರೆ ಎಲ್ಲರಿಗೂ ಸಾಧಿಸಲು ಆಗುತ್ತದಾ, ಅಥವಾ ಸುಮ್ಮನೇ ಇದ್ದುಬಿಡುವೆವು ಎನ್ನುವವರು ಆಸೆ ಬಿಟ್ಟು ಸುಮ್ಮನಿರುತ್ತಾರಾ?

ಇವೆಲ್ಲ ಪ್ರಶ್ನೆಗಳು ತಲೆಯಲ್ಲಿ ಕೊರೆಯಲಾರಂಭಿಸಿದಾಗ ಜೀವನ ಇನ್ನೂ ಆರಂಭದ ಮೆಟ್ಟಿಲಲ್ಲಿ ನಿಂತಿತ್ತು.

ಕೆಲವರು ಹೇಳುವ ಹಾಗೆ ಸಾಯುವ ಮುನ್ನ ಅಂದುಕೊಂಡದ್ದನ್ನು ಸಾಧಿಸಬೇಕೋ ಅಥವಾ ಇನ್ನು ಕೆಲವರು ಹೇಳುವ ಹಾಗೆ ನಮ್ಮ ಬಳಿ ಇರುವುದರಲ್ಲೇ ಖುಷಿಯಾಗಿರಬೇಕೋ ಎಂಬ ಯೋಚನೆ ತಲೆಗೆ ಹೊಕ್ಕಿತ್ತು. ಉತ್ತರ ಇನ್ನು ಎಲ್ಲೋ ಇತ್ತು!

ಜೀವನದಲ್ಲಿ ಹೆಚ್ಚು ಆಸೆ ಇಲ್ಲದೆ, ಆಸೆಗಳ ಇಟ್ಟುಕೊಳ್ಳದೆ, ನಮಗೆ ಸಿಕ್ಕಿದ್ದರಲ್ಲಿ ತೃಪ್ತಿಪಟ್ಟುಕೊಳ್ಳುವುದನ್ನು ಕಲಿತು ಬಾಳುವುದು ಒಂದು ದಾರಿ. ಈ ದಾರಿ ಹಿಡಿದವರಿಗೆ ಸಣ್ಣದರಲ್ಲೂ ಸ್ವರ್ಗಾನಂದ ಕಾಣುತ್ತದೆ. ಇವರಿಗೆ ಅಲ್ಪತೃಪ್ತಿಯೇ ಜೀವನದ ಸಧನೆಯಾಗಿರುತ್ತದೆ. ಅದನ್ನ ಬಿಟ್ಟು ಆಸೆ ಪಟ್ಟು ಇತರೆ ಯೋಚಿಸಿದರೆ ಆ ವ್ಯಕ್ತಿಯ ನೆಮ್ಮದಿ ಹಾಳು. ಇನ್ನು ಸಾಯುವ ಮುನ್ನ ಸಾಧಿಸಿ ಸಾಯಬೇಕು ಎಂದಂದುಕೊಂಡವರಿಗೆ ಅಲ್ಪಕ್ಕೆ ತೃಪ್ತಿಪಟ್ಟುಕೊಳ್ಳಲಾಗುವುದಿಲ್ಲ. ಅಂಥವರು ಅಲ್ಪಕ್ಕೆ ತೃಪ್ತಿಪಟ್ಟುಕೊಂಡರೆ ಅವರ ಸಾಧನೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಅಂಥವರು ಅಗಾಧ ಸಾಧನೆಯಲ್ಲಿ ಮಾತ್ರ ತೃಪ್ತಿಯನ್ನು ಕಂಡುಕೊಳ್ಳಲು ಸಾಧ್ಯ.

ಇದ್ದ ಎರಡೇ ಎರಡು ದಾರಿಯ ಅರಿವಾಗಿ ಆರಂಭದ ಹೆಜ್ಜೆಯನು ಇಟ್ಟವಗೆ ತಾನು ಪಯಣಿಸಬೇಕಾದ ದಾರಿಯು ಗೋಚರಿಸುತ್ತಿತ್ತು!

-ಆದರ್ಶ