ಮೊನ್ನೆ ಹೀಗೆ ಒಂದು ಸಣ್ಣ ಮಟ್ಟದ ಕಂಪನಿಯ ಅದಕ್ಕಿಂತ ದೊಡ್ಡ ಮಟ್ಟದ ಕಂಪನಿಯು ಸಾಕಷ್ಟು ಹಣ ನೀಡಿ ಕೊಂಡಿತ್ತು, ಕೊಂಡದ್ದಕ್ಕೆ ದೊಡ್ಡ ಕಂಪನಿಯು ಸುಮ್ಮನಿರಲಾದೀತೆ? ತನ್ನ ಶಕ್ತಿ ಪ್ರದರ್ಶನವನ್ನು ತನ್ನ ಅಂತಸ್ತಿನ ಮಟ್ಟಕ್ಕೆ ನಡೆಸಿತು! ಸಣ್ಣ ಕಂಪನಿಯ ಹೆಸರನ್ನ ಇತಿಹಾಸದ ಪುಟಗಳಿಂದ ಅಳಿಸೋಕೆ ಬೇಕಾದ ಎಲ್ಲ ಭರ್ಜರಿ ತಯಾರಿಯನ್ನು ನಡೆಸಿ, ಸಣ್ಣ ಕಂಪನಿಯ ಹೊಸಕಿದ ಸಂತಸಕ್ಕೆ ತನ್ನ ಕಂಪನಿ ಹಾಗು ತನ್ನ ಹೊಸದಾಗಿ ಕೊಂಡ ಸಣ್ಣ ಕಂಪನಿ, ಎಲ್ಲ ಜನರ ಕರೆದು ಒಂದು ಸಮಾರಂಭ ನಡೆಸಿ ಭರ್ಜರಿ ಊಟದ ಏರ್ಪಾಡು ಸಹ ಮಾಡಿತು! ಬಹಳ ಓದಿದ ಜನ ಸಮಾಜದ ದೃಷ್ಟಿಯಲ್ಲಿ ಪ್ರತಿಷ್ಠಿತ ವರ್ಗದ ಉದ್ಯೋಗಸ್ತರು ಎಲ್ಲರೂ ಬಹಳ ದೊಡ್ಡ ಸಂಖ್ಯೆಯಲ್ಲೆ ಸೇರಿದ್ದರು! ತಾವು ಕೆಲಸ ಮಾಡುವ ಸ್ಥಳದಲ್ಲಿ ನಿಯಮಗಳ ಪಾಲಿಸುವುದರಲ್ಲಿ ನಿಸ್ಸೀಮರು, ಆ ಸಮಾರಂಭದ ಆರಂಭದಲ್ಲಿ ಸಾಲಾಗಿ ಬಂದು ತಣ್ಣಗೆ ಕುಳಿತರು,!

ಸ್ವಲ್ಪ ಸಮಯದ ನಂತರ ಎಲ್ಲರಿಗಾಗಿ ಊಟದ ಏರ್ಪಾಟು ಆಗಿದೆ ಎಂದು ಆಕಾಶವಾಣಿಯಂತೆ ಧ್ವನಿ ಬಂದಾಗ ಅಷ್ಟು ಹೊತ್ತು ತಣ್ಣಗೆ ಇದ್ದ ಜನ ಒಮ್ಮೆಗೆ ರೊಚ್ಚಿಗೆದ್ದರು! ನಿಯಮಗಳ ಪಾಲನೆ ಕಲಿಸೋಕೆ ಮೂರು ತಿಂಗಳು ಕೋಣೆಯಲ್ಲಿ ಕೂಡಿಹಾಕಿ, ಕುತ್ತಿಗೆಗೆ ಪಟ್ಟಿ ಕೊಟ್ಟು ಹೀಗೆ ಇರಬೇಕು ಎಂದ ಅಭ್ಯಾಸದಿಂದ ಬದುಕುತ್ತಿದ್ದ ಜನ ಒಮ್ಮೆಗೆ ತಾವು ತೊಟ್ಟ ಮೂಗುದಾರವ ಕಿತ್ತೊಗೆದು ದಂಡೆತ್ತಿ ಹೋಗುವ ಸೈನ್ಯದ ಹಾಗೆ ನುಗ್ಗಿದರು! ಒಬ್ಬೊಬ್ಬರು ಮತ್ತೊಬ್ಬರ ಮೇಲೆ ಎರಗಿದರು, ಇಟ್ಟಿದ್ದ ತಟ್ಟೆಗಾಗೆ ಪೈಪೋಟೊಗೆ ಬಿದ್ದು, ತಮಗೆ ಬೇಕಾದ, ಕೈಗೆ ಸಿಕ್ಕ ಅಡಿಗೆಗಳಿಂದ ತುಂಬಿಸಿಕೊಂಡರು. ಕ್ಷಣ ಕಾಲ ತಾವು ಈ ಸಮಾಜದ ಸಭ್ಯಸ್ಥ ವರ್ಗಕ್ಕೆ ಸೇರಿದವರು ಎಂಬುದ ಮರೆತು ತಮ್ಮ ಹಸಿವನ್ನು ತೀರಿಸಿಕೊಂಡರು!

ಇದೇ ದೃಶ್ಯ ಕೆಲ ವರುಷಗಳ ಹಿಂದೆ ನಾನು ಓದುತ್ತಿದ್ದ ಕಾಲೇಜಿನಲ್ಲಿ ಸಹ ಕಂಡಿತ್ತು, ಅಲ್ಲೂ ಸಹ ನೂಕಾಟ ಇತ್ತು, ಆದರೆ ಕಿತ್ತಾಟವಿರಲಿಲ್ಲ! ನೂಕಾಟದಲ್ಲಿ ಖುಷಿ ಇತ್ತು, ನೂಕಾಟದ ನಡುವೆ ಸಿಕ್ಕ ಊಟದ ಪ್ರತಿ ತುತ್ತಿನಲ್ಲೂ ಹುಡುಗರು ಸ್ವರ್ಗವನ್ನ ಸವಿದಿದ್ದರು! ಆ ನೂಕಾಟದಲ್ಲೆ ತಮ್ಮ ಗೆಳೆತನವನ್ನು ಗಟ್ಟಿಗೊಳಿಸಿಕೊಂಡಿದ್ದರು.

ಆದರೆ ಈಗ ಇದ್ದ ನೂಕಾಟದಲ್ಲಿ ಒಡನಾಟವಿರಲಿಲ್ಲ, ಹಸಿದ ಹೊಟ್ಟೆಗೆ ಅನ್ನ ಹಾಕಿಕೊಳ್ಳುವ ಭಾವ ಮಾತ್ರ ಇತ್ತು! ಅಂತೂ ಎಲ್ಲರು ಸೇರಿ ಎಲ್ಲರಿಗಾಗಿ ಇಟ್ಟಿದ್ದ ಅಡುಗೆಗಳ ಮುಗಿಸಿ ತಮ್ಮ ಜೈತಯಾತ್ರೆ ನಡೆಸ ಹೊರಟರು! ಆ ಊಟ ತೆಗೆದುಕೊಳ್ಳುವ ಕ್ಷಣದಲ್ಲಿ ನಿಯಮಗಳ ಪಾಲಿಸೊ ಅತೀ ಬುದ್ಧಿವಂತರು ತಮ್ಮೆಲ್ಲ ಹಿಡಿತಗಳ ತೊರೆದು ತಮ್ಮ ಅಂತರಾಳದಲ್ಲಿದ್ದ ಮೃಗರೂಪ ತಳೆದು ಉಂಡಿದ್ದರು! ಶಾಂತವಾಗಿ ಆರಂಭವಾಗಿದ್ದ ಸಮಾರಂಭವು ಚೆಲ್ಲಾಪಿಲ್ಲಿಯಾಗಿ ಮುಗಿದಿತ್ತು.

ಮತ್ತೆ ಈಗ ಆ ಕಂಪನಿಯ ಜನರು ಎಂದಿನಂತೆ ಅತೀ ಶಾಂತ ರೀತಿಯಿಂದ ವರ್ತಿಸುತ್ತ, ಪ್ರತಿ ನಿಯಮವ ಪಾಲಿಸುತ್ತ, ಸಭ್ಯತೆಯಿಂದ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ!

– ಆದರ್ಶ